ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡುತ್ತಿದ್ದಂತೇ, ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು ಅಂತಾ ಯಾವುದೇ ಕಲಾವಿದರ ಬಯಕೆಯಾಗಿರುತ್ತದೆ. ಹಾಗೆ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡು ಧೈರ್ಯಂ ಸಿನಿಮಾದ ಮೂಲಕ ಸಿನಿಮಾ ನಾಯಕಿಯಾಗಿ ಎಂಟ್ರಿ ಕೊಟ್ಟು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಹುಡುಗಿ ಅದಿತಿ ಪ್ರಭುದೇವ. ಸಿಂಪಲ್ ಸುನಿ ನಿರ್ದೇಶನದ ‘ಬಜ಼ಾರ್’ ಅದಿತಿ ನಾಯಕಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಬಜ಼ಾರ್ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿವೆ. ಈ ಸಂದರ್ಭದಲ್ಲಿ ‘ಬಜ಼ಾರ್’ ಹುಡುಗಿ ಅದಿತಿ ಪ್ರಭುದೇವ ಅವರನ್ನು ಮಾತಾಡಿಸಿದಾಗ….
ನೀವು ಧಾರಾವಾಹಿಯಲ್ಲಿ ಅವಕಾಶ ಪಡೆದಿದ್ದು ಹೇಗೆ?
ನಾನು ಈ ಫೀಲ್ಡಿಗೆ ಬಂದಿದ್ದೇ ಆಕಸ್ಮಿಕವಾಗಿ. ನನಗೆ ಮೊದಲಿನಿಂದಲೂ ನಟಿಯಾಗಬೇಕು ಎನ್ನುವ ಕನಸಿತ್ತು. ಎಂ.ಬಿ.ಎ. ಓದಿ ಮುಗಿಸಿದ ನಂತರ ನನಗೆ ಆ ಬಯಕೆ ಮತ್ತಷ್ಟು ಹೆಚ್ಚಾಗಿತ್ತು. ದಾವಣಗೆರೆಯಲ್ಲಿ ಎಂ.ಬಿ.ಎ. ಮುಗಿದ ನಂತರ ಇಂಟರ್ನ್ಶಿಪ್ಗಾಗಿ ಬೆಂಗಳೂರಿಗೆ ಬಂದಿದ್ದೆ. ಅದೇ ಹೊತ್ತಿಗೆ ‘ಗುಂಡ್ಯಾನ ಹೆಂಡ್ತಿ? ಧಾರಾವಾಹಿಗಾಗಿ ಆಡಿಷನ್ ಕರೆದಿದ್ದರು. ನಾನು ಕೂಡಾ ಹೋಗಿ ಅಟೆಂಡ್ ಮಾಡಿದೆ. ಅದರಲ್ಲಿ ಪಾಸ್ ಆದ ಕಾರಣದಿಂದ ಗುಂಡ್ಯಾನ್ ಹೆಂಡ್ತಿ ಸೀರಿಯಲ್ಲಿನಲ್ಲಿ ನನಗೆ ಲೀಡ್ ಕ್ಯಾರೆಕ್ಟರ್ ಸಿಕ್ಕಿತು. ಆದರೆ ಅದು ಪಕ್ಕಾ ಹಳ್ಳಿ ಹುಡುಗಿಯ ಪಾತ್ರ ಮತ್ತು ಡೀಗ್ಲಾಮರಸ್ ರೋಲ್ ಆಗಿತ್ತು. ಆ ಪಾತ್ರ ನನಗೆ ಅಪಾರ ಜನಪ್ರಿಯತೆ ಮತ್ತು ನಾನು ನಟಿಸಬಹುದು ಎನ್ನುವ ಕಾನ್ಫಿಡೆನ್ಸ್ ಅನ್ನು ಹೆಚ್ಚು ಮಾಡಿತು.
ನಿಮ್ಮ ಕುಟುಂಬದಲ್ಲಿ ಯಾರಾದರರೂ ಸಿನಿಮಾರಂಗದಲ್ಲಿದ್ದಾರಾ?
ಸಿನಿಮಾರಂಗಕ್ಕೂ ನನ್ನ ಫ್ಯಾಮಿಲಿಗೂ ಎಲ್ಲಿಂದೆಲ್ಲಿಯ ನಂಟೂ ಇಲ್ಲ. ನನ್ನ ಡಾ. ತಂದೆ ಪ್ರಭುದೇವ್ ಬಣಕಾರ್. ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ನನ್ನ ತಾಯಿ ಸುರೇಖಾ ಹೌಸ್ವೈಫ್. ನನ್ನ ತಮ್ಮ ಭರತ್ ಕೂಡಾ ಈಗ ಎಂ.ಬಿ.ಎ. ಮುಗಿಸಿದ್ದಾನೆ. ಹೀಗಾಗಿ ಚಿತ್ರರಂಗ ಅನ್ನೋದು ನನಗೆ ಮತ್ತು ನನ್ನ ಕುಟುಂಬದವರಿಗೆ ತೀರಾ ಹೊಸದು.
ನಟಿಯಾಗ್ತೀನಿ ಅಂದಾಗ ನಿಮ್ಮ ಮನೆಯವರು ಒಪ್ಪಿದರಾ?
ಸಾಮಾನ್ಯವಾಗಿ ಮಕ್ಕಳು ಆಕ್ಟಿಂಗ್ ಫೀಲ್ಡ್ ಆಯ್ಕೆ ಮಾಡಿಕೊಂಡಾಗ ಪೋಷಕರು ಹಿಂದೇಟು ಹಾಕೋದು ಸಹಜ. ಆದರೆ ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ನಾನು ಎಂಬಿಎ ಮುಗಿಸುತ್ತಿದ್ದಂತೇ ಧಾರಾವಾಹಿಯಲ್ಲಿ ನಟಿಸ್ತೀನಿ ಅಂದ ಕೂಡಲೇ ‘ಧಾರಾಳವಾಗಿ ಮಾಡು? ಅಂತಾ ಪ್ರೋತ್ಸಾಹ ನೀಡಿದರು. ನನ್ನ ಲಿಮಿಟೇಷನ್ಸುಗಳ ಬಗ್ಗೆ ಮತ್ತು ನನ್ನ ಬಗ್ಗೆ ನಮ್ಮ ಮನೆಯವರಿಗೆ ಅಪಾರವಾದ ನಂಬಿಕೆ. ಅವರ ನಂಬಿಕೆಯನ್ನು ನಾನಂತೂ ಯಾವತ್ತೂ ದುರುಪಯೋಗ ಮಾಡಿಕೊಳ್ಳುವಂತವಳಲ್ಲ. ನನಗೆ ನನ್ನ ಫ್ಯಾಮಿಲಿಯವರೇ ‘ಇಂತಾ ಪಾತ್ರ ಮಾಡು ಅಂತಾ ಪಾತ್ರ ಮಾಡು? ಅಂತಾ ಟಿಪ್ಸ್ ಕೊಡ್ತಾರೆ. ನಾನು ಓದು ಮುಗಿಸೋ ತನಕ ನಾನು ಕೇಳಿದ್ದೆಲ್ಲವನ್ನೂ ಕೊಡಿಸಿ ಪೊರೆದಿದ್ದಾರೆ. ಈಗ ಕೂಡಾ ನನಗೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದಾರೆ. ಹೀಗಾಗಿ ಮನೆಯವರ ಹಂಡ್ರೆಂಡ್ ಪರ್ಸೆಂಟ್ ಬೆಂಬಲ ನನಗಿದೆ.
ಸಿನಿಮಾರಂಗದ ಕುರಿತಾದ ಸಾಧಕ-ಬಾಧಕಗಳ ಬಗ್ಗೆ ನಿಮಗೆ ಅರಿವಿದೆಯಾ?
ನಾನು ಯಾವುದೇ ಕೆಲಸವನ್ನು ಯೋಚಿಸದೇ ಮಾಡೋದೇ ಇಲ್ಲ. ನಾನೊಬ್ಬರ ಹತ್ತಿರ ಮಾತಾಡುವ ಮುಂಚೆ ಕೂಡಾ ಅವರು ಎಂಥವರು? ನಾನು ಅವರೊಟ್ಟಿಗೆ ಮಾತಾಡಬಹುದಾ? ಎಂಬೆಲ್ಲಾ ಅಂಶಗಳನ್ನು ತಿಳಿದುಕೊಳ್ಳುತ್ತೇನೆ. ಹಾಗೆಯೇ ಸಿನಿಮಾ ಮತ್ತು ಧಾರಾವಾಹಿ ಫೀಲ್ಡ್ ಬಗ್ಗೆ ಕೂಡಾ ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆ. ‘ನಾವು ಹೇಗಿರುತ್ತೇವೋ, ಸಮಾಜ ನಮ್ಮೊಟ್ಟಿಗೆ ಹಾಗೆ ಬೆರೆಯುತ್ತದೆ? ಅನ್ನೋ ಫಾರ್ಮುಲಾ ನನ್ನದು. ನಾನು ನನ್ನ ತನಬಿಟ್ಟುಕೊಡದೆ, ನನ್ನ ಶಿಸ್ತನ್ನು ಕಾಪಾಡಿಕೊಂಡಾಗ ನಮ್ಮೊಟ್ಟಿಗೆ ಕೆಲಸ ಮಾಡುವವರೂ ಅದೇ ರೀತಿ ನಮ್ಮನ್ನು ಗೌರವದಿಂದ ಕಾಣುತ್ತಾರೆ. ನಾನು ಎರಡು ಧಾರಾವಾಹಿ ಮತ್ತು ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಈ ವರೆಗೂ ನನಗೆ ಯಾವ ಕೆಟ್ಟ ಅನುಭವವೂ ಆಗಿಲ್ಲ. ಆಗುವುದೂ ಇಲ್ಲ ಅನ್ನೋದು ನನ್ನ ನಂಬಿಕೆ.
ಬಜ಼ಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಅನುಭವ ಹೇಗಿತ್ತು?
ನಿಜಕ್ಕೂ ನನ್ನ ಅದೆಷ್ಟು ಜನ್ಮದ ಪುಣ್ಯವೋ ಏನೋ? ಧೈರ್ಯಂ ನಂತರ ನನಗೆ ಬಜ಼ಾರ್ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಒದಗಿಬಂತು. ಈ ಚಿತ್ರದ ನಿರ್ದೇಶಕ ಸುನಿ ಸರ್ ದೊಡ್ಡ ಹೆಸರು ಮಾಡಿರುವವರು. ಅವರ ಸಿನಿಮಾದಲ್ಲಿ ಅವಕಾಶ ಪಡೆದು ಅವರು ಮೆಚ್ಚುವಂತೆ ನಟಿಸೋದು ಸವಾಲಿನ ಕೆಲಸ. ಅವರು ಕಲ್ಪಿಸಿಕೊಂಡ ಪಾತ್ರದಲ್ಲಿ ನಟಿಸುವಾಗ ಅವರು ಫ್ರೀಡಂ ಕೊಟ್ಟರು. ಈ ಸಿನಿಮಾದಲ್ಲಿ ನನ್ನದು ಮಿಡಲ್ ಕ್ಲಾಸ್ ಹುಡುಗಿ ರೋಲ್. ಹೆಚ್ಚು ಮೇಕಪ್ ಇಲ್ಲದೆ ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಪ್ರಾಮಿಸಿಂಗ್ ಹೀರೋ ಧನ್ವೀರ್. ಅದ್ಭುತವಾದ ಸಾಹಸ ದೃಶ್ಯಗಳಲ್ಲಿ ಧನ್ವೀರ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಮ್ಮ ದೇಶ ಬಿಟ್ಟು ಹೊರಗೆ ಹೋಗಿ ಶೂಟ್ ಮಾಡಿದ್ದು ನನಗೆ ಮರೆಯಲಾರದ ಅನುಭವ. ನಾನು ಮತ್ತು ಧನ್ವೀರ್ ಥಾಯ್ಲೆಂಡಿನಲ್ಲಿ ರೊಮ್ಯಾಂಟಿಕ್ ಸಾಂಗ್ ನಲ್ಲಿ ಭಾಗವಹಿಸಿದ್ವಿ. ಏಕಾಏಕಿ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸೋದು ಛಾಲೆಂಜಿಂಗ್ ಅನ್ನಿಸಿತು!
ಪರ್ಸನಲಿ ನನಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಇಷ್ಟ. ಈ ಸಿನಿಮಾದಲ್ಲಿ ಪಾರಿವಾಳಗಳಿವೆ, ತಂದೆ-ಮಗಳ ದೃಶ್ಯಗಳು ತುಂಬಾನೇ ಚೆನ್ನಾಗಿವೆ ಹೀಗಾಗಿ ನಾನು ಕಥೆ ಕೇಳುತ್ತಿದ್ದಂತೇ ಈ ಸಿನಿಮಾ ಒಪ್ಪಿಕೊಂಡೆ.
ನಿಮಗೆ ಯಾವ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳೋ ಬಯಕೆ?
ಒಂದು ಸಬ್ಜೆಕ್ಟ್ ಕೇಳುತ್ತಿದ್ದಂತೇ ‘ಅಬ್ಬ? ನನ್ನಿಂದ ಈ ಪಾತ್ರವನ್ನು ನಿಭಾಯಿಸಲು ಸಾಧ್ಯವಿಲ್ಲ? ಅಂತಾ ಒಮ್ಮೆಲೇ ಅನ್ನಿಸಿಬಿಡಬೇಕು. ನಂತರ ನಾನು ಆ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ ನಟಿಸಬೇಕು. ಕುಣಿದು ಕುಪ್ಪಳಿಸಿ, ಶೋ ಕೊಟ್ಟು ಹೋಗೋ ಪಾತ್ರಗಳಿಗಿಂತಾ ಅಂತರಾಳದಿಂದ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರಗಳು ನನ್ನ ಪಾಲಿಗೆ ಸಿಗಬೇಕು ಅನ್ನೋದು ನನ್ನ ಬಯಕೆ.
ನಿಮ್ಮ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ನೀವೇ ಆಂಕರಿಂಗ್ ಮಾಡ್ತೀರಲ್ಲಾ?!
ನಾನು ಈ ಫೀಲ್ಡ್ಗೆ ಬರಲು ಮತ್ತೊಂದು ಬಹುಮುಖ್ಯ ಕಾರಣವೇ ಅದು. ಓದಿನ ಜೊತೆಜೊತೆಗೇ ನಾನು ಸಾಕಷ್ಟು ಸ್ಟೇಜ್ ಪ್ರೋಗ್ರಾಮುಗಳಿಗೆ ಆಂಕರಿಂಗ್ ಮಾಡುತ್ತಿದ್ದೆ. ಹೀಗಾಗಿ ಆರಂಭದಲ್ಲಿ ನನಗೆ ಧಾರಾವಾಹಿ ಕ್ಷೇತ್ರದೊಂದಿಗೆ ನಂಟು ಬೆಳೆಯಲು ಸಹಕಾರಿಯಾಯಿತು.
ಇಷ್ಟು ದಿನ ಸ್ವತಂತ್ರವಾಗಿದ್ದ ನೀವೀಗ ನಟಿಯಾಗಿದ್ದೀರಿ, ಮುಂದೆ ಸ್ಟಾರ್ ಕೂಡಾ ಆಗುವವರು?. ಎಲ್ಲೋ ರೆಕ್ಕೆಮುದುರಿದ ಭಾವ ಕಾಡೋದಿಲ್ಲವಾ?
ನಾನು ಮೊದಲಿನಿಂದಲೂ ಹೆಚ್ಚು ಓಡಾಟ ಮಾಡುತ್ತಿದ್ದವಳಲ್ಲ. ನಾನಾಯಿತು ನನ್ನ ಪಾಡಾಯಿತು ಅಂತಾ ಇದ್ದವಳು. ಜೊತೆಗೆ ಜನರೊಂದಿಗೆ ಸಹಜವಾಗಿ ಬೆರೆಯುತ್ತಾ ಬಂದವಳು. ಹೀಗಾಗಿ ಎಲ್ಲೇ ಹೋದರೂ ಜನ ಗುರುತಿಸಿ ಮಾತಾಡಿಸುತ್ತಾರೆ. ನಾನು ಅವರೊಂದಿಗೆ ಅಷ್ಟೇ ಪ್ರೀತಿಯಿಂದ ಮಾತಾಡುತ್ತೇನೆ. ಜನಪ್ರಿಯತೆಯಿಂದ ಸ್ವತಂತ್ರ ಹಾಳಾಗುತ್ತದೆ ಅನ್ನೋ ಭಾವನೆ ನನ್ನಲ್ಲಿಲ್ಲ?
ಇವು ಅದಿತಿ ಪ್ರಭುದೇವ ಅವರ ಮತುಗಳು. ಅದಿತಿಯ ಮಾತುಗಳಲ್ಲೇ ಅಪಾರವಾದ ಬುದ್ದಿವಂತಿಕೆ ಅಡಗಿರೋದನ್ನು ನೋಡಬಹುದು. ಈಕೆಯ ನಿಖರ ಗುರಿ ಮತ್ತು ಸಾಗುತ್ತಿರುವ ಹಾದಿ ನೋಡಿದರೆ ಚಿತ್ರರಂಗದಲ್ಲಿ ಅದಿತಿ ಎಂಬ ಹುಡುಗಿ ದೊಡ್ಡ ನಟಿಯಾಗಿ ಬೆಳೆದುನಿಲ್ಲೋದರಲ್ಲಿ ಸಂಶಯವಿಲ್ಲ. ದಾವಣೆಗೆರೆಯ ಈ ಬೆಣ್ಣೆಯಂಥಾ ಹುಡುಗಿ ಬಣ್ಣದ ಜಗತ್ತಿನಲ್ಲಿ ದೊಡ್ಡ ಎತ್ತರಕ್ಕೇರಲಿ ಅನ್ನೋದು ನಮ್ಮ ಹಾರೈಕೆ.
#
No Comment! Be the first one.