ಇದೇ ಮೊದಲ ಬಾರಿಗೆ ಆಲಿಯಾ ಭಟ್ ದಕ್ಷಿಣ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್ನಲ್ಲಿ ಅವಕಾಶ ಕಡಿಮೆಯಾದ ಮೇಲೆ ಕೆಲವರು ದಕ್ಷಿಣದ ಕಡೆ ಮುಖ ಮಾಡುವುದುಂಟು. ಆದರೆ ಆಲಿಯಾ ಪರಿಸ್ಥಿತಿ ಹಾಗಿಲ್ಲ. ಅವರ ಕಾಲ್ಶೀಟ್ಗಾಗಿ ಅಲ್ಲಿನ ನಿರ್ಮಾಪಕರು ಕಾಯುತ್ತಿರುವಂತೆಯೇ, ಆಲಿಯಾ ಹತ್ತಿರತ್ತಿರ ಒಂದು ತಿಂಗಳ ಶೂಟಿಂಗ್ಗಾಗಿ ದಕ್ಷಿಣಕ್ಕೆ ನಿಗದಿಯಾಗಿದ್ದಾರೆ.
ಹಾಗಾದರೆ ಬ್ಯುಸಿ ಶೆಡ್ಯೂಲ್ ನಡುವೆಯೇ ಆಲಿಯಾ ದಕ್ಷಿಣಕ್ಕೆ ಬರಲು ಕಾರಣವಾದವರು ಯಾರು?
ಬೇರೆ ಯಾರು ಅಲ್ಲ, ಬಾಹುಬಲಿ ಖ್ಯಾತಿಯ ರಾಜ್ಮೌಳಿ. ತನ್ನ ಸಿನಿಮಾಗಳಿಂದ ತೆಲುಗು ಚಿತ್ರರಂಗವನ್ನೂ ಮೀರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೇರಿದ ರಾಜ್ಮೌಳಿ ಖ್ಯಾತಿ ಆಲಿಯಾಗೂ ಗೊತ್ತಿಲ್ಲದ್ದೇನಲ್ಲ. ರಾಜ್ ಮೌಳಿ ಆಹ್ವಾನ ಬಂದಾಗ ಇಲ್ಲವೆನ್ನಲಾಗದೆ ಆಲಿಯಾ ಪ್ರಾದೇಶಿಕ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿರುವ ಆರ್.ಆರ್.ಆರ್ ಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಆಲಿಯಾ ಭಾಗವಹಿಸುತ್ತಿದ್ದಾರೆ.
ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಜೊತೆಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಆಲಿಯಾಗೆ ಸೀತಾ ಪಾತ್ರವಂತೆ. ರಾಮ್ಚರಣ್ ಪಾತ್ರದ ಜೋಡಿಯಾಗಿ ಆಲಿಯಾ ನಟಿಸುತ್ತಿದ್ದಾರೆ.
ಹಾಗಂತ ಆರ್.ಆರ್.ಆರ್ ಸಿನಿಮಾ ರಾಮಾಯಣದ ಕಥಾನಕವಲ್ಲ. 1900ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ಮತ್ತು ಕೊಮರಂ ಭೀಮ್ ಕಥೆಯನ್ನ ಈ ಚಿತ್ರ ಹೊಂದಿದೆ. ನಡೆದ ಘಟನಾವಳಿಗಳಿಗೇ ಸಿನಿಮೀಯ ರೂಪ ಕೊಟ್ಟು ರಾಜ್ಮೌಳಿ ಆರ್.ಆರ್.ಆರ್ ಮಾಡುತ್ತಿದ್ದಾರೆ. ಹೈದರಾಬಾದ್ನಲ್ಲಿ ಚಿತ್ರೀಕರಣ ಮುಗಿಸಿ ದಿಲ್ಲಿ ಕಡೆ ಪ್ರಯಾಣ ಬೆಳೆಸಿರುವ ರಾಜ್ಮೌಳಿ ತಂಡಕ್ಕೆ ದಿಲ್ಲಿಯಲ್ಲಿ ಸಾಥ್ ನೀಡಲಿದ್ದಾರೆ ಆಲಿಯಾ ಭಟ್. ಶೀಘ್ರದಲ್ಲೇ ಅಜಯ್ ದೇವಗನ್ ಕೂಡಾ ಆರ್.ಆರ್.ಆರ್ ಸಿನಿಮಾದ ಭಾಗವಾಗಲಿರುವುದು ಮತ್ತೊಂದು ಸರ್ ಫ್ರೈಸು.
.