ವರ್ಷಗಳ ಹಿಂದೆ ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ ಉಪ್ಪು ಹುಳಿ ಖಾರ, ನಾತಿಚರಾಮಿ ಮತ್ತು ಪಡ್ಡೆಹುಲಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ರಮೇಶ್ ರೆಡ್ಡಿ ಅವರೀಗ ಸೂರಜ್ ಪ್ರೊಡಕ್ಷನ್ಸ್ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದೊಂದಿಗೆ ನಾಯಕನಾಗಿ ನಟಿಸುತ್ತಿರುವ ‘100’ ಸಿನಿಮಾ ಈಗ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಟ್ರೇಲರ್ ಪ್ರೇಕ್ಷಕ ವಲಯದಲ್ಲಿ ಹವಾ ಸೃಷ್ಟಿಸಿದೆ…
ಇಂಟರ್ ನೆಟ್ಟು, ಸೋಷಿಯಲ್ ಮೀಡಿಯಾಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿದರೆ ವರ. ಅದೇ ಸೋಷಿಯಲ್ ಮೀಡಿಯಾ ಹೇಗೆ ಹೆಣ್ಣುಮಕ್ಕಳ ಬದುಕಿಗೆ ಮಾರಕವಾಗುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ನಯವಂಚಕರು ಮಹಿಳೆಯರ ಖಾಸಗೀ ಬದುಕಿನ ಮೇಲೆ ಯಾವೆಲ್ಲಾ ರೀತಿ ಕಣ್ಣಿಡುತ್ತಾರೆ? ಏನೆಲ್ಲಾ ಆಟವಾಡುತ್ತಾರೆ? ಎಂಬ ವಿವರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಸಿನಿಮಾ 100. ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಯುವ ಪ್ರತಿಭೆ ವಿಶ್ವ ಖಳ ನಟನಾಗಿ ಪರಿಚಯವಾಗುತ್ತಿದ್ದಾರೆ.
ರಮೇಶ್ ಅರವಿಂದ್ ತಮ್ಮ ಅಭಿನಯದಿಂದಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಮಲ್ ಹಾಸನ್ ರಂಥ ದೈತ್ಯ ನಟನನ್ನೂ ನಿರ್ದೇಶಿಸಿರುವವರು. ನಟನೆಯ ಜೊತೆಗೆ ನಿರ್ದೇಶನದಲ್ಲೂ ಗೆದ್ದಿರುವವರು. ತಮಿಳಿನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ತಿರುಟ್ಟುಪಯಲೆ-೨ ಸಿನಿಮಾದ ಹಕ್ಕು ಪಡೆದಿದ್ದ ನಿರ್ಮಾಪಕ ರಮೇಶ್ ರೆಡ್ಡಿ ರಮೇಶ್ ಅರವಿಂದ್ ಅದನ್ನು ರಮೇಶ್ ಅವರ ಕೈಗಿಟ್ಟು ಕನ್ನಡದಲ್ಲಿ ಮಾಡಿಕೊಡಲು ಹೇಳಿದ್ದರಂತೆ. ಬೇರೆ ಯಾರೇ ಆಗಿದ್ದರೂ ಯಥಾವತ್ತು ಆ ಚಿತ್ರವನ್ನು ಕನ್ನಡೀಕರಿಸುತ್ತಿದ್ದರು. ತಿರುಟ್ಟುಪಯಲೆ ಸಿನಿಮಾ ಕೂಡಾ ಅದೇ ಲೆವೆಲ್ಲಿನಲ್ಲಿದೆ. ಒಂದೇ ಒಂದು ದೃಶ್ಯವನ್ನೂ ಅಲುಗಾಡಿಸಲು ಸಾಧ್ಯವಿಲ್ಲ. ನಿರ್ದೇಶಕ ಸೂಸಿ ಗಣೇಶನ್ ಅಷ್ಟು ಗಟ್ಟಿಯಾಗಿ ಚಿತ್ರಕತೆ ಪೋಣಿಸಿದ್ದಾರೆ. ಅಷ್ಟು ಅಚ್ಚುಕಟ್ಟಾದ ಕಥೆಯನ್ನು ಕೂಡಾ ರಮೇಶ್ ಅರವಿಂದ್ ಬಹುತೇಕ ಬದಲಿಸಿ, ಶೇಕಡಾ ನಲವತ್ತರಷ್ಟನ್ನು ಮಾತ್ರ ಉಳಿಸಿಕೊಂಡು, ಮಿಕ್ಕಂತೆ ಬೇರೆಯದ್ದೇ ಎಲಿಮೆಂಟುಗಳನ್ನು ಜೋಡಿಸಿದ್ದಾರೆ. ಮೂಲ ಚಿತ್ರವನ್ನೂ ಮೀರಿಸುವಂತೆ ಮೂಡಿಬಂದಿದೆ ಅನ್ನೋದು ಈಗಾಗಲೇ ನೋಡಿದವ ಅಭಿಪ್ರಾಯ ಕೂಡಾ. ಈ ಕಾರಣಕ್ಕೇ ಇರಬೇಕು, ಅತ್ಯುತ್ತಮ ಬೆಲೆಗೆ ಟೀವಿ, ಡಿಜಿಟಲ್ ರೈಟ್ಸ್ ಕೂಡಾ ಮಾರಾಟವಾಗಿದೆ.
ರಮೇಶ್ ಅರವಿಂದ್ ಅವರ ಪಾಲಿಗೆ ಶಿವಾಜಿ ಸೂರತ್ಕಲ್ ದೊಡ್ಡ ಮಟ್ಟದ ಗೆಲುವನ್ನು ತಂದುಕೊಟ್ಟಿದೆ. ಅದನ್ನೂ ಮೀರಿಸುವ ಪಾತ್ರ 100 ಸಿನಿಮಾದಲ್ಲಿರೋದರಿಂದ ಮತ್ತು ಹೆಣ್ಣುಮಕ್ಕಳೇ ಈ ಕಥೆಯ ಕೇಂದ್ರಬಿಂದುವಾಗಿರುವುದರಿಂದ, 100 ಸಿನಿಮಾವನ್ನು ಫ್ಯಾಮಿಲಿ ಆಡಿಯನ್ಸ್ ನೋಡೇ ನೋಡುತ್ತಾರೆ. ರಮೇಶ್ ರೆಡ್ಡಿ ನಿರ್ಮಾಣದ ಈ ಹಿಂದಿನ ಎರಡು ಸಿನಿಮಾಗಳು ಲಾಭ ಕಂಡಿರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ 100 ವ್ಯಾಪಾರದ ಮೂಲಕ ಈಗಾಗಲೇ ಒಂದು ಮಟ್ಟದ ಗೆಲುವನ್ನು ತಂದುಕೊಟ್ಟಿದೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರೂ ಏಕಕಾಲದಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲು ಕಾತುರರಾಗಿರುವುದು 100 ಚಿತ್ರದ ಬಾರೀ ಯಶಸ್ಸಿನ ಮುನ್ಸೂಚನೆಯಾಗಿದೆ.
ಪೂಜಾ, ಲಕ್ಷ್ಮಿ ಆನಂದ್, ಅಮಿತ ರಂಗನಾಥ್, ಸುಕನ್ಯ ಗಿರೀಶ್, ಶಿಲ್ಪಾ ಶೆಟ್ಟಿ. ಪಿ ಡಿ ಸತೀಶ್, ರಾಜೇಶ್ ರಾವ್, ಬೇಬಿ ಸ್ಮಯ ತಾರಾಗಣದಲಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ರಚಿಸಿದ್ದಾರೆ, ಸತ್ಯ ಹೆಗ್ಡೆ ಛಾಯಾಗ್ರಾಹಕರು, ರವಿ ಬಸ್ರೂರ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ರವಿ ವರ್ಮಾ ಸಾಹಸ, ಆಕಾಶ್ ಶ್ರೀವತ್ಸ ಸಂಕಲನ, ಮೋಹನ್ ಪಂಡಿತ್ ಕಲಾ ನಿರ್ದೇಶನ, ಧನು ನೃತ್ಯ ನಿರ್ದೇಶನವಿದೆ.
Comments