ಕಿರುತೆರೆಯ ಮಟ್ಟಿಗೆ ಹಿಸ್ಟರಿ ಕ್ರಿಯೇಟ್ ಮಾಡಿರುವ ಕನ್ನಡದ ಧಾರಾವಾಹಿ ಅಗ್ನಿ ಸಾಕ್ಷಿ. ಈ ಸೀರಿಯಲ್ಲಿನಲ್ಲಿ ಹೀರೋ ಆಗಿ ನಟಿಸಿದ್ದ ವಿಜಯ್ ಸೂರ್ಯ ಅದಾಗಲೇ ಸಾಕಷ್ಟು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದರೂ ಜನ ಗುರುತಿಸುವ ಮಟ್ಟಿಗೆ ಫೇಮಸ್ಸಾಗಿರಲಿಲ್ಲ. ಕವಿತಾ ಲಂಕೇಶ್ ನಿರ್ದೇಶಿಸಿದ್ದ ಕ್ರೇಜ಼ಿಲೋಕ ಸಿನಿಮಾದಲ್ಲಿ ಹೀರೋ ಆಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಡುಗ ವಿಜಯ್ ಸೂರ್ಯ. ಸ್ಫುರದ್ರೂಪಿ ಯುವಕ ಚಿತ್ರರಂಗದಲ್ಲಿ ನೆಲೆ ನೆಲ್ಲುತ್ತಾನೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ ಕೈ ಹಿಡಿದಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಈ ಸೀರಿಯಲ್ಲಿನ ಜನಪ್ರಿಯತೆ ವಿಜಯ್ ಸೂರ್ಯನನ್ನು ಕಿರುತೆರೆಯ ಸ್ಟಾರನ್ನಾಗಿಸಿತ್ತು. ಹೋದಲ್ಲಿ ಬಂದಲ್ಲಿ ಜನ ಈತನನ್ನು ಸುತ್ತುವರೆಯುತ್ತಿದ್ದರು.
ಕಿರುತೆರೆ ನಟರ ನೆತ್ತಿಮೇಲೆ ಕೆಟ್ಟದ್ದೊಂದು ಶಾಪವಿದೆ. ಅದೇನೆಂದರೆ, ಅವರು ಸೀರಿಯಲ್ಲಿನಲ್ಲಿದ್ದುಕೊಂಡೇ ಸಿನಿಮಾ ಮಾಡಿದರೆ ಅದು ಹೇಳಹೆಸರಿಲ್ಲದಂತಾಗುತ್ತದೆ. ಸ್ಮಾಲ್ ಸ್ಕ್ರೀನ್ ಸ್ಟಾರ್ಗಳನ್ನು ಸಿನಿಮಾಗೆ ಹಾಕಿಕೊಂಡರೆ “ಸೀರಿಯಲ್ಲು ನೋಡೋರೆಲ್ಲಾ ಓಡೋಡಿಬಂದು ಥಿಯೇಟರಿಗೆ ನುಗ್ಗಿಬಿಡುತ್ತಾರೆ ಎನ್ನುವ ತಪ್ಪು ಕಲ್ಪನೆ ನಿರ್ದೇಶಕ ನಿರ್ಮಾಪಕರಲ್ಲಿದೆ. ಈ ಲೆಕ್ಕಾಚಾರ ಸಾಕಷ್ಟು ಸಲ ಹಳ್ಳ ಹಿಡಿದಿದೆ. ಇತ್ತೀಚೆಗೆ ವಿಜಯ್ ಸೂರ್ಯ ನಟನೆಯಲ್ಲಿ ‘ಕದ್ದುಮುಚ್ಚಿ ಎನ್ನುವ ಚಲನಚಿತ್ರವೊಂದು ಬಿಡುಗಡೆಯಾಗಿತ್ತು. ಅದು ಯಾವಾಗ ರಿಲೀಸಾಯ್ತು? ಯಾವಾಗ ಕದ್ದೂ ಮುಚ್ಚಿ ಥೇಟರಿನಿಂದ ಕಾಣೆಯಾಯ್ತು ಅನ್ನೋದೂ ಯಾರಿಗೂ ಗೊತ್ತಾಗಲಿಲ್ಲ.
ಬಹುತೇಕ ಚಾನೆಲ್ಲಿನ ಕ್ರಿಯೇಟೀವ್ ಹೆಡ್ಡುಗಳ ಮುಂದೆ ಹೋಗಿ ಹೊಸದೊಂದು ಸೀರಿಯಲ್ಲಿಗೆ ಕಾನ್ಸೆಪ್ಟು ಹೇಳಲು ಕುಂತವರಿಗೆ ಅವರು ಹೇಳೋದು ‘ಅಗ್ನಿಸಾಕ್ಷಿ ಥರಾ ಯಾವುದಾದರೂ ಕತೆ ಎತ್ತಾಕೊಂಡ್ ಬನ್ನಿ ಅಂತಾ. ಅದರಲ್ಲೂ ಸ್ಟಾರ್ ಸುವರ್ಣ ಟೀವಿಯಲ್ಲಂತೂ ಬಹುತೇಕರು ‘ಅಗ್ನಿಸಾಕ್ಷಿಯ ಜ್ವರದಿಂದ ನರಳುತ್ತಿದ್ದಾರೆ. ಯಾರಾದರೂ ಹೊಸ ಕತೆಯನ್ನು ಬರೆದುಕೊಂಡು ಹೋಗಿ ಅಲ್ಲಿರುವವರ ಮುಂದಕ್ಕಿಟ್ಟರೆ ಅದನ್ನು ಎಡಗೈಲಿ ಎತ್ತಿ ಬಿಸಾಡಿಬಿಡುತ್ತಾರೆ. ಪ್ರತಿಯೊಂದಕ್ಕೂ ಅಲ್ಲಿರುವ ಮಂದಿ ‘ಅಗ್ನಿಸಾಕ್ಷಿಯ ಸೂತ್ರದಲ್ಲೇ ಮಾತು ಆರಂಭಿಸುತ್ತಾರೆ. ಅಗ್ನಿಸಾಕ್ಷಿಯಲ್ಲಿ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದ ವಿಜಯ್ ಸೂರ್ಯನಿಗೆ ದಿನಕ್ಕೆ ಇಪ್ಪತ್ತು ಸಾವಿರ ಸಂಭಾವನೆ ಕೊಡುತ್ತಿದ್ದರಂತೆ. ಇನ್ನೂ ಹದಿನೈದು ಸಾವಿರ ಸೇರಿಸಿ ಮೂವತ್ತೈದು ಕೊಡ್ತೀವಿ ಬಾ ಅಂತಾ ಸ್ಟಾರ್ ಸುವರ್ಣದವರು ಕರೆದೇಟಿಗೆ ವಿಜಯ್ ಸೂರ್ಯ ಇದ್ದ ಅಗ್ನಿಸಾಕ್ಷಿಯನ್ನು ಒದ್ದು ‘ಪ್ರೇಮಲೋಕಕ್ಕೆ ಸೇರಿಕೊಂಡ. ಎಷ್ಟೇ ದುಡ್ಡು ಖರ್ಚು ಮಾಡಿದರೂ ಪ್ರೇಮಲೋಕ ಕಳೆಗಟ್ಟುತ್ತಲೇ ಇಲ್ಲ.