ಪೂಜಾ ಗಾಂಧಿ ಅಭಿನಯದ ಅನು ಅನ್ನೋ ಸಿನಿಮಾ ಬಂದಿತ್ತಲ್ಲಾ? ಅದರಲ್ಲಿ ಗುಲಾಬಿ ಮಂಜನ ಕ್ಯಾರೆಕ್ಟರಿನಲ್ಲಿ ನಟಿಸಿದ್ದವರು ಬಾಲು. ಅನು ನಂತರ ಮೇಸ್ತ್ರಿ ಸಿನಿಮಾದಲ್ಲಿ ಹೀರೋ ಆಗಿ, ಲೂಸ್ ಮಾದ ಯೋಗಿಯ ಕಾಲಭೈರವ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಬಾಲು ಈಗ ಯಾರೂ ಊಹಿಸಲೂ ಸಾಧ್ಯವಾಗದ, ಎಂಥವರೂ ಅಚ್ಛರಿಗೊಳ್ಳುವಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ೧೯ ಏಜ್ ನಾನ್ಸೆನ್ಸ್ ಸಿನಿಮಾ!
ಅನು ಸಿನಿಮಾದ ಪಾತ್ರಕ್ಕಾಗಿ ಬಾಲು ಸಾಕಷ್ಟು ರಿಸ್ಕು ತೆಗೆದುಕೊಂಡಿದ್ದರು. ಪಾತ್ರಕ್ಕಾಗಿ ಏನು ಬೇಕಾದರೂ ಮಾಡುತ್ತೀನಿ ಅನ್ನೋರನ್ನ ನೋಡಿದ್ದೇವೆ. ಆದರೆ, ಬಾಲು ಮಾಡಿ ತೋರಿಸಿದ್ದವರು. ಗುಲಾಬಿ ಮಂಜನ ಪಾತ್ರಕ್ಕೆ ಹಣೆ ಮೇಲಿನ ಉಬ್ಬು ಸೇರಿದಂತೆ ಮೈಯಲ್ಲಿರೋ ಕೂದಲನ್ನೆಲ್ಲಾ ತೆಗೆಯಬೇಕಿತ್ತು. ಹಣೆ ಉಬ್ಬು ಯಾವುದೇ ವ್ಯಕ್ತಿಯ ಚಹರೆಯನ್ನೇ ಬದಲಿಸಬಲ್ಲದು. ಯಾವುದಕ್ಕೂ ಲೆಕ್ಕಿಸದ ಬಾಲು ತಮ್ಮ ಡೆಡಿಕೇಷನ್ನು ಎಂಥದ್ದು ಅನ್ನೋದನ್ನು ತೋರಿದ್ದರು. ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ನಿಭಾಯಿಸುತ್ತಾ ಬರುತ್ತಿರುವ ಬಾಲು ೧೯ ಏಜ್ ನಾನ್ಸೆನ್ಸ್ ಸಿನಿಮಾದಲ್ಲೂ ಇಡೀ ಚಿತ್ರದುದ್ದಕ್ಕೂ ಬರುವ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಕಾಲೇಜು ದಿನಗಳಲ್ಲೇ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬೆಳೆದವರು ಬಾಲು. ನಾಗಮಂಗಲದ ಆದಿಚುಂಚನಗಿರಿ ಕಾಲೇಜಿನಲ್ಲಿದ್ದಾಗಲೇ ಸ್ಕಿಟ್ಟು, ನಾಟಕಗಳನ್ನು ಬರೆದುಕೊಂಡು, ಅದನ್ನು ನಿರ್ದೇಶಿಸುತ್ತಾ, ನಟಿಸುತ್ತಿದ್ದ ಬಾಲು ಬೆಂಗಳೂರಿಗೆ ಬಂದಮೇಲೂ ರಂಗಭೂಮಿ ಮತ್ತು ಸಿನಿಮಾ ಸಾಹಚರ್ಯಕ್ಕೆ ಬಂದಿದ್ದರು. ಕೆಲಸ ಮಾಡಿಕೊಂಡೇ ಬಣ್ಣದ ಜಗತ್ತಿನ ನಂಟು ಹೊಂದಿದ್ದ ಬಾಲು ನಂತರ ಪೂರ್ಣ ಪ್ರಮಾಣದಲ್ಲಿ ನಟನಾಗಬೇಕು ಅಂತಾ ನಿರ್ಧರಿಸಿದ್ದರು. ಆಗ ಮುಕ್ತ, ಪುಣ್ಯಕೋಟಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಸಿನಿಮಾದಲ್ಲೂ ಒಳ್ಳೆ ನಟನಾಗಬೇಕೆನ್ನುವ ಬಯಕೆ ಬಾಲು ಅವರದ್ದಾಗಿತ್ತಾದರೂ ಹೇಳಿಕೊಳ್ಳುವಂತಾ ಪಾತ್ರಗಳು ಸಿಗುತ್ತಿರಲಿಲ್ಲ. ಆ ಸಂದರ್ಭದಲ್ಲೇ ಸ್ನೇಹಿತರೆಲ್ಲ ಸೇರಿ ಅನು ಸಿನಿಮಾವನ್ನು ನಿರ್ಮಿಸಿ ಬಾಲು ಅವರನ್ನು ನೆಗೆಟೀವ್ ಹೀರೋ ಆಗಿ ಪರಿಚಯಿಸಿದ್ದರು. ಹೀಗೆ ಸಿನಿಮಾ ಬದುಕು ಆರಂಭಿಸಿದ ಬಾಲು ೧೯ ಏಜ್ ನಾನ್ಸೆನ್ಸ್ ಚಿತ್ರ ನನ್ನ ವೃತ್ತಿ ಬದುಕಿಗೆ ಒಂದೊಳ್ಳೆ ಸಿನಿಮಾ ಆಗಲಿದೆ ಅಂತಾ ನಂಬಿದ್ದಾರೆ.
ಸದ್ಯ ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ಬಾಲು ಪಾತ್ರ ನಿರ್ವಹಿಸಲು ತಯಾರಾಗುತ್ತಿದ್ದಾರೆ. ಈ ಸಂದರ್ಭದಲ್ಲೇ ಬಿಡುಗಡೆಯಾಗುತ್ತಿರುವ ೧೯ ಏಜ್ ಬಾಲು ಅವರ ನಟನಾ ವೃತ್ತಿಗೆ ದೊಡ್ಡದೊಂದು ಬ್ರೇಕ್ ನೀಡುವಂತಾಗಲಿ!
೧೯೯ನೇವರ್ಷದ ಯುವಕ-ಯುವತಿಯದ ಲೈಫು ಹೇಗಿರುತ್ತದೆ? ಅವರ ಭಾವನೆಗಳು, ಕೈಗೊಳ್ಳುವ ತೀರ್ಮಾನಗಳು ಅದರಿಂದಾಗುವ ಸಾಧಕ-ಬಾಧಕಗಳ ಸುತ್ತ ಹೆಣೆದ ಸಿನಿಮಾ ೧೯ ಏಜ್ ನಾನ್ಸೆನ್ಸ್. ಇದೇ ವಾರ ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾದ ಹೀರೋ ಮನುಷ್ಗೆ ಮೊದಲಿಂದಲೂ ಸಿನಿಮಾ ಅಂದರೆ ಒಂಥರಾ ಹುಚ್ಚು. ಇವರ ತಂದೆ ಲೋಕೇಶ್ ಕಟ್ಟಡ, ದೇವಸ್ಥಾನಗಳಿಗೆ ಸ್ಟೋನ್ ಕ್ಲಾಡಿಂಗ್ ಕೆಲಸ ಮಾಡಿಸುತ್ತಾರೆ. ಮಗ ಕಾಲೇಜಿಗೆ ಚಕ್ಕರ್ ಹಾಕಿ ವಾರಕ್ಕೆ ಮೂರು ನಾಲ್ಕು ಸಿನಿಮಾ ನೋಡುತ್ತಿದ್ದದ್ದನ್ನು ಸ್ವತಃ ಲೋಕೇಶ್ ಗಮನಿಸಿದ್ದರು. ‘ಯಾಕೋ ಮಗನೆ ಹಿಂಗೆ ಮಾಡ್ತಿಯಾ? ಅಂದರೆ ‘ಅಪ್ಪಾ ನನಗೆ ಸಿನಿಮಾ ಅಂದ್ರೆ ಅಷ್ಟಿಷ್ಟ.. ಅನ್ನುತ್ತಿದ್ದನಂತೆ. ಅದೇ ಹೊತ್ತಿಗೆ ಲೋಕೇಶ್ ಅವರ ಬಹುಕಾಲದ ಸ್ನೇಹಿತ ಗಿಣಿ ಸಿನಿಮಾವೊಂದನ್ನು ನಿರ್ದೇಶಿಸಲು ಪ್ರಯತ್ನಿಸುತ್ತಿದ್ದರಂತೆ. “ಹೇಗೂ ನೀನು ಡೈರೆಕ್ಟರ್ ಆಗಬೇಕು ಅಂತಾ ಬಯಸಿರುವೆ, ನನ್ನ ಮಗನನ್ನೇ ಹೀರೋ ಮಾಡು, ನಾನೇ ಬಂಡವಾಳ ಹಾಕ್ತೀನಿ…. ಅಂದುಬಿಟ್ಟಿದ್ದರು ಲೋಕೇಶ್. ಆ ಮೂಲಕ ಶುರುವಾದ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.
ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್.ಲೋಕೇಶ್ ನಿರ್ಮಾಣದ 19 age IS ನಾನ್ಸೆನ್ಸ್?. ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಜವಾಬ್ದಾರಿಯನ್ನು ಗಿಣಿ ನಿಭಾಯಿಸಿದ್ದಾರೆ. ಛಾಯಾಗ್ರಹಣ-ಜಿ.ವೆಟ್ರಿ, ಸಂಕಲನ-ರವಿಚಂದ್ರನ್, ಸಂಗೀತ – ಕುಟ್ಟಿ, ಸಾಹಸ -ಶಿವು, ಹಾಡುಗಳು-ವಿ.ನಾಗೇಂದ್ರ ಪ್ರಸಾದ್, ತಾರಾಗಣದಲ್ಲಿ – ಮನುಷ್, ಮಧುಮಿತ, ಲಕ್ಷ್ಮಿ ಮಂಡ್ಯ, ಮೇಸ್ತ್ರಿ ಬಾಲು, ಸೌಭಾಗ, ಕಾವ್ಯಪ್ರಕಾಶ್, ಮುಂತಾದವರಿದ್ದಾರೆ.