ಉಪ್ಪು ಹುಳಿ ಖಾರ, ಪಡ್ಡೆಹುಲಿ ಮತ್ತು ಸಾಕಷ್ಟು ಪ್ರಶಸ್ತಿಗಳನ್ನು ಪಡೆದು, ಸದಭಿರುಚಿಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ನಾತಿಚರಾಮಿ ಚಿತ್ರಗಳನ್ನು ನಿರ್ಮಾಣಮಾಡಿದ್ದವರು ನಿರ್ಮಾಪಕ ರಮೇಶ್ ರೆಡ್ಡಿ (ನಂಗ್ಲಿ). ಈಗ ಸೂರಜ್ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ, ರಮೇಶ್ ಅರವಿಂದ್ ನಿರ್ದೇಶನದೊಂದಿಗೆ ನಾಯಕನಾಗಿ ನಟಿಸುತ್ತಿರುವ ‘1೦೦’ ಸಿನಿಮಾವನ್ನು ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. ಇಂದು ಸೆಪ್ಟೆಂಬರ್ 10ರಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ ಪ್ರಯುಕ್ತ 100 ಚಿತ್ರತಂಡದಿಂದ ಬರ್ತಡೇ ಸ್ಪೆಷಲ್ ಹಾಡೊಂದು ಹೊರಬರುತ್ತಿದೆ. ಈ ಹಾಡನ್ನು ಡಿ ಬೀಟ್ಸ್ ಚಾನೆಲ್ಲಿನಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಇಂಟರ್ ನೆಟ್ಟು, ಸೋಷಿಯಲ್ ಮೀಡಿಯಾಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿದರೆ ವರ. ಅದೇ ಸೋಷಿಯಲ್ ಮೀಡಿಯಾ ಹೇಗೆ ಹೆಣ್ಣುಮಕ್ಕಳ ಬದುಕಿಗೆ ಮಾರಕವಾಗುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ನಯವಂಚಕರು ಮಹಿಳೆಯರ ಖಾಸಗೀ ಬದುಕಿನ ಮೇಲೆ ಯಾವೆಲ್ಲಾ ರೀತಿ ಕಣ್ಣಿಡುತ್ತಾರೆ? ಏನೆಲ್ಲಾ ಆಟವಾಡುತ್ತಾರೆ? ಎಂಬ ವಿವರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಸಿನಿಮಾ 100. ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಯುವ ಪ್ರತಿಭೆ ವಿಶ್ವ ಖಳ ನಟನಾಗಿ ಪರಿಚಯವಾಗುತ್ತಿದ್ದಾರೆ. ಪೂಜಾ, ಲಕ್ಷ್ಮಿ ಆನಂದ್, ಅಮಿತ ರಂಗನಾಥ್, ಸುಕನ್ಯ ಗಿರೀಶ್, ಶಿಲ್ಪಾ ಶೆಟ್ಟಿ. ಪಿ ಡಿ ಸತೀಶ್, ರಾಜೇಶ್ ರಾವ್, ಬೇಬಿ ಸ್ಮಯ ತಾರಾಗಣದಲಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ರಚಿಸಿದ್ದಾರೆ, ಸತ್ಯ ಹೆಗ್ಡೆ ಛಾಯಾಗ್ರಾಹಕರು, ರವಿ ಬಸ್ರೂರ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ರವಿ ವರ್ಮಾ ಸಾಹಸ, ಆಕಾಶ್ ಶ್ರೀವತ್ಸ ಸಂಕಲನ, ಮೋಹನ್ ಪಂಡಿತ್ ಕಲಾ ನಿರ್ದೇಶನ, ಧನು ನೃತ್ಯ ನಿರ್ದೇಶನವಿದೆ.
100 ಸಿನಿಮಾ ಈಗಾಗಲೇ ಪೂರ್ಣಗೊಂಡಿದ್ದು, ಬಿಡುಗಡೆಗೂ ತಯಾರಾಗಿದೆ. ಕೊರೋನಾ ಸಮಸ್ಯೆ, ಲಾಕ್ ಡೌನ್ ಪ್ರಕ್ರಿಯೆ ಮುಗಿಯುತ್ತಿದ್ದಂತೇ 100 ಚಿತ್ರಮಂದಿರಗಳಿಗೆ ಬರಲಿದೆ. 100 ಸಿನಿಮಾಗಳಲ್ಲಿ ಇವತ್ತಿನ ಕಾಲಘಟ್ಟಕ್ಕೆ ಬೇಕಿರುವ, ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿರುವ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಸಿನಿಮಾ ಬಿಡುಗಡೆಯ ವೇಳೆಗೆ ಇನ್ನೂ ಸಾಕಷ್ಟು ಮಾಹಿತಿ ಕೂಡಾ ಚಿತ್ರತಂಡದಿಂದ ಲಭ್ಯವಾಗಲಿದೆ.
No Comment! Be the first one.