ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಈಗ ಅಮರ್ ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿಯೇ ಕೊಯಂಬತ್ತೂರಿಗೆ ಚಿತ್ರ ತಂಡದೊಂದಿಗೆ ತೆರಳಿದ್ದ ಅಭಿಷೇಕ್ ಅಲ್ಲಿ ಬಿಡುವೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು ಮಂಗಳೂರಿಗೆ ಬಂದಿಳಿದು ಚಿತ್ರೀಕರಣ ಪೂರೈಸಿಕೊಂಡಿದ್ದಾರೆ.
ನಾಗಶೇಖರ್ ಪ್ಲಾನು ಮಾಡಿಕೊಂಡಿದ್ದರ ಪ್ರಕಾರವಾಗಿಯೇ ಕೊಯಂಬತ್ತೂರಿನಲ್ಲಿ ಅಷ್ಟೂ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಮಂಗಳೂರಿನ ಸುಂದರ ಲೊಕೇಷನ್ನುಗಳಲ್ಲಿ ಅಭಿಷೇಕ್ ಮತ್ತು ನಾಯಕಿ ತಾನ್ಯಾ ಹೋಪೆ ಕಾಂಬಿನೇಷನ್ನಿನ ರೊಮ್ಯಾಂಟಿಕ್ ದೃಷ್ಯಾವಳಿಗಳನ್ನು ಸೆರೆ ಹಿಡಿಯಲು ಯೋಜನೆ ಪೂರೈಸಿದ್ದಾರೆ.
ಆದರೆ ಇದೆಲ್ಲದಕ್ಕಿಂತಲೂ ವಿಶೇಷವಾದ ಇನ್ನೊಂದು ಸಂಗತಿ ಇದೆ. ಈ ಚಿತ್ರ ಬೈಕ್ ರೇಸಿಂಗ್ ಅನ್ನೂ ಪ್ರಧಾನವಾಗಿಜೊಟ್ಟುಕೊಂಡಿದೆ ಎಂಬ ವಿಚಾರ ಗೊತ್ತೇ ಇದೆ. ಇಡೀ ಚಿತ್ರ ನೈಜವಾಗಿ ಮೂಡಿ ಬರ ಬೇಕೆಂಬ ಉದ್ದೇಶದಿಂದ ನಾಗಶೇಖರ್ ಹೊಸಾ ಸಾಹಸ ಮಾಡಿದ್ದಾರೆ. ಅದರನ್ವಯ ಈ ಚಿತ್ರದಲ್ಲಿ ಐವತ್ತು ಮಂದಿ ರಿಯಲ್ ಬೈಕ್ ರೇಸರ್ಸ್ ಅಭಿನಯಿಸಿದ್ದಾರಂತೆ!
ಅಭಿಷೇಕ್ ಪಾಲಿಗಿದು ಮೊದಲ ಚಿತ್ರ. ಆದರೆ ಅದು ಗೊತ್ತೇ ಆಗದಂತೆ ನಟಿಸುತ್ತಾ ಬಿಡುವಿಲ್ಲದಂಥಾ ಚಿತ್ರೀಕರಣದಲ್ಲಿ ಉತ್ಸಾಹದಿಂದಲೇ ಭಾಗಿಯಾಗುತ್ತಿರೋ ಅಭಿಷೇಕ್ ಬಗ್ಗೆ ನಿರ್ದೇಶಕ ನಾಗಶೇಖರ್ ಕೂಡಾ ಖುಷಿಗೊಂಡಿದ್ದಾರೆ. ಇದೀಗ ಮಂಗಳೂರಿನಲ್ಲಿ ಬೀಡು ಬಿಟ್ಟಿರುವ ಚಿತ್ರ ತಂಡ ಅಲ್ಲಿಯೂ ಟೈಟ್ ಶೆಡ್ಯೂಲಿನ ಮೂಲಕ ಅಖಾಡಕ್ಕಿಳಿದಿದೆ.
ತಮ್ಮ ಮೊದಲ ಚಿತ್ರ ಅಮರ್ ಬಗ್ಗೆ ಅಭಿ ನಿಜಕ್ಕೂ ಉತ್ಸುಕರಾಗಿದ್ದಾರೆ. ಚಿತ್ರೀಕರಣದ ಪ್ರತೀ ವಿಚಾರಗಳನ್ನೂ ಕೂಡಾ ಅವರು ಕಾಲ ಕಾಲಕ್ಕೆ ಸರಿಯಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ನಾಯಕಿ ತಾನ್ಯಾ ಹೋಪೆ ಜೊತೆಗಿನ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದಿರೋದಾಗಿ ಅಭಿ ಖುಷಿಯಿಂದಲೇ ಹೇಳಿಕೊಂಡಿದ್ದಾರೆ!
#
No Comment! Be the first one.