ಮಂಡ್ಯ, ಅಲ್ಲಿನ ಪರಿಸರ, ಅದರ ಸೌಂದರ್ಯ, ಮಾತು, ಜನ, ಬದುಕಿನ ಶೈಲಿ ಎಲ್ಲವೂ ಒಂದು ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ರಾಗಿಮುದ್ದೆ ಸ್ಪರ್ಧೆ, ಸ್ಪರ್ಧಿಗಳು, ಅದರ ಸುತ್ತ ಒಂದಷ್ಟು ಕ್ಯಾರೆಕ್ಟರುಗಳು – ಇವುಗಳ ಜೊತೆಗೆ ತೆರೆದುಕೊಳ್ಳುವ ಚೆಂದನೆಯ ಕತೆ. ಅದು ಆನೆಬಲ. ಕಲಾ ನಿರ್ದೇಶಕ ಈಶ್ವರಿ ಕುಮಾರ್ ಅವರ ಮಗ ಸಾಗರ್ ಈ ಹಿಂದೆ ಕೂಡಾ ಒಂದು ಸಿನಿಮಾದಲ್ಲಿ ಪಾತ್ರ ನಿರ್ವಹಸಿದ್ದರು. ಆದರೆ ಅದು ಅಂಥಾ ಹೆಸರು ತಂದುಕೊಟ್ಟಿರಲಿಲ್ಲ. ಈ ಬಾರಿ ಆನೆಬಲ ಚಿತ್ರದಲ್ಲಿ ಸಾಗರ್ ಪೂರ್ಣಪ್ರಮಾಣದಲ್ಲಿ ಹೀರೋ ಆಗಿ ನಟಿಸಿದ್ದಾರೆ.
ಯಾವುದೇ ಒಂದು ಭಾಗದ ಕತೆಯನ್ನು, ಅದೇ ಭಾಷೆ ಬಳಸಿಕೊಂಡು ಸಿನಿಮಾವಾಗಿ ಕಟ್ಟಿನಿಲ್ಲಿಸೋದು ಕಷ್ಟದ ಕೆಲಸ. ಆನೆಬಲ ಚಿತ್ರದ ನಿರ್ದೇಶಕ ಸೂನಗಹಳ್ಳಿ ರಾಜು ಅದನ್ನು ಸಲೀಸಾಗಿ ನಿಭಾಯಿಸಿದ್ದಾರೆ. ಊರಿನ ಹೆಸರಿಗೆ ಕಂಟಕ ಎದುರಾದಾಗ ಅದನ್ನು ಸಹಿಸದ ಹೀರೋ ಊರ ಹೆಸರು ಉಳಿಸಲು ಹೋರಾಡುವ ಕತೆಯಲ್ಲಿ ಚೆಂದನೆಯ ಪ್ರೀತಿಯ ಎಳೆಯೂ ಇದೆ.
ಸಾಗರ್ ಮತ್ತು ರಕ್ಷಿತಾ ಜೋಡಿ ತೆರೆಮೇಲೆ ಮುದ್ದಾಗಿ ಕಾಣುತ್ತದೆ. ಸಂಭಾಷಣೆ ಚಿತ್ರದ ಪ್ಲಸ್ ಪಾಯಿಂಟ್. ಪೂರ್ಣಚಂದ್ರ ತೇಜಸ್ವಿ ಅವರಿಂದ ಮಾತ್ರ ಈ ಸಿನಿಮಾಗೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಗುಣಮಟ್ಟದ ಹಾಡುಗಳು ಈ ಚಿತ್ರದಲ್ಲಿವೆ. ಮಂಡ್ಯದ ಸೊಗಡಿನ ಸಿನಿಮಾವಾದರೂ ಯಾವುದೇ ಭಾಗದ ಜನ ನೋಡಿ ಎಂಜಾಯ್ ಮಾಡಬಹುದಾದ ಚಿತ್ರ ಆನೆಬಲ.
No Comment! Be the first one.