ಕಳೆದ ವರ್ಷ ತೆರೆಕಂಡ ವಿಜಯ್ ಸೇತುಪತಿ ಮತ್ತು ತ್ರಿಷಾ ಅಭಿನಯದ ’96’ ತಮಿಳು ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸಿನಿಮಾ ಛಾಯಾಗ್ರಾಹಕ ಪ್ರೇಮ್ಕುಮಾರ್ ಈ ಚಿತ್ರದೊಂದಿಗೆ ನಿರ್ದೇಶಕರಾಗಿ ಬಡ್ತಿ ಪಡೆದರು. ವಿಜಯ್ ಮತ್ತು ತ್ರಿಷಾ ವೃತ್ತಿಬದುಕಿನಲ್ಲಿ ಈ ಸಿನಿಮಾ ಪ್ರಮುಖ ಪ್ರಯೋಗವಾಗಿ ದಾಖಲಾಯ್ತು. ಈ ರೊಮ್ಯಾಂಟಿಕ್ ಎಂಟರ್ಟೇನರ್ ಹಿಟ್ ಆಗುತ್ತಿದ್ದಂತೆ ರಿಮೇಕ್ ಹಕ್ಕುಗಳಿಗೆ ಡಿಮಾಂಡ್ ಬಂದಿದ್ದು ಸಹಜವೇ ಆಗಿತ್ತು. ಅದರಂತೆ ಕನ್ನಡ ಮತ್ತು ತೆಲುಗಿನಲ್ಲೂ ಚಿತ್ರಗಳು ಸೆಟ್ಟೇರಿವೆ.
ಕನ್ನಡದಲ್ಲಿ ಚಿತ್ರದ ಶೀರ್ಷಿಕೆ ’99’ ಎಂದಾಗಿದ್ದು, ಗಣೇಶ್ ಮತ್ತು ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ಬಹುಪಾಲು ಚಿತ್ರೀಕರಣ ಮುಗಿದಿದೆ. ಇನ್ನು ತೆಲುಗಿನಲ್ಲಿ ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಪ್ರೇಮ್ಕುಮಾರ್ ಅವರೇ ಚಿತ್ರದ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ. ’96’ಗೆ ಸಂಗೀತ ಸಂಯೋಜಿಸಿದ್ದ ಗೋವಿಂದ ವಸಂತ ಅವರೇ ತೆಲುಗು ಅವತರಣಿಕೆಗೂ ಸಂಗೀತ ನೀಡುತ್ತಿದ್ದಾರೆ. ಶರ್ವಾನಂದ ಮತ್ತು ಸಮಂತಾ ಚಿತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಚಿತ್ರಕ್ಕೆ ’ಜಾನು’ ಇಲ್ಲವೇ ’ಜಾನಕಿದೇವಿ’ ಎಂದು ನಾಮಕರಣವಾಗುವ ಸಾಧ್ಯತೆಗಳಿವೆ. ಬಹುತೇಕ ’ಜಾನು’ ಶೀರ್ಷಿಕೆ ಫೈನಲ್ ಆಗಲಿದೆ ಎಂದು ಚಿತ್ರತಂಡದ ಮೂಲಗಳು ಹೇಳುತ್ತವೆ.
No Comment! Be the first one.