ಕಿರಿಕ್ ಪಾರ್ಟಿ ಸಿನಿಮಾ ಬಹಳಷ್ಟು ಮಂದಿಗೆ ಹೊಸ ರೀತಿಯ ಚಾರ್ಮ್ ನೀಡಿದ ಚಿತ್ರ. ಆ ಸಿನಿಮಾದಲ್ಲಿ ನಟಿಸಿದ ಬಹುತೇಕರು ಈಗಾಗಲೇ ಒಂದು ಮಟ್ಟಿನ ಹವಾ ಕ್ರಿಯೇಟ್ ಮಾಡಿದ್ದಾರೆ. ಮಾಡುತ್ತಿದ್ದಾರೆ. ಆ ಪೈಕಿ ಕಿರಿಕ್ ಪಾರ್ಟಿ ಅಂದ ತಕ್ಷಣ ನೆನಪಾಗುವ ಪಾತ್ರ ಸಾನ್ವಿ ಜೋಸೆಫ್ ಅಲಿಯಾಸ್ ರಶ್ಮಿಕಾ ಮಂದಣ್ಣ ಅವರದ್ದು. ಕನ್ನಡದಲ್ಲಿ ನಟಿಸಿದ ಮೊದಲನೇ ಚಿತ್ರವಾದರೂ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಯಿಂದಲೇ ಕೋಟ್ಯಾಂತರ ಅಭಿಮಾನಿ ಬಳಗವನ್ನೇ ಸಂಪಾದಿಸಿಬಿಟ್ಟರು. ಕನ್ನಡ ಮಾತ್ರವಲ್ಲದೇ ತೆಲುಗು, ಚಿತ್ರಗಳಲ್ಲಿಯೂ ಅವಕಾಶ ಗಿಟ್ಟಿಸಿಕೊಂಡು ಅಲ್ಲಿಯೂ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ನಟಿಸುತ್ತಿದ್ದ ಕಿರಿಕ್ ರಶ್ಮಿಕಾ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಬಕ್ಕಿಯಾ ರಾಜ್ ಕಣ್ಣನ್ ನಿರ್ದೇಶನದ ಸದ್ಯಕ್ಕೆ ‘#Kathi19’ಅಂತಾ ಹೆಸರಿಟ್ಟಿರೋ ಸಿನಿಮಾದಲ್ಲಿ ಕಾರ್ತಿಗೆ ರಶ್ಮಿಕಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾದ ಮುಹೂರ್ತವೂ ನೆರವೇರಿದೆ. ಅದಾಗಲೇ ಈ ಬೆಡಗಿಗೆ ಎಷ್ಟರಮಟ್ಟಿಗೆ ಬೇಡಿಕೆಯೆಂದರೆ ತಮಿಳಿನ ಮತ್ತೊಂದು ಚಿತ್ರಕ್ಕೂ ಆಫರ್ ನೀಡಲಾಗಿದೆ.
ಸಕ್ಸಸ್ಫುಲ್ ನಿರ್ದೇಶಕ ಸುಕುಮಾರ್ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಶನ್ನಲ್ಲಿ ಬರ್ತಿರೋ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತ ಘೋಷಣೆ ಮಾಡಿದೆ. ಟ್ವಿಟರ್ ಮೂಲಕ ರಶ್ಮಿಕಾ ಈ ವಿಷಯ ಹಂಚಿಕೊಂಡಿದ್ದು ಸಖತ್ excite ಆಗಿರೋದಾಗಿ ಹೇಳಿಕೊಂಡಿದ್ದಾರೆ. ಸದ್ಯ ಚಿತ್ರಕ್ಕೆ #AA20 ಅಂತ ಹೆಸರಿಡಲಾಗಿದೆ. ಇವತ್ತು ಅಲ್ಲು ಅರ್ಜುನ್ ಹುಟ್ಟುಹಬ್ಬದ ಖುಷಿಯಲ್ಲಿ ಅಲ್ಲು ಅರ್ಜುನ್ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರದ ವಿವರಗಳನ್ನ ಚಿತ್ರತಂಡ ತಿಳಿಸಿದೆ. ಈ ಚಿತ್ರ ರೊಮ್ಯಾಂಟಿಕ್ ಆ್ಯಕ್ಷನ್ ಡ್ರಾಮಾ ಆಗಿರಲಿದ್ದು ಸ್ಯಾಂಡಲ್ವುಡ್ ಮಾಫಿಯಾ ಸುತ್ತ ಕಥೆ ಇರಲಿದೆಯಂತೆ.
ಸ್ಯಾಂಡಲ್ವುಡ್ನಿಂದ ಟಾಲಿವುಡ್, ಟಾಲಿವುಡ್ನಿಂದ ಕಾಲಿವುಡ್ ಹೀಗೆ ಬಹುಭಾಷಾ ತಾರೆಯಾಗ್ತಿರೋ ಕನ್ನಡತಿ ಮುಂದೆ ಬಾಲಿವುಡ್ಗೆ ಕಾಲಿಡ್ತೀರಾ ಅನ್ನೋ ಪ್ರಶ್ನೆ ಅದಾಗಲೇ ರಶ್ಮಿಕಾಗೆ ಅವರ ಫ್ಯಾನ್ಸ್ ಕೇಳ್ತಿದ್ದಾರೆ. ಇನ್ನೂ ಕಾಲಿವುಡ್ಗೆ ಬರ್ತೀನಿ ಬರ್ತೀನಿ ಅಂತಿದ್ದ ರಶ್ಮಿಕಾ ನೋಡೋನೋಡ್ತಿದ್ದಂಗೆ 2019ರ ಶುರುವಿನಲ್ಲೇ 2 ತಮಿಳು ಸಿನಿಮಾಗಳಿಗೆ ಸ್ಟಾರ್ ಹೀರೋಗಳಿಗೆ ಹೀರೋಯಿನ್ ಆಗಿದ್ದಾರೆ. ಕನ್ನಡದ ನಟಿಯೊಬ್ಬಳು ತನ್ನ ನಟನೆಯ ಮೂಲಕ ಬಹುಭಾಷೆಗಳಲ್ಲಿ ಮಿಂಚುತ್ತಿರುವುದು ಕನ್ನಡಿಗರ ಖುಷಿ ಪಡುವ ಸಂಗತಿಯಲ್ಲದೇ ಮತ್ತೇನು…
No Comment! Be the first one.