ಅಜನೀಶ್ ಬಗ್ಗೆ ಅಪಸ್ವರ
ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಸಿನಿಮಾಗಳಿಗೆ ತೀರಾ ಹೊಸದೆನ್ನುವಂತಾ ಟ್ಯೂನುಗಳನ್ನು ನೀಡಿ ಕೇಳುಗರ ಕರ್ಣಾನಂದಗೊಳಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅದಾಗಲೇ ಕನ್ನಡದಲ್ಲಿ ಸಾಕಷ್ಟು ಜನ ಮ್ಯೂಸಿಕ್ ಡೈರೆಕ್ಟರುಗಳು ಸೌಂಡು ಮಾಡುತ್ತಿದ್ದಾಗಲೇ ಅದರ ನಡುವಿನಿಂದ ವಿಶೇಷವೆನಿಸುವಂತೆ ಸ್ವರ ಸಂಯೋಜಿಸಿದಾಗ ಎಲ್ಲರೂ `ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾವಂತ ಸಂಗೀತ ನಿರ್ದೇಶಕ ಸಿಕ್ಕ’ ಅಂತಾ ಖುಷಿಪಟ್ಟಿದ್ದರು. ಬಹುಶಃ ಆರಂಭದಲ್ಲೇ ಸಿಕ್ಕ ಈ ಗೆಲುವು, ಹೊಗಳಿಕೆಗಳೇ ಬಹುಶಃ ಅಜನೀಶ್ ಲೋಕನಾಥ್ ತಲೆ ತಿರುಗಿಸಿದಂತೆ ಕಾಣುತ್ತಿದೆ. “ರಕ್ಷಿತ್ ಶೆಟ್ಟಿ ಟೀಮಿನ ಸಿನಿಮಾಗಳಿಗೆ ಕೊಡುವ ಮುತುವರ್ಜಿಯನ್ನು ಅಜನೀಶ್ ಬೇರೆಯವರ ಸಿನಿಮಾಗಳಿಗೆ ನೀಡುತ್ತಿಲ್ಲ” ಅನ್ನೋ ಗಂಭೀರ ಆರೋಪ ಕೇಳಿಬರುತ್ತಿದೆ. “ಒಪ್ಪಿಕೊಂಡ ಸಿನಿಮಾಗಳ ಹಾಡುಗಳ ಟ್ಯೂನುಗಳನ್ನೂ ಲೇಟಾಗಿ ಕೊಡುತ್ತಾರೆ” ಅನ್ನೋದು ಈಗಾಗಲೇ ಕೆಲಸ ಮಾಡಿಸಿಕೊಂಡಿರುವ ಮತ್ತು ಮ್ಯೂಸಿಕ್ಕು ಮಾಡೋ ಕೆಲಸ ಕೊಟ್ಟಿರುವ ಬಹುತೇಕರ ಅನಿಸಿಕೆ. ಇರಲಿ, ಬಹುತೇಕ ಸಂಗೀತ ನಿರ್ದೇಶಕರ ಮೇಲಿರೋದು ಇದೊಂದೇ ಕಂಪ್ಲೇಂಟು. ಸ್ವರ ಸಂಯೋಜನೆಯಂಥಾ ಕ್ರಿಯಾಶೀಲ ಕೆಲಸ ಕೂತೇಟಿಗೇ ಬರಬೇಕೆಂದೇನಿಲ್ಲ. ಕ್ರಿಯೇಟೀವ್ ಕೆಲಸಗಳನ್ನು ಸಮಯದ ವ್ಯಾಪ್ತಿಯಲ್ಲಿ ಹುಟ್ಟಿಸುವುದು ಕಷ್ಟದ ಕೆಲಸ.
ಆದರೆ ಅಜನೀಶ್ ತಾವು ಒಪ್ಪಿಕೊಂಡ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ನೀಡೋದಕ್ಕೂ ವರ್ಷಗಟ್ಟಲೆ ಸತಾಯಿಸುತ್ತಾರಂತೆ. ಕೇಳಿದರೆ, “ನಾನು ಶ್ರೀಮನ್ನಾರಾಯಣ ಸಿನಿಮಾದಲ್ಲಿ ಬ್ಯುಸಿ ಇದ್ದೀನಿ” ಎಂದು ಸಬೂಬು ನೀಡುತ್ತಾರಂತೆ. ಯಾವುದೇ ಸಿನಿಮಾದವರಾಗಲಿ ಇವರ ಕೆಲಸಕ್ಕೆ ಸಂಭಾವನೆ ಕೊಟ್ಟು ಜವಾಬ್ದಾರಿ ವಹಿಸುತ್ತಾರೆ ತಾನೆ? ಹೀಗಿರುವಾಗ ಶ್ರೀಮನ್ನರಾಯಣನಿಗೆ ಮೊದಲ ಆದ್ಯತೆ ನೀಡಿ, ಉಳಿದ ಸಿನಿಮಾಗಳ ಕೆಲಸವನ್ನು ತಿಂಗಳು, ವರ್ಷಗಳ ಕಾಯಿಸೋದು ತಪ್ಪಲ್ಲವಾ? ಶ್ರೀಮನ್ನಾರಾಯಣನ ಕಡೆಯವರು ಮಾತ್ರ ಕಾಸು ಕೊಟ್ಟು ಬೇರೆಯವರೇನು ಕಲ್ಲು ಕೊಡುತ್ತಾರಾ? ಯಾಕೆ ಹೀಗೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ನೀತಿಯನ್ನು ಪಾಲಿಸಬೇಕು?
ಸಿನಿಮಾ ಮೇಲಿನ ನಂಬಿಕೆಯಿಂದ ಎಲ್ಲೆಲ್ಲೋ ಹಣ ಹೊಂದಿಸಿಕೊಂಡು ಬಂದು ಸುರಿದಿರುತ್ತಾರೆ. ಸಿನಿಮಾ ರಿಲೀಸಾಗೋದು ಒಂದೊಂದು ದಿನ ತಡವಾದರೂ ನಿರ್ಮಾಪಕ, ನಿರ್ದೇಶಕರ ಹಾರ್ಟು ಬಾಯಿಗೆ ಬಂದಂತಾಗಿರುತ್ತದೆ. ಹೀಗಿರುವಾಗ ಹಿಡಿದ ಕೆಲಸವನ್ನು ಮುಗಿಸಬೇಕು ಅಥವಾ ರಕ್ಷಿತ್ ಶೆಟ್ಟಿ ಸಿನಿಮಾ ಬಿಟ್ಟು ಬೇರೆಯವರ ಕೆಲಸ ಮುಟ್ಟೋದಿಲ್ಲ ಅಂತಾ ಘೋಷಿಸಿಕೊಳ್ಳಬೇಕು. ಅದುಬಿಟ್ಟು ಹೀಗೆ ನಂಬಿದವರನ್ನು ಸತಾಯಿಸುವುದು ಯಾವ ಥರದ ನ್ಯಾಯ ಅಜನೀಶ್…
No Comment! Be the first one.