ಸೂಪರ್ಹಿಟ್ ತೆಲುಗು ಸಿನಿಮಾ ’ಅರ್ಜುನ್ ರೆಡ್ಡಿ’ ತಮಿಳು ರಿಮೇಕ್ ಸುದ್ದಿಯಲ್ಲಿದೆ. ’ವರ್ಮಾ’ ಶೀರ್ಷಿಕೆಯಡಿ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಬಾಲಾ ತಮಿಳಿನಲ್ಲಿ ಚಿತ್ರಿಸಿದ್ದರು. ಫೈನಲ್ ವರ್ಷನ್ ನೋಡಿದ ನಿರ್ಮಾಪಕರಿಗೆ ಅಸಮಾಧಾನವಾಗಿತ್ತು. ಹಾಗಾಗಿ ಚಿತ್ರವನ್ನು ಸಂಪೂರ್ಣವಾಗಿ ಹೊಸದಾಗಿ ಚಿತ್ರಿಸಲು ಅವರು ನಿರ್ಧರಿಸಿ ಹೊಸ ನಿರ್ದೇಶಕರನ್ನಾಗಿ ಗಿರಿಸಾಯ ಅವರನ್ನು ಕರೆತಂದರು. ಅಂದಹಾಗೆ ಇದು ಕಾಲಿವುಡ್ ಸ್ಟಾರ್ ಹೀರೋ ವಿಕ್ರಂ ಪುತ್ರ ಧ್ರುವ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಸಿನಿಮಾ. ಈಗಾಗಲೇ ಅವರಿಗೆ ಜೋಡಿಯಾಗಿ ಮೇಘಾ ಚೌಧರಿ ನಟಿಸಿದ್ದರು. ಹೊಸ ವರ್ಷನ್ನಲ್ಲಿ ನಾಯಕಿಯನ್ನಾಗಿ ಬನಿತಾ ಸಂಧು ಅವರನ್ನು ಆಯ್ಕೆ ಮಾಡಲಾಗಿದೆ. ಚಿತ್ರದ ಶೀರ್ಷಿಕೆ ’ಆದಿತ್ಯಾ ವರ್ಮಾ’ ಎಂದು ಬದಲಾಗಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ತೆರೆಕಂಡಿದ್ದ ’ಅರ್ಜುನ್ ರೆಡ್ಡಿ’ ತೆಲುಗು ಸಿನಿಮಾ ಬ್ಲಾಕ್ಬಸ್ಟರ್ ಎನಿಸಿಕೊಂಡಿತ್ತು. ಈ ಚಿತ್ರದ ಯಶಸ್ಸಿನೊಂದಿಗೆ ನಟ ವಿಜಯ್ ದೇವರಕೊಂಡ ಸ್ಟಾರ್ ಪಟ್ಟಕ್ಕೇರಿದರು. ಇದೀಗ ನಿರ್ದೇಶಕ ವಂಗಾ ಅವರು ತಮ್ಮ ಚಿತ್ರವನ್ನು ’ಕಬೀರ್ ಸಿಂಗ್’ ಶೀರ್ಷಿಕೆಯಡಿ ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಶಾಹಿದ್ ಕಪೂರ್ ಚಿತ್ರದ ಹೀರೋ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಮೊನ್ನೆ ಫೆಬ್ರವರಿ ೧೪ರಂದು ತಮಿಳು ವರ್ಷನ್ ’ವರ್ಮಾ’ ತೆರೆಕಾಣಬೇಕಿತ್ತು. ನಿರ್ಮಾಪಕರಿಗೆ ಸಿನಿಮಾ ಇಷ್ಟವಾಗದ್ದರಿಂದ ಮತ್ತೆ ಚಿತ್ರಿಸಲಾಗುತ್ತಿದೆ. “ಅಂತಿಮ ಪ್ರತಿ ನಮಗೆ ಇಷ್ಟವಾಗಲಿಲ್ಲ. ಹಾಗಾಗಿ ಈ ವರ್ಷನ್ ರಿಲೀಸ್ ಮಾಡದಿರಲು ನಾವು ನಿರ್ಧರಿಸಿದ್ದೇವೆ” ಎಂದು ನಿರ್ಮಾಪಕರು ಹೇಳಿಕೊಂಡರು. “ಕ್ರಿಯಾಶೀಲ ಭಿನ್ನಾಭಿಪ್ರಾಯಗಳಿಂದಾಗಿ ನಾನು ಪ್ರಾಜೆಕ್ಟ್ನಿಂದ ಹೊರನಡೆಯುತ್ತಿದ್ದೇನೆ” ಎಂದು ಬಾಲಾ ಹೇಳಿಕೊಂಡರು