ಜನರ ನೆನಪಿನಲ್ಲಿ ಅಬ್ಬಾಸ್ ಇನ್ನೂ ಅದೇ ಚಾಕೊಲೇಟ್ ಬಾಯ್ ಆಗಿದ್ದರೂ, ಈತನ ಮಕ್ಕಳಾಗಲೇ ಆಳೆತ್ತರಕ್ಕೆ ಬೆಳೆದುನಿಂತಿದ್ದಾರೆ. ಮಗಳು ಎಮಿರಾ ಓದು ಮುಗಿಸಿ ಎಲೆಕ್ಟ್ರಿಕಲ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾಳೆ. 24 ವರ್ಷದ ಎಮಿರಾ ಕೂಡಾ ಅಪ್ಪ ಅಮ್ಮನನ್ನು ಮೀರಿಸುವಂತೆ ಆಕರ್ಷಕವಾಗಿದ್ದಾಳೆ.
1996ರಲ್ಲಿ ತಮಿಳಿನಲ್ಲಿ ಕಾದಲ್ ದೇಶಂ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಎ.ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದ ಹಾಡುಗಳ ಕಾರಣಕ್ಕೇ ಈ ಚಿತ್ರ ಇಡೀ ದೇಶದಲ್ಲಿ ಸೌಂಡು ಮಾಡಿತ್ತು. ಈವತ್ತಿಗೂ ಈ ಸಿನಿಮಾದ ಹಾಡುಗಳು ಅದೇ ಹೊಸತನವನ್ನು ಉಳಿಸಿಕೊಂಡಿವೆ. ಈ ಸಿನಿಮಾದ ಮೂಲಕ ಅದಾಗಲೇ ಬಾಲಿವುಡ್ಡಿನಲ್ಲಿ ಹೆಸರು ಮಾಡಿದ್ದ ಟಬೂ ಮೊದಲ ಬಾರಿಗೆ ತಮಿಳಿಗೆ ಬಂದಿದ್ದಳು. ಈಕೆಯ ಮುಂದೆ ಇಬ್ಬರು ಹೊಸ ಹುಡುಗರು ಈ ಸಿನಿಮಾದಲ್ಲಿ ಹೀರೋಗಳಾಗಿ ನಟಿಸಿದ್ದರು. ಅದರಲ್ಲಿ ವಿನೀತ್ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ. ಮತ್ತೊಬ್ಬ ಹುಡುಗ ಅಬ್ಬಾಸ್.
ನೋಡಲು ಮುದ್ದು ಮುದ್ದಾಗಿದ್ದ ಅಬ್ಬಾಸ್ ಕೊಲ್ಕೊತ್ತಾದಲ್ಲಿ ಹುಟ್ಟಿ ಬೆಳೆದು, ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವನು. ಕಾದಲ್ ದೇಶಂ ಚಿತ್ರದ ಆಡಿಷನ್ನಿಗೆ ಬಂದು ಸೆಲೆಕ್ಟ್ ಆಗಿದ್ದ. ಕಾದಲ್ ದೇಶಂ ಸಿನಿಮಾ ಬಿಡುಗಡೆಯಾದಮೇಲೆ ಅಬ್ಬಾಸ್ ನಿಜಕ್ಕೂ ಸ್ಟಾರ್ ಆಗಿಬಿಟ್ಟ. ಒಂದೇ ಒಂದು ಸಿನಿಮಾ ಈತನಿಗೆ ದೊಡ್ಡ ಮಟ್ಟದ ವರ್ಚಸ್ಸು ತಂದುಕೊಟ್ಟಿತ್ತು. ಚಾಕೊಲೇಟ್ ಬಾಯ್ ಅಂತಾ ಕರೆಸಿಕೊಂಡ ಅಬ್ಬಾಸನನ್ನು ಅವತ್ತಿನ ಹೆಣ್ಮಕ್ಕಳು ಒಳಗೊಳಗೇ ಪ್ರೀತಿಸಲು ಶುರು ಮಾಡಿಕೊಂಡರು. ಮೊದಲ ಸಿನಿಮಾ ಹಿಟ್ ಆಗುತ್ತಿದ್ದಂತೇ ಸಾಕಷ್ಟು ಚಿತ್ರಗಳಿಗೆ ಅಬ್ಬಾಸ್ ಬುಕ್ ಆದ. ಪ್ರಭುದೇವಾ ಜೊತೆ ಮಾಡಿದ ವಿಐಪಿ ಕೂಡಾ ಅಮೋಘವಾಗಿ ಗೆಲುವು ಕಂಡಿತು.
ಅದೇ ಸಮಯದಲ್ಲಿ ಇಲ್ಲಿ ನಟಿ ಪ್ರೇಮಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದರಲ್ಲಾ? ಕನ್ನಡದಲ್ಲಿ ಶಾಂತಿ ಶಾಂತಿ ಶಾಂತಿ ಎನ್ನುವ ಸಿನಿಮಾ ನಿರ್ಮಾಣಗೊಂಡಿತು. ಈ ಸಿನಿಮಾದಲ್ಲಿ ಕಾದಲ್ ದೇಶಂ ಖ್ಯಾತಿಯ ವಿನೀತ್ ಮತ್ತು ಅಬ್ಬಾಸ್ ಇಬ್ಬರೂ ನಟಿಸಿದರು. ರಜನಿಕಾಂತ್ ಅವರ ಪಡೆಯಪ್ಪ ಸಿನಿಮಾದಲ್ಲೂ ಅಬ್ಬಾಸ್ ಪಾತ್ರ ನಿರ್ವಹಿಸಿದ. ತೆಲುಗು ಚಿತ್ರರಂಗ ಕೂಡಾ ಅಬ್ಬಾಸನನ್ನು ಕರೆದು ಅವಕಾಶ ಕೊಟ್ಟಿತು. ಅತೀ ಕಡಿಮೆ ಅವಧಿಯಲ್ಲಿ ತಮಿಳು, ಕನ್ನಡ ಮತ್ತು ತೆಲುಗು ಸಿನಿಮಾ ಪ್ರೇಕ್ಷಕರಿಗೆ ಅಬ್ಬಾಸ್ ಚಿರಪರಿಚಿತನಾಗಿಬಿಟ್ಟ. ಸಾಕುಸಾಕೆನ್ನುವಷ್ಟು ಛಾನ್ಸು ಸಿಕ್ಕಿದವು. ದುರಂತವೆಂದರೆ, ಅದೆಷ್ಟು ಸ್ಪೀಡಾಗಿ ಅಬ್ಬಾಸ್ ಬೆಳವಣಿಗೆ ಕಂಡನೋ ಅದೇ ಸ್ಪೀಡಲ್ಲಿ ನೆಲಕಚ್ಚಿಬಿಟ್ಟ. ಈತ ಹೀರೋ ಆಗಿ ನಟಿಸಿದ ಸಿನಿಮಾಗಳು ಬಕ್ಕ ಬೋರಲು ಬಿದ್ದವು. ʻʻಮಲ್ಟಿಸ್ಟಾರರ್ ಚಿತ್ರಗಳಿಗೆ ಮಾತ್ರ ಅಬ್ಬಾಸ್ ಲಾಯಕ್ಕು. ಒಬ್ಬನನ್ನೇ ಹೀರೋ ಮಾಡಿದರೆ ಜನ ಒಪ್ಪೋದಿಲ್ಲʼʼ ಅಂತಾ ಸಿನಿಮಾ ಇಂಡಸ್ಟ್ರಿ ಅಬ್ಬಾಸನ ಹಣೆ ಮೇಲೆ ಶರಾ ಬರೆಯಿತು.
ದಿಢೀರಂತಾ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪ್ರತ್ಯಕ್ಷವಾಗಿ ಎಲ್ಲರನ್ನೂ ಮೋಡಿ ಮಾಡಿದ ಮುದ್ದು ಮುಖದ ಬೆಂಗಾಲಿ ಹುಡುಗ ಅವಕಾಶವಿಲ್ಲದೆ ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಯಿತು. ಹತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ನಿರ್ಮಾಣವಾದ ಅಪ್ಪು ಪಪ್ಪು ಸಿನಿಮಾದಲ್ಲೂ ಅಬ್ಬಾಸ್ ನಟಿಸಿದ್ದ. ನಿರ್ಮಾಪಕ ಸೌಂದರ್ಯ ಜಗದೀಶ್ ತಮ್ಮ ಮಗ ಸ್ನೇಹಿತ್ಗಾಗಿ ನಿರ್ಮಿಸಿದ ಸಿನಿಮಾ ಅಪ್ಪು ಪಪ್ಪು. ಇದರಲ್ಲಿ ನಟ ಕೋಮಲ್ ಕೂಡಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒರಾಂಗೊಟಾನ್ (ಚಿಂಪಾಜಿ ಜಾತಿಯ ಪ್ರಾಣಿ) ಮತ್ತು ಸ್ನೇಹಿತ್ ಅತ್ಯದ್ಭುತ ನಟನೆಯ ಮಧ್ಯೆ ಪಾಪ ಅಬ್ಬಾಸು ಕಳೆದುಹೋಗಿದ್ದ. ಆನಂತರ ʻಸವಾರಿ ೨ʼಗಾಗಿಯೂ ಅಬ್ಬಾಸ್ ಕರ್ನಾಟಕಕ್ಕೆ ಬಂದು ಹೋಗಿದ್ದ.
ಕಳೆದ ಕೆಲವಾರು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದ ಅಬ್ಬಾಸ್ ಈಗ ತನ್ನ ಸಂಸಾರ ಸಮೇತ ವಿದೇಶದಲ್ಲಿದ್ದಾನೆ. ಪ್ರವಾಸಕ್ಕೆಂದು ನ್ಯೂಜಿಲೆಂಡಿಗೆ ಹೋಗಿದ್ದಾಗ ಇಲ್ಲೇ ವಾಸ್ತವ್ಯ ಹೂಡಿದರೆ ಚೆಂದ ಅನ್ನಿಸಿತ್ತಂತೆ. ಹೀಗಾಗಿ ನ್ಯೂಜಿಲೆಂಡಿನಲ್ಲಿ ಮನೆ ಮಾಡಿಕೊಂಡು ಸೆಟಲ್ ಆಗಿಬಿಟ್ಟ. 1999ರಲ್ಲಿ ಅಬ್ಬಾಸ್ ಫ್ಯಾಷನ್ ಡಿಸೈನರ್ ಈರುಂ ಅಲಿಯನ್ನು ಮದುವೆಯಾಗಿದ್ದ. ವಿಚಿತ್ರವೆಂದರೆ ಇವರ ಮದುವೆಯ ದಿನ ಇದೇ ಜೋಡಿಯ ಮೂರು ವರ್ಷದ ಮಗಳು ಎಮಿರಾ ಆಟವಾಡಿಕೊಂಡು ಓಡಾಡುತ್ತಿತ್ತು. ಮದುವೆಯ ನಂತರ ಮಗ ಏಮನ್ ಕೂಡಾ ಜೊತೆಯಾದ.
ಜನರ ನೆನಪಿನಲ್ಲಿ ಅಬ್ಬಾಸ್ ಇನ್ನೂ ಅದೇ ಚಾಕೊಲೇಟ್ ಬಾಯ್ ಆಗಿದ್ದರೂ, ಈತನ ಮಕ್ಕಳಾಗಲೇ ಆಳೆತ್ತರಕ್ಕೆ ಬೆಳೆದುನಿಂತಿದ್ದಾರೆ. ಮಗಳು ಎಮಿರಾ ಓದು ಮುಗಿಸಿ ಎಲೆಕ್ಟ್ರಿಕಲ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾಳೆ. 24 ವರ್ಷದ ಎಮಿರಾ ಕೂಡಾ ಅಪ್ಪ ಅಮ್ಮನನ್ನು ಮೀರಿಸುವಂತೆ ಆಕರ್ಷಕವಾಗಿದ್ದಾಳೆ. ನ್ಯೂಜಿಲೆಂಡಿನಲ್ಲಿರುವ ಅಬ್ಬಾಸ್ ಫ್ಯಾಮಿಲಿ ಶೀಘ್ರದಲ್ಲೇ ಇಂಡಿಯಾಗೆ ವಾಪಾಸಾಗುವ ಸೂಚನೆಯಿದೆ. ಎಮಿರಾ ಚಿತ್ರರಂಗಕ್ಕೆ ಎಂಟ್ರಿಕೊಡುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಅದು ಯಾವ ಭಾಷೆ? ಯಾರ ಜೊತೆ ಅನ್ನೋದೆಲ್ಲಾ ಇನ್ನೂ ಗೊತ್ತಾಗಿಲ್ಲ!