ಅಮ್ಮ ಟಾಕೀಸ್ ಬ್ಯಾನರಿನಡಿಯಲ್ಲಿ, ಇತ್ತೀಚೆಗೆ ಸುದ್ದಿಯಲ್ಲಿದ್ದ, ಹಾಸ್ಯ ನಟ ಬಿರಾದಾರ್ ಅಭಿನಯದ “90 ಹೊಡಿ ಮನೀಗ್ ನಡಿ” ಚಿತ್ರವು ಸೆನ್ಸಾರ್ ಮೆಟ್ಟಿಲೇರಿದ್ದು,  ಟೈಟಲ್ ತಗಾದೆ ಎದುರಿಸಿದೆ. ಅಸಲಿಗೆ, “90 ಹೊಡಿ ಮನೀಗ್ ನಡಿ ಎಂದರೆ, ಜನರನ್ನು ನೇರವಾಗಿ    ಕುಡಿತಕ್ಕೆ ಪ್ರಚೋದಿಸಿದಂತಾಗುತ್ತದೆ” ಎಂಬುದು ಮಂಡಳಿಯವರ ಗಟ್ಟಿ ಅಭಿಪ್ರಾಯವಂತೆ.  ಹಾಗಾಗಿ ಚಿತ್ರದ ಶೀರ್ಷಿಕೆ ಬದಲಾಯಿಸಲು ಸೂಚನೆ ನೀಡಿದೆ.  ಈ ಬದಲಾವಣೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಸಿನಿ ತಂಡ, ತಮ್ಮ ಶೀರ್ಷಿಕೆಯನ್ನ ” 90 ಬಿಡಿ ಮನೀಗ್ ನಡಿ” ಎಂದು ಬದಲಾಯಿಸಿಕೊಂಡಿದೆ. ‘ಹೊಡಿ’ ಬದಲು ‘ಬಿಡಿ’ ಎಂದಾಗಿದೆ ಅಷ್ಟೆ. ಏನೇ ಆದರೂ ’90’ಯೇ ಸಿನಿಮಾದ ಹೈಲೈಟ್ ಆಗಿದ್ದರಿಂದ, ಅಷ್ಟೇನು ಬೇಜಾರಿಲ್ಲ  ಎನ್ನುವ ನಿರ್ಮಾಪಕಿ ರತ್ನಮಾಲಾ ಬಾದರದಿನ್ನಿ, ನಮಗೆ ಟೈಟಲ್ ಬದಲಾಯಿಸಲು ಸೂಚಿಸಿದ ಮಂಡಳಿಯವರು,  ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ನಮ್ಮ  ಹೆಗ್ಗಳಿಕೆ ಎನ್ನುತ್ತಾರೆ.

ಕಾಮಿಡಿ, ಕ್ರೈಮ್ ಥ್ರಿಲ್ಲರ್ ಕಥೆ ಆಧರಿಸಿದ  ಈ ಚಿತ್ರಕ್ಕೆ, ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಇನ್ನಷ್ಟೆ ಚಿತ್ರದ ಪ್ರಚಾರ ಶುರುವಿಟ್ಟು, ಮೇ ತಿಂಗಳ ಹೊತ್ತಿಗೆ ಚಿತ್ರವನ್ನು ಅದ್ಧೂರಿಯಾಗಿ ತೆರೆ ಕಾಣಿಸುವ ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಿದ್ದಾರೆ.

ಉಳಿದಂತೆ ಡಾ. ನಾಗೇಂದ್ರ ಪ್ರಸಾದ್ ಮತ್ತು ಶಿವು ಭೇರಗಿಯವರ ಸಾಹಿತ್ಯಕ್ಕೆ ಕಿರಣ್ ಶಂಕರ್ ಸಂಗೀತ ನೀಡಿದ್ದು,  ವೀರ್ ಸಮರ್ಥ್ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದಾರೆ.  ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸಾಹಸ, ಚುಟು- ಚುಟು ಖ್ಯಾತಿಯ ಭೂಷಣ್ ಕೊರಿಯೋಗ್ರಫಿ ಈ ಚಿತ್ರಕ್ಕಿದ್ದು, ತಾರಾಗಣದಲ್ಲಿ ಬಿರಾದಾರ್ ಜೊತೆ ನೀತಾ ಮೈಂದರ್ಗಿ,  ಪ್ರೀತು ಪೂಜಾ, ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್ ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಮುರುಳಿ ಹೊಸಕೋಟೆ, ರಾಜೇಂದ್ರ ಗುಗ್ವಾಡ, ರವಿದೀಪ್, ಸಂತು ಸೊಕನಾದಗಿ, ಎಲ್ಐಸಿ ಲೋಕೇಶ್ ತೆರೆ ಹಂಚಿಕೊಂಡಿದ್ದಾರೆ.

ವಿಶೇಷವಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ವೈಜನಾಥ ಬಿರಾದಾರ್ ಅವರ ಅಭಿನಯದ ಐನೂರನೇ ಚಿತ್ರ ಆಗಿರುವ ಕಾರಣಕ್ಕೆ ಈ ಸಿನಿಮಾ  ಸಣ್ಣದಾಗಿ ಸದ್ದು ಮಾಡತೊಡಗಿದೆ.  ಚಿತ್ರದ ಬಹುಭಾಗ  ಉತ್ತರ ಕರ್ನಾಟದ ಭಾಗಗಳಲ್ಲೇ ಹೆಚ್ಚಾಗಿ ಚಿತ್ರೀಕರಣಗೊಂಡು, ಆ ಭಾಷಾ ಶೈಲಿಯಲ್ಲೇ ಚಿತ್ರ ಮೂಡಿ ಬಂದಿದ್ದು, ಅಲ್ಲಿಯ ದೇಸೀ ಸೊಗಡನ್ನೇ ಹೊತ್ತು ತಂದಿದ್ದರಿಂದ, ಸಹಜವಾಗಿಯೇ ಆ ಭಾಗದ ಜನರ ನಿರೀಕ್ಷೆ ತುಸು ಹೆಚ್ಚೇ  ಜಾರಿಯಲ್ಲಿದೆ.

“ಒಂದೊಳ್ಳೆ ಪ್ರಯತ್ನವಂತೂ ಪಟ್ಟಿದ್ದೇವೆ, ಮಿಕ್ಕಿದ್ದು ಪ್ರೇಕ್ಷಕರ ಸಹಕಾರದಲ್ಲಿದೆ” ಎನ್ನುವ ಚಿತ್ರತಂಡ, ಅಂದುಕೊಂಡಂತೆಯೇ ಎಲ್ಲವೂ ಕೈಗೂಡಿದರೆ, ಮೇ ತಿಂಗಳಲ್ಲಿ  “ನೈಂಟಿಯ” ಜೊತೆ  ನಿಮ್ಮ ಮುಂದಿರಲಿದ್ದೇವೆ ಎನ್ನುತ್ತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ…

Previous article

ದೇಹವೇ ಇಲ್ಲಿ ದೇವರು!

Next article

You may also like

Comments

Leave a reply