ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎ ಹರ್ಷ ನಿರ್ದೇಶನದಲ್ಲಿ ಮತ್ತೆ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಮೈ ನೇಮ್ ಈಸ್ ಆಂಜಿ ಎಂಬ ಶೀರ್ಷಿಕೆಯ ಈ ಸಿನಿಮಾ ಬಗ್ಗೆ ಶಿವಣ್ಣನ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಈ ಆಂಜಿಗೆ ಯಾರು ನಾಯಕಿಯಾಗ್ತಾರೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಇದೀಗ ಅದೂ ಪರಿಹಾರವಾಗಿದೆ!
ಮೈ ನೇಮ್ ಈಸ್ ಆಂಜಿ ಚಿತ್ರಕ್ಕೆ ಜಾಕಿ ಭಾವನಾ ನಾಯಕಿಯಾಗೋದು ಬಹುತೇಕ ಖಚಿತವಾಗಿದೆ. ಭಾವನಾ ಮತ್ತು ಶಿವಣ್ಣ ಯಶಸ್ವಿ ಜೋಡಿ ಎಂದೇ ಹೆಸರಾಗಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆಗಿದ್ದ ಟಗರು ಚಿತ್ರದಲ್ಲಿಯೂ ಈ ಜೋಡಿ ಒಟ್ಟಾಗಿ ನಟಿಸಿತ್ತು. ಇದೀಗ ಭಾವನಾ ಮೈ ನೇಮ್ ಈ ಸ್ ಆಂಜಿ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.
ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕವೇ ಕನ್ನಡಕ್ಕೆ ಪರಿಚಯವಾದ ಮಲೆಯಾಳಿ ಚೆಲುವೆ ಭಾವನಾ. ಆ ನಂತರದಲ್ಲಿ ಹೆಚ್ಚಾಗಿ ಕನ್ನಡದಲ್ಲಿಯೇ ಗುರುತಿಸಿಕೊಂಡಿದ್ದ ಭಾವನಾ ಇಲ್ಲಿನ ಮುಖ್ಯ ನಟಿಯಾಗಿಯೂ ಹೊರ ಹೊಮ್ಮಿದ್ದರು. ಈಗಂತೂ ಕನ್ನಡದ ಸೊಸೆಯಾಗಿರೋ ಭಾವನಾ ಆಂಜಿ ಮೂಲಕ ಇಲ್ಲಿಯೇ ಮತ್ತೆ ಮುಂದುವರೆಯೋ ಲಕ್ಷಣಗಳಿವೆ.
ಇನ್ನು ಇದು ಎ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ನಿನ ಮೂರನೇ ಚಿತ್ರ ಅನ್ನೋ ಕಾರಣದಿಂದಲೂ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಭಜರಂಗಿ, ವಜ್ರಕಾಯದಂಥಾ ಹಿಟ್ ಚಿತ್ರ ಕೊಟ್ಟಿದ್ದ ಈ ಜೋಡಿ ಮೈ ನೇಮ್ ಈಸ್ ಆಂಜಿ ಮೂಲಕ ಅದನ್ನು ಮುಂದುವರೆಸುತ್ತಾ ಅನ್ನೋದನ್ನು ಕಾದು ನೋಡ ಬೇಕಿದೆ.