*ರಕ್ಷಿತ್‌ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲ್ಲಿ ಪಂಚತಂತ್ರದ ಹುಡುಗ….*

ಕಾಲ್‌ ಕೇಜಿ ಪ್ರೀತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಣಸಿಕ್ಕವರು ನಟ ವಿಹಾನ್‌. ಈ ಎರಡು ಸಿನಿಮಾಗಳ ನಂತರ ವಿಹಾನ್‌ ಬಗ್ಗೆ ಎಲ್ಲರೂ ತಿರುಗಿ ನೋಡುವಂತಾಗಿತ್ತು ಪಂಚತಂತ್ರ ಸಿನಿಮಾ ಕಾರಣಕ್ಕೆ. ವಿಹಾನ್‌ ಥರದ ಪ್ರತಿಭಾವಂತ ನಟ ಮತ್ತು ಯೋಗರಾಜ್‌ ಭಟ್ಟರಂತಾ ಸ್ಟಾರ್‌ ಡೈರೆಕ್ಟರ್‌ ಇಬ್ಬರ ಕಾಂಬಿನೇಷನ್ನಿನ ಪಂಚತಂತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು. ಅಬ್ಬರದ ಪ್ರಚಾರದೊಂದಿಗೆ ತೆರೆಗೂ ಬಂತು. ಆದರೆ, ಪಂಚತಂತ್ರ ಹೇಳಿಕೊಳ್ಳುವಂತಾ ಗೆಲುವು ಕಾಣಲಿಲ್ಲ. ಇದಾದ ನಂತರ ಸ್ವಲ್ಪ ದಿನದ ಗ್ಯಾಪ್‌ ತೆಗೆದುಕೊಂಡ ವಿಹಾನ್‌, ಸುಭಾಷ್‌ ಚಂದ್ರ ನಿರ್ದೇಶನದ ಲೆಗೆಸಿ ಎನ್ನುವ ಸಿನಿಮಾ ಆರಂಭಿಸಿದರು.

ಈ ಎಲ್ಲದರ ನಡುವೆ ಕಳೆದ ಮೂರು ವರ್ಷಗಳಿಂದ ವಿಹಾನ್‌ ಎಲ್ಲೆಂದರೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಎಲ್ಲಿ ಹೋದರು ವಿಹಾನ್‌? ಪತ್ತೆಯೇ ಇಲ್ಲವಲ್ಲಾ…. ಅಂತಾ ಜನ ಯೋಚಿಸುವ ಹೊತ್ತಿಗೇ ವಿಹಾನ್‌ ಪ್ರತ್ಯಕ್ಷರಾಗಿದ್ದಾರೆ. ಅದೂ ಪರಂಮಃ ಸ್ಟುಡಿಯೋಸ್‌ ಲಾಂಛನದಲ್ಲಿ ರಕ್ಷಿತ್‌ ಶೆಟ್ಟಿ ನಿರ್ಮಾಣದ ಸಿನಿಮಾದೊಂದಿಗೆ. ಚಾರ್ಲಿಯ ಮಹಾ ಗೆಲುವಿನ ನಂತರ  ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಇಡೀ ಭಾರತೀಯ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ಸಂಸ್ಥೆಯಿದು. ಈ ಬ್ಯಾನರಿನಲ್ಲಿ ವಿಹಾನ್‌ ಸಿನಿಮಾ ಶುರುವಾಗಿರುವುದು ನಿಜಕ್ಕೂ ಅಚ್ಛರಿಯ ವಿಚಾರ. ವಿಹಾನ್‌ ಅದ್ಭುತ ಪ್ರತಿಭೆ. ಅನುಕ್ಷಣವೂ ಸಿನಿಮಾವನ್ನೇ  ಧ್ಯಾನಿಸುವವರು. ಸಿನಿಮಾ ಮತ್ತು ಪಾತ್ರವೊಂದರ ತಯಾರಿಗಾಗಿ ಇವರು ನಡೆಸುವ ತಯಾರಿ ದೊಡ್ಡದು. ಬೆಳಗಿನ ಜಾವ ಮೂರಕ್ಕೇ ಎದ್ದು ದೈಹಿಕ ಕಸರತ್ತು ಆರಂಭಿಸುವ ವಿಹಾನ್‌ ರಾತ್ರಿ ಮಲಗುವ ತನಕ ಸಿನಿಮಾ ಚಟುವಟಿಕೆಗಳಿಗಾಗಿಯೇ ಸಮಯ ಮೀಸಲಿಟ್ಟಿರುತ್ತಾರೆ. ಇಷ್ಟೆಲ್ಲಾ ಡೆಡಿಕೇಷನ್‌ ಇರುವ ಹುಡುಗನಿಗೆ ಒಂದಷ್ಟು ಒಳ್ಳೇ ಸಿನಿಮಾಗಳು ಸಿಗಬೇಕು ಅನ್ನೋದು ಸುತ್ತಲಿನವರ ಅಭಿಲಾಷೆಯಾಗಿತ್ತು. ಈಗ ಅದು ಅಕ್ಷರಶಃ ಕೈಗೂಡುವ ಲಕ್ಷಣ ಗೋಚರಿಸುತ್ತಿದೆ.

ಸಿನಿಮಾ ನಟರು ಅಂದಮೇಲೆ ಪ್ರಚಾರ ಬಯಸುವುದು ಸಾಮಾನ್ಯ. ಆದರೆ ವಿಹಾನ್‌ ಈ ವಿಚಾರದಲ್ಲೂ ಭಿನ್ನ. ಸುಖಾ ಸುಮ್ಮನೆ ಪ್ರಚಾರ ಪಡೆಯೋದಕ್ಕಿಂತಾ ನಾವು ಮಾಡುವ ಕೆಲಸ ಸೌಂಡ್‌ ಮಾಡಬೇಕು. ಆ ಮೂಲಕ ಜನ ನಮ್ಮನ್ನು ಗುರುತಿಸಬೇಕು; ಮನಸ್ಸಿನೊಳಗೆ ಜಾಗ ಕೊಡಬೇಕು ಅಂತಾ ಬಯಸುತ್ತಾರೆ. ಬಹುಶಃ ಈ ಕಾರಣಕ್ಕೇ ವಿಹಾನ್‌ ಹೆಚ್ಚು ಮಾತಾಡುವುದು, ಪ್ರಚಾರ ಬಯಸೋದನ್ನೆಲ್ಲಾ ಮಾಡೋದಿಲ್ಲ. ಹಾಗೆ ನೋಡಿದರೆ, ಸಿನಿಮಾ ಹೊರತಾಗಿ ವಿಹಾನ್‌ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿದಾರೆ. ಕ್ಯಾನ್ಸರ್‌ ನಿಂದ ಬಾಧಿತರಾದವರಿಗೆ ಆರ್ಥಿಕ ನೆರವು ನೀಡಿದ್ದಾರೆ.  ಆಗಸ್ಟ್‌ 15ರಂದು ಸಾಕಷ್ಟು ಜನ ವಿಶೇಷ ಚೇತನರಿಗೆ ವ್ಹೀಲ್‌ ಚೇರ್‌ ಕೊಡಿಸಿದ್ದರು. ಈ ಥರಹದ ಪುಣ್ಯದ ಕೆಲಸಗಳನ್ನು ಮಾಡಿದಾಗಲೂ ವಿಹಾನ್‌ ಪ್ರಚಾರ ಬಯಸಿದವರಲ್ಲ. 

ಮೊನ್ನೆ ದಿನ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಮುಹೂರ್ತ ಸಮಾರಂಭವಿತ್ತು. ಮೂರು ವರ್ಷಗಳ ಗ್ಯಾಪ್‌ ನಂತರ ಸಡನ್ನಾಗಿ ವಿಹಾನ್‌ ಅವರನ್ನು ಅಲ್ಲಿ ನೋಡಿದ ಬಹುತೇಕರು ಆಶ್ಚರ್ಯಗೊಂಡಿದ್ದರು. ಹಿಂದೆ ಲವರ್‌ ಬಾಯ್‌ ಥರಾ ಕಾಣಿಸುತ್ತಿದ್ದ ವಿಹಾನ್‌ ಏಕಾಏಕಿ ಮಾಸ್‌ ಹೀರೋ ಥರಾ ಮಾರ್ಪಟ್ಟಿದ್ದಾರಲ್ಲಾ? ಅಂತಾ. ಮೂರು ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ವಿಹಾನ್‌ ಸಾಕಷ್ಟು ಬದಲಾಗಿದ್ದಾರೆ ಅನ್ನಿಸಿತ್ತು. ಈ ತನಕ ಎಲ್ಲ ಯಶಸ್ವೀ ಹೀರೋಗಳೂ ಹೀಗೆ ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಬದಲಾವಣೆಗೆ ಒಡ್ಡಿಕೊಂಡವರೇ ಆಗಿದ್ದಾರೆ. ಈ ನಿಟ್ಟಿನಲ್ಲಿ ವಿಹಾನ್‌ ಕೂಡಾ ಈಗ ಕ್ಲಾಸ್‌ ಮತ್ತು ಮಾಸ್‌ ಪ್ರೇಕ್ಷಕರಿಗೆ ಬೇಕಿರುವ ಎಲ್ಲ ಅರ್ಹತೆ ಪಡೆದಿರುವ ನಟನಾಗಿದ್ದಾರೆ.

ಸದ್ಯ ರಕ್ಷಿತ್‌ ಅವರ ತಂಡದಲ್ಲಿದ್ದ ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶಿಸುತ್ತಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಆರಂಭಗೊಂಡಿದೆ. ಇದರ ಜೊತೆಗೆ ಪಕ್ಕದ ರಾಜ್ಯದ ದೊಡ್ಡ ಬ್ಯಾನರಿನಲ್ಲಿ ಶುರುವಾಗಿರುವ ಸಿನಿಮಾ ಕೂಡಾ ಸದ್ದಿಲ್ಲದೇ ತಯಾರಿ ನಡೆಸುತ್ತಿದೆ. ಮಾನ್ಸೂನ್‌ ರಾಗ ಚಿತ್ರದ ನಿರ್ದೇಶಕ ರವೀಂದ್ರನಾಥ್‌ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಹಿಂದೆ ಆರಂಭಗೊಂಡಿದ್ದ ಲೆಗೆಸಿ ಕೂಡಾ ಈಗಾಗಲೇ ಶೇ. 40ರಷ್ಟು ಕೆಲಸ ಮುಗಿಸಿದೆ. ಇಷ್ಟು ಮಾತ್ರವಲ್ಲದೆ ಇನ್ನೂ ಮೂರ್ನಾಲ್ಕು ಪ್ರಾಜೆಕ್ಟ್‌ ಗಳಲ್ಲಿ ವಿಹಾನ್‌ ನಟಿಸೋದು ಪಕ್ಕಾ ಆಗಿದೆ.

ಹೇಗೂ ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಕೊರತೆ ಇದೆ. ಸದ್ಯ ವಿಹಾನ್‌ ಸಾಗುತ್ತಿರುವ ಹಾದಿ ನೋಡಿದರೆ, ಕನ್ನಡ ಚಿತ್ರರಂಗದಲ್ಲಿವರು ದೊಡ್ಡ ಮಟ್ಟದಲ್ಲಿ ತಲೆಯೆತ್ತಿ ನಿಲ್ಲುವ  ಸೂಚನೆಗಳು ನಿಚ್ಛಳವಾಗಿವೆ.

ಒಳ್ಳೇದಾಗಲಿ ವಿಹಾನ್‌….