ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಸಂಬಂಧ ಹಾಳಾಗಿದೆ ಅಂತಾ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಶ್ರೀಮನ್ನಾರಾಯಣನ ಬಗ್ಗೆ ಅತಿಯಾದ ಅಪೇಕ್ಷೆ ಇಟ್ಟುಕೊಂಡಿದ್ದ ಪುಷ್ಕರ್ ವಿಪರೀತ ಖರ್ಚು ಮಾಡಿ ಪಬ್ಲಿಸಿಟಿಯನ್ನೂ ಮಾಡಿದ್ದರು. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಚಿತ್ರ ಸೌಂಡು ಮಾಡಿತು, ದೊಡ್ಡ ನಿರೀಕ್ಷೆಯನ್ನೂ ಹುಟ್ಟುಹಾಕಿತು. ಅದರಲ್ಲಿ ಎರಡು ಮಾತಿಲ್ಲ.
ಆದರೆ ರಿಲೀಸಾದಮೇಲೆ ಅಂದುಕೊಂಡಂತೆ ಎಲ್ಲವೂ ಆಗಲಿಲ್ಲ. ಶ್ರೀಮನ್ನಾರಾಯಣನನ್ನು ಕೆಲವರು ಕೊಂಡಾಡಿದರು. ಹಲವರು ಅರ್ಥವಾಗದೆ ಥೇಟರಿಂದ ಎದ್ದು ಬಂದರು. ಇದೆಲ್ಲ ಏನೇ ಆಗಲಿ, ಅದರ ನೇರ ಪರಿಣಾಮವನ್ನು ಎದುರಿಸಿದ್ದು ಮಾತ್ರ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ. ಎಲ್ಲೆಲ್ಲಿಂದಲೋ ಹಣ ಹೊಂದಿಸಿ, ಅಗತ್ಯಕ್ಕಿಂತಾ ಹೆಚ್ಚು ಖರ್ಚುಮಾಡಿದ ಸಿನಿಮಾ ನಿರ್ಮಾಪಕರಿಗೆ ಲಾಭ ತಂದುಕೊಡುವುದಿರಲಿ, ಹಾಕಿದ ಬಂಡವಾಳವನ್ನೂ ವಾಪಾಸು ತಂದುಕೊಡಲಿಲ್ಲ ಅನ್ನೋ ಮಾತಿದೆ.
ಈಗ 777 ಚಾರ್ಲಿ ಸಿನಿಮಾದ ಟೀಸರ್ ರಿಲೀಸ್ ಪೋಸ್ಟರಿನಲ್ಲಿ ಪುಷ್ಕರ್ ಹೆಸರು ಮಂಗಮಾಯವಾಗಿದೆ. ನಿರ್ಮಾಪಕರ ಹೆಸರಿನಲ್ಲಿ ರಕ್ಷಿತ್ ಶೆಟ್ಟಿ ಮಾತ್ರ ಉಳಿದುಕೊಂಡಿದ್ದಾರೆ. ಪುಷ್ಕರ್ ಫಿಲಂಸ್ ಲೋಗೋ ಕೂಡಾ ಡಿಲೀಟ್ ಆಗಿದ್ದು ಪರಮ್ವಾದ ಲಾಂಛನ ಮಾತ್ರ ಹಾಗೇ ಇದೆ. ಸಪ್ತಸಾಗರದಾಚೆ ಸಿನಿಮಾದ ಪೋಸ್ಟರಿನಲ್ಲೂ ಪುಷ್ಕರ್ ಹೆಸರು ಮತ್ತು ಅವರ ಸಂಸ್ಥೆಯ ಲೋಗೋವನ್ನು ಕಿತ್ತುಹಾಕಲಾಗಿದೆ. ಮೂಲಗಳ ಪ್ರಕಾರ ರಕ್ಷಿತ್ ಮತ್ತು ಪುಷ್ಕರ್ ಜಂಟಿ ವ್ಯವಹಾರಗಳು ಇಲ್ಲಿಗೆ ಕೊನೆಯಾಗಲಿವೆಯಂತೆ. ವ್ಯಾವಹಾರಿಕವಾಗಿ ಈ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ತಲಾಕ್ ಕೊಟ್ಟಿದ್ದಾರಂತೆ.
ಕಷ್ಟದಲ್ಲಿದ್ದಾಗ ಎಲ್ಲರೂ ಪಾಲುದಾರರಾಗಿರುತ್ತಾರೆ. ಗೆಲುವು ಅಂಥಾ ಬಂದಮೇಲೆ ಸಂಬಂಧಗಳು ಉಳಿಯೋದು ಕಷ್ಟ ಕಷ್ಟ. ದುಡ್ಡು ಕಾಸಿನ ವ್ಯವಹಾರಕ್ಕೆ ಜೀವದ ಗೆಳೆಯರ ಮಧ್ಯೆಯೂ ಬಿರುಕು ಮೂಡಿಸುವ ಶಕ್ತಿಯಿದೆ. ಒಬ್ಬರ ಅತಿಯಾದ ಲೆಕ್ಕಾಚಾರ, ಮತ್ತೊಬ್ಬರ ಸ್ವಾಭಿಮಾನ, ನಡುವೆ ಕಡ್ಡಿ ಅಲ್ಲಾಡಿಸುವ ಆಳ್ಕಾಟಿಗಳು, ಭ್ರಮೆ, ವಾಸ್ತವ, ಲಾಭ-ನಷ್ಟಗಳೆಲ್ಲಾ ಒಟ್ಟೊಟ್ಟಿಗೇ ಸೇರಿಕೊಂಡು ವಿಶ್ವಾಸ ಕೆಡಿಸಿಬಿಡುತ್ತವೆ. ಬಹುಶಃ ಪುಷ್ಕರ್ ಮತ್ತು ರಕ್ಷಿತ್ ನಡುವೆ ಕೂಡಾ ಇದೇ ಆಗಿರಬೇಕು! ಏನೇ ಆಗಲಿ, ಸಿನಿಮಾಗೆ ಅಂದರೆ ಮುಖಾಮೂತಿ ನೋಡದೆ ಖರ್ಚು ಮಾಡುತ್ತಿದ್ದ ಪುಷ್ಕರ್, ಹೊಸತನಕ್ಕಾಗಿ ತುಡಿಯುವ ರಕ್ಷಿತ್ ಒಟ್ಟಿಗಿರಬೇಕಿತ್ತು…!!
No Comment! Be the first one.