“ಇಲ್ಲಿ ಎರಡು ರೀತಿಯ ವ್ಯವಸ್ಥೆಗಳು ಇವೆ. ವ್ಯವಸ್ಥೆಯನ್ನೇ ರನ್ ಮಾಡುವ ವ್ಯವಸ್ಥೆ ಒಂದಾದರೆ, ವ್ಯವಸ್ಥೆಯೊಳಗೆ ಬದುಕುವ ವ್ಯವಸ್ಥೆ ಇನ್ನೊಂದು. ನಾವಿಬ್ಬರೂ ಒಟ್ಟಿಗೆ ಒಂದೇ ರೀತಿ ಬೆಳೆದವರು. ಒಂದು ವ್ಯವಸ್ಥೆ ನಿನ್ನನ್ನು ಪೊಲೀಸ್ ಆಫೀಸರ್ ಮಾಡಿದೆ, ಇನ್ನೊಂದು ವ್ಯವಸ್ಥೆ ನನ್ನನ್ನು ಟೆರರಿಸ್ಟ್ ಮಾಡಿದೆ.”
– ದಿನೇಶ್ ಕುಮಾರ್ ಎಸ್.ಸಿ.
#ACT1978 ಚಿತ್ರದ ತುಂಬು ಗರ್ಭಣಿ ನಾಯಕಿ ಹೊಟ್ಟೆ ನೀವಿಕೊಳ್ಳುತ್ತ, ಏದುಸಿರು ಬಿಡುತ್ತ ಈ ಮಾತನ್ನು ಹೇಳುವಾಗ ಪ್ರೇಕ್ಷಕ ಸುಲಭವಾಗಿ ತನ್ನನ್ನು ತಾನು ಆ ಪಾತ್ರದೊಂದಿಗೆ ರಿಲೇಟ್ ಮಾಡಿಕೊಳ್ಳುತ್ತ ಹೋಗುತ್ತಾನೆ. ಹೌದಲ್ಲವೇ? ನಿಮ್ಮೊಂದಿಗೆ ಬೆಳೆದ ವಾರಿಗೆಯ ಹುಡುಗ ಹುಡುಗಿಯರು ನಿಮ್ಮಷ್ಟು ಪ್ರತಿಭಾವಂತರಲ್ಲದಿದ್ದರೂ ನಿಮಗಿಂತ ಉನ್ನತ ಸ್ಥಾನದಲ್ಲಿ ಮಿರಿಮಿರಿ ಮಿಂಚುತ್ತಿದ್ದರೆ ಹೊಟ್ಟೆಯಲ್ಲಿ ಸಣ್ಣದಾಗಿ ಚಳುಕು ಮೂಡುವುದಿಲ್ಲವೇ? ಬರಿಮಾತಿನಲ್ಲಿ, ಕಾನೂನು ಪುಸ್ತಕದಲ್ಲಷ್ಟೇ ನಾವು ಸಮಾನರು. ವ್ಯವಸ್ಥೆ ಒಬ್ಬೊಬ್ಬರನ್ನು ಒಂದೊಂದು ತಕ್ಕಡಿಯಲ್ಲಿಟ್ಟು ತೂಗುತ್ತದೆ, ಒಬ್ಬೊಬ್ಬರನ್ನು ಒಂದೊಂದು ರೀತಿ ಬೆಳೆಸುತ್ತದೆ. ಬಹುತೇಕ ಸಾಮಾನ್ಯರ ಬದುಕಿನಲ್ಲೂ ಇಂಥ ವಿಷಾದವಿದೆ, ಹಳಹಳಿಕೆಯಿದೆ.
ಸರಳವಾಗಿ ಹೇಳುವುದಾದರೆ ವ್ಯವಸ್ಥೆ ಯಾರನ್ನು ಹುಲುಮಾನವರೆಂದು ಪರಿಗಣಿಸುತ್ತದೋ, ಆ ಬಡಪಾಯಿಗಳು ನಿರಂತರ ಶೋಷಣೆಗೆ ಒಳಗಾಗಿ ತಾಳ್ಮೆಗೆಟ್ಟು, ಸಿಡಿದು ನಿಂತರೆ ಏನಾಗಬಹುದು ಎಂಬುದನ್ನು #ACT1978 ಹೇಳುತ್ತದೆ. ಸೊಂಟಕ್ಕೆ ಬಾಂಬು ಕಟ್ಟಿಕೊಂಡು, ಕೈಯಲ್ಲಿ ರಿವಾಲ್ವರ್ ಹಿಡಿದ ಗರ್ಭಿಣಿ ಹೆಂಗಸು ನಿಮಗೆ ಯಾವ ಹಂತದಲ್ಲೂ ಕ್ರೂರಿ-ಕೊಲೆಗಡುಕಿಯ ಹಾಗೆ ಕಾಣುವುದಿಲ್ಲ. ಹೊಟ್ಟೆಯಲ್ಲಿ ಅರಳುತ್ತಿರುವ ಹೊಸಜೀವದ ರಕ್ಷಣೆ ಅವಳ ಹೊಣೆ. ಅದಕ್ಕಾಗಿ ಅವಳು ವಿಪರೀತ ಸಾಹಸಕ್ಕೆ ಇಳಿದಿದ್ದಾಳೆ. ಅದು ಸರಿಯೋ ತಪ್ಪೋ ಅನ್ನುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ. ಆದರೆ ಅವಳ ಒಡಲ ಸಂಕಟ ನಮ್ಮೆಲ್ಲರದು, ಅಷ್ಟಂತೂ ನಿಜ.
ಮಂಸೋರೆ ನಿರ್ದೇಶನದ, ದೇವರಾಜ್ ನಿರ್ಮಾಣದ ಆಕ್ಟ್ 1978 ಕನ್ನಡ ಸಿನಿಮಾ ಕೋವಿಡ್ 19 ರ ಲಾಕ್ ಡೌನ್ ನಂತರ ಬಿಡುಗಡೆಯಾದ ಮೊದಲ ಸಿನಿಮಾ. ಜನ ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ ಹತ್ತಾರು ಸಿನಿಮಾಗಳು ಬಿಡುಗಡೆಯಾಗದೆ ಕಾದಿರುವ ಹೊತ್ತಲ್ಲಿ ನಿರ್ಮಾಪಕರು ಧೈರ್ಯ ತೋರಿ ಚಿತ್ರಮಂದಿರಗಳಿಗೆ ಸಿನಿಮಾ ತಂದಿದ್ದಾರೆ. ಸಿನಿಮಾದ ಪ್ರಿಮಿಯರ್ ಶೋನಲ್ಲಿ ಹಬ್ಬದ ವಾತಾವರಣವಿತ್ತು, ಸಿನಿಮಾದ ರೆಗ್ಯುಲರ್ ಶೋಗಳಿಗೂ ಜನ ಇದೇ ಉತ್ಸಾಹ ತೋರುತ್ತಾರಾ? ಕಾದು ನೋಡಬೇಕು.
ಆದರೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ನಿರಾಶೆ ಹುಟ್ಟಿಸದ ಸಿನಿಮಾ ಇದು ಎಂದು ಧೈರ್ಯವಾಗಿ ಹೇಳಬಹುದು. ಇದನ್ನು ನೀವು “ಹೋಸ್ಟೇಜ್ ಥ್ರಿಲ್ಲರ್” ಜಾನರ್ ಸಿನಿಮಾ ಎಂದು ಗುರುತಿಸಬಹುದು ಅಥವಾ “ಹೋಸ್ಟೇಜ್ ಡ್ರಾಮಾ” ಎಂದೂ ಹೇಳಬಹುದು. ಮುಂದೇನಾಗುತ್ತದೆ ಎಂಬ ಆತಂಕದಲ್ಲಿ ಸೀಟಿನ ತುದಿಯಲ್ಲಿ ಕೂರುವ ಜತೆಗೆ, ನಿಮ್ಮನ್ನು ಆಗಾಗ ಎಮೋಷನಲ್ ಮಾಡಿ ಸೀಟಿಗೊರಗಿಕೊಂಡು ನಿಡುಸುಯ್ಯುವಂತೆ ಮಾಡುವ ಸಿನಿಮಾ ಇದು. ಕನ್ನಡದಲ್ಲಿ ಹಿಂದೆ ಸುನಿಲ್ ಕುಮಾರ್ ದೇಸಾಯಿ ಹೋಸ್ಟೇಜ್ ಥ್ರಿಲ್ಲರ್ ಗಳನ್ನು ಕೊಟ್ಟಿದ್ದರು. ಅವು ಪಕ್ಕಾ ಥ್ರಿಲ್ಲರ್ ಸಿನಿಮಾಗಳು, ಇಲ್ಲಿ ಹಾಗಿಲ್ಲ, ಥ್ರಿಲ್ಲರ್ ಜತೆಗೆ ಒಂದು ಡ್ರಾಮಾ ಇದೆ. ಥ್ರಿಲ್ಲರ್ ಸಿನಿಮಾಗಳು ಕಣ್ಣಲ್ಲಿ ನೀರು ಹರಿಸುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ? ಆಕ್ಟ್ 1978 ಥ್ರಿಲ್ ಮಾಡುತ್ತಲೇ ಕಣ್ಣೀರಿಡುವಂತೆ ಮಾಡುವ ಸಿನಿಮಾ.
ಸಿನಿಮಾದ ಕಥೆಯನ್ನು ಟ್ರೇಲರ್ ನೋಡಿದವರು ಸಣ್ಣದಾಗಿ ಊಹಿಸಿಕೊಳ್ಳಬಹುದು. ಮುಖ್ಯಪಾತ್ರಧಾರಿ ಗೀತಾ (ಯಜ್ಞಾ ಶೆಟ್ಟಿ) ಸೊಂಟಕ್ಕೆ ಬಾಂಬ್ ಕಟ್ಟಿಕೊಂಡು ಸರ್ಕಾರಿ ಕಚೇರಿಯೊಂದನ್ನು ವಶಕ್ಕೆ ಪಡೆದಿದ್ದಾಳೆ, ಆಕೆಯ ಜತೆ ಒಬ್ಬ ಮುದುಕ (ಬಿ.ಸುರೇಶ್) ಇದ್ದಾನೆ. ಅವಳಿಗೇನೋ ಅನ್ಯಾಯವಾಗಿದೆ, ಅದರ ವಿರುದ್ಧ ಆಕೆ ತಿರುಗಿಬಿದ್ದಿದ್ದಾಳೆ. ಅವಳು ತನ್ನ ಗುರಿಯನ್ನು ತಲುಪಲು ಸಫಲಳಾಗುತ್ತಾಳಾ? ಆಕೆಯ ಬೇಡಿಕೆಗಳು ಈಡೇರುತ್ತವಾ? ಅಷ್ಟಕ್ಕೂ ಆಕೆ ಸೊಂಟಕ್ಕೆ ಬಾಂಬು ಕಟ್ಟಿಕೊಂಡು ನಿಲ್ಲುವ ದುಸ್ಸಾಹಸಕ್ಕೆ ಯಾಕೆ ಕೈ ಹಾಕಿದಳು? ಇದೆಲ್ಲವನ್ನೂ ನೀವು ಸಿನಿಮಾ ನೋಡಿಯೇ ತಿಳಿಯಬೇಕು.
ಸಿನಿಮದಲ್ಲಿ ದೊಡ್ಡ ತಾರಾಗಣವೇ ಇದೆ. ದತ್ತಣ್ಣ, ಅಚ್ಯುತ್, ಸಂಚಾರಿ ವಿಜಯ್, ಅವಿನಾಶ್, ಬಿ.ಸುರೇಶ, ಶ್ರುತಿ, ಪ್ರಮೋದ್ ಶೆಟ್ಟಿ, ಸಂಪತ್, ರಾಘವೇಂದ್ರ, ಕೃಷ್ಣ ಹೆಬ್ಬಾರ್, ಸುಧಾ ಬೆಳವಾಡಿ, ನಂದಗೋಪಾಲ್.. ಹೀಗೆ ಪಳಗಿದ ನಟರ ದಂಡೇ ಇಲ್ಲಿದೆ. ಇದೊಂದು ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಮ್ಯಾಚ್ ಇದ್ದಂತೆ. ಓವರ್ ಗಳು ಕಡಿಮೆ. ಸಿಕ್ಕಬಾಲುಗಳನ್ನು ಹಿಡಿದು ಚಚ್ಚಬೇಕು. ಒಬ್ಬೊಬ್ಬರಾಗಿ ಪ್ಯಾಡು ಕಟ್ಟಿಕೊಂಡು ಬರುವ ಈ ನಟ-ನಟಿಯರು ಫೋರು ಸಿಕ್ಸರುಗಳನ್ನು ಬಾರಿಸುತ್ತಾರೆ. ಆದರೆ ಇಡೀ ಇನ್ನಿಂಗ್ಸ್ ಆಡಿ ಡಬ್ಬಲ್ ಸೆಂಚುರಿ ಬಾರಿಸುವವರು ಯಜ್ಞಾಶೆಟ್ಟಿ. ಆಕೆಯದು ಅಭಿನಯವಲ್ಲ, ಪರಾಕಾಯ ಪ್ರವೇಶ. ಗೀತಾಳ ಪ್ರತಿ ಉಸಿರೂ ನಮ್ಮದು. ಅವಳ ನಿಟ್ಟುಸಿರು, ನಡಿಗೆ, ಕಣ್ಣೀರು ನಮ್ಮದು. ಆಕೆಯ ಹೊಟ್ಟೆಯಿಂದ ಹೊರಬರಲು ಮಿಸುಕಾಡುತ್ತಿರುವ ಜೀವವೂ ನಮ್ಮದು. ಅಷ್ಟರ ಮಟ್ಟಿಗೆ ಯಜ್ಞಾಶೆಟ್ಟಿ ನಮ್ಮನ್ನು ಆವರಿಸಿಕೊಳ್ಳುತ್ತಾರೆ.
ಕನ್ನಡದಲ್ಲಿ ಹೊಸಬಗೆಯ ಸಿನಿಮಾ ಕಂಟೆಂಟುಗಳನ್ನು ತಂದು ಹರಡುತ್ತಿರುವ ಕಥೆಗಾರ ಟಿ.ಕೆ.ದಯಾನಂದ್, ಆಕ್ಟ್ 1978 ಚಿತ್ರದ ಬರವಣಿಗೆಯಲ್ಲಿ ಮಂಸೋರೆ ಮತ್ತು ವೀರು ಮಲ್ಲಣ್ಣ ಜತೆಗೆ ಭಾಗಿಯಾಗಿದ್ದಾರೆ. ದಯಾನಂದ್ ಅವರ ಬರವಣಿಗೆಯ ಕಸುವು ಗೊತ್ತಿದ್ದವರಿಗೆ ಸಿನಿಮಾದಲ್ಲಿ ಅವರ ಛಾಪು ಢಾಳಾಗಿ ಕಾಣುತ್ತದೆ. ಸಿನಿಮಾವನ್ನು ನಾವು ನೋಡುವುದು ಸತ್ಯಾ ಹೆಗಡೆಯವರ ಕ್ಯಾಮೆರಾ ಕಣ್ಣಿನಿಂದ. ಒಂದು ಕಟ್ಟಡದಲ್ಲಿ, ಒಂದು ದೊಡ್ಡ ಕೊಠಡಿಯಲ್ಲಿ ಬಹುಪಾಲು ನಡೆಯುವ ಕಥಾನಕವನ್ನು ಬೋರು ಹೊಡೆಸದಂತೆ ತೋರಿಸುವುದು ದೊಡ್ಡ ಸವಾಲು. ಸತ್ಯ ಹೆಗಡೆ ಈ ಸವಾಲನ್ನು ಗೆದ್ದಿದ್ದಾರೆ. ಸಿನಿಮಾದ ಸಂಕಲನವೂ ಕೂಡ ಸವಾಲಿನ ಕೆಲಸವೇ. ನಾಗೇಂದ್ರ ಉಜ್ಜಿನಿಯವರ ಕತ್ತರಿ ಕೊಂಚ ಯಡವಟ್ಟು ಮಾಡಿದ್ದರೂ ಇಡೀ ಸಿನಿಮಾದ ಶಿಲ್ಪವೇ ಹದಗೆಡುತ್ತಿತ್ತು. ಆದರೆ ಅವರು ಎಲ್ಲೂ ಯಾಮಾರಿದಂತೆ ಕಾಣುವುದಿಲ್ಲ. ರಾಹುಲ್ ಶಿವಕುಮಾರ್ ಮತ್ತು ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತವೂ ಸಿನಿಮಾಗೆ ಪೂರಕವಾಗಿದೆ. ಅದು ಕೇಳಿಸಿಯೂ ಕೇಳಿಸದಂತೆ ಸಿನಿಮಾ ಜತೆ ತಾನೂ ಒಂದು ಪಾತ್ರವಾಗಿ ಬ್ಲೆಂಡ್ ಆಗಿಹೋಗಿದೆ.
ತಮ್ಮ “ಹರಿವು” ಮತ್ತು “ನಾತಿ ಚರಾಮಿ” ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿಗಳನ್ನು ಪಡೆದ ನಿರ್ದೇಶಕ ಮಂಸೋರೆ ನಿಸ್ಸಂಶಯವಾಗಿ ಜಾಡು ಬದಲಾಯಿಸಿದ್ದಾರೆ. ಇದು ಮಂಸೋರೆಯ ಪಕ್ಕಾ ಕಮರ್ಷಿಯಲ್ ವರ್ಷನ್. ಹಾಗೆಂದು ಅವರು ತನ್ನತನವನ್ನು ಕಳೆದುಕೊಂಡಿಲ್ಲ. ಸಣ್ಣಸಣ್ಣ ಡೀಟೇಲಿಂಗ್ ಮೂಲಕ, ಮೆಟಫರ್ ಗಳ ಮೂಲಕ ಅವರು ನಮ್ಮನ್ನು ಕಾಡುತ್ತ ಹೋಗುತ್ತಾರೆ. ರೆಸ್ಟ್ ರೂಮ್ ಗೆ ಹೋಗಲು ಆಗದ ಟೀವಿ ರಿಪೋರ್ಟರ್ ಕಿಬ್ಬೊಟ್ಟೆಯ ಬಾಧೆಯೂ ಅವರ ಒಳಗಣ್ಣಿಗೆ ಗೊತ್ತು. ಪಾತ್ರಗಳನ್ನು ಕಟ್ಟುವುದೆಂದರೆ ಹೀಗೆ ಎಂದು ಮಂಸೋರೆ ತೋರಿಸುತ್ತಾರೆ. ಒಳಗೆ ಬಂದೂಕು, ಬಾಂಬುಗಳು ಬುಸುಗುಡುವಾಗ ಹೊರಗೆ ಕುಳಿತ ಗಾಂಧಿ ವೇಷಧಾರಿ ಪ್ರತಿಭಟನಾಕಾರನನ್ನು ಪೊಲೀಸರು ಹೊತ್ತು ಬೇರೆಡೆ ಸಾಗಿಸುತ್ತಾರೆ. ಹಿಂಸೆ ಮತ್ತು ಅಹಿಂಸೆ ಒಂದೆಡೆ ಇರಲು ಸಾಧ್ಯವಿಲ್ಲವೆಂಬ ರೂಪಕವನ್ನು ಅವರು ಕಟ್ಟಿಕೊಡುವ ಪರಿ ಇದು.
ಸಿನಿಮಾ ಒಟ್ಟು ವ್ಯವಸ್ಥೆಯ ಬಗ್ಗೆ ಮಾತನಾಡುತ್ತದೆ. ಒಂದೆಡೆ ಭ್ರಷ್ಟ ರಾಜಕಾರಣಿಗಳು, ಮತ್ತೊಂದೆಡೆ ಜನಾಕ್ರೋಶಕ್ಕೆ ಗುರಿಯಾಗಿರುವ ಅಧಿಕಾರಿ-ನೌಕರರು. ಇದೆಲ್ಲದರ ಜತೆ ತಲೆಗೊಂದು ಮಾತಾಡುತ್ತ ಕೂರುವ ಸಾಮಾನ್ಯ ಜನರು. ಬ್ರೇಕಿಂಗ್ ನ್ಯೂಸ್ ಗಾಗಿ ಹಪಹಪಿಸುತ್ತ ಮನಸಿಗೆ ಬಂದಿದ್ದನ್ನು ಒದರುವ ಟೀವಿ ಚಾನಲ್ ಗಳು. ಎಲ್ಲವನ್ನೂ ಅವು ಇರುವ ಹಾಗೆಯೇ ಹರಡುತ್ತ, ತೀರ್ಪು ನೀವೇ ಕೊಡಿ ಎಂದು ಹೇಳುತ್ತಾರೆ ಮಂಸೋರೆ. ಎಲ್ಲರಿಗೂ ಅವರದೇ ಆದ ಸಮರ್ಥನೆಗಳಿವೆ. ಹಂಸಕ್ಷೀರ ನ್ಯಾಯ ನಿರ್ಣಯದ ಹೊಣೆ ಪ್ರೇಕ್ಷಕನದು.
ಸಿನಿಮಾದಲ್ಲಿ ದೌರ್ಬಲ್ಯಗಳು ಇಲ್ಲವೆಂದೇನಿಲ್ಲ. ಒಂದು ಹೋಸ್ಟೇಜ್ ಸಿಚುವೇಷನನ್ನು ಗ್ರೌಂಡ್ ಜೀರೋದಲ್ಲಿ ಮೊದಲು ಒಬ್ಬ ಪ್ರಮೋಟಿ ಸಬ್ ಇನ್ಸ್ ಪೆಕ್ಟರ್ ನಂತರ ಒಬ್ಬ ಎಸಿಪಿ ದರ್ಜೆಯ ಪೊಲೀಸ್ ಅಧಿಕಾರಿ ಹ್ಯಾಂಡಲ್ ಮಾಡುವುದು ಈಗಿನ ಕಾಲಘಟ್ಟದಲ್ಲಿ ತೀರಾ ಅಸಹಜ. ಕಟ್ಟಡದ ಹೊರಗಿನ ಪೊಲೀಸ್ ಸೆಟ್ ಅಪ್ ಕೂಡ ದುರ್ಬಲವಾಗಿ ಕಾಣುತ್ತದೆ. ಕಟ್ಟಡದ ಒಳಗಿನ ಸನ್ನಿವೇಶಗಳನ್ನು ಚಿತ್ರಿಸುವಾಗ ತೋರಿಸುವ ಶ್ರದ್ಧೆ ಹೊರಗಿನ ಚಿತ್ರಗಳನ್ನು ಚಿತ್ರಿಸುವಾಗ ತೋರಿದಂತೆ ಕಾಣುವುದಿಲ್ಲ. ಎನ್.ಎಸ್.ಜಿ. ಕಮ್ಯಾಂಡರ್ ಆಗಿ ಧುತ್ತನೇ ಪ್ರತ್ಯಕ್ಷರಾಗಿ ಸಂಚಲನ ಮೂಡಿಸುವ ಸಂಚಾರಿ ವಿಜಯ್ ಪಾತ್ರಕ್ಕೆ ಇನ್ನಷ್ಟು ಟ್ರೀಟ್ ಮೆಂಟ್ ಬೇಕಿತ್ತು. ಹಾಗೆಯೇ ಹೊಸ ತಲೆಮಾರಿನ ಅತ್ಯುತ್ತಮ ನಟರಲ್ಲಿ ಒಬ್ಬರಾದ ಪ್ರಮೋದ್ ಶೆಟ್ಟಿ ಪಾತ್ರಕ್ಕೆ ಇನ್ನಷ್ಟು ವೇಗ, ಉತ್ಸಾಹ ಬೇಕಿತ್ತು.
ಇಂಥ ಸಣ್ಣಪುಟ್ಟ ದೋಷಗಳನ್ನು ಮೀರಿ, ಮಂಸೋರೆ ಅಚ್ಚುಕಟ್ಟಾದ ಕಂಟೆಂಟ್ ಓರಿಯೆಂಟೆಡ್ ಸಿನಿಮಾವನ್ನು ಪ್ರೇಕ್ಷಕರ ಕೈಗೆ ಕೊಟ್ಟಿದ್ದಾರೆ. ಹೊಸಬಗೆಯ ಪಾತ್ರಗಳು, ಹೊಸ ಬಗೆಯ ಧ್ವನಿಗಳು ನಿಮಗೆ ಇಲ್ಲಿ ಕೇಳಿಬರುತ್ತವೆ. ಸಿದ್ಧಸೂತ್ರಗಳನ್ನು ಪುಡಿ ಮಾಡುವ ಇಂಥ ಸಿನಿಮಾಗಳನ್ನು ಹೆಣೆಯಲು ಕಾದಿರುವವರಿಗೆ ಇದೊಂದು ಹೆದ್ದಾರಿಯನ್ನೇ ನಿರ್ಮಿಸಿದೆ. ತಮಿಳು, ಮಲಯಾಳಂ, ಹಿಂದಿಯಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗಿದೆ, ಕನ್ನಡ ಪ್ರೇಕ್ಷಕರು ಇಂಥ ಪ್ರಯತ್ನಗಳಿಗೆ ಬೆನ್ನು ತಟ್ಟಿದರೆ ಇಲ್ಲೂ ಹೊಸ ಪರ್ವ ಶುರುವಾಗಬಹುದು.
ಆಕ್ಟ್ 1978 ಒಂದು ಬಗೆಯ ಸಿನಿಮಾ ಆಕ್ಟಿವಿಸಂಗೆ ಕೈಹಾಕಿದೆ. ಕಮರ್ಷಿಯಲ್ ಚೌಕಟ್ಟಿನಲ್ಲಿ ಜನಸಾಮಾನ್ಯರ ಬವಣೆಗಳನ್ನು, ವ್ಯವಸ್ಥೆಯ ವಿರುದ್ಧದ ಪ್ರತಿರೋಧವನ್ನು ದಾಖಲಿಸುವ ಸಿನಿಮಾ. ಇಂಥ ಸಿನಿಮಾಗಳು ಬಂದಿಲ್ಲವೆಂದೇನಿಲ್ಲ. ಆದರೆ ಎಲ್ಲವನ್ನೂ ಕಪ್ಪು-ಬಿಳುಪಾಗಿ ನೋಡುವ ತಪ್ಪನ್ನು ನಿರ್ದೇಶಕರು ಮಾಡಿಲ್ಲ. ಅನಗತ್ಯ ದ್ವೇಷ ಹುಟ್ಟಿಸುವ ಬದಲು ನೋಡುಗರಲ್ಲಿ ಒಂದು ಬಗೆಯ ಪಾಪಪ್ರಜ್ಞೆಯನ್ನು, ಆತ್ಮಾವಲೋಕನವನ್ನು ಮೂಡಿಸುವ ಶಕ್ತಿ ಈ ಸಿನಿಮಾಗಿದೆ. ಆಕ್ಟ್ -1978 ನಿಜವಾದ ಗೆಲುವೇ ಅದು.
ಸಿನಿಮಾದ ಒಂದು ಹಂತದಲ್ಲಿ ಮುಖ್ಯ ಪಾತ್ರವಾದ ಗೀತಾ “I Need Respect” ಎಂದು ಹೇಳುತ್ತಾಳೆ. ಅದು ಇಡೀ ಸಿನಿಮಾದ ಘೋಷವಾಕ್ಯ. ಸಾಮಾನ್ಯ ಜನರು “ಯಾವನೋ, ಯಾವಳೋ” ಆಗಿರುವ ಹೊತ್ತಲ್ಲಿ “I Need Respect” ಎಂಬ ವಾಕ್ಯ ಸಿಕ್ಕಾಪಟ್ಟೆ ಫೇಮಸ್ ಆಗುವ ಸಾಧ್ಯತೆ ಇದೆ.
No Comment! Be the first one.