ಕಾಮಿಡಿ ಕಿಂಗ್ ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕಾ ಇದೇ ಅಕ್ಟೋಬರ್ ೪ಕ್ಕೆ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಸ್ವತಃ ಶರಣ್ ಈ ಚಿತ್ರದ ಕುರಿತು ಏನೆಲ್ಲಾ ಮಾತಾಡಿದ್ದಾರೆ ಅನ್ನೋದರ ವಿವರ ಇಲ್ಲಿದೆ…
ಎಕ್ಸಾಂ ಬರೆಯಲು ಹೊರಟ ಮಗು ‘ಅಮ್ಮಾ ಹೋಗ್ಬರ್ತೀನಮ್ಮಾ ಅಂತಾ ಹೇಳಿ ಹೋಗುತ್ತದಲ್ಲಾ ಆ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಾಗೆ ಪರೀಕ್ಷೆ ಬರೆಯಲು ಹೋಗುವ ಮಗುವಿನಲ್ಲಿ ಭಯ, ಕಾನ್ಫಿಡೆನ್ಸ್ ಎಲ್ಲವೂ ಇರುತ್ತದೆ. ನಾನು ಗಟ್ಟು ಮಾಡಿಕೊಂಡಿರೋದೇ ಎಕ್ಸಾಂನಲ್ಲಿ ಬಂದಿರುತ್ತದಾ? ನಾನು ಬರೆದಿರೋದಕ್ಕೆ ಮಾರ್ಕ್ಸ್ ಸರಿಯಾಗಿ ಬರಬಹುದಾ ಅನ್ನೋದಿರುತ್ತದೆ. ನಮ್ಮ ಮಿಶ್ರಭಾವನೆಯ ಮನಸ್ಥಿತಿ ಕೂಡಾ ಥೇಟು ಹಾಗೇ ಇದೆ. ನನ್ನ ಚಿತ್ರ ಬದುಕಿನಲ್ಲಿ ನಾಡ ಹಬ್ಬ ದಸರಾದಂದು ರಿಲೀಸ್ ಆಗುತ್ತಿರುವ ಮೊಟ್ಟ ಮೊದಲ ಸಿನಿಮಾ ಇದಾಗಿದೆ. ಇದು ಒಬ್ಬ ಕನ್ನಡಿಗನಾಗಿ ಮತ್ತು ಕಲಾವಿದನಾಗಿ ನನಗೆ ಅಷ್ಟೇ ಖುಷಿ ಕೊಡುತ್ತಿದೆ ಮತ್ತು ಹೆಮ್ಮೆಯಿದೆ. ಅಕ್ಟೋಬರ್ ನಾಲ್ಕನೇ ತಾರೀಖಿನಿಂದಲೇ ಸ್ಕೂಲ್ ರಜೆ ಶುರುವಾಗುತ್ತಿದೆ. ಒಂಥರಾ ಲಾಂಗ್ ವೀಕೆಂಡ್ ಇದು. ಕಾಲಕಾಲದಿಂದಲೂ ಬಂದಿರೋದೇನೆಂದರೆ, ಹಬ್ಬ ಅಂದರೆ ಸಂಭ್ರಮ ಮತ್ತು ಅದರ ಜೊತೆಗೇ ಬೆಸೆದುಕೊಂಡಿರೋದು ನಗು. ನಮ್ಮ ಸಿನಿಮಾ ಕೂಡಾ ನೋಡಿದವರೆಲ್ಲರನ್ನೂ ನಕ್ಕುನಲಿಸಿ, ಸಂಭ್ರಮಿಸುತ್ತದೆ. ಈ ದಸರಾ ಹಬ್ಬವನ್ನು ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ವಿಶೇಷವನ್ನಾಗಿಸಲಿದೆ ಅನ್ನೋದಂತೂ ನಿಜ.
ಶೈಲೇಂದ್ರ ಬಾಬು ಅವರ ವಿತರಣೆ ನಮಗೆ ಶಕ್ತಿಯಾಗಿದೆ. ಸರಿಸುಮಾರು ಇನ್ನೂರು ಥಿಯೇಟರುಗಳಲ್ಲಿ ಅಧ್ಯಕ್ಷ ಇನ್ ಅಮೆರಿಕಾ ಬಿಡುಗಡೆಯಾಗುತ್ತಿದೆ. ಮನೆ ಮಂದಿಯೆಲ್ಲಾ ಕೂತು ನೋಡಿ ಎಂಜಾಯ್ ಮಾಡುವಂಥ ಕಂಟೆಂಟ್ ಇದರಲ್ಲಿದೆ. ಸಣ್ಣದೊಂದು ಮೆಸೇಜ್ ಕೂಡಾ ಇದೆ.
ಈ ಸಿನಿಮಾದ ಮೂಲಕ ನನ್ನ ಪಾಲಿನ ಹಲವಾರು ಮೊದಲುಗಳು ಘಟಿಸಿವೆ. ಅದರಲ್ಲಿ ಮುಖ್ಯವಾದ್ದೆಂದರೆ, ಹರಿಕೃಷ್ಣ ಅವರ ಕಾಂಬಿನೇಷನ್ನಿನಲ್ಲಿ ಈ ವರೆಗೂ ನಾನು ಯಾವ ಸಿನಿಮಾವನ್ನೂ ಮಾಡಿರಲಿಲ್ಲ. ಈ ವಿಚಾರ ನನಗಷ್ಟೇ ಅಲ್ಲ ಬಹಳಷ್ಟು ಜನರಿಗೆ ಆಶ್ಚರ್ಯ ಮೂಡಿಸಿದೆ. ಮೊನ್ನೆ ಯೋಗರಾಜ ಭಟ್ಟರು ಸಿಕ್ಕಿದ್ದಾಗ “ಏನ್ರೀ ಇದುವರೆಗೂ ನೀವು ಒಂದು ಸಿನಿಮಾದಲ್ಲೂ ಸೇರಿರಲಿಲ್ವಾ? ಎನ್ನುತ್ತಿದ್ದರು. ಮೊದಲ ಬಾರಿಗೆ ಅದು ಸಾಧ್ಯವಾಗಿದೆ. ಇನ್ನು ರಾಗಿಣಿ ಅವರೊಂದಿಗೆ ಕೂಡಾ ಮೊದಲ ಬಾರಿಗೆ ನಾಯಕನಟನಾಗಿ ಕೆಲಸ ಮಾಡಿದ್ದೇನೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯ ವಿಶ್ವಪ್ರಸಾದ್ ಅವರು ನಮಗೆ ಕೊಟ್ಟಿರುವ ಸಹಕಾರ ದೊಡ್ಡದು. ನಾವು ಅಮೆರಿಕಾದಲ್ಲಿ ೪೮ರಿಂದ ೫೦ದಿನಗಳ ಕಾಲ ಶೂಟ್ ಮಾಡಿದ್ದೇವೆ. ಅದು ಸುಲಭದ ಮಾತಲ್ಲ. ಅಮೆರಿಕಾದಂಥ ದೇಶದಲ್ಲಿ ಯಾವುದೇ ರಾಜಿ ಇಲ್ಲದೆ ನಾವು ಕೇಳಿದ ಲೊಕೇಶನ್ನುಗಳನ್ನೆಲ್ಲಾ ಒದಗಿಸಿದ್ದಾರೆ. ಇದು ಅವರ ಶಕ್ತಿ ಮಾತ್ರವಲ್ಲ ಸಿನಿಮಾ ಮೇಲಿನ ಪ್ರೀತಿ ಮತ್ತು ಒಲವು ಕೂಡಾ ಅದಕ್ಕೆ ಕಾರಣ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರತಿಷ್ಟಿತ ಸಿನಿಮಾ ನಿರ್ಮಾಣ ಸಂಸ್ಥೆ ಪಾದಾರ್ಪಣೆ ಮಾಡುತ್ತಿದೆ. ಅವರಿಗೆ ಕೂಡಾ ಒಳಿತಾಗಬೇಕು.
ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರು ನಿರ್ದೇಶಿಸಿರುವಮೊದಲ ಚಿತ್ರ ಇದು. ಅವರ ಹೆಸರಿನಲ್ಲೇ ಇರುವಂತೆ ಮುದ್ದು ಮುದ್ದಾದ ಸಿನಿಮಾವನ್ನು ರೂಪಿಸಿದ್ದಾರೆ. ಯೋಗಾನಂದ್ ಮೂಲತಃ ಡೈಲಾಗ್ ರೈಟರ್ ಕೂಡಾ ಆಗಿರುವುದು ನಮ್ಮ ಚಿತ್ರಕ್ಕೆ ಸಿಕ್ಕ ಬೋನಸ್ ಆಗಿದೆ.
ಹಾಗೆ ನೋಡಿದರೆ ಇದು ನಾನು ಮತ್ತು ರಾಗಿಣಿ ಒಟ್ಟಿಗೆ ಕೆಲಸ ಮಾಡುತ್ತಿರುವ ಮೊದಲ ಸಿನಿಮಾ ಅಲ್ಲ. ಕೆಂಪೇಗೌಡ ಸಿನಿಮಾದಿಂದಲೂ ಅವರೊಟ್ಟಿಗೆ ನಟಿಸುತ್ತಾ ಬಂದಿದ್ದೀನಿ. ಆಗಿದ್ದ ಸ್ನೇಹ ಸಲುಗೆ ಇವತ್ತಿಗೂ ಹಾಗೇ ಉಳಿದಿದೆ. ಆಗ ನಾನು ಅವರೊಂದಿಗೆ ಕೆಲಸ ಮಾಡುವಾಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದೆ. ಆದರೆ ಅವರು ಯಾವತ್ತೂ ತಾರತಮ್ಯ ಮಾಡಿದವರೇ ಅಲ್ಲ. ಇನ್ನು ತಬಲಾ ನಾಣಿ ಅವರೂ ಈ ಚಿತ್ರದಲ್ಲಿದ್ದಾರೆ. ನಾನು ನಾಯಕನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ರ್ಯಾಂಬೋದಿಂದ ಆರಂಭಿಸಿ ಇವತ್ತಿನ ತನಕ ಸಾಗಿಬಂದಿದ್ದೇವೆ. ಜನ ನಮ್ಮಿಬ್ಬರ ಜೋಡಿಯನ್ನು ಇಷ್ಟಪಟ್ಟು ಹರಸಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳಿರುವ ಅಧ್ಯಕ್ಷ ಇನ್ ಅಮೆರಿಕಾ ಎಲ್ಲರನ್ನೂ ಮೆಚ್ಚಿಸುತ್ತದೆ ಅನ್ನುವ ಭರವಸೆ ನನ್ನದು.
No Comment! Be the first one.