ಯಾರ ಆವಿಷ್ಕಾರವನ್ನು ಮತ್ತೊಬ್ಬರು ಟಚ್ ಮಾಡಲು ಸಾಧ್ಯವಿಲ್ಲವೋ, ಯಾರ ಕ್ರಿಯಾಶೀಲತೆ ನವಯುಗಕ್ಕೆ ನಾಂದಿ ಹಾಡುತ್ತದೋ, ಯಾರ ಚಿಂತನೆ ಎಲ್ಲರನ್ನೂ ಹೊಸ ಪಥಕ್ಕೆ ಕರೆದೊಯ್ಯುತ್ತದೋ ಆ ಒಬ್ಬ ವ್ಯಕ್ತಿ ನಿಜವಾದ ಸಾಧಕ!
ನೋ ಡೌಟ್…! ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಕ್ಷೇತ್ರಗಳಲ್ಲಿ ದುಡಿದು, ಗುರಿ ತಲುಪಿದ ಮತ್ತು ಇವತ್ತಿಗೂ ಅದೇ ಕ್ರೇಜ್ ಉಳಿಸಿಕೊಂಡಿರುವ ಒನ್ ಅಂಡ್ ಓನ್ಲಿ ಸಾಧಕ, ಕನ್ನಡ ಚಿತ್ರರಂಗದ ಅದ್ಧೂರಿ ಪರ್ವವೊಂದರ ಪ್ರವರ್ತಕ, ಸ್ಯಾಂಡಲ್ ವುಡ್ ನ ಅಮಲುಗಣ್ಣಿನ ಚೆಲುವ, ಕ್ರೇಜ಼ಿ ಸ್ಟಾರ್ ಕನಸುಗಾರ ರವಿಚಂದ್ರನ್.
ರವಿಚಂದ್ರನ್ ಬರಿಯ ನಟನಾಗಿ ಹೆಸರು ಮಾಡಿಲ್ಲ, ಕಾಲಕ್ಕೆ ತಕ್ಕಂತೆ ತಾಂತ್ರಿಕವಾಗಿ ಅಪ್ ಡೇಟ್ ಆಗುತ್ತಾ ನಿರ್ದೇಶಕರಾಗಿ ಗೆದ್ದಿದ್ದಾರೆ. ಲಾಭ-ನಷ್ಟದ ಹೊರತಾಗಿ ನಿರ್ಮಾಪಕರಾಗಿ ರವಿಚಂದ್ರನ್ ಮತ್ತು ಈಶ್ವರಿ ಸಂಸ್ಥೆಯ ಮೊದಲುಗಳನ್ನು ಭವಿಷ್ಯದಲ್ಲಿ ಕೂಡಾ ಯಾರೂ ಮುಟ್ಟಲು ಸಾಧ್ಯವಿಲ್ಲ. ಸಂಗೀತ ನಿರ್ದೇಶಕರಾಗಿ, ಸಂಕಲನಕಾರರಾಗಿ, ಗ್ರಾಫಿಕ್ ತಂತ್ರಜ್ಞರಾಗಿ, ಅಷ್ಟೇ ಏಕೆ ತಮ್ಮ ಸಿನಿಮಾಗಳ ಪೋಸ್ಟರುಗಳನ್ನು ಸಹ ತಾವೇ ವಿನ್ಯಾಸ ಮಾಡಿಕೊಂಡ ಅದ್ಭುತ ಕಲಾವಿದ ರವಿಚಂದ್ರನ್.
ರವಿಚಂದ್ರನ್ ಈಗ ಮತ್ತೊಂದು ಹೊಸತನಕ್ಕೆ ಕೈ ಹಾಕಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಲಾಕ್ ಡೌನ್ ಜಾರಿಯಲ್ಲಿತ್ತಲ್ಲಾ… ಆಗ ಎಲ್ಲೆಲ್ಲಿ ನೋಡಿದರೂ ರವಿಚಂದ್ರನ್ ಅಭಿನಯದ ಸಿನಿಮಾ, ಹಾಡು, ಸಂದರ್ಶನಗಳು ಹರಿದಾಡುತ್ತಿದ್ದವು. ದುರಂತವೆಂದರೆ, ಸ್ವತಃ ರವಿಯವರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದ ಸಿನಿಮಾಗಳ ಹಕ್ಕು ಕೂಡಾ ಅವರಲ್ಲಿರಲಿಲ್ಲ. ಯಾವತ್ತೋ ಬೇರೆಯವರಿಗೆ ನೀಡಿದ್ದ ತಮ್ಮದೇ ಕಂಟೆಂಟು ಬೇರೆಲ್ಲಾ ಪ್ಲಾಟ್ ಫಾರ್ಮುಗಳಲ್ಲಿ ಓಡಾಡುತ್ತಿದೆ, ಸಂಪಾದಿಸುತ್ತಿದೆ ಅನ್ನೋದು ಅವರ ಗಮನಕ್ಕೆ ಬಂದಿತ್ತು. ರವಿಚಂದ್ರನ್ ಥರದ ನಟರು ಕಲ್ಪವೃಕ್ಷವಿದ್ದಂತೆ. ಅವರ ಪ್ರತಿಯೊಂದು ಚಲನವಲನಗಳ ಬಗ್ಗೆ ಜನರಿಗೆ ಕುತೂಹಲ ಇದ್ದೇಇದೆಯಲ್ಲಾ.. ಹೀಗಾಗಿ, ಅವರು ಹೊಸದೊಂದು ಫೋಟೋ ಹೊರಬಿಟ್ಟರೂ, ಮಾತಾಡಿದರೂ, ನಡೆದಾಡಿದರೂ, ಯಾವುದೇ ವಿಚಾರಕ್ಕೆ ಪ್ರತಿಕ್ರಿಯಿಸಿದರೂ ಅದು ಮೀಡಿಯಾಗಳಿಗೆ ಸರಕಾಗುತ್ತದೆ.
ʻನೀವು ಓಟಿಟಿ ಪ್ಲಾಟ್ ಫಾರ್ಮಿಗೆ ಸಿನಿಮಾ ಮಾಡುವುದಿಲ್ಲವಾ?ʼ ಅಂತಾ ಪ್ರಶ್ನಿಸಿದಾಗ ʻಹಾಗೊಂದು ವೇಳೆ ನನ್ನ ಸಿನಿಮಾ ಇತ್ಯಾದಿ ಕಂಟೆಂಟುಗಳನ್ನು ಆನ್ ಲೈನಲ್ಲಿ ಬಿಡೋದಾದರೆ ನನ್ನದೇ ಪ್ಲಾಟ್ ಫಾರ್ಮಿಗೆ ಅಪ್ ಲೋಡ್ ಮಾಡುತ್ತೀನಿʼ ಅಂದಿದ್ದರು. ಬಹುಶಃ ಆ ಯೋಜನೆ ಈಗ ಅಕ್ಷರಶಃ ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿದೆ. ಇನ್ನು ಎಣಿಸಿ ಏಳನೇ ದಿನಕ್ಕೆ ಕ್ರೇಜ಼ಿ ಸ್ಟಾರ್ ರವಿಚಂದ್ರನ್ ಅವರ ಒನ್ ಅಂಡ್ ಓನ್ಲಿ ಕಾರ್ಯಾರಂಭ ಮಾಡಲಿದೆ.
ಒನ್ ಅಂಡ್ ಓನ್ಲಿ ಹೆಸರಿನಲ್ಲಿ ಯೂ ಟ್ಯೂಬ್, ಟ್ವಿಟರ್, ಇನ್ಸ್ಟಾಗ್ರಾಂ ಅಕೌಂಟುಗಳು ಚಾಲನೆಗೊಳ್ಳುತ್ತಿವೆ. ತಮ್ಮ ಸಿನಿಮಾ-ಜೀವನದ ಕುರಿತಾದ ಅನ್ ಟೋಲ್ಡ್ ಸ್ಟೋರಿಗಳು, ಕೌತುಕಮಯ ವಿಚಾರಗಳನ್ನು ರವಿಚಂದ್ರನ್ ಇಲ್ಲಿ ಅನಾವರಣಗೊಳಿಸಲಿದ್ದಾರೆ. ಇನ್ನು ಯಾವುದೇ ವಿಚಾರವಾಗಿ ಮಾಧ್ಯಮಗಳು ರವಿಯವರ ಪ್ರತಿಕ್ರಿಯೆಗಾಗಿ ಮೈಕು ಹಿಡಿದು ಕಾಯುವಂತಿಲ್ಲ. ಏನೇ ವಿಚಾರವಿದ್ದರೂ ಒನ್ ಅಂಡ್ ಓನ್ಲಿಯ ಮುಖಾಂತರ ತಿಳಿಸುತ್ತಾರೆ. ಈ ಕುರಿತು ಸ್ವತಃ ರವಿಚಂದ್ರನ್ ಸ್ಟೈಲಿಷ್ ಟೀಸರೊಂದನ್ನು ಬಿಡುಗಡೆ ಮಾಡಿದ್ದಾರೆ…
No Comment! Be the first one.