ನೀರಜ್ ಪಾಂಡೆ ಹಾಗೂ ಅಕ್ಷಯ್ ಕುಮಾರ್ ಜೋಡಿಯ ಸ್ಪೆಷಲ್ 26, ಬೇಬಿ, ರುಸ್ತಂ, ಟಾಯ್ಲೆಟ್ ಏಕ್ ಪ್ರೇಮ್ ಕಥಾದಂತಹ ಹಿಟ್ ಸಿನಿಮಾಗಳು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಸದ್ಯ ಇದೇ ಜೋಡಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಡೊಬಾಲ್ ಅವರ ಬಯೋಪಿಕ್ ಸಿನಿಮಾ ಮಾಡಲು ಅಣಿಯಾಗುತ್ತಿದೆ.
ಹೌದು.. ಅಜಿತ್ ಡೊಬಾಲ್ ಅವರ ಜೀವನ ಕಥೆಯನ್ನು ಆಧರಿಸಿ ಈಗಾಗಲೇ ಸ್ಕ್ರೀನ್ ಪ್ಲೇ ರೆಡಿಯಾಗಿದ್ದು, ಅಜಯ್ ದೇವಗನ್ ಅವರ ಚಾಣಕ್ಯ ಚಿತ್ರದ ನಂತರ ನೀರಜ್ ಈ ಯೋಜನೆಯನ್ನು ಆರಂಭಿಸಲಿದ್ದಾರೆ. ಈ ಚಿತ್ರಕ್ಕೆ ಕಿಲಾಡಿ ಅಕ್ಷಯ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸದ್ಯದಲ್ಲೇ ಚಿತ್ರೀಕರಣವೂ ಆರಂಭವಾಗಲಿದೆ. ಕಳೆದ ವರ್ಷ ಅಕ್ಷಯ್ ಕುಮಾರ್ ನಟಿಸಿದ್ದ ಪ್ಯಾಡ್ ಮನ್ ಹಾಗೂ ನೀರಜ್ ಪಾಂಡೆ ನಿರ್ದೇಶನದ ಅಯ್ಯಾರಿ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಿತ್ತು. ಈ ವಿಚಾರದಲ್ಲಿ ಇಬ್ಬರ ನಡುವೆ ಶೀತಲ ಸಮರವಿತ್ತು ಎಂಬ ಗುಸು ಗುಸು ಬಾಲಿವುಡ್ ಗಲ್ಲಿಯಲ್ಲಿತ್ತು. ಆದರೆ ಹೊಸ ಸಿನಿಮಾ ಮಾಡುತ್ತಿರುವ ವಿಚಾರ ಸಾಕಷ್ಟು ಮಂದಿಗೆ ಅಚ್ಚರಿಯನ್ನು ಉಂಟು ಮಾಡಿದೆ.