೧೯ನೇವರ್ಷದ ಯುವಕ-ಯುವತಿಯದ ಲೈಫು ಹೇಗಿರುತ್ತದೆ? ಅವರ ಭಾವನೆಗಳು, ಕೈಗೊಳ್ಳುವ ತೀರ್ಮಾನಗಳು ಅದರಿಂದಾಗುವ ಸಾಧಕ-ಬಾಧಕಗಳ ಸುತ್ತ ಹೆಣೆದ ಸಿನಿಮಾ 19 age IS ನಾನ್ಸೆನ್ಸ್?! ಈ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಸಿನಿಮಾ ಯೂತ್ ಲವ್ ಸ್ಟೋರಿ ಆಗಿರೋದರಿಂದ ಸೆನ್ಸಾರ್ ಮಂಡಳಿ ಯಾವ ಪ್ರಮಾಣ ಪತ್ರ ನೀಡುತ್ತದೆ ಅನ್ನೋ ಕುತೂಹಲ ಎಲ್ಲರಲ್ಲಿತ್ತು. ಆದರೆ ಈ ಚಿತ್ರವನ್ನು ನೋಡಿದ ಸೆನ್ಸಾರ್ ಪ್ರತಿನಿಧಿಗಳು ಇದು ಎಲ್ಲ ವಯೋಮಾನದವರು ನೋಡುವ ಸಿನಿಮಾ ಎಂದು ದೃಢೀಕರಿಸಿದ್ದಾರೆ.

ಈ ಚಿತ್ರ ವಿಡುಗಡೆಗೆ ಸಜ್ಜಾಗುತ್ತಿದೆ. ಆದರೆ ಸಿನಿಮಾದ ಹೀರೋ ಮನುಷ್ ತಮಿಳಿಗೆ ಹೊರಟುನಿಂತಿದ್ದಾನೆ. ಮನುಷ್ಗೆ ಮೊದಲಿಂದಲೂ ಸಿನಿಮಾ ಅಂದರೆ ಒಂಥರಾ ಹುಚ್ಚು. ಇವರ ತಂದೆ ಲೋಕೇಶ್ ಕಟ್ಟಡ, ದೇವಸ್ಥಾನಗಳಿಗೆ ಸ್ಟೋನ್ ಕ್ಲಾಡಿಂಗ್ ಕೆಲಸ ಮಾಡಿಸುತ್ತಾರೆ. ಮಗ ಕಾಲೇಜಿಗೆ ಚಕ್ಕರ್ ಹಾಕಿ ವಾರಕ್ಕೆ ಮೂರು ನಾಲ್ಕು ಸಿನಿಮಾ ನೋಡುತ್ತಿದ್ದದ್ದನ್ನು ಸ್ವತಃ ಲೋಕೇಶ್ ಗಮನಿಸಿದ್ದರು. ‘ಯಾಕೋ ಮಗನೆ ಹಿಂಗೆ ಮಾಡ್ತಿಯಾ? ಅಂದರೆ ‘ಅಪ್ಪಾ ನನಗೆ ಸಿನಿಮಾ ಅಂದ್ರೆ ಅಷ್ಟಿಷ್ಟ.. ಅನ್ನುತ್ತಿದ್ದನಂತೆ. ಅದೇ ಹೊತ್ತಿಗೆ ಲೋಕೇಶ್ ಅವರ ಬಹುಕಾಲದ ಸ್ನೇಹಿತ ಗಿಣಿ ಸಿನಿಮಾವೊಂದನ್ನು ನಿರ್ದೇಶಿಸಲು ಪ್ರಯತ್ನಿಸುತ್ತಿದ್ದರಂತೆ. “ಹೇಗೂ ನೀನು ಡೈರೆಕ್ಟರ್ ಆಗಬೇಕು ಅಂತಾ ಬಯಸಿರುವೆ, ನನ್ನ ಮಗನನ್ನೇ ಹೀರೋ ಮಾಡು, ನಾನೇ ಬಂಡವಾಳ ಹಾಕ್ತೀನಿ…. ಅಂದುಬಿಟ್ಟಿದ್ದರು ಲೋಕೇಶ್.

ಮಕ್ಕಳು ಸಿನಿಮಾ, ಥಿಯೇಟರು ಅಂತಾ ಓಡಾಡುತ್ತಿದ್ದರೆ, ಅವರ ಮೂತಿಗೆ ತಿವಿಯೋ ಪೋಷಕರೇ ಹೆಚ್ಚು. ಆದರೆ ಲೋಕೇಶ್ ಹಾಗೆ ಮಾಡಲಿಲ್ಲ, ನಿನಗೆ ಸಿನಿಮಾದಲ್ಲಿ ಆಸಕ್ತಿ ಇದ್ದರೆ ಅದರ ಬಗ್ಗೆ ತಿಳಿದುಕೋ. ನಟನೆಯನ್ನು ಕಲಿ ಅಂತಾ ಹೇಳಿದ್ದೇ, ರಂಗಭೂಮಿ, ಸಿನಿಮಾರಂಗದಲ್ಲಿ ಕೆಲಸ ನಿರ್ವಹಿಸುತ್ತಾ ನಟನೆಯ ಪಾಠವನ್ನೂ ಮಾಡುವ ರಂಗಸ್ವಾಮಿ ಎಂಬುವವರ ಬಳಿ ಕಳಿಸಿ ತರಬೇತಿ ಕೊಡಿಸಿದ್ದಾರೆ. ಮುರಳಿ ಅವರ ಬಳಿ ಡ್ಯಾನ್ಸ್ ಕಲಿಸಿದ್ದಾರೆ. ಮಗ ಬಯಸಿದ ಕ್ಷೇತ್ರದಲ್ಲಿ ಬೆಳೆಯಲಿ ಅನ್ನೋ ಕಾರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾವನ್ನೂ ನಿರ್ಮಿಸಿದ್ದಾರೆ. ಹಾಗೆ ರೂಪುಗೊಂಡ ಸಿನಿಮಾ ೧೯ ಏಜ್ ನಾನ್ಸೆನ್ಸ್. ಹತ್ತೊಂಭತ್ತನೇ ವರ್ಷ ಯವುದೇ ಹುಡುಗರ ಬದುಕಿನ ನಿರ್ಣಾಯಕ ಘಟ್ಟ. ಆ ಹೊತ್ತಲ್ಲಿ ನಾನ್ಸೆನ್ಸ್ ತೀರ್ಮಾನಗಳೇ ಹೆಚ್ಚು ತೆಗೆದುಕೊಳ್ಳುತ್ತಾರೆ. ಹತ್ತೊಂಬತ್ತನೇ ವಯಸ್ಸಿನ ಗೊಂದಲದ ಬದುಕನ್ನೇ ಕಥೆಯಾಗಿಸಿ ನಿರ್ದೇಶಕ ಗಿಣಿ ಸುಂದರವಾದ ಸಿನಿಮಾ ಸೃಷ್ಟಿಸಿದ್ದಾರೆ.

ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿರುವ ವೆಟ್ರಿ ಈ ಹಿಂದೆಯೇ ತಮಿಳು ಚಿತ್ರವೊಂದನ್ನು ಮಾಡಲು ಕಥೆ ರೆಡಿ ಮಾಡಿಕೊಂಡಿದ್ದರು. ನೋಟ್ ಬ್ಯಾನ್ ಆದ ಕಾರಣ ಆ ಪ್ರಾಜೆಕ್ಟು ನಿಂತುಹೋಗಿತ್ತು. ಈಗ ಮತ್ತೆ ಆ ಸಿನಿಮಾಗೆ ಜೀವ ಬಂದಿದೆ. ಅದರಲ್ಲಿ ಮನುಷ್ ನಾಯಕನಟನಾಗಿ ನಟಿಸುತ್ತಿದ್ದಾನೆ. ಡಿಸೆಂಬರ್ ಕೊನೆಯ ವೇಳೆಗೆ ಅಥವಾ ಸಂಕ್ರಾಂತಿಯ ಸಮಯಕ್ಕೆ ಈ ಚಿತ್ರ ಆರಂಭವಾಗುತ್ತದೆ. ಅಷ್ಟರಲ್ಲಿ ೧೯ ಏಜ್ ನಾನ್ಸೆನ್ಸ್ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿರುತ್ತದೆ. ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್.ಲೋಕೇಶ್ ನಿರ್ಮಾಣದ 19 age IS ನಾನ್ಸೆನ್ಸ್?. ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಗಿಣಿ, ಛಾಯಾಗ್ರಹಣ-ಜಿ.ವೆಟ್ರಿ, ಸಂಕಲನ-ರವಿಚಂದ್ರನ್, ಸಂಗೀತ – ಕುಟ್ಟಿ, ಸಾಹಸ -ಶಿವು, ಹಾಡುಗಳು-ವಿ.ನಾಗೇಂದ್ರ ಪ್ರಸಾದ್, ತಾರಾಗಣದಲ್ಲಿ – ಮನುಷ್, ಮಧುಮಿತ, ಲಕ್ಷ್ಮಿ ಮಂಡ್ಯ, ಮೇಸ್ತ್ರಿ ಬಾಲು, ಸೌಭಾಗ, ಕಾವ್ಯಪ್ರಕಾಶ್, ಮುಂತಾದವರಿದ್ದಾರೆ.