ನಾನು ಸಿನಿಮಾ ನೋಡಿದೆ. ಫಂಟಾಸ್ಟಿಕ್‌ ಎಫರ್ಟ್…‌ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರತಂಡಕ್ಕೆ ನನ್ನ ಕಡೆಯಿಂದ ಶುಭ ಹಾರೈಕೆಗಳು –  ACT 1978 ಸಿನಿಮಾವನ್ನು ನೋಡಿ   ಹೀಗೊಂದು ಟ್ವೀಟ್‌ ಮಾಡಿದ್ದಾರೆ ಕಿಚ್ಚ ಸುದೀಪ!

ನಾಳೆ (20.11.2020) ರಂದು ಬಿಡುಗಡೆಯಾಗುತ್ತಿರುವ ಚಿತ್ರ ACT 1978. ಕೊರೋನಾ ವೈರಸ್ಸಿನಿಂದ ಇಡೀ ಜಗತ್ತು ಕೊಳೆತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಂತೂ ಇನ್ನಿಲ್ಲದಂತಾ ಏಟು ತಿಂದಿದೆ. ಚಿತ್ರಮಂದಿರಗಳ ಲಾಕ್‌ ಡೌನ್‌ ಪ್ರಕ್ರಿಯೆ ತೆರೆವುಗೊಂಡರೂ ಹೊಸ ಸಿನಿಮಾಗಳನ್ನು ತೆರೆಗೆ ತರಲು ಯಾರೂ ಧೈರ್ಯ ಮಾಡಿರಲಿಲ್ಲ. ಬಹುತೇಕ ಮರುಬಿಡುಗಡೆಗೊಂಡ ಚಿತ್ರಗಳು ಚಿತ್ರಮಂದಿರ ಮತ್ತು ಚಿತ್ರರಂಗಕ್ಕೆ ಅಂತಾ ಚೈತನ್ಯ ತುಂಬಲಿಲ್ಲ. ಈ ನಡುವೆ ACT 1978 ಸಿನಿಮಾ ತಂಡ ಮಾತ್ರ ʻಒಂದೊಳ್ಳೆ ಸಿನಿಮಾ ಮಾಡಿದ್ದೀವಿ. ಈ ಚಿತ್ರವನ್ನು ನೋಡಲು ಜನ ಬಂದೇ ಬರುತ್ತಾರೆʼ ಅಂತಾ ಒಂದೇ ಮನಸ್ಸು ಮಾಡಿ ಥೇಟರಿಗೆ ಬರುತ್ತಿದ್ದಾರೆ. ಇಂಥಾ ಸಂರ್ಭದಲ್ಲಿ ಪ್ರೇಕ್ಷಕರ ಜೊತೆಗೆ ಸಿನಿಮಾರಂಗದ ದಿಗ್ಗಜರ ಸಹಕಾರವೂ ಅಗತ್ಯವಿದೆ.

ಸುದೀಪ್‌ ಹೊಸ ಪ್ರತಿಭೆ ಮತ್ತು ಹೊಸ ಪ್ರಯೋಗಗಳಿಗೆ ಮೊದಲಿನಿಂದಲೂ ಸಹಕರಿಸುತ್ತಾ ಬಂದವರು. ಈ ನಿಟ್ಟಿನಲ್ಲಿ, ACT 1978 ಚಿತ್ರತಂಡಕ್ಕೂ ಸುದೀಪ್‌ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ಚಿತ್ರದ ಮೊದಲ ಪ್ರೇಕ್ಷಕರಂತೆ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇಷ್ಟಪಟ್ಟ ಸಿನಿಮಾದ ಬಗ್ಗೆ ಒಂದೊಳ್ಳೆ ಸಂದೇಶವನ್ನೂ ರವಾನಿಸಿದ್ದಾರೆ. ಇನ್ನೇನಿದ್ದರೂ ಜನ ACT 1978 ಚಿತ್ರವನ್ನು ಮನಸಾರೆ ನೋಡಿ ಹರಸಬೇಕಷ್ಟೇ….

ಸುಮಾರು ೫೨ ಜನ ಪ್ರಮುಖ ಪಾತ್ರಧಾರಿಗಳು ಈ ಚಿತ್ರದಲ್ಲಿದ್ದಾರೆ. ಬಿಗ್ ಪ್ರಾಜೆಕ್ಟ್ ಆದರೂ ಕಡಿಮೆ ಅವಧಿಯಲ್ಲಿ ಚಿತ್ರವನ್ನು ರೂಪಿಸಲಾಗಿದೆ. ಈ ಚಿತ್ರದ  ಮುಖ್ಯಕಥೆ ನಡೆಯೋದೇ ಒಂದು ಬಿಲ್ಡಿಂಗ್‌ನಲ್ಲಿ. ಇಡೀ ಚಿತ್ರವನ್ನು ೩ ಕ್ಯಾಮೆರಾ ಬಳಸಿ ಸೆರೆ ಹಿಡಿಯಲಾಗಿದೆ. ಪ್ರಮೋದ್ ಶೆಟ್ಟಿ ಮತ್ತು ಯಜ್ಞಾಶೆಟ್ಟಿ ಮುಖ್ಯಭೂಮಿಕೆಯಲ್ಲಿ ಪ್ರತಿಭಾವಂತ ನಿರ್ದೇಶಕರು ಮತ್ತು ಬರಹಗಾರರ ಕಾಂಬೋನಲ್ಲಿ ರೂಪುಗೊಂಡಿರುವ ಚಿತ್ರ ಆಕ್ಟ್ 1978′.

ಕಲಾತ್ಮಕ ಚಿತ್ರಗಳ ಪರಿಧಿಯಿಂದ ಕಮರ್ಷಿಯಲ್ ಥ್ರಿಲ್ಲರ್ ನತ್ತ ಹೊರಳಿರುವ ಮನ್ಸೋರೆ ಈ ಬಾರಿ ಇನ್ನಿಬ್ಬರು ನಿರ್ದೇಶಕರನ್ನು ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆಗೆ ಜೊತೆಯಾಗಿಸಿಕೊಂಡಿದ್ದಾರೆ. ಬೆಲ್ ಬಾಟಂನಂಥಹ ಸಕ್ಸೆಸ್ ಫುಲ್ ಚಿತ್ರಕ್ಕೆ ಕಥೆ ಬರೆದ ನಿರ್ದೇಶಕ- ಕಥೆಗಾರ ದಯಾನಂದ್ ಟಿ.ಕೆ ಮತ್ತು ‘ಪ್ರೀತಿ ಗೀತಿ ಇತ್ಯಾದಿ’ ಚಿತ್ರವನ್ನು ನಿರ್ದೇಶಿಸಿದ ‘ವೀರು ಮಲ್ಲಣ್ಣ’ ಆಕ್ಟ್ 1978′ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಮನ್ಸೋರೆ ಜೊತೆಗೆ ನಿಂತಿದ್ದಾರೆ.

ಸುನಿಲ್ ಕುಮಾರ್ ದೇಸಾಯಿಯವರ ಉದ್ಘರ್ಷ’ ಚಿತ್ರ ನಿರ್ಮಿಸಿದ ನಿರ್ಮಾಪಕ ದೇವರಾಜ್ ಆರ್ ನಿರ್ಮಾಣದಲ್ಲಿ ತಯಾರಾಗಿರುವ ಈ  ಚಿತ್ರದ ಪೋಸ್ಟರುಗಳಲ್ಲಿ ಗರ್ಭಿಣಿ ನಾಯಕಿ ಯಜ್ಞಾಶೆಟ್ಟಿ ಹ್ಯೂಮನ್ ಬಾಂಬರ್ ಅವತಾರದಲ್ಲಿ ಎದೆಗೆ ಬಾಂಬ್ ಕಟ್ಟಿಕೊಂಡು ಸರ್ಕಾರಿ ಕಛೇರಿಯಲ್ಲಿ ಗನ್ ಹಿಡಿದು ಕುಳಿತಿರುವ ಚಿತ್ರದ ಮೂಲಕ ಕ್ಯೂರಿಯಸ್ ಥ್ರಿಲ್ಲರ್ ಒಂದಕ್ಕೆ ಮನ್ಸೋರೆ ಕೈ ಇಟ್ಟಿರುವುದು ಕುತೂಹಲ ಮೂಡಿಸುವಂದ್ದು,  ಅಂತಿಮವಾಗಿ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ಟ್ರೇಲರನ್ನು ಪುನೀತ್‌ ರಾಜ್‌ ಕುಮಾರ್‌ ರಿಲೀಸ್‌ ಮಾಡಿದ್ದರು. ಈಗ ಕಿಚ್ವ ಮೊದಲ ಪ್ರೇಕ್ಷಕನಾಗಿ ಪ್ರತಿಕ್ರಿಯೆ ನೀಡಿದ್ದಾರೆ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಖೈಮರಾ‌ ಚಿತ್ರಕ್ಕೆ ಚಾಲನೆ.

Previous article

ವ್ಯವಸ್ಥೆ ನನ್ನನ್ನು ಟೆರರಿಸ್ಟ್ ಮಾಡಿದೆ…!

Next article

You may also like

Comments

Leave a reply

Your email address will not be published. Required fields are marked *