ಈ ಹಿಂದೆ ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ ಉಪ್ಪು ಹುಳಿ ಖಾರ, ನಾತಿಚರಾಮಿ ಮತ್ತು ಪಡ್ಡೆಹುಲಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ರಮೇಶ್ ರೆಡ್ಡಿ ಅವರ ನೂತನ ಸಂಸ್ಥೆ ಸೂರಜ್ ಪ್ರೊಡಕ್ಷನ್ಸ್. ರಮೇಶ್ ಅರವಿಂದ್ ನಿರ್ದೇಶನದೊಂದಿಗೆ ನಾಯಕನಾಗಿ ನಟಿಸುತ್ತಿರುವ ‘1೦೦’ ಸಿನಿಮಾವನ್ನು ರಮೇಶ್ ರೆಡ್ಡಿ ಇತ್ತೀಚೆಗಷ್ಟೇ ಆರಂಭಿಸಿದ್ದರು.
ಈಗಾಗಲೇ ‘1೦೦’ ಬಹುತೇಕ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಸಿನಿಮಾವೊಂದು ಆರಂಭವಾಗಿದ್ದರ ಬೆನ್ನಿಗೇ ಎಲ್ಲೂ ಗ್ಯಾಪು ಕೊಡದಂತೆ ಕೆಲಸ ಮುಗಿಸಲು ನಿರ್ಮಾಪಕರ ಬೆಂಬಲವಿದ್ದಾಗ ಮಾತ್ರ ಸಾಧ್ಯ. ಹಾಗೆ ನೋಡಿದರೆ ರಮೇಶ್ ರೆಡ್ಡಿ ಅವರ ಪಾಲಿಗೆ ಚಿತ್ರ ನಿರ್ಮಾಣವೆಂಬುದು ವ್ಯವಹಾರವನ್ನು ಮೀರಿದ ಕಲಾ ಸೇವೆ. ಬಹುಶಃ ಅಂಥಾ ಮನಸ್ಥಿತಿ ಇಲ್ಲದೇ ಹೋಗಿದ್ದಿದ್ದರೆ ಅವರು ತಮ್ಮ ಬ್ಯಾನರಿನಡಿಯಲ್ಲಿ ನಾತಿಚರಾಮಿ ಎಂಬ ಹೊಸಾ ಅಲೆಯ ಚಿತ್ರ ನಿರ್ಮಾಣವಾಗಲು ಅನುವು ಮಾಡಿ ಕೊಡಲು ಸಾಧ್ಯವಾಗುತ್ತಿರಲಿಲ್ಲವೇನೋ…
ಕರ್ನಾಟಕದ ಕೋಲಾರ ಜಿಲ್ಲೆಯ ನಂಗಲಿ ಎಂಬೂರಿನವರು ರಮೇಶ್ ರೆಡ್ಡಿ. ನಿರ್ದೇಶಕ ಮಂಸೋರೇ ಕೂಡಾ ಅದೇ ಊರಿನವರು. ಅದಾಗಲೇ ಪ್ರತಿಭಾವಂತ ನಿರ್ದೇಶಕರಾಗಿ ಹೆಸರು ಮಾಡಿದ್ದ ಮಂಸೋರೇಯವರನ್ನು ತನ್ನ ಊರಿನ ಹುಡುಗ ಎಂಬ ಕಾರಣದಿಂದಲೇ ಹತ್ತಿರಾಗಿಸಿಕೊಂಡಿದ್ದ ರಮೇಶ್ ರೆಡ್ಡಿಯವರಿಗೆ ಆರಂಭದಲ್ಲಿಯೇ ನಾತಿಚರಾಮಿ ಕಥೆ ಇಷ್ಟವಾಗಿತ್ತಂತೆ. ಈ ಕಥೆ ಕೇಳಿದ ಅವರ ಸ್ನೇಹಿತರು ನಿರ್ಮಾಣ ಮಾಡಲು ಮುಂದೆ ಬಂದಾಗ ರಮೇಶ್ ರೆಡ್ಡಿಯವರು ತಮ್ಮದೇ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲು ಅನುವು ಮಾಡಿ ಕೊಟ್ಟಿದ್ದರು. ಆರಂಭದಿಂದಲೂ ಕೂಡಾ ಬಲು ಪ್ರೀತಿಯಿಂದಲೇ ಈ ಚಿತ್ರದ ದೇಖಾರೇಖಿಯನ್ನೂ ನೋಡಿಕೊಂಡಿದ್ದರು. ಇಂಥಾ ಕಾಳಜಿಯಿಂದಾಗಿ ಮತ್ತು ಮಂಸೋರೇ ಅವರ ಭಿನ್ನ ದೃಷ್ಟಿಯಿಂದ ನಾತಿಚರಾಮಿ ಚೆನ್ನಾಗಿ ಮೂಡಿ ಬಂದಿದೆ ಎಂಬುದು ರಮೇಶ್ ರೆಡ್ಡಿಯವರ ಭರವಸೆ.
ಬಡತನವೇ ಹಾಸಿ ಹೊದ್ದಂಥಾ ಕುಟುಂಬವೊಂದರಲ್ಲಿ ಕೋಲಾರ ಜಿಲ್ಲೆಯ ನಂಗಲಿಯಲ್ಲಿ ಹುಟ್ಟಿದ್ದವರು ರಮೇಶ್ ರೆಡ್ಡಿ. ಶಾಲಾ ದಿನಗಳಲ್ಲಿಯೇ ಅವರಿಗೆ ವಿಪರೀತ ಸಿನಿಮಾ ಹುಚ್ಚು. ಆದರೆ ಟೆಂಟ್ ಸಿನಿಮಾ ನೋಡಲೂ ಟಿಕೆಟಿಗೆ ಗತಿಯಿಲ್ಲದ ಸ್ಥಿತಿ… ಅವರು ಓದಿಕೊಂಡಿದ್ದು ಹತ್ತನೇ ತರಗತಿ. ಆದರೆ ಅವರ ಬಳಿಯಿರೋ ಅಗಾಧ ಜೀವನಾನುಭವಕ್ಕೆ ಯಾವ ಯುನಿವರ್ಸಿಟಿಗಳ ಸರ್ಟಿಫಿಕೆಟುಗಳೂ ಸಾಟಿಯಾಗಲಾರವು. ಹತ್ತನೇ ತರಗತಿ ಓದೋ ಹೊತ್ತಿಗೆಲ್ಲ ಗಾರೆ ಕೆಲಸಕ್ಕೆ ಕೈಯಾಳಾಗಿ ಹೋಗುತ್ತಿದ್ದ ರಮೇಶ್ ರೆಡ್ಡಿ ಆ ಹಂತದಲ್ಲಿಯೂ ಟೆಂಟ್ಗಳಲ್ಲಿ ಸಿನಿಮಾ ನೋಡಲು ಹರಸಾಹಸ ಪಡುತ್ತಿದ್ದರಂತೆ. ತೀರಾ ಹತ್ತಿರದ ಸ್ನೇಹಿತರೇ ಸಿನಿಮಾ ನೋಡಲು ಹೋಗೋವಾಗ ರಮೇಶ್ ಅವರನ್ನು ಬಿಟ್ಟು ಹೋದದ್ದೂ ಇದೆಯಂತೆ. ಆದರೂ ಹರಸಾಹಸ ಪಟ್ಟು ಸಿನಿಮಾಗಳನ್ನು ನೋಡಿಯೇ ತೀರುತ್ತಿದ್ದದ್ದು ಅವರೊಳಗಿನ ಸಿನಿಮಾ ಪ್ರೀತಿಗೆ ತಾಜಾ ಉದಾಹರಣೆ.
ಬಳಿಕ ಏನಾದರೂ ಮಾಡೋ ಉದ್ದೇಶದಿಂದ ಬೆಂಗಳೂರಿಗೆ ಬಂದಿಳಿದ ರಮೇಶ್ ರೆಡ್ಡಿಯವರಿಗೆ ಅಲ್ಲಿ ಸಿಕ್ಕಿದ್ದೂ ಕೂಡಾ ಗಾರೆ ಕೆಲಸದ ಸಹಾಯಕ ಕೆಲಸವೇ. ಮೂರು ವರ್ಷಗಳ ಕಾಲ ಇದೇ ಕೆಲಸದಲ್ಲಿ ಮುಂದುವರೆದು ಶ್ರದ್ಧೆಯಿಂದ ಗಾರೆ ಕೆಲಸ ಕಲಿತಿದ್ದ ರಮೇಶ್ ರೆಡ್ಡಿ, ಆ ನಂತರ ಸಿಕ್ಕ ಸಂಪರ್ಕಗಳಿಂದಾಗಿ ಸ್ವತಂತ್ರವಾಗಿ ಕೆಲಸ ಆರಂಂಭಿಸಿದ್ದರಂತೆ. ಹಾಗೆ ಮೊದಲು ಅವರು ಸ್ವತಂತ್ರವಾಗಿ ಕೆಲಸ ಆರಂಭಿಸಿದ್ದು ಟೆರೇಸೊಂದರ ಮೇಲಿನ ಪುಟ್ಟ ರೂಮು ಕಟ್ಟುವ ಮೂಲಕ. ಆ ನಂತರ ಹಂತ ಹಂತವಾಗಿ ಬೆಳೆದು ಬಂದ ಅವರ ಮುಂದೆ ಒಂದೊಂದೇ ಅವಕಾಶಗಳು ಅರಸಿ ಬರಲಾರಂಭಿಸಿದ್ದವು.
ಹೀಗೇ ಮುಂದುವರೆಯುತ್ತಾ ರಮೇಶ್ ರೆಡ್ಡಿ ಚಾಮರಾಜಪೇಟೆಯ ನಾಗೇಂದ್ರ ಎಂಬವರ ಮನೆ ಕಟ್ಟುವ ಕೆಲಸ ಮಾಡುತ್ತಿದ್ದರು. ನಾಗೇಂದ್ರ ಅವರ ಸ್ನೇಹಿತರಾಗಿದ್ದ ಕರ್ನಲ್ ಕೃಷ್ಣ ಆ ಸಂದರ್ಭದಲ್ಲಿಯೇ ಅಲ್ಲಿಗಾಗಮಿಸಿದ್ದರು. ಹಾಗೆ ಬಂದವರೇ ಜೆಪಿ ನಗರದಲ್ಲಿ ಅರ್ಧಂಬರ್ಧ ಆಗಿದ್ದ ತನ್ನ ಮನೆಯನ್ನು ಪೂರ್ತಿಗೊಳಿಸ್ತೀಯಾ ಅಂತ ಕೇಳಿದೇಟಿಗೇ ರಮೇಶ್ ಒಪ್ಪಿಕೊಂಡಿದ್ದರಂತೆ. ಆಗ ಕರ್ನಲ್ ಕೃಷ್ಣ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟು ಸಂಪರ್ಕಿಸುವಂತೆ ಹೇಳಿ ಹೋಗಿದ್ದರಂತೆ. ರಮೇಶ್ ರೆಡ್ಡಿ ಪಾಲಿಗೆ ಭಾಗ್ಯದ ಬಾಗಿಲು ತೆರೆಸಿದ್ದು ಆ ಒಂದು ಕಾರ್ಡು. ಆದ್ದರಿಂದಲೇ ಆ ಕಾರ್ಡನ್ನು ಇಂದಿಗೂ ಲ್ಯಾಮಿನೇಷನ್ನು ಮಾಡಿಸಿ ತಮ್ಮ ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದಾರೆ!
ಕರ್ನಲ್ ಕೃಷ್ಣ ಅವರ ಮನೆಯನ್ನು ರಮೇಶ್ ಕೃಷ್ಣ ಎಂದಿನ ಶ್ರದ್ಧೆಯಿಂದಲೇ ಪೂರ್ತಿಗೊಳಿಸಿದ್ದರು. ಅವರ ಕೆಲಸದ ಶೈಲಿ ಕಂಡು ಕರ್ನಲ್ ಕೃಷ್ಣ ಕೂಡಾ ಖುಷಿಗೊಂಡಿದ್ದರು. ಮಾಜಿ ಮಿಲಿಟರಿ ಅಧಿಕಾರಿಯಾಗಿದ್ದ ಕರ್ನಲ್ ಕೃಷ್ಣ ಇನ್ಫೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ನಿಕಟ ಸಂಪರ್ಕ ಹೊಂದಿದ್ದವರು. ಅದೊಂದು ದಿನ ಇದ್ದಕ್ಕಿದ್ದಂತೆ ಕೃಷ್ಣ ಇನ್ಫೋಸಿಸ್ ಸಂಸ್ಥೆಗೆ ರಮೇಶ್ ರೆಡ್ಡಿಯವರನ್ನು ಕರೆದುಕೊಂಡು ಹೋಗಿದ್ದರಂತೆ. ಅದರ ಫಲವಾಗಿ ಇನ್ಫೋಸಿಸ್ನ ಕಾಂಪೌಂಡು ಕಟ್ಟುವ ಕೆಲಸ ಸಿಕ್ಕಿತ್ತು. ಈಗ್ಗೆ ಹದಿನೈದು ವರ್ಷಗಳ ಹಿಂದೆ ಅವರ ಪಾಲಿಗೆ ಇನ್ಫೋಸಿಸ್ ನಂಟು ಅಂಟಿಕೊಂಡಿದ್ದು ಈ ಕಾಂಪೌಂಡಿನಿಂದಲೇ. ಅಲ್ಲಿಂದ ಇಲ್ಲೀವರೆಗೆ ಇನ್ಫೋಸಿಸ್ ಸಂಸ್ಥೆಯ ಯಾವುದೇ ಕಟ್ಟಡ ನಿರ್ಮಾಣ ಕಾರ್ಯವಿದ್ದರೂ ಇವರೇ ನೋಡಿಕೊಳ್ಳುತ್ತಾ ಬಂದಿದ್ದಾರೆ. ಸುಧಾ ಮೂರ್ತಿಯವರನ್ನು ತಮ್ಮ ಬದುಕು ಬದಲಿಸಿದ ದೇವರೆಂದೇ ಭಾವಿಸಿದ್ದಾರೆ.
ರಮೇಶ್ ರೆಡ್ಡಿ ಏನೇ ಕೆಲಸ ಕಾರ್ಯ ಮಾಡಿದರೂ ಸುಧಾ ಮೂರ್ತಿಯವರ ಗಮನಕ್ಕೆ ತಂದೇ ಮುಂದುವರೆಯೋದನ್ನು ರೂಢಿಸಿಕೊಂಡಿದ್ದಾರೆ. ಈ ಹಿಂದೆ ಉಪ್ಪು ಹುಳಿ ಖಾರ ಚಿತ್ರವನ್ನು ನಿರ್ಮಾಣ ಮಾಡೋದಾಗಿ ಹೇಳಿದಾಗ ಸುಧಾ ಮೂರ್ತಿ ಕಷ್ಟಪಟ್ಟು ದುಡಿದ ಕಾಸು ಕಳೆದುಕೊಳ್ಳಬೇಡ ಅಂತ ಎಚ್ಚರಿಕೆ ಕೊಟ್ಟೇ ಕಳಿಸಿದ್ದರಂತೆ. ಅದರಂತೆಯೇ ಈ ಚಿತ್ರದಲ್ಲಿ ಉಪ್ಪು ಹುಳಿ ಖಾರ ಬೆರೆತ ಅನುಭವವೇ ರಮೇಶ್ ರೆಡ್ಡಿಯವರಿಗೆ ಸಿಕ್ಕಿತ್ತು. ಎರಡನೇ ಸಲ ಅವರು ಕೆ ಮಂಜು ಪುತ್ರ ಶ್ರೇಯಸ್ ನಾಯಕನಾಗಿರೋ ಪಡ್ಡೆಹುಲಿ ಚಿತ್ರವನ್ನೂ ನಿರ್ಮಾಣ ಮಾಡಿದ್ದರು. ನಾತಿಚರಾಮಿ ಅಕ್ಕರಾಸ್ಥೆಯಿಂದ ಅವರೇ ಮುಂದೆ ನಿಂತು ಪೊರೆದ ಪ್ರೀತಿಯ ಚಿತ್ರ.
ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್ ಮುಂತಾದವರ ಚಿತ್ರಗಳನ್ನು ನೋಡಿಕೊಂಡೇ ಬೆಳೆದು ಬಂದವರು ರಮೇಶ್ ರೆಡ್ಡಿ. ಪುನೀತ್ ರಾಜ್ ಕುಮಾರ್ ಚಿತ್ರಗಳೆಂದರೆ ಅವರಿಗೆ ಬಲು ಇಷ್ಟ. ಮುಂದೆಂದಾದರೂ ಪುನೀತ್ ಚಿತ್ರವನ್ನು ನಿರ್ಮಾಣ ಮಾಡಬೇಕೆಂಬುದು ಅವರ ಬಹು ದಿನದ ಕನಸು. ಸುಧಾ ಮೂರ್ತಿ ಅವರೇ ಬರೆದಿರೋ ಪುಸ್ತಕವೊಂದನ್ನು ಸಿನಿಮಾ ಮಾಡ ಬೇಕೆಂಬ ಆಸೆ ಇದ್ದರೂ ಕೇಳಲು ಭಯವಂತೆ!
ಹೀಗೆ ಕಷ್ಟದ ಹಾದಿಯಲ್ಲಿಯೇ ಬೆಳೆದು ಬಂದಿರೋ ರಮೇಶ್ ರೆಡ್ಡಿ ಈಗ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರಾಗಿ ನೆಲೆ ಕಂಡುಕೊಂಡಿದ್ದಾರೆ. ಸದ್ಯ ತೇಜಸ್ವಿನಿ ಎಂಟರ್ ಪ್ರೈಸಸ್ನ ಜೊತೆಗೆ ಸೂರಜ್ ಪ್ರೊಡಕ್ಷನ್ಸ್ ಕೂಡಾ ಆರಂಭಿಸಿರುವ ರಮೇಶ್ ರೆಡ್ಡಿ ಅವರ ಕಡೆಯಿಂದ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲೆಂದು ಹಾರೈಸೋಣ.