ಇಷ್ಟು ದಿನ ನಿರ್ಮಾಪಕರಾಗಿ ಹೆಸರು ಮಾಡಿದ್ದವರು ಅಶು ಬೆದ್ರ. ನಿರ್ಮಾಪಕರಾಗಿದ್ದವರು ಹೀರೋಗಳಾದಾಗ ‘ದುಡ್ಡಿದೆ ಆದಕ್ಕೆ ಇವೆಲ್ಲಾ ಅನ್ನಿಸೋದು ಸಹಜ. ಅದಕ್ಕೆ ತಕ್ಕಂತೆ ನಿರ್ಮಾಪಕರಾಗಿ ನಂತರ ಹೀರೋ ಆದ ಅನೇಕರು ಎದ್ದುನಿಂತ ನಿದರ್ಶನಗಳು ಕಡಿಮೆ. ಪರಿಸ್ಥಿತಿ ಹೀಗಿರುವಾಗ ಅಶು ಬೆದ್ರ ಅವರ ‘ಅಳಿದು ಉಳಿದವರು ಸಿನಿಮಾ ಬಗ್ಗೆ ಮೊದಲ ಹಂತದಲ್ಲಿ ಕುತೂಹಲ ಮೂಡಿಸಿದ್ದರು ನಿರ್ದೇಶಕ ಅರವಿಂದ ಶಾಸ್ತ್ರಿ. ಅವರ ಮೊದಲ ಸಿನಿಮಾ ‘ಕಹಿ ಆಗಿದ್ದರೂ ಒಳ್ಳೇ ಅನುಭವ ನೀಡಿತ್ತು ಅನ್ನೋದು ಅದಕ್ಕೆ ಕಾರಣ. ಇನ್ನು ಸಿನಿಮಾದ ಪೋಸ್ಟರ್ಗಳು ರಿವೀಲ್ ಆದಾಗ ಕ್ಯೂರಿಯಾಸಿಟಿ ಮತ್ತೂ ಹೆಚ್ಚಿತ್ತು. ನಂತರ ಟೀಸರು, ಟ್ರೇಲರುಗಳೆಲ್ಲಾ ಈ ಸಿನಿಮಾದಲ್ಲಿ ಏನೋ ಇದೆ ಅನ್ನೋದನ್ನು ಕರಾರುವಕ್ಕಾಗಿ ಸಿನಿಮಾಸಕ್ತರ ಮನಸ್ಸಿಗೆ ಧಾಟಿಸಿದ್ದವು. ಈಗ ಸಿನಿಮಾ ತೆರೆಗೆ ಬಂದಿದೆ. ಅಂದುಕೊಂಡಿದ್ದೆಲ್ಲಾ ನಿಜವೂ ಆಗಿದೆ. ‘ಅಳಿದು ಉಳಿದವರು ನಿಜಕ್ಕೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಾ ಸಿನಿಮಾ ಆಗಿ ಹೊರಹೊಮ್ಮಿದೆ.
ಟಿ.ಆರ್.ಪಿ. ಪಡೆಯಲು ಟೀವಿ ಚಾನೆಲ್ಲುಗಳು ಏನೆಲ್ಲಾ ಮಾಡುತ್ತವೆ ಅನ್ನೋದರ ಹಿನ್ನೆಲೆಯನ್ನಿಟ್ಟುಕೊಂಡು, ಒಂದು ಕಾರ್ಯಕ್ರಮ, ಅದರ ನಿರೂಪಕನ ಸುತ್ತ ಹೆಣೆಯಲಾದ ಕಥೆ ‘ಅಳಿದು ಉಳಿದವರು ಚಿತ್ರದಲ್ಲಿದೆ. ನಂಬಿಕೆ ಮತ್ತು ಮೂಢ ನಂಬಿಕೆ ಇಲ್ಲಿ ಪ್ರಧಾನ ಪಾತ್ರವನ್ನು ವಹಿಸಿದೆ.
ಇರುವುದೆಲ್ಲವನ್ನು ಬಿಟ್ಟು ಮತ್ತೊಂದರೆಡೆಗೆ ತುಡಿಯುವುದು, ಕಣ್ಣೆದುರೇ ಕಾಣುವುದನ್ನು ಕಡೆಗಣಿಸಿ ಕಾಣದ್ದನ್ನು ಕಾಣಲು ಕನವರಿಸುವುದು, ಅಗೋಚರ ವಿಚಾರಗಳ ಬಗ್ಗೆ ಅನಗತ್ಯವಾಗಿ ತಲೆಕೆಡಿಸಿಕೊಳ್ಳುವುದು ಮನುಷ್ಯ ಸಹಜ ನಡವಳಿಕೆಗಳು. ದೇವರಿದ್ದಾನಾ? ದೆವ್ವವಿದೆಯಾ? ಅನ್ನೋದು ಯಾವತ್ತಿಗೂ ಉತ್ತರ ಸಿಗದಂಥಾ ಪ್ರಶ್ನೆಗಳು. ಇಂಥಾ ಜನರ ಕುತೂಹಲಗಳು, ಪ್ರಶ್ನೆಗಳಿಗೆ ‘ಕಾರಣ ಹುಡುಕುವ ಕಾರ್ಯಕ್ರಮದ ಮೂಲಕ ನಾಯಕ ಫೇಮಸ್ಸಾಗಿರುತ್ತಾನೆ. ತನ್ನ ಕಾರ್ಯಕ್ರಮದ ೯೯ ಕಂತುಗಳಲ್ಲೂ ದೆವ್ವ ಗಿವ್ವ ಯಾವುದೂ ಇಲ್ಲ ಅಂತಲೇ ನಿರೂಪಿಸಿರುತ್ತಾನೆ. ಆಗ ಎದುರಾಗುತ್ತದೆ ನೋಡಿ ನೂರನೇ ಎಪಿಸೋಡು. ಮಾರಾಟವಾಗದೇ ಉಳಿದುಹೋದ ಮನೆಯಲ್ಲಿ ದೆವ್ವ ಇದೆಯಾ ಇಲ್ಲವಾ? ಇರುವುದಕ್ಕೂ ಇಲ್ಲದೇ ಇರುವುದಕ್ಕೂ ಸಾಕ್ಷಿ ಏನು? ಅನ್ನೋ ಪ್ರಶ್ನೆ ಉದ್ಭವವಾಗುತ್ತದೆ. ಅದಕ್ಕೆ ಕಾರಣ ಹುಡುಕ ಹೊರಟ ಹೀರೋ ಮುಂದೆ ಯಾರೂ ಊಹಿಸಲು ಸಾಧ್ಯವಾಗದ ಸವಾಲುಗಳು ಎದುರಾಗುತ್ತವೆ. ಕಡೆಗೆ ದೆವ್ವದ ಇರುವಿಕೆಗೆ ಕಾರಣ ಸಿಗುತ್ತದಾ? ಅನ್ನೋದು ಚಿತ್ರದ ಅಂತಿಮ ಕುತೂಹಲ.
ನಿರ್ದೇಶಕ ಅರವಿಂದ ಶಾಸ್ತ್ರಿ ಇಂಥಾ ಪ್ರಸ್ತುತ ವಿಚಾರಗಳು ಮತ್ತು ಜನರ ನಂಬಿಕೆಗಳು, ಟೀವಿ ಮೀಡಿಯಾದ ತಂತ್ರಗಾರಿಕೆಗಳನ್ನೇ ತಮ್ಮ ಚಿತ್ರದ ಸರಕಾಗಿಸಿಕೊಂಡು ಅಚ್ಚುಕಟ್ಟಾದ ಸಿನಿಮಾ ರೂಪಿಸಿದ್ದಾರೆ. ಥ್ರಿಲ್ಲರ್ ಕಥಾವಸ್ತುವಿನ ಜೊತೆಗೇ ಪ್ರೀತಿಯನ್ನೂ ಬೆರೆಸಿ, ಸಾಹಸವನ್ನೂ ಸೇರಿಸಿ ಎಲ್ಲರೂ ನೋಡಿ, ಎಂಜಾಯ್ ಮಾಡಬಹುದಾದ ಸಿನಿಮಾವನ್ನಾಗಿಸಿದ್ದಾರೆ. ಕ್ಷಣಕ್ಷಣಕ್ಕೂ ರೋಚಕ ತಿರುವುಗಳನ್ನು ನೀಡಿ ಅಚ್ಛರಿ ಮೂಡಿಸಿದ್ದಾರೆ. ನಿರ್ಮಾಪಕ ಅಶು ಬೆದ್ರ ನಟನಾಗಿಯೂ ಮೊದಲ ಪ್ರಯತ್ನದಲ್ಲೇ ಪೂರ್ತಿ ಗೆದ್ದಿದ್ದಾರೆ. ಹೊಸ ರೀತಿಯ ಪಾತ್ರಗಳಿಗೆ ಹೇಳಿಮಾಡಿಸಿದಂತಾ ನಟ ಎನಿಸಿಕೊಂಡಿದ್ದಾರೆ. ಜೊತೆಗೆ ನಟಿಸಿರುವ ಬಿ. ಸುರೇಶ, ಪವನ್ ಕುಮಾರ್, ದಿನೇಶ್ ಮಂಗಳೂರು, ಧರ್ಮಣ್ಣ, ಅರವಿಂದ್ ರಾವ್, ಸಂಗೀತಾ ಭಟ್ ಮತ್ತು ಪ್ರಮುಖವಾಗಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಅತುಲ್ ಕುಲಕರ್ಣಿ ಸಿನಿಮಾದ ತೂಕ ಹೆಚ್ಚಿಸಿದ್ದಾರೆ. ಈ ಎಲ್ಲದರ ಕಾರಣಕ್ಕೆ ಖಂಡಿತವಾಗಿಯೂ ಎಲ್ಲರೂ ನೋಡಬಹುದಾದ ಸಿನಿಮಾ ಅಳಿದು ಉಳಿದವರು ಎನಿಸಿಕೊಂಡಿದೆ.