ಅವಮಾನ ಮಾಡಿದವರನ್ನು ಕನ್ನಡಿಗರು ಎಡಗಾಲಲ್ಲಿ ಒದೀಬೇಕು!

Picture of Cinibuzz

Cinibuzz

Bureau Report

ʻಫಿಲ್ಮ್‌ ಫೇರ್ʼ‌ ಎನ್ನುವ ಪ್ರಶಸ್ತಿಯನ್ನು ಅದ್ಯಾವ ಪುಣ್ಯಾತ್ಮ ಭಾರತೀಯ ಚಿತ್ರರಂಗದ ಪಾಲಿನ ಆಸ್ಕರ್ ಅಂತಾ ಕರೆದನೋ? ಗೊತ್ತಿಲ್ಲ!

ಕೈಯಲ್ಲಿ ಕಪ್ಪು ಸುಂದರಿಯ ಪ್ರತಿಮೆ ಹಿಡಿದು ಫೋಸ್ ಕೊಡುವ ಸ್ಟಾರ್‌ಗಳ ನಡುವೆ, ಈ ಪ್ರಶಸ್ತಿಗಳ ಪಾರದರ್ಶಕತೆಯ ಬಗ್ಗೆ ದಶಕಗಳಿಂದಲೂ ಕೇಳಿ ಬರುತ್ತಿರುವ ಆರೋಪಗಳು ಈಗ ಸ್ಫೋಟಕ ರೂಪ ಪಡೆದಿವೆ. ಇದಕ್ಕೆ ಇತ್ತೀಚಿನ ಸೇರ್ಪಡೆ ‘ಬಘೀರ’ ಖ್ಯಾತಿಯ ಶ್ರೀಮುರಳಿ ಅವರ ಬೇಸರದ ನುಡಿಗಳು.

ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ನಡೆದ 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ‘ಬಘೀರ’ ಚಿತ್ರದ ಅದ್ಭುತ ನಟನೆಗಾಗಿ ಶ್ರೀಮುರಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆದರೆ, ಪ್ರಶಸ್ತಿ ಬಂದ ಖುಷಿಗಿಂತಲೂ ಅಲ್ಲಿ ನಡೆದ ತಾರತಮ್ಯ ಅವರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. “ಈ ಪ್ರಶಸ್ತಿಯನ್ನು ನಾವಾಗಿಯೇ ಹೋಗಿ ಕೇಳಿ ಪಡೆದುಕೊಳ್ಳೋದಿಲ್ಲ. ಅವರೇ ಕರೆದು ಗುರುತಿಸಿ ಕೊಡುವ ಗೌರವವಿದು. ಹೀಗಿರುವಾಗ ಆ ಗೌರವಕ್ಕೆ ಪಾತ್ರರಾದ ಕನ್ನಡದ ಕಲಾವಿದರನ್ನು ನಿರ್ಲಕ್ಷ್ಯ ಮಾಡುವುದು ಎಷ್ಟು ಸರಿ?” ಎಂದು ಶ್ರೀಮುರಳಿ ಪ್ರಶ್ನಿಸಿದ್ದಾರೆ. ಫಿಲ್ಮ್‌ಫೇರ್ ಮ್ಯಾಗಜೀನ್ನ ಮುಖಪುಟದಲ್ಲಿ ಪ್ರಶಸ್ತಿ ವಿಜೇತ ನಟ-ನಟಿಯರ ಫೋಟೋಗಳನ್ನು ಹಾಕುವಾಗ ಕನ್ನಡದ ಕಲಾವಿದರನ್ನು ಕಡೆಗಣಿಸಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. “ನಮ್ಮ ಮನ್ನಣೆಗೆ ಅವರು ಬೆಲೆ ನೀಡಿದ್ದರೆ ಪ್ರಶಸ್ತಿ ಪಡೆದ ಸಾರ್ಥಕತೆ ಇರುತ್ತಿತ್ತು. ಆದರೆ ಕನ್ನಡದ ನಟರ ಬಗ್ಗೆ ಉದಾಸೀನ ಮಾಡಿರುವುದು ಸರಿಯಲ್ಲ” ಎಂಬ ಶ್ರೀಮುರಳಿ ಅವರ ಮಾತುಗಳು ಫಿಲ್ಮ್‌ ಫೇರ್‌ ಎನ್ನುವ ಪ್ರಶಸ್ತಿಯ ಮುಖಕ್ಕ ಬಡಿದಂತೆ ಆಗಿದೆ!

ವಾಸ್ತವವಾಗಿ, ಈ ತಾರತಮ್ಯದ ವಿರುದ್ಧ ದಶಕದ ಹಿಂದೆಯೇ ‘ದಂಗೆ’ ಎದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. 2012ರಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕಾಗಿ ಪ್ರಶಸ್ತಿ ಗೆದ್ದರೂ ಸಮಾರಂಭಕ್ಕೆ ಹೋಗದ ದರ್ಶನ್, ಮುಂದೆ ನೀಡಿದ್ದ ಹೇಳಿಕೆ ಯಾವತ್ತಿಗೂ ಇತಿಹಾಸ. “ನನಗೆ ಬಂದಿರುವ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಹರಾಜು ಹಾಕುತ್ತೇನೆ, ಆ ಹಣವನ್ನು ರೈತರಿಗೆ ಅಥವಾ ಅನಾಥಾಶ್ರಮಕ್ಕೆ ನೀಡುತ್ತೇನೆ” ಎಂದು ಅವರು ಗುಡುಗಿದ್ದು ಬರೀ ವೈಯಕ್ತಿಕ ರೋಷವಲ್ಲ. “ನಮ್ಮ ಕನ್ನಡದ ಕಲಾವಿದರನ್ನು ಅಲ್ಲಿಗೆ ಕರೆಸಿ ಯಾವುದೋ ಮೂಲೆಯಲ್ಲಿ ಕೂರಿಸುತ್ತಾರೆ, ವೇದಿಕೆಯ ಮೇಲೆ ನಮಗೆ ಸಿಗಬೇಕಾದ ಗೌರವ ಸಿಗುವುದಿಲ್ಲ” ಎಂಬ ದರ್ಶನ್ ಅವರ ಅಂದಿನ ನೇರ ಆರೋಪಕ್ಕೆ ಶ್ರೀಮುರಳಿ ಅವರ ಇಂದಿನ ಅಸಮಾಧಾನ ಪುಷ್ಟಿ ನೀಡುತ್ತಿದೆ.

2014ರಲ್ಲೂ ಹೀಗೇ ಆಗಿತ್ತು. ಅಂದು ಅತ್ಯುತ್ತಮ ನಟ ಪ್ರಶಸ್ತಿಯ ರೇಸ್‌ನಲ್ಲಿ ಯಶ್ ಅವರ ಹೆಸರಿತ್ತು. ಅಭಿಮಾನಿಗಳೆಲ್ಲಾ ‘ರಾಮಾಚಾರಿ’ ಖ್ಯಾತಿಯ ಯಶ್ ಕೈಗೆ ಪ್ರಶಸ್ತಿ ಸಿಗುತ್ತೆ ಅಂತಲೇ ನಂಬಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಫಲಿತಾಂಶ ಬದಲಾದಾಗ, ಇಡೀ ಸಭಾಂಗಣವೇ ಒಂದು ಕ್ಷಣ ಸ್ತಬ್ಧವಾಗಿತ್ತು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ನಟರು ಮೌನಕ್ಕೆ ಶರಣಾಗುತ್ತಾರೆ ಅಥವಾ ಅಲ್ಲಿಂದ ಕಾಲ್ಕಿತ್ತುತ್ತಾರೆ. ಆದರೆ ಯಶ್ ಮಾಡಿದ್ದೇ ಬೇರೆ. ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತ ಅವರು, ಯಾವುದೇ ಮುಲಾಜಿಲ್ಲದೆ ನೇರ ಮಾತುಗಳನ್ನೇ ಆಡಿದ್ದರು. ತಮ್ಮ ಮಾತಿನುದ್ದಕ್ಕೂ ಯಶ್ ಎತ್ತಿದ ಪ್ರಶ್ನೆಗಳು ನೇರವಾಗಿ ಫಿಲ್ಮ್‌ಫೇರ್‌ನ ಪಾರದರ್ಶಕತೆಗೆ ಬಡಿದಿದ್ದವು. “ನಾವು ಇಲ್ಲಿಗೆ ಬರುತ್ತೇವೆ, ನಿಮ್ಮ ಸಮಾರಂಭವನ್ನು ಗೌರವಿಸುತ್ತೇವೆ. ಆದರೆ ಕೆಲವು ಬಾರಿ ಪ್ರಶಸ್ತಿಗಳು ಅರ್ಹತೆಗಿಂತ ಹೆಚ್ಚಾಗಿ ಬೇರೆ ಯಾವುದೋ ಲೆಕ್ಕಾಚಾರದ ಮೇಲೆ ನಡೆಯುತ್ತಿವೆ ಅನ್ನಿಸುತ್ತದೆ” ಎಂಬ ಅವರ ಮಾತುಗಳು ಆಯೋಜಕರ ನಿದ್ದೆಗೆಡಿಸಿದ್ದವು. ಅರ್ಹ ಕಲಾವಿದನಿಗೆ ಸಲ್ಲಬೇಕಾದ ಗೌರವ ಸಿಗದಿದ್ದಾಗ ಉಂಟಾಗುವ ಆಕ್ರೋಶ ಅವರ ಧ್ವನಿಯಲ್ಲಿತ್ತು. ಪ್ರಶಸ್ತಿ ಎನ್ನುವುದು ಕೇವಲ ಒಂದು ಶೋ-ಪೀಸ್ ಅಲ್ಲ, ಅದು ಜನರ ತೀರ್ಪಿನ ಪ್ರತಿಬಿಂಬವಾಗಿರಬೇಕು ಎಂದು ಪ್ರತಿಪಾದಿಸಿದ್ದರು. “ಸಿನೆಮಾ ಗೆಲ್ಲುವುದು ಮುಖ್ಯ, ಜನರ ಪ್ರೀತಿ ಸಿಗುವುದು ಮುಖ್ಯ. ಆ ಪ್ರೀತಿಗಿಂತ ಮಿಗಿಲಾದ ಪ್ರಶಸ್ತಿ ಯಾವುದೂ ಇಲ್ಲ” ಎನ್ನುವ ಮೂಲಕ ಅವತ್ತು ಪ್ರಶಸ್ತಿ ವಂಚಿತರಾಗಿದ್ದರೂ ಅಭಿಮಾನಿಗಳ ಪಾಲಿಗೆ ಅಸಲಿ ವಿಜೇತರಾಗಿ ಹೊರಹೊಮ್ಮಿದರು. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಸಿನಿಮಾ ಪತ್ರಕರ್ತರು ಮತ್ತು ವಿಮರ್ಶಕರು ಯಶ್ ಅವರ ಈ ದಿಟ್ಟ ನಡೆಯನ್ನು ಮೆಚ್ಚಿದ್ದರು. ವಿಪರ್ಯಾಸವೆಂದರೆ, ಯಾವ ವೇದಿಕೆಯನ್ನು ಯಶ್ ಅಂದು ಪ್ರಶ್ನಿಸಿದ್ದರೋ, ಅದೇ ವೇದಿಕೆ ಮುಂದೆ ಕೆಜಿಎಫ್ ಅಂತಹ ಸಿನಿಮಾಗಳಿಗೆ ಸಾಲು ಸಾಲು ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕಾಯಿತು. ಅಂದು ಯಶ್ ತೋರಿದ್ದ ಆ ಛಲ ಮತ್ತು ಪಾರದರ್ಶಕತೆಯ ಹಂಬಲವೇ ಇಂದು ಅವರನ್ನು ಭಾರತದ ಅತಿ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ.

ಫಿಲ್ಮ್‌ಫೇರ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ಸಂಭ್ರಮದ ಬದಲಾಗಿ ಬರೀ ಇಂಥ ದ್ರೋಹ ಮತ್ತು ಮಸಲತ್ತುಗಳ ವಾಸನೆಯೇ ರಾಚುತ್ತದೆ.. ದಿವಂಗತ ರಿಷಿ ಕಪೂರ್ ಹಣ ಕೊಟ್ಟು ಅವಾರ್ಡ್ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದು, ಅಮೀರ್ ಖಾನ್ ‘ರಂಗೀಲಾ’ ಚಿತ್ರದ ವೇಳೆ ನಡೆದ ಅವಮಾನಕ್ಕೆ ಬೇಸತ್ತು ಈ ವೇದಿಕೆಯನ್ನೇ ಬಹಿಷ್ಕರಿಸಿದ್ದು, ಕಂಗನಾ ರಣಾವತ್ ಇದನ್ನು “ಭ್ರಷ್ಟಾಚಾರದ ಅಡ್ಡೆ” ಎಂದು ಜರಿದಿರುವುದು ಈ ಸಂಸ್ಥೆಯ ನೈತಿಕತೆಯನ್ನು ಪ್ರಶ್ನಿಸುತ್ತಿವೆ. ಪ್ರಶಸ್ತಿ ಎಂಬುದು ಅಭಿನಯಕ್ಕೆ ಸಿಗುವ ಗೌರವವಾಗಿರಬೇಕೇ ಹೊರತು, ಕಾರ್ಯಕ್ರಮಕ್ಕೆ ಹಾಜರಾಗಿ ಕುಣಿಯುವವರಿಗೆ ಅಥವಾ ಪ್ರಾಯೋಜಕರನ್ನು ಮೆಚ್ಚಿಸುವವರಿಗೆ ನೀಡುವ ‘ರಿಟರ್ನ್ ಗಿಫ್ಟ್’ ಆಗಬಾರದು.

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲಾ ನಮ್ಮ ಸ್ಟಾರ್‌ಗಳು ಧ್ವನಿ ಎತ್ತುತ್ತಲೇ ಇದ್ದಾರೆ. ದರ್ಶನ್ ಅವರ ‘ನೋ ಫಿಲ್ಟರ್’ ಮಾತುಗಳ ಹಾದಿಯಲ್ಲೇ, ಯಶ್ ಅವರ ನೇರ ನುಡಿಯಂತೆಯೇ ಈಗ ಶ್ರೀಮುರಳಿ ಕೂಡ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ, ಫಿಲ್ಮ್‌ಫೇರ್ ಈಗ ಕೇವಲ ಒಂದು ಟಿಆರ್‌ಪಿ ಸ್ಟಂಟ್ ಆಗಿ ಬದಲಾಗಿದೆಯೇ? ಪ್ರತಿಭೆಗಿಂತ ಹೆಚ್ಚಾಗಿ ಇಲ್ಲಿ ಪಕ್ಕದ ರಾಜ್ಯದ ಸ್ಟಾರ್‌ಗಳ ಪಿಆರ್ ಏಜೆನ್ಸಿಗಳ ಕೈವಾಡವೇ ಕೆಲಸ ಮಾಡುತ್ತಿದೆಯೇ? ಅಂತಾ ಯಾರಿಗಾದರೂ ಅನ್ನಿಸದೇ ಇರಲಾರದು. ಹಾಗೆ ನೋಡಿದರೆ ಸೈಮಾ ಎನ್ನುವ ಮತ್ತೊಂದು ಪ್ರಶಸ್ತಿಯ ಹಣೇಬರವೂ ಇದೇ ಆಗಿದೆ. ಇದರ ಕುರಿತು ನಮ್ಮ ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್‌ ಕುಮಾರ್‌ ನೇರವಾಗೇ ತಿವಿದಿದ್ದರು. ಇದೇ ಸೈಮಾದ ಪ್ರಶಸ್ತಿ ವಿತರಣಾ ಸಮಾರಂಭ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದಾಗ, ನಟ ದರ್ಶನ್‌ಗೆ ಸೀಟು ಸಿಗದೇ, ಅವಮಾನವಾಗಿತ್ತು.

ಹಿರಿಯ ಸಿನಿಮಾ ಪತ್ರಕರ್ತ ಜಿ.ಎಸ್.‌ ಕುಮಾರ್‌ ಆಂಗ್ಲ ಪತ್ರಿಕೆಯಲ್ಲಿ ಕೆಲಸ ಮಾಡಿದ್ದವರು. ಇವರು ಫಿಲ್ಮ್‌ ಫೇರ್‌ ಪ್ರಶಸ್ತಿಗೆ ಸಂಬಂಧಿಸಿದಂತೆ ಕನ್ನಡದ ಪ್ರತಿನಿಧಿ ಎನ್ನಲಾಗುತ್ತಿದೆ. ನಿಜಕ್ಕೂ ಇವರು ಆ ಸಂಸ್ಥೆಗೆ ಕೆಲಸ ಮಾಡುತ್ತಿದ್ದರೆ, ʻಕನ್ನಡದ ನಟ ಅಥವಾ ನಟಿಯ ಫೋಟೋ ಕವರ್‌ ಪೇಜಲ್ಲಿ ಹೇಗೆ ಮಿಸ್‌ ಆಯ್ತು?ʼ ಅಂತಾ ಹೇಳಬೇಕಲ್ಲವೇ… ಇದಲ್ಲದೇ ನರ್ಗೀಸ್‌ ಬಾಬು ಮಗ ಕಮರ್‌ ಎಂಬಾತ ಅಂತಾರಾಜ್ಯಗಳಿಗೆ ಸಂಬಂಧಿಸಿದ ಈ ಪ್ರಶಸ್ತಿಗಳು, ಇವೆಂಟುಗಳಿಗೆ ಸಂಬಂಧಿಸಿದಂತೆ ನಂಟು ಹೊಂದಿರುತ್ತಾನೆ. ಅದರ ಹೆಸರಲ್ಲಿ ಪತ್ರಿಕಾಗೋಷ್ಟಿ ಮಾಡುವುದು, ಪ್ರಚಾರ ಪಡೆಯುವುದು, ಕೆಲಸ ಮಾಡಿಸಿಕೊಟ್ಟ ಪ್ರಚಾರಕರ್ತರ ಹೊಟ್ಟೆಗೆ ಹೊಡೆಯುವುದು ಈತನ ಹಳೇ ಚಾಳಿ. ʻನಿಜಕ್ಕೂ ಈತನ್ನು ಯಾಕೆ ಈ ಹೊರರಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳು ಜೊತೆಗಿಟ್ಟುಕೊಳ್ಳುತ್ತವೆ?ʼ ಅನ್ನೋದು ನಿಜಕ್ಕೂ ತನಿಖೆಯಾಗಲೇಬೇಕಾದ ವಿಚಾರ!

ಅಸಲಿಗೆ, ಈ ಪ್ರಶಸ್ತಿ ಕೊಡುವ ಖಾಸಗೀ ಸಂಸ್ಥೆಗಳ ಮೂಲ ಉದ್ದೇಶವೇ ಬೇರೆ. ಜಾಹೀರಾತು ಹಣ ಎತ್ತುವುದು, ಈವೆಂಟ್‌ ಹೆಸರಲ್ಲಿ ಹೊರ ರಾಜ್ಯ, ದೇಶಗಳಿಗೆ ಕರೆದುಕೊಂಡು ಹೋಗಿ ಶ್ರೀಮಂತ ಉದ್ಯಮಿಗಳಿಗೆ ಬೇಕಿರೋದನ್ನು ʻಸಪ್ಲೈʼ ಮಾಡುವುದು ಇವರ ಅಸಲೀಯತ್ತು ಎನ್ನುವ ಆಪಾದನೆಗಳು ಕೇಳಿಬರುತ್ತಲೇ ಇರುತ್ತವೆ!

ಅದೆಲ್ಲಾ ಏನೇ ಇರಲಿ, ಫಿಲಂ ಫೇರ್‌ ಎನ್ನುವ ನಾಲಾಯಕ್ಕು ಪ್ರಶಸ್ತಿಯನ್ನು ಕನ್ನಡಿಗರು ಸಾರಾಸಗಟಾಗಿ ತಿರಸ್ಕರಿಸಬೇಕು. ಎಲ್ಲಿ ಗೌರವ ಸಿಗೋದಿಲ್ಲವೋ ಅಲ್ಲಿ ನಮ್ಮವರು ಎಡಗಾಲನ್ನೂ ಇಡಬಾರದು. ಮುಂಬರುವ ವರ್ಷಗಳಲ್ಲಿ ಆ ಸಮಾರಂಭವನ್ನು ನಿರ್ದಾಕ್ಷಿಣ್ಯವಾಗಿ ಬಾಯ್ಕಾಟ್‌ ಮಾಡಿದರೆ, ಬಹುಶಃ ಅವರೇ ಸರಿದಾರಿಗೆ ಬರುತ್ತಾರೆ!

ಇನ್ನಷ್ಟು ಓದಿರಿ

Scroll to Top