ಎಸ್ಎಸ್ ಸ್ಟುಡಿಯೋಸ್ ಮತ್ತು ವಿಷನ್ ಸಿನಿಮಾಸ್ ಬ್ಯಾನರ್ನಲ್ಲಿ ಮೂಡಿಬಂದಿರುವ 100 CRORES ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮ ಸೋಮವಾರ ನೆರವೇರಿದೆ. ಸ್ಯಾಂಡಲ್ವುಡ್ನ ಸಿಂಪಲ್ ನಿರ್ದೇಶಕ ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿ, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆ ದಿನಗಳು ಖ್ಯಾತಿಯ ಚೇತನ್ ಅಹಿಂಸಾ ಈ ಸಿನಿಮಾದಲ್ಲಿ ನಾಯಕನಾಗಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರವನ್ನು ಮಾಡಿದ್ದಾರೆ.
ಮೂಲತಃ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದಾರೆ. ಕನ್ನಡದಲ್ಲಿ ಗಣೇಶ್ ನಟಿಸುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ ಹಾಗೂ ಈ ಹಿಂದೆ ಕನ್ನಡದ ಕೆಲವು ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.
100 CRORES ಚಿತ್ರದ ಬಗ್ಗೆ ಮಾಹಿತಿ ನೀಡುವ ಅವರು, ಈಗಾಗಲೇ ತೆಲುಗಿನಲ್ಲಿ 75ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ಈ ಸಿನಿಮಾ ಮೂಲಕ ನಿರ್ಮಾಪಕನಾಗಿದ್ದೇನೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ತಯಾರಾಗಿದ್ದು, ವಿರಾಟ್ ಚಕ್ರವರ್ತಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಹೇಳಿದಂತೆ ನೂರು ಕೋಟಿಯ ಹಿಂದೆಯೇ ಈ ಸಿನಿಮಾ ಸಾಗಲಿದ್ದು, ಪಕ್ಕಾ ಆ್ಯಕ್ಷನ್ ಅವತಾರದಲ್ಲಿ ಚೇತನ್ ಅವರು ಕಾಣಿಸಿಲಿದ್ದಾರೆ ಎಂದರು ನಿರ್ಮಾಪಕ ಸಾಯಿ ಕಾರ್ತಿಕ್.
ಇನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಂಪಲ್ ಸುನಿ ಸಿಂಪಲ್ ಮಾತುಗಳನ್ನಾಡಿದರು. ಚೇತನ್ ಅವರ ಆಚಾರ ವಿಚಾರ ನೋಡಿದರೆ, ಅವರು ನಟನೆ ಜತೆಗೆ ನಿರ್ದೇಶನಕ್ಕೂ ಬರಬೇಕೆಂಬುದು ನಮ್ಮ ಬಯಕೆ. ಅವರ ವಿಚಾರಗಳನ್ನು ಸಿನಿಮಾದಲ್ಲಿ ಪ್ರಸ್ತುತಪಡಿಸಿದರೆ, ಅದಕ್ಕೆ ಮತ್ತಷ್ಟು ಮೈಲೇಜ್ ಸಿಗುತ್ತಿತ್ತು. 100 CRORES ಚಿತ್ರದ ಪೋಸ್ಟರ್ ಅಷ್ಟೇ ರೋಚಕವಾಗಿದೆ. ಪೋಸ್ಟರ್ನಲ್ಲಿರುವ 100ಕೋಟಿ ಸಿನಿಮಾ ತಂಡಕ್ಕೂ ದಕ್ಕಲಿ ಎಂಬುದು ನನ್ನ ಹಾರೈಕೆ ಎಂದರು.
ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಹೊಸ ಅನುಭವ. ಅಷ್ಟೇ ಸಾಹಸ ದೃಶ್ಯಗಳೂ ಸಿನಿಮಾದ ಹೈಲೈಟ್ ಎಂದರು ಚಿತ್ರದ ನಾಯಕ ಚೇತನ್ ಅಹಿಂಸಾ.
ಒಂದು ಐಟಂ ಹಾಡು ಮತ್ತೊಂದು ಥೀಮ್ ಹಾಡು ಚಿತ್ರದಲ್ಲಿ ಇರಲಿದ್ದು, ರೊಮ್ಯಾಂಟಿಕ್ ಹಾಡುಗಳು ಈ ಸಿನಿಮಾದಲ್ಲಿಲ್ಲ ಎಂದರು ನಿರ್ಮಾಪಕ ಸಾಯಿ ಕಾರ್ತಿಕ್. ಕರ್ನಾಟಕ ಸೇರಿ ಹೈದರಾಬಾದ್ನಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚೇತನ್ ಮತ್ತು ಹ್ಯಾಪಿಡೇಸ್ ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದರೆ, ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ.
ಸಾಯಿ ಕಾರ್ತಿಕ್ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರಾದರೆ, ನಾಗಂ ತಿರುಪತಿ ರೆಡ್ಡಿ ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಶ್ರೀಕಾಂತ್ ದೀಪಾಲ್ ಸಹ ನಿರ್ಮಾಪಕರಾಗಿದ್ದಾರೆ. ಸಿಂಪಲ್ ಸುನಿ, ತ್ರಿಬಲ್ ರೈಡಿಂಗ್ ಸಿನಿಮಾ ನಿರ್ಮಾಪಕ ರಾಮ್ಗೋಪಾಲ್ ಮತ್ತು ನಿರ್ದೇಶಕ ಮಹೇಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹೈದರಾಬಾದ್ನಲ್ಲಿ ಸಂಕಲನ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಿರ್ದೇಶಕ ವಿರಾಟ್ ಚಕ್ರವರ್ತಿ ಸುದ್ದಿಗೋಷ್ಠಿಗೆ ಆಗಮಿಸಿರಲಿಲ್ಲ. ಅಂದಹಾಗೆ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ತಂಡ ಸದ್ಯದಲ್ಲೇ ಘೋಷಣೆ ಮಾಡಲಿದೆಯಂತೆ.
Leave a Reply
You must be logged in to post a comment.