ಖಡಕ್ ಪೊಲೀಸ್ ಅಧಿಕಾರಿಗಳ ಕಥೆ ಸಿನಿಮಾವಾದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿಯೇ ಸಾಕಷ್ಟಿದೆ. ಇದೀಗ ಕಣ್ಣೆದುರೇ ಕಾರ್ಯ ನಿರ್ವಹಿಸುತ್ತಿರುವ, ಸಾರ್ವಜನಿಕರ ಕಣ್ಣಲ್ಲಿ ಹೀರೋಗಳಾಗಿ ನೆಲೆಯಾಗಿರುವ ಒಂದಷ್ಟು ಅಧಿಕಾರಿಗಳತ್ತ ಚಿತ್ರರಂಗದ ಮಂದಿಯ ಕಣ್ಣು ನೆಟ್ಟಿದೆ. ಅತ್ತ ರವಿ ಚನ್ನಣ್ಣನವರ್ ಜೀವನಗಾಥೆ ಚಿತ್ರ ರೂಪ ಪಡೆಯೋ ತಯಾರಿಯಲ್ಲಿರೋವಾಗಲೇ, ಇದೀಗ ಸಿಸಿಬಿಗೆ ಹೆಚ್ಚುವರಿ ಆಯುಕ್ತಾರಾಗಿ ಅಬ್ಬರಿಸುತ್ತಿರುವ ಅಲೋಕ್ ಕುಮಾರ್ ಬಗೆಗೂ ಒಂದು ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹಬ್ಬಿಕೊಂಡಿದೆ.
ಪೊಲೀಸ್ ಅಧಿಕಾರಿಯಾಗಿ ಪ್ರತೀ ಹಂತದಲ್ಲಿಯೂ ಜನಸ್ನೇಹಿಯಾಗಿಯೇ ಗುರಿತಿಸಿಕೊಂಡು ಬಂದವರು ಅಲೋಕ್ ಕುಮಾರ್. ಯಾವುದೇ ವಿಭಾಗಕ್ಕೆ ಹೋದರೂ ತಮ್ಮ ಕಾರ್ಯ ಕ್ಷೇತ್ರದಲ್ಲಿ ಯಾವುದೇ ದುಷ್ಟ ದಂಧೆ ನಡೆಯದಂತೆ ತಡೆಯುವುದು ಅಲೋಕ್ ಕುಮಾರ್ ಅವರ ಕಾರ್ಯ ವೈಖರಿ. ಈ ಹಿಂದೆ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅವಧಿಯಲ್ಲಿ ಅಲೋಕ್ ಕುಮಾರ್ ಪಾತಕ ಲೋಕವೂ ಸೇರಿದಂತೆ ಎಲ್ಲ ದಂಧೆ, ಮಾಫಿಯಾಗಳ ಸದ್ದಡಗಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು. ಇಂಥಾ ಕ್ರಮಗಳಿಂದಾಗಿಯೇ ಅಲೋಕ್ ಕುಮಾರ್ ಹೆಸರು ಕೇಳಿದರೇನೇ ಪಾತಕಿಗಳ ಅಳ್ಳೆ ಅದುರುತ್ತದೆ. ದುಷ್ಟ ದಂಧೆಗಳ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಇಂಥಾ ಖಡಕ್ ಅಧಿಕಾರಿ ಇದೀಗ ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಕ್ಷಣದಿಂದಲೇ ಅಖಾಡಕ್ಕಿಳಿದು ಬಿಟ್ಟಿದ್ದಾರೆ.
ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ದಿನದೊಪ್ಪತ್ತಿನಲ್ಲಿಯೇ ಪಾತಕಿಗಳನ್ನು ಅಟ್ಟಾಡಿಸಿದ್ದಾರೆ. ಸಿಲಿಕಾನ್ ಸಿಟಿಯ ಸಂದಿಗೊಂದಿಗಳನ್ನೂ ಆವರಿಸಿಕೊಂಡಿರೋ ಒಂದೊಂದೇ ಮಾಫಿಯಾ ಬುಡಕ್ಕೆ ಬಿಸಿ ನೀರು ಕಾಯಿಸಲಾರಂಭಿಸಿದ್ದಾರೆ. ಇವರ ಆಗಮನದ ಮೂಲಕ ಸಿಸಿಬಿಗೆ ಹೊಸಾ ಬಲ ಬಂದಂತಾಗಿದೆ. ಒಟ್ಟಾರೆ ಅಪರಾಧ ಪ್ರಕರಣಗಳನ್ನು ತಹಬಂದಿಗೆ ತರುವಲ್ಲಿ ಪ್ರಧಾನ ಪಾತ್ರ ವಹಿಸುವ ಸಿಸಿಬಿ ಈಗ ಅಲೋಕ್ ಕುಮಾರ್ ಅವರ ಸಾರಥ್ಯದಲ್ಲಿ ಮತ್ತೆ ನಿಗಿ ನಿಗಿಸುವ ಉತ್ಸಾಹದೊಂದಿಗೆ ಅಖಾಡಕ್ಕಿಳಿದಿದೆ.
ಒಂದರ್ಥದಲ್ಲಿ ವೃತ್ತಿ ಜೀವನದುದ್ದಕ್ಕೂ ರಿಯಲ್ ಸಿಂಗಂ ಆಗಿಯೇ ಕಾರ್ಯ ನಿರ್ವಹಿಸುತ್ತಾ ಬಂದಿರುವವರು ಅಲೋಕ್ ಕುಮಾರ್. ಬೆಂಗಳೂರೆಂಬುದು ನಾನಾ ದಂಧೆಗಳ ದಾವಾ ನಲವಾಗಿ, ಬೇರೆ ಬೇರೆ ರಾಜ್ಯಗಳ ಪಾತಕಿಗಳಿಗೂ ಅಡಗುದಾಣವಾಗಿ ಬದಲಾದ ಆತಂಕ ಸಾರ್ವಜನಿಕರಲ್ಲಿತ್ತು. ಸರಗಳ್ಳತನ, ದರೋಡೆ, ಪುಢಾರಿಗಳ ಪುಂಡಾಟದಿಂದ ಇಲ್ಲಿನ ಜನ ರೋಸತ್ತಿದ್ದರು. ಇಂಥವರೆಲ್ಲ ಅಲೋಕ್ ಕುಮಾರ್ ಅವರ ನಿಷ್ಠುರ ಕಾರ್ಯ ವೈಖರಿ ಕಂಡು ಮೆಚ್ಚಿಕೊಂಡಿದ್ದಾರೆ. ಅಲೋಕ್ ಜನ ಸಾಮಾನ್ಯರ ಕಣ್ಣಿನಲ್ಲಿಯೂ ಹೀರೋ ಆಗಿದ್ದಾರೆ. ಇಂಥಾ ದಕ್ಷ ಅಧಿಕಾರಿಯ ಬಗೆಗೊಂದು ಮಾಸ್ ಸಿನಿಮಾ ಮಾಡೋ ದೊಡ್ಡ ಮಟ್ಟದ ತಯಾರಿಯೊಂದು ಈಗ ನಡೆಯುತ್ತಿದೆ.
ಈ ಚಿತ್ರವನ್ನು ಖ್ಯಾತ ನಿರ್ಮಾಪಕರೊಬ್ಬರು ಬಹಳಷ್ಟು ಕನಸಿಟ್ಟುಕೊಂಡು ನಿರ್ಮಾಣ ಮಾಡಲಿದ್ದಾರೆ. ಇದರ ನಿರ್ದೇಶಕರ್ಯಾರು, ಅಲೋಕ್ ಕುಮಾರ್ ಅವರ ಪಾತ್ರಕ್ಕೆ ಜೀವ ತುಂಬೋ ನಟನ್ಯಾರು ಎಂಬೆಲ್ಲ ವಿಚಾರಗಳು ಶೀಘ್ರದಲ್ಲಿಯೇ ಹೊರ ಬೀಳಲಿವೆ.
#
No Comment! Be the first one.