ಸಿನಿಮಾ ಸ್ಟಾರುಗಳು ಒಬ್ಬರ ನಂತರ ಒಬ್ಬರನ್ನು ಮದುವೆಯಾಗೋದು ಮತ್ತೆ ಬಿಟ್ಟು ನಡೆಯೋದು ಹೊಸದೇನೂ ಅಲ್ಲ. ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿ ಅಮಲಾ ಪೌಲ್. ಇತ್ತೀಚೆಗೆ ಆಡೈ ಎನ್ನುವ ಸಿನಿಮಾದ ಪಾತ್ರಕ್ಕೆ ಅರೆನಗ್ನವಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಳು. ಕನ್ನಡದಲ್ಲಿ ಕಿಚ್ಚಾ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಳು.
ತಮಿಳಿನ ಮೈನಾ ಸಿನಿಮಾದ ಮೂಲಕ ಜಗತ್ತಿಗೇ ಗೊತ್ತಾದ ಈಕೆ ತನ್ನ ದಿಢೀರ್ ನಿರ್ಧಾರಗಳಿಂದ ಅಗಾಗ ಸುದ್ದಿಯಾಗುತ್ತಿರುತ್ತಾಳೆ. ಸಿನಿಮಾಗಳಲ್ಲಿ ಸಾಕೆನ್ನುವಷ್ಟು ಅವಕಾಶಗಳಿದ್ದಾಗಲೇ ನಿರ್ದೇಶಕ ಎ.ಎಲ್. ವಿಜಯ್ನನ್ನು ಪ್ರೀತಿಸಿ ಮದುವೆಯಾದಳು. ಅದಾಗಿ ಎರಡೇ ವರ್ಷಕ್ಕೆ ವಿಚ್ಛೇದನವೂ ಆಯ್ತು. ಕಳೆದ ವರ್ಷ ವಿಜಯ್ ಮನೆಯವರು ನೋಡಿದ ವೈದ್ಯೆಯನ್ನು ಮದುವೆಯಾಗಿ ಮತ್ತೊಂದು ಸಂಸಾರ ಶುರುಮಾಡಿಕೊಂಡ. ಮಗಳು ದೊಡ್ಡ ನಟಿ ಅನ್ನಿಸಿಕೊಂಡರೂ ಆಕೆಯ ಲೈಫು ಸರಿಹೋಗಲಿಲ್ಲ ಅನ್ನೋದು ಆಕೆಯ ತಂದೆ ಪಾಲ್ ವರ್ಗೀಸ್ ಕೊರಗಾಗಿತ್ತು. ಇದರೊಂದಿಗೆ ಕ್ಯಾನ್ಸರ್ ರೋಗ ಕೂಡಾ ಕಾಟಕೊಟ್ಟಿ ಜನವರಿ ೨೨ರಂದು ತೀರಿಕೊಂಡಿದ್ದರು.
ಅಪ್ಪ ತೀರಿಕೊಂಡು ಎರಡು ತಿಂಗಳಿಗೆ ಸರಿಯಾಗಿ ಅಮಲಾ ಪೌಲ್ ಮತ್ತೊಂದು ಮದುವೆಯಾಗಿದ್ದಾಳೆ ಅನ್ನೋ ಸುದ್ದಿ ಬಂದಿದೆ. ಬಾಲಿವುಡ್ ಸಿಂಗರ್ ಭವೀಂದರ್ ಸಿಂಗ್ ಅಮಲಾ ಜೊತೆಗಿನ ಮದುವೆ ಫೋಟೋಗಳನ್ನು ತನ್ನ ಆನ್ ಲೈನ್ ಪೇಜುಗಳಲ್ಲಿ ಟ್ಯಾಗ್ ಮಾಡಿದ್ದ. ಅದಾಗಿ ಕೆಲವೇ ಹೊತ್ತಿನಲ್ಲಿ ಆ ಫೋಟೋಗಳನ್ನು ತಾನೇ ಡಿಲೀಟೂ ಮಾಡಿದ್ದ. ಇಡೀ ಜಗತ್ತು ಕೊರೋನಾ ಭಯದಿಂದ ಕಂಗಾಲಾಗಿರುವಾಗ ಇಂಥ ಸಂಭ್ರಮದ ಫೋಟೋಗಳನ್ನು ಹಾಕಬಾರದು ಅನ್ನೋ ಕಾರಣಕ್ಕೆ ಭವೀಂದರ್ ಫೋಟೋ ಡಿಲೀಟ್ ಮಾಡಿದ್ದಾನೆ ಅನ್ನೋ ಸುದ್ದಿ ಆರಂಭದಲ್ಲಿ ಕೇಳಿಬಂತು. ಅದರ ಬೆನ್ನಿಗೇ ಮತ್ತೊಂದು ಸುದ್ದಿಯೂ ಬಂದಿದೆ. ಅದೇನೆಂದರೆ, “ಅಮಲಾ ಮತ್ತು ಭವೀಂದರ್ ಲಿವಿನ್ ರಿಲೇಷನ್ನಿನಲ್ಲಿದ್ದರು. ಇಬ್ಬರ ನಡುವೆ ಏನೋ ಕಿತ್ತಾಟವಾಗಿದೆ. ಎಲ್ಲಿ ಅಮಲಾ ತನ್ನನ್ನೂ ಬಿಟ್ಟು ಹೋಗುತ್ತಾಳೋ ಅನ್ನೋ ಕಾರಣಕ್ಕೆ ಭವಿಂದರ್ ಈ ಫೋಟೋಗಳನ್ನು ಲೀಕ್ ಮಾಡಿದ್ದ. ಈಗ ಇಬ್ಬರ ನಡುವೆ ಏನೋ ರಾಜಿ ಸಂಧಾನಗಳು ಏರ್ಪಟ್ಟಿವೆ. ಈ ಕಾರಣಕ್ಕೆ ಫೋಟೋಗಳನ್ನು ಡಿಲೀಟ್ ಮಾಡಿದ್ದಾನೆ” ಅನ್ನೋದು.
ನಿಜಕ್ಕೂ ಏನು ನಡೆದಿದೆ ಅನ್ನೋದು ಸ್ವತಃ ಅಮಲಾ ಬಾಯಿ ಬಿಟ್ಟರೆ ಮಾತ್ರ ಗೊತ್ತಾಗಲಿದೆ. ಆದರೆ ಆಕೆ ಈ ವರೆಗೂ ಎಲ್ಲೂ ಅಧಿಕೃತವಾಗಿ ತನ್ನ ಎರಡನೇ ಮದುವೆ ಬಗ್ಗೆ ಮಾತಾಡಿಲ್ಲ.