ಗುಣಮಟ್ಟದ ಸಿನಿಮಾ ಬಂದರೆ ಅದನ್ನು ಜನ ಸ್ವೀಕರಿಸದೇ ಇರೋದಿಲ್ಲ ಅನ್ನೋದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಒಂದಷ್ಟು ಸಿನಿಮಾಗಳು ನಿದರ್ಶನವಾಗಿವೆ. ೨೦೧೯ರ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬಂದು ಪ್ರೇಕ್ಷಕರ ಮನ ಗೆದ್ದಿದ್ದ ಅಳಿದುಉಳಿದವರು ಸಿನಿಮಾ ಈಗ ಶತದಿನ ಪೂರೈಸಿದೆ.
ಕಿರುತೆರೆಯ ಯಶಸ್ವೀ ಧಾರಾವಾಹಿಗಳನ್ನು ನಿರ್ಮಿಸಿದ್ದ ಅಶು ಬೆದ್ರ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಅಳಿದು ಉಳಿದವರು. ಈ ಹಿಂದೆ ಕಹಿ ಎನ್ನುವ ಸದಭಿರುಚಿಯ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಅರವಿಂದ ಶಾಸ್ತ್ರಿ ರೂಪಿಸಿದ ಎರಡನೇ ಸಿನಿಮಾ ಅಳಿದು ಉಳಿದವರು. ಟಿ.ಆರ್.ಪಿ. ಪಡೆಯಲು ಟೀವಿ ಚಾನೆಲ್ಲುಗಳು ಏನೆಲ್ಲಾ ಮಾಡುತ್ತವೆ ಅನ್ನೋದರ ಹಿನ್ನೆಲೆಯನ್ನಿಟ್ಟುಕೊಂಡು, ಒಂದು ಕಾರ್ಯಕ್ರಮ, ಅದರ ನಿರೂಪಕನ ಸುತ್ತ ಹೆಣೆಯಲಾದ ಕಥೆ ‘ಅಳಿದು ಉಳಿದವರು ಚಿತ್ರದ್ದಾಗಿತ್ತು. ನಂಬಿಕೆ ಮತ್ತು ಮೂಢ ನಂಬಿಕೆ ಇಲ್ಲಿ ಪ್ರಧಾನ ಪಾತ್ರವನ್ನು ವಹಿಸಿತ್ತು. ಇರುವುದೆಲ್ಲವನ್ನು ಬಿಟ್ಟು ಮತ್ತೊಂದರೆಡೆಗೆ ತುಡಿಯುವುದು, ಕಣ್ಣೆದುರೇ ಕಾಣುವುದನ್ನು ಕಡೆಗಣಿಸಿ ಕಾಣದ್ದನ್ನು ಕಾಣಲು ಕನವರಿಸುವುದು, ಅಗೋಚರ ವಿಚಾರಗಳ ಬಗ್ಗೆ ಅನಗತ್ಯವಾಗಿ ತಲೆಕೆಡಿಸಿಕೊಳ್ಳುವುದು ಮನುಷ್ಯ ಸಹಜ ನಡವಳಿಕೆಗಳು. ದೇವರಿದ್ದಾನಾ? ದೆವ್ವವಿದೆಯಾ? ಅನ್ನೋದು ಯಾವತ್ತಿಗೂ ಉತ್ತರ ಸಿಗದಂಥಾ ಪ್ರಶ್ನೆಗಳು. ಇಂಥಾ ಜನರ ಕುತೂಹಲಗಳು, ಪ್ರಶ್ನೆಗಳಿಗೆ ‘ಕಾರಣ ಹುಡುಕುವ ಕಾರ್ಯಕ್ರಮದ ಮೂಲಕ ನಾಯಕ ಫೇಮಸ್ಸಾಗಿರುತ್ತಾನೆ. ತನ್ನ ಕಾರ್ಯಕ್ರಮದ ೯೯ ಕಂತುಗಳಲ್ಲೂ ದೆವ್ವ ಗಿವ್ವ ಯಾವುದೂ ಇಲ್ಲ ಅಂತಲೇ ನಿರೂಪಿಸಿರುತ್ತಾನೆ. ಆಗ ಎದುರಾಗುತ್ತದೆ ನೋಡಿ ನೂರನೇ ಎಪಿಸೋಡು. ಮಾರಾಟವಾಗದೇ ಉಳಿದುಹೋದ ಮನೆಯಲ್ಲಿ ದೆವ್ವ ಇದೆಯಾ ಇಲ್ಲವಾ? ಇರುವುದಕ್ಕೂ ಇಲ್ಲದೇ ಇರುವುದಕ್ಕೂ ಸಾಕ್ಷಿ ಏನು? ಅನ್ನೋ ಪ್ರಶ್ನೆ ಉದ್ಭವವಾಗುತ್ತದೆ. ಅದಕ್ಕೆ ಕಾರಣ ಹುಡುಕ ಹೊರಟ ಹೀರೋ ಮುಂದೆ ಯಾರೂ ಊಹಿಸಲು ಸಾಧ್ಯವಾಗದ ಸವಾಲುಗಳು ಎದುರಾಗುತ್ತವೆ. ಕಡೆಗೆ ದೆವ್ವದ ಇರುವಿಕೆಗೆ ಕಾರಣ ಸಿಗುತ್ತದಾ? ಅನ್ನೋದು ಚಿತ್ರದ ಅಂತಿಮ ಕುತೂಹಲವಾಗಿತ್ತು.
ಮೊದಲ ಸಿನಿಮಾವಾದರೂ ಅಶು ಬೆದ್ರ ಮಾಗಿದ ನಟನೆ ನೀಡಿದ್ದರು. ಅರವಿಂದ ಶಾಸ್ತ್ರಿ ಕನ್ನಡದ ಮಟ್ಟಿಗೆ ಉತ್ಕೃಷ್ಟ ಸಿನಿಮಾಗಳನ್ನು ನೀಡಬಲ್ಲ ನಿರ್ದೇಶಕ ಅನ್ನೋದು ಎರಡನೇ ಬಾರಿಗೆ ಸಾಬೀತಾಗಿತ್ತು. ಇದೆಲ್ಲದರ ಪ್ರತಿಫಲವೆನ್ನುವಂತೆ ಈಗ ಅಳಿದು ಉಳಿದವರು ಚಿತ್ರ ನೂರು ದಿನಗಳ ಪ್ರದರ್ಶನವನ್ನು ಕಂಡಿದೆ. ಈ ಗೆಲುವು ಚಿತ್ರತಂಡಕ್ಕೆ ಮತ್ತಷ್ಟು ಹೊಸತುಗಳ ಅನ್ವೇಷಣೆಗೆ ಸಹಕಾರಿಯಾಗಿದೆ.
No Comment! Be the first one.