ಬರೋಬ್ಬರಿ ನಾಲಕ್ಕು ವರ್ಷಗಳ ದೀರ್ಘ ಅವಧಿಯನ್ನು ತೆಗೆದುಕೊಂಡು ನಿರ್ದೇಶಕ ಶಂಕರ್ ತಯಾರಿಸಿರುವ ಸಿನಿಮಾ ೨.೦ ಮೊಬೈಲ್ ತರಂಗಗಳು ಮತ್ತದರಿಂದಾಗುತ್ತಿರುವ ಎಡವಟ್ಟುಗಳು ಒಂದೆರಡಲ್ಲ. ಬೇರ್ಯಾವ ದೇಶದಲ್ಲೂ ಇಲ್ಲದಷ್ಟು ಮೊಬೈಲ್ ನೆಟ್ವರ್ಕ್ಗಳು ಇಂಡಿಯಾದಲ್ಲಿವೆ. ಮೊಬೈಲ್ ಕಂಪೆನಿಗಳು ತಮ್ಮ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುವ ಕಾರಣಕ್ಕಾಗಿ ನಿಯಮವನ್ನು ಮೀರಿ ಹೆಚ್ಚಿಗೆ ರೇಡಿಯೇಷನ್ ಗಳನ್ನು ಬಳಸುತ್ತಿರುವುದರಿಂದ ಬಹುಮುಖ್ಯವಾಗಿ ಬಾಧೆಗೊಳಗಾಗಿರುವುದು ಪಕ್ಷಿ ಸಂಕುಲ. ಮೊಬೈಲ್ ತರಂಗಾಂತರಗಳಿಂದ ಗುಬ್ಬಚ್ಚಿಯಂತಾ ಪುಟ್ಟ ಗಾತ್ರದ ಪಕ್ಷಿಗಳು ಎದೆ ಸಿಡಿದು ಸಾಯುತ್ತಿವೆ. ಜೀವಪರ ಕಾಳಜಿಯುಳ್ಳ ಸಂಘಟನೆಗಳು, ಪಕ್ಷಿಶಾಸ್ತ್ರಜ್ಞರು ಅದೆಷ್ಟೇ ಕೂಗಾಡಿದರೂ, ಎಲ್ಲ ವಿರೋಧಗಳ ನಡುವೆಯೂ ಮೊಬೈಲ್ ಗ್ರಾಹಕರು ಹೆಚ್ಚುತ್ತಲೇ ಇದ್ದಾರೆ. ಅವರ ಆತ್ಮಸಂತೃಪ್ತಿಗೊಳಿಸಲು ಕಂಪೆನಿಗಳು ತಮ್ಮಿಷ್ಟ ಬಂದಷ್ಟು ರೇಡಿಯೇಷನ್ನುಗಳನ್ನು ಹರಿಯಬಿಟ್ಟು ಪಕ್ಷಿಗಳ ಜೀವಕ್ಕೆ ಕಂಟಕ ತರುತ್ತಿದ್ದಾರೆ.
ಇದನ್ನೇ ಕಥಾವಸ್ತುವನ್ನಾಗಿಸಿದ್ದಾರೆ ನಿರ್ದೇಶಕ ಶಂಕರ್. ವಯೋವೃದ್ಧ ಪಕ್ಷಿ ಸಂಶೋಧಕನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಎಲ್ಲೆಂದರಲ್ಲಿ ಮೊಬೈಲ್ ಟವರ್ ಗಳನ್ನು ನಿರ್ಮಿಸಿ, ಮೊಬೈಲ್ ರೇಡಿಯೇಷನ್ನುಗನ್ನು ಬಳಸೋದರಿಂದ ಪಕ್ಷಿಗಳು ಸಾಯುತ್ತಿವೆ. ರೈತರು ಬೆಳೆಯೋ ಬೆಳೆಗೆ ಕೀಟಗಳು ಹಾವಳಿ ಹೆಚ್ಚುವುದಕ್ಕೂ ಪಕ್ಷಿಗಳ ಮಾರಣಹೋಮಕ್ಕೂ ಸಂಬಂಧವಿದೆ. ಕೀಟಗಳನ್ನು ತಿಂದು ಬದುಕುವ ಪಕ್ಷಿಗಳೇ ಇಲ್ಲವಾದಮೇಲೆ ಬೆಳೆಹಾನಿಯಾಗೋದು ಗ್ಯಾರೆಂಟಿ. ಇದರಿಂದ ಆಹಾರ ಸರಪಳಿಯಲ್ಲಿ ಏರುಪೇರಾಗುತ್ತಿದೆ ಎಂದು ಸಿಕ್ಕಸಿಕ್ಕ ಅಧಿಕಾರಿಗಳಿಗೆ ದೂರು ಕೊಟ್ಟರೂ, ಮಂತ್ರಿಯ ಬಳಿ ಕೂತು ಅಲವತ್ತುಕೊಂಡರೂ ಯಾವ ಪ್ರಯೋಜನವೂ ಆಗುವುದಿಲ್ಲ. ಪಕ್ಷಿಗಳ ಸಾವನ್ನು ಕಂಡು ದಿಕ್ಕು ತೋಚದಂತಾದ ಆತ ಮೊಬೈಲ್ ಟವರ್ರಿಗೇ ಹಗ್ಗ ಬಿಗಿದು ಉರುಳು ಹಾಕಿಕೊಳ್ಳುತ್ತಾನೆ. ನಂತರ ಅದೇ ವ್ಯಕ್ತಿ ಆತ್ಮವಾಗಿ ಮಾರ್ಪಾಟು ಹೊಂದಿ ಸತ್ತ ಪಕ್ಷಿಗಳ ಆತ್ಮಗಳ ಜೊತೆ ಸೇರಿ ಮೊಬೈಲ್ ಗ್ರಾಹಕರನ್ನು ಮತ್ತು ಕಂಪೆನಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾನೆ. ಇಂಥಾ ಪರಿಸರಪ್ರೇಮಿ ಆತ್ಮ ಸೃಷ್ಟಿಸುವ ಅನಾಹುತಗಳನ್ನು ಮಾನವ ನಿರ್ಮಿತ ಚಿಟ್ಟಿ ರೋಬೋ ಹೇಗೆ ತಡೆಯುತ್ತದೆ ಅನ್ನೋದು ಶಂಕರ್ ಸಿನಿಮಾದ ಒಟ್ಟೂ ಸಾರಾಂಶ.
ವಿಜ್ಞಾನಿಯ ಜೊತೆಗೆ ರೋಬೋ ಆಗಿಯೂ ನಟಿಸಿರುವ ರಜನಿ ಎಂದಿನಂತೆ ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ. ನಾಯಕಿ ಆಮಿ ಜಾಕ್ಸನ್ ಕ್ಯೂಟ್ ರೋಬೋ ಆಗಿ ಮನಸೆಳೆಯುತ್ತಾರೆ. ತಾಂತ್ರಿಕವಾಗಿ ತೀರಾ ಶ್ರೀಮಂತಿಕೆಯಿಂದ ಕೂಡಿದ್ದರೂ ಕಥೆಯನ್ನು ವಿಸ್ತರಿಸುವಲ್ಲಿ ಶಂಕರ್ ಎಡವಿದಂತೆ ಕಾಣುತ್ತದೆ. ಎ.ಆರ್. ರೆಹಮಾನ್ ಎರಡು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದಲ್ಲೂ ಹೊಸತೇನೋ ಸೃಷ್ಟಿಸುವಲ್ಲಿ ಒಂದು ಮಟ್ಟಿಗೆ ಗೆದ್ದಿದ್ದಾರೆ. ಎಲ್ಲ ಬಗೆಯ ಪ್ರೇಕ್ಷಕರನ್ನೂ ಗೆಲ್ಲುವಲ್ಲಿ ಸೋತಿರುವ ರೋಬೋ ನಿರೀಕ್ಷೆಯ ಮಟ್ಟ ತಲುಪಿಲ್ಲ ಅನ್ನೋದೇ ಬೇಸರದ ವಿಚಾರ.
#