ಅಬ್ಬರ ಸಿನಿಮಾದ ಶೀರ್ಷಿಕೆಯ ಜೊತೆಗೆ ಫಸ್ಟ್ ಲುಕ್ ಕೂಡಾ ಈಗ ರಿಲೀಸ್ ಆಗಿದೆ. ಪ್ರಜ್ವಲ್ ಈ ಚಿತ್ರದಲ್ಲಿ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಮೋಷನ್ ಪೋಸ್ಟರಿನಲ್ಲಿ ರಿವೀಲ್ ಆಗಿದೆ.
ಲವರ್ ಬಾಯ್ ಆಗಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡ ಪ್ರಜ್ವಲ್ ದೇವರಾಜ್ ಕ್ರಮೇಣ ಎಲ್ಲ ರೀತಿಯ ಪಾತ್ರಗಳಲ್ಲೂ ನಟಿಸುತ್ತಾ ಬಂದವರು. ಜಂಟಲ್ ಮನ್ ಸಿನಿಮಾ ನೋಡಿದವರು ಪ್ರಜ್ವಲ್ ನಟನೆಗೆ ಫಿದಾ ಆಗಿದ್ದಾರೆ. ಖಂಡಿತವಾಗಿಯೂ ಪ್ರಜ್ಜು ಈ ಚಿತ್ರದಿಂದ ಸಾಕಷ್ಟು ಹೊಸ ಪ್ರೇಕ್ಷಕರನ್ನು ಸಂಪಾದಿಸಿದ್ದಾರೆ. ಇತ್ತೀಚೆಗೆ ಪ್ರಜ್ವಲ್ ಗೆ ಒಳ್ಳೊಳ್ಳೆ ಸಿನಿಮಾ ಮತ್ತು ಪಾತ್ರಗಳೇ ಹುಡುಕಿಕೊಂಡು ಬರುತ್ತಿವೆ. ಇನ್ನೂ ತೆರೆಗೆ ಬರಬೇಕಿರುವ ಇನ್ಸ್ ಪೆಕ್ಟರ್ ವಿಕ್ರಂ ಕೂಡಾ ಗೆಲುವು ಸಾಧಿಸಲಿದೆ ಎನ್ನುವ ಭರವಸೆಯಿದೆ. ಇವೆಲ್ಲದರ ಜೊತೆಗೆ ಕೆ. ರಾಮ್ ನಾರಾಯಣ್ ನಿರ್ದೇಶನದಲ್ಲಿ ಪ್ರಜ್ವಲ್ ನಟಿಸಲಿರುವ ಸಿನಿಮಾ ಕೆಲಸ ಕಾರ್ಯಗಳಿಗೂ ಚಾಲನೆ ಸಿಕ್ಕಿದೆ.
ಶಿವರಾಜ್ ಕುಮಾರ್ ಅವರಿಂದ ಈ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಪಕ್ಕಾ ಕಮರ್ಷಿಯಲ್ ಫೀಲ್ ಇರುವ ʻಅಬ್ಬರʼ ಶೀರ್ಷಿಕೆ ಈಗ ಜಾಹೀರಾಗಿದೆ. ಟೈಟಲ್ ಲಾಂಚ್ ಮಾಡಿರುವ ಶಿವಣ್ಣ ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಕೊರೋನಾಗೆ ಹೆದರಿ ಕೂರುವಂತಾ ಸಂದರ್ಭದಲ್ಲೂ ನಿರ್ಮಾಪಕ ಬಸವರಾಜ್ ಮಂಚಯ್ಯ ಧೈರ್ಯದಿಂದ ಸಿನಿಮಾ ಆರಂಭಿಸುತ್ತಿರುವುದನ್ನು ಕಂಡು ಶ್ಲಾಘಿಸಿದ್ದಾರೆ. ಇಂಥಾ ಪ್ರಯತ್ನಗಳಾದರೆ ಚಿತ್ರರಂಗ ಮತ್ತೆ ಕಳೆಗಟ್ಟುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಅಬ್ಬರ ಸಿನಿಮಾದ ಶೀರ್ಷಿಕೆಯ ಜೊತೆಗೆ ಫಸ್ಟ್ ಲುಕ್ ಕೂಡಾ ಈಗ ರಿಲೀಸ್ ಆಗಿದೆ. ಪ್ರಜ್ವಲ್ ಈ ಚಿತ್ರದಲ್ಲಿ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಮೋಷನ್ ಪೋಸ್ಟರಿನಲ್ಲಿ ರಿವೀಲ್ ಆಗಿದೆ. ಇದರಲ್ಲಿ ಪ್ರಜ್ವಲ್ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರಾ? ಅಥವಾ ಒಂದೇ ಪಾತ್ರ ಮೂರು ಶೇಡುಗಳಲ್ಲಿ ತೆರೆದುಕೊಳ್ಳುತ್ತದಾ ಎಂಬಿತ್ಯಾದಿ ವಿವರಗಳೆಲ್ಲಾ ಸದ್ಯಕ್ಕೆ ಲಭ್ಯವಾಗಿಲ್ಲ. ಯಾವುದೋ ಗಂಭೀರ ವಿಚಾರದ ಸುತ್ತ ಹೆಣೆಯಲಾದ ಕಥೆ ಈ ಚಿತ್ರದದ್ದು ಎನ್ನುವುದಷ್ಟೇ ಮೊದಲ ನೋಟಕ್ಕೆ ಗೊತ್ತಾಗುವಂತಿದೆ.
ನಿರ್ದೇಶಕ ಕೆ. ರಾಮ್ ನಾರಾಯಣ್ ತಿಂಗಳುಗಟ್ಟಲೇ ತಪಸ್ಸಿಗೆ ಕುಳಿತವರಂತೆ ಕೆಲಸ ಮಾಡಿ ಸಿದ್ದತೆ ಮಾಡಿಕೊಂಡಿದ್ದಾರೆ. ಛಾಯಾಗ್ರಾಹಕ ಜೆ.ಕೆ. ಗಣೇಶ್, ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್, ಎಡಿಟರ್ ಯುಡಿವಿ ವೆಂಕಿ ಒಳಗೊಂಡಂತೆ ಸ್ಟ್ರಾಂಗ್ ಟೀಮ್ ಕಟ್ಟಿಕೊಂಡು, ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಪ್ರಜ್ವಲ್ ಅವರ ಈ ಹಿಂದಿನ ಚಿತ್ರದ ಗೆಲುವು, ಬರಲಿರುವ ಸಿನಿಮಾದ ನಿರೀಕ್ಷೆಗಳನ್ನು ಮೀರಿದ ಪ್ರಯತ್ನವನ್ನು ಮಾಡುವುದು ರಾಮ್ ನಾರಾಯಣ್ ಮುಂದಿರುವ ಸವಾಲಾಗಿದೆ. ಚಿತ್ರರಂಗಕ್ಕೆ ಕೊರೋನಾ ಕೊಟ್ಟಿರುವ ಏಟು ಅಷ್ಟು ಸುಲಭಕ್ಕೆ ಸುಧಾರಿಸಿಕೊಳ್ಳುವಂಥದ್ದಲ್ಲ. ವೃತ್ತಿಪರ ನಿರ್ದೇಶಕರು, ವರ್ಷಕ್ಕಿಷ್ಟು ಅಂತಾ ನಿಯಮಿತವಾಗಿ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ನಾಯಕನಟರ ಸಿನಿಮಾಗಳ ಚಾಲನೆ ಮತ್ತು ಬಿಡುಗಡೆಗಳಿಂದ ಮಾತ್ರ ಈ ಸಂಕಷ್ಟಕಾಲದಿಂದ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಈಗ ಶುರುವಾಗಿರುವ ಸಿನಿಮಾದ ಮೂಲಕ ಚಿತ್ರರಂಗ ಮತ್ತೆ ʻಅಬ್ಬರʼದ ಆರಂಭ ಪಡೆಯಲಿ!