ತಲಾ ಅಜಿತ್ ಅವರ ನರ್ಕೊಂಡ ಪಾರ್ವಾಯ್ ಸಿನಿಮಾದ ಚಿತ್ರೀಕರಣ ಬಹಳ ದಿನಗಳಿಂದ ಹೈದರಾಬಾದ್ ನಲ್ಲಿಯೇ ಮುಂದುವರೆದಿದೆ. ಈ ಸಿನಿಮಾವನ್ನು ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದು, ಎಚ್. ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವು ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಪಿಂಕ್ ನ ರಿಮೇಕ್ ಆಗಿದೆ. ಪಿಂಕ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದ ವಯಸ್ಸಾದ ವಕೀಲನ ಪಾತ್ರವನ್ನು ತಲಾ ಅಜಿತ್ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಅಜಿತ್ ಅವರ ಮಾಸ್ ಲುಕ್ ಗೆ ಹೊಂದಿಕೊಳ್ಳುವಂತೆ ಸ್ಕ್ರಿಪ್ಟ್ ನಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆಯಂತೆ.
ಚಿತ್ರದಲ್ಲಿ ಅಜಿತ್ ಗ್ರೇ ಹೇರ್ ಸ್ಟೈಲ್ ಹಾಗೂ ಗಡ್ಡಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಿಕ್ಕಿಯಾಗಿತ್ತು. ಆದರೆ ಇತ್ತೀಚಿಗೆ ಲೀಕ್ ಆದ ಪೋಟೋಗಳಲ್ಲಿ ಅಜಿತ್ ಗಡ್ಡ, ಮೀಸೆಯಿಲ್ಲದೇ ತೀರಾ ಯಂಗ್ ಆಗಿರುವುದು ಕಂಡು ಬಂದಿದೆ. ಮೂಲ ಸಿನಿಮಾದ ಚಿತ್ರಕತೆಯಲ್ಲಿ ಆಗಿರುವ ಪ್ರಮುಖ ಬದಲಾವಣೆ ಇದೇ ಇರಬೇಕು ಎಂಬುದು ಸಿನಿ ಪಂಡಿತರ ಲೆಕ್ಕಾಚಾರ. ಇನ್ನು ನರ್ಕೊಂಡಾ ಪಾರ್ವಾಯ್ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದಲ್ಲಿ ವಿದ್ಯಾಬಾಲನ್, ಶ್ರದ್ಧಾ ಶ್ರೀನಾಥ್, ಆಂಡ್ರಿಯಾ ತರಂಗ್, ಅಭಿರಾಮಿ ವೆಂಕಟಾಚಲಂ, ಅಧಿಕ್ ರವಿಚಂದ್ರನ್, ರಂಗರಾಜ್ ಪಾಂಡೇ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ವರ್ಷ ಆಗಸ್ಟ್ 10ರಂದು ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.