ಇಂಟರ್‌ ನೆಟ್ಟು, ಸೋಷಿಯಲ್‌ ಮೀಡಿಯಾಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿದರೆ ವರ. ಅದೇ ಸೋಷಿಯಲ್‌ ಮೀಡಿಯಾ ಹೇಗೆ ಹೆಣ್ಣುಮಕ್ಕಳ ಬದುಕಿಗೆ ಮಾರಕವಾಗುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ನಯವಂಚಕರು ಮಹಿಳೆಯರ ಖಾಸಗೀ ಬದುಕಿನ ಮೇಲೆ ಯಾವೆಲ್ಲಾ ರೀತಿ ಕಣ್ಣಿಡುತ್ತಾರೆ? ಏನೆಲ್ಲಾ ಆಟವಾಡುತ್ತಾರೆ? ಎಂಬ ವಿವರವನ್ನು ತೆರೆದಿಟ್ಟಿರುವ ಸಿನಿಮಾ 100.

ಫೇಸ್‌ ಬುಕ್ಕು, ಇನ್ಸ್‌ಟಾಗ್ರಾಮು ಇತ್ಯಾದಿ ಸೋಷಿಯಲ್‌ ಮೀಡಿಯಾಗಳು ಎಲ್ಲರನ್ನೂ ಆಕರ್ಷಿಸುತ್ತವೆ. ತಮ್ಮ ಫೋಟೋವನ್ನು ಲೈಕ್‌, ಕಮೆಂಟು ಮಾಡಿದರು. ತಮ್ಮದೇ ಅಭಿರುಚಿ ಹೊಂದಿದ್ದಾರೆ ಎಂದ ಕೂಡಲೇ ಸಣ್ಣದಾದ ಆಕರ್ಷಣೆ, ಸಲುಗೆ ಬೆಳೆದು ಅದು ಮತ್ತೊಂದು ಮುಂಚೂಣಿ ತನಕ ಎಳೆದೊಯ್ಯುತ್ತದೆ.

ಜೀವಕ್ಕಂಟಿಕೊಂಡಂತೆ ವರ್ಷಗಟ್ಟಲೇ ಜೊತೆಗಿದ್ದವರ ಒಳಮನಸ್ಸನ್ನೇ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಭ್ಯರಂತೆ ಮುಖವಾಡ ಧರಿಸಿ ಒಳಗೊಳಗೇ ಸ್ಕೆಚ್ಚು ಹಾಕಿರುತ್ತಾರೆ. ನಂಬಿಕೆಯೆಂಬ ಅರಿವಳಿಕೆ ನೀಡಿ ಆಪರೇಷನ್ ಯಶಸ್ವಿಗೊಳಿಸಿರುತ್ತಾರೆ. ಇನ್ನು ಮುಖ ಮೋರೆ ಪರಿಚಯವಿಲ್ಲದ, ಗೊತ್ತು ಗುರಿ ಇಲ್ಲದ ವ್ಯಕ್ತಿಯಯ ಜೊತೆ ಸ್ನೇಹ ಸಂಬಂಧ ಬೆಸೆದುಕೊಂಡರೆ ಏನೆಲ್ಲಾ ಘಟಿಸಿಬಿಡಬಹುದು? ಹೆಣ್ಣುಮಕ್ಕಳ ಬದುಕೇ ಅಂತ್ಯವಾಗುವ ತನಕ ಕೊಂಡೊಯ್ಯಬಹುದು ಎನ್ನುವ ಸೂಕ್ಷ್ಮಾತಿಸೂಕ್ಷ್ಮ ವಿಚಾರವನ್ನು 100 ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ,  ಅನಾವರಣಗೊಳಿಸಿದ್ದಾರೆ.

ಬರಿಯ ಸೋಷಿಯಲ್‌ ಮೀಡಿಯಾ ವಂಚಕರ ಬಗೆಗೆ ಮಾತ್ರ ಈ ಸಿನಿಮಾ ರೂಪುಗೊಂಡಿಲ್ಲ. ಪೊಲೀಸ್‌ ಇಲಾಖೆಯ ಒಳಗಿರುವ ಭ್ರಷ್ಟತೆ, ಗೋಸುಂಬೆತನಗಳು,  ಖಾಸಗೀ ಆಸ್ಪತ್ರೆಯ ಅಮಾನವೀಯತೆ, ಲೂಟಿಕೋರತನ, ತನ್ನ ಮಗುವಿನ ಜೀವ ಉಳಿಸಿಕೊಳ್ಳಲು ಸಾಲ ಮಾಡುವ ಒಬ್ಬ ಅಧಿಕಾರಿ. ಬೇರೆ ಮಕ್ಕಳಿಗೆ ಅದೇ ಸ್ಥಿತಿ ಒದಗಬಾರದು ಎನ್ನುವ ಕಾರಣಕ್ಕೆ ಭ್ರಷ್ಟಾಚಾರಕ್ಕೆ ಕೈ ಇಡೋದು, ತನ್ನ ತಂತ್ರಜ್ಞಾನ ಕೌಶಲ್ಯದಿಂದ ಜಗತ್ತನ್ನು ನಡುಗಿಸುವ ಶಕ್ತಿ ಇರುವಾತ ಇಕ್ಕಟ್ಟಿನ ಜಾಗವೆಂದರೆ   ಭಯ ಪಡುವ ಮನೋರೋಗಿ ಎನ್ನುವುದೂ ಸೇರಿದಂತೆ ಅನೇಕ ವಿಚಾರಗಳು 100 ಚಿತ್ರದ ಕತೆಯಲ್ಲಿ ಬೆಸೆದುಕೊಂಡಿದೆ.

ಮೋರಿಗೆ ತಲುಪಬೇಕಾದ ನೀರನ್ನು ಬಾವಿಗೆ ತಲುಪಿಸಿದಂತೆ ವಂಚಕರನ್ನೇ ವಂಚಿಸಿ ತಂದ ಹಣವನ್ನು ಸಮಾಜದ ಒಳಿತಿಗೆ ಖರ್ಚು ಮಾಡುವ ಮೂಲಕ ಪಾಪನಿವೇದನೆ ಮಾಡಿಕೊಳ್ಳುವ ಪೊಲೀಸ್‌ ಅಧಿಕಾರಿಯ ಪಾತ್ರದ ಕಲ್ಪನೆ ಚೆಂದ ಅನಿಸುತ್ತದೆ. ಸ್ವಲ್ಪ ಯಾಮಾರಿದರೂ ಸಂಬಂಧಗಳಲ್ಲಿ ಅಪಾರ್ಥ, ಅಪನಂಬಿಕೆಗಳು ಉದ್ಭವಿಸುತ್ತವೆ. ಯಾವುದೇ ವಿಚಾರವನ್ನು ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡಬೇಕು ಎನ್ನುವ ಅಂಶ ಮನಮುಟ್ಟುತ್ತದೆ.

ರಮೇಶ್‌ ಅರವಿಂದ್‌ ಪೊಲೀಸ್‌ ಅಧಿಕಾರಿಯಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.  ಕ್ಷಣಕ್ಷಣಕ್ಕೂ ಹೀರೋಗೆ ಟಕ್ಕರ್‌ ಕೊಡುವ ಖಡಕ್‌ ವಿಲನ್‌ ಆಗಿ ನಟಿಸಿರುವ ನವ ನಟ ವಿಶ್ವ ʻಸ್ವಲ್ಪ ನಗೀ ಬಾಸ್ʼ‌ ಎನ್ನುತ್ತಲೇ ಬೆಚ್ಚಿಬೀಳಿಸುತ್ತಾರೆ. ರಮೇಶ್‌ ತಂಗಿಯ ಪಾತ್ರಕ್ಕೆ ರಚಿತಾ ಪಕ್ಕಾ ಮ್ಯಾಚ್‌ ಆಗಿದ್ದಾರೆ. ಪತ್ನಿಯಾಗಿ ಪೂರ್ಣ, ತಾಯಿ ಪಾತ್ರದಲ್ಲಿ ಮಾಲತಿ ಸುಧೀರ್‌ ನಟನೆ ಅಚ್ಚುಕಟ್ಟಾಗಿದೆ. ಮಾರ್ವಾಡಿಯಾಗಿ ಅವತಾರವೆತ್ತಿರುವ ಡಿ.ಪಿ.ಸತೀಶ್‌, ಉನ್ನತ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿರುವ ಪ್ರಕಾಶ್‌ ಬೆಳವಾಡಿ ಹೆಚ್ಚು ಗಮನ ಸೆಳೆಯುತ್ತಾರೆ.

ಸತ್ಯ ಹೆಗಡೆ ಛಾಯಾಗ್ರಹಣ ಮುದ್ದಾಗಿದೆ. ಗುರು ಕಶ್ಯಪ್‌ ಇವತ್ತಿಲ್ಲದಿದ್ದರೂ ಈ ಚಿತ್ರಕ್ಕಾಗಿ ಅವರು ಬರೆದಿಟ್ಟು ಹೋಗಿರುವ ಸಂಭಾಷಣೆ ಯಾವತ್ತಿಗೂ ಜನರ ಮನಸ್ಸಿನಲ್ಲುಳಿಯುತ್ತದೆ. ಈ ಚಿತ್ರದ ಮೂಲ ತಮಿಳಿನ ತಿರುಟ್ಟು ಪಯಲೇ-2 ಆದರೂ, ನಿರ್ದೇಶಕ ರಮೇಶ್‌ ಅರವಿಂದ್‌ ಆ ಕತೆಯ ಮೂಲ ಧಾತುವನ್ನಷ್ಟೇ ಉಳಿಸಿಕೊಂಡು ಸಾಕಷ್ಟು ಬದಲಾವಣೆ ಮಾಡಿದ್ದಾರೆ.‌ ಹೊಸ ಪಾತ್ರಗಳನ್ನು, ಹೊಸ ವಿಚಾರಗಳನ್ನು ಸೇರಿಸಿ ಅರ್ಥಪೂರ್ಣ ಸಿನಿಮಾವನ್ನಾಗಿ ಕಟ್ಟಿ ನಿಲ್ಲಿಸಿದ್ದಾರೆ. ಇಂಥದ್ದೊಂದು  ಸಿನಿಮಾಗೆ ಬಂಡವಾಳ ಹೂಡಿರುವ ರಮೇಶ್‌ ರೆಡ್ಡಿ ನಿಜಕ್ಕೂ ಅಭಿನಂದನೆಗೆ ಅರ್ಹರು.

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವವರು ಮಾತ್ರವಲ್ಲ, ಮಕ್ಕಳು, ಮಕ್ಕಳನ್ನು ಹೆತ್ತ ಪೋಷಕರು, ಒಡಹುಟ್ಟಿದವರು ಕೂಡಾ ಒಮ್ಮೆಯಾದರೂ ನೋಡಲೇಬೇಕಿರುವ ಸಿನಿಮಾ 100.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರವಿಚಂದ್ರನ್‌ ಅವರ ಮುಂದೆ ಹೀಗನ್ನಬಹುದಿತ್ತಾ?

Previous article

ಬರ್ತಿದೆ ನೋಡಿ ಗೋಲ್ಡನ್‌ ಸ್ಟಾರ್‌ ಸಿನಿಮಾ!

Next article

You may also like

Comments

Leave a reply

Your email address will not be published.