ಅತ್ಯದ್ಭುತ ಹಾಸ್ಯ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ವಿವೇಕ್ (ವಿವೇಕಾನಂದರ್) ಚೆನ್ನೈನಲ್ಲಿ ವಿವೇಕ್ ವಿಧಿವಶರಾಗಿದ್ದಾರೆ. ನೆನ್ನೆ ಕೊರೋನಾ ಲಸಿಕೆ ಹಾಕಿಸಿಕೊಂಡು ಬಂದು, ಲಸಿಕೆಯ ಬಗ್ಗೆ ಸಂದೇಶವನ್ನೂ ನೀಡಿದ್ದ ವಿವೇಕ್ ಗೆ ಇದ್ದಕ್ಕಿದ್ದಹಾಗೆ ಹೃದಯಾಘಾತವಾಗಿತ್ತು. ತಕ್ಷಣ ಟ್ರೀಟ್ ಮೆಂಟ್ ಕೊಡಿಸಲಾಗಿತ್ತಾದರೂ ಹೃದಯ ಶ್ರೀಮಂತಿಕೆಯ ಮಹಾನ್ ವ್ಯಕ್ತಿಯ ಹೃದಯ ಯಾವ ಚಿಕಿತ್ಸೆಗೂ ಸ್ಪಂದಿಸದೆ ಸ್ತಬ್ದವಾಗಿದೆ.
ಸಿನಿಮಾರಂಗ ಇರುವುದೇ ಹೀಗೆ. ಇಲ್ಲಿ ನಂಬಿಕೆಗಳಿಗಿಂತಾ ಮೂಢ ನಂಬಿಕೆಗಳಿಗೇ ಹೆಚ್ಚು ಬೆಲೆ. ಇಂಥಾ ಜಾಗದಲ್ಲಿ ಯಾವನಾದರೂ ಮಾಢ್ಯದ ವಿರುದ್ಧ ಮಾತಾಡುತ್ತಾನೆ, ವೈಜ್ಞಾನಿಕ ಸಂದೇಶ ನೀಡುತ್ತಾನೆಂದರೆ, ಅಂಥವನನ್ನು ತಿಕ್ಕಲ ಅನ್ನುತ್ತದೆ ಈ ಜಗತ್ತು. ಇಂತಹದರಲ್ಲಿ, ಸಿನಿಮಾದಲ್ಲಿ ತಮ್ಮ ನಟನೆಯ ಜೊತೆ ಮಾತ್ರವಲ್ಲ ನಡೆಯಲ್ಲೂ ಮೂಢ ನಂಬಿಕೆಗಳನ್ನು ವಿರೋಧಿಸುತ್ತಾ ಬಂದವರು ವಿವೇಕ್.
ಅದೇನು ದುರಂತವೋ ಗೊತ್ತಿಲ್ಲ. ಸಿನಿಮಾರಂಗದಲ್ಲಿ ಕಾಮಿಡಿ ನಟರಾಗಿ ಹೆಸರು ಮಾಡಿರುವ ಸಾಕಷ್ಟು ಮಂದಿ ನಿಜ ಜೀವನದಲ್ಲಿ ಹೇಳಿಕೊಳ್ಳಲಾರದಂಥ ಸಂಕಟ ಅನುಭವಿಸುತ್ತಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು, ಹಿರಿಯ ಹಾಸ್ಯ ಕಲಾವಿದ ಉಮೇಶ್, ಅಪಘಾತದಲ್ಲಿ ಸಾವಿಗೀಡಾದ ಅದ್ಭುತ ನಟ ಕರಿಬಸವಯ್ಯ ಸೇರಿದಂತೆ ಸಾಕಷ್ಟು ಮಂದಿ ಹೆತ್ತ ಮಕ್ಕಳನ್ನು ಕಳೆದುಕೊಂಡು ನರಳಿದವರೇ.
ಒಂದು ಕಾಲಕ್ಕೆ ಟೆಲಿಫೋನ್ ಆಪರೇಟರ್ ಆಗಿದ್ದುಕೊಂಡು, ಕೆ. ಬಾಲಚಂದರ್ ಅವರ ಕೈಗೆ ಸಿಕ್ಕಮೇಲೆ ನಟನಾ ವೃತ್ತಿಗೆ ಇಳಿದವರು ವಿವೇಕ್. ತಮಿಳು ಚಿತ್ರರಂಗದಲ್ಲಿ ತನ್ನ ಪ್ರಗತಿಪರ ಚಿಂತನೆಗಳನ್ನು ಹಾಸ್ಯದ ಮೂಲಕ ಹೇಳುತ್ತಾ ಜಗತ್ತಿನಾದ್ಯಂತ ಅಗಣಿತ ಅಭಿಮಾನಿಗಳನ್ನು ಹೊಂದಿರುವ ಕಲಾವಿದ ಈತ. ಅಬ್ದುಲ್ ಕಲಾಂ ಅವರಿಗೆ ಆತ್ಮೀಯರಾಗಿದ್ದ ವಿವೇಕ್ಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿದೆ. ಯಾವ ಪ್ರಶಸ್ತಿ ಇದ್ದರೇನು, ಜೀವಕ್ಕಿಂತಾ ಹೆಚ್ಚಾಗಿದ್ದ ಮಗ ಅದೊಂದು ದಿನ ಜೀವ ಚೆಲ್ಲಿ ಮಲಗಿಬಿಟ್ಟಿದ್ದ.
ಅದು ೨೦೧೬ರ ಜೂನ್ ತಿಂಗಳು. ಚೆನ್ನೈ ಸಿಟಿಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡಿಕೊಂಡಿತ್ತು. ಖುದ್ದು ವಿವೇಕ್ ಚೆನ್ನೈ ಮಹಾನಗರಪಾಲಿಕೆಯೊಟ್ಟಿಗೆ ಸೇರಿ ಡೆಂಗ್ಯೂ ತಡೆಗಟ್ಟಲು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು. ದುರಂತವೆಂದರೆ, ವಿವೇಕ್ ಮಗ ಅದೇ ಡೆಂಗ್ಯೂ ಜ್ವರದಿಂದ ಪ್ರಾಣಬಿಡುವಂತಾಗಿತ್ತು. ಇಬ್ಬರು ಹೆಣ್ಣು ಮಕ್ಕಳ ನಂತರ ಮಗ ಹುಟ್ಟಿದ್ದ. ಹದಿಮೂರು ವರ್ಷದ ಆ ಹುಡುಗ ಕೂಡಾ ತಂದೆಯಂತೆಯೇ ಚುರುಕಾಗಿದ್ದ. ಸಹಜವಾಗೇ ವಿವೇಕ್ ಮಗನ ಬಗ್ಗೆ ಸಾಕಷ್ಟು ಕನಸುಗಳಿಟ್ಟುಕೊಂಡಿದ್ದರು. ಮಗನನ್ನು ಕಳೆದುಕೊಂಡ ನೋವು ಎದೆಯಲ್ಲಿ ಮಡುಗಟ್ಟಿತ್ತು. ಕಣ್ಣಮುಂದೆ ಬೆಳೆದು ಬಾಳಬೇಕಿದ್ದ ಮಗನನ್ನು ಮಣ್ಣಲ್ಲಿಟ್ಟು ಬಂದ ಯಾವ ತಂದೆಗೆ ತಾನೆ ಆ ಸಂಕಟದಿಂದ ಹೊರಬರಲು ಸಾಧ್ಯ? ವಿವೇಕ್ರನ್ನು ಖಿನ್ನತೆ ಆವರಿಸಿತ್ತು.
ಮೂಢ ನಂಬಿಕೆಗಳ ವಿರುದ್ಧ, ಪರಿಸರ ಸ್ನೇಹಿ, ಮನುಷ್ಯ ಸಂಬಂಧಗಳ ವಿಚಾರಗಳನ್ನು ತಮ್ಮ ಹಾಸ್ಯದ ಮೂಲಕ ನೋಡುಗರ ಎದೆಗೆ ದಾಟಿಸುತ್ತಿದ್ದ ವಿವೇಕ್ ನೋವನ್ನು ನುಂಗಿಕೊಂಡೇ ಎದ್ದು ನಿಂತಿದ್ದರು. ಭೇಟಿಯಾದಾಗಲೆಲ್ಲಾ ಕಲಾಂ ಅವರು ‘ಹಸಿರನ್ನು ಬೆಳೆಸಬೇಕು, ಜನರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳುತ್ತಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ವಿವೇಕ್ ತಮ್ಮ ಮಗನ ಹೆಸರಲ್ಲಿ ಸಾಯಿಪ್ರಸನ್ನ ಟ್ರಸ್ಟ್ ಸ್ಥಾಪಿಸಿ ಅದರಲ್ಲಿ ‘ಗ್ರೀನ್ ಕಲಾಂ’ ಎನ್ನುವ ಯೋಜನೆ ರೂಪಿಸಿ ಗಿಡ ನೆಡಲು ಶುರು ಮಾಡಿದರು. ಹಾನಿಗೊಳಗಾದ ಮರಗಳನ್ನು ರಕ್ಷಿಸಿದರು.
ಈ ವರೆಗೆ ವಿವೇಕ್ ಮೂವತ್ತು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಿಸಿದ್ದಾರೆ. ಜಗತ್ತಿನಲ್ಲಿ ಯಾರೆಲ್ಲಾ ಗಿಡಗಳನ್ನು ಬೆಳೆಸಿ ದೊಡ್ಡವರಾಗಿದ್ದಾರೋ ಅಂಥವರ ಬಗ್ಗೆ ವಿವೇಕ್ ತಿಳಿದುಕೊಂಡಿದ್ದಾರೆ. ತೀರಾ ಇತ್ತೀಚೆಗೆ ವೇದಿಕೆಯೊಂದರಲ್ಲಿ ಕರ್ನಾಟಕದ ತಾಯಿ ಸಾಲುಮರದ ತಿಮ್ಮಕ್ಕನ ಬಗ್ಗೆ ಹೇಳಲು ರಶ್ಮಿಕಾ ಮಂದಣ್ಣ ತಿಣುಕಾಡುತ್ತಿದ್ದಳಲ್ಲಾ? ಆಗ ವಿವೇಕ್ ಮೈಕು ಕಿತ್ತುಕೊಂಡು ತಿಮ್ಮಕ್ಕನ ಪೂರ್ತಿ ಚರಿತ್ರೆಯನ್ನು ಪಟಪಟ ಅಂತಾ ಹೇಳಿದ್ದು, ಆ ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ್ದು ಅದಕ್ಕೇ!
ಲಕ್ಷಾಂತರ ಗಿಡಗಳನ್ನು ನೆಟ್ಟು, ಅವುಗಳಿಗೆ ಜೀವ ನೀಡಿ, ಅದರ ಬೆಳವಣಿಗೆಯಲ್ಲಿ ಮಗನನ್ನು ಕಾಣುತ್ತಿದ್ದ ವಿವೇಕ್ ನಿಜಕ್ಕೂ ಮಾನವತಾವಾದಿ ಎನಿಸಿಕೊಂಡಿದ್ದವರು. ಈಗ ಮಗನ ಹಾದಿಯನ್ನೇ ಹಿಂಬಾಲಿಸಿ, ಈ ಲೋಕದಿಂದ ಎದ್ದು ನಡೆದಿದ್ದಾರೆ. ಹೋಗಿಬನ್ನಿ ವಿವೇಕ್. ಈ ನಾಡಿಗೆ ನಿಮ್ಮಂಥವರು ಬೇಕೇಬೇಕು…