ಅಭಿಷೇಕ್ ನಟನೆಯ ಅಮರ್ ಚಿತ್ರದ ಬಗ್ಗೆ ನಿರ್ದೇಶ ನಾಗಶೇಖರ್ ದಿನಕ್ಕೊಂದೊಂದು ಹೊಸಾ ಸುದ್ದಿ ಕೊಡಲಾರಂಭಿಸಿದ್ದಾರೆ. ನಿರೂಪ್ ಭಂಡಾರಿ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿಯ ಹಿಂದೆಯೇ ರಚಿತಾ ರಾಮ್ ಕೂಡಾ ಅಮರ್ಗೆ ಜೊತೆಯಾಗಲಿರೋ ವಿಚಾರ ಹೊರ ಬಿದ್ದಿದೆ!
ಹಾಗಂತ ರಚಿತಾ ರಾಮ್ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಅಂದುಕೊಳ್ಳುವಂತಿಲ್ಲ. ಆಕೆ ಈ ಚಿತ್ರದ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಪೆಷಲ್ ಸಾಂಗ್ ಒಂದಕ್ಕೆ ರಚಿತಾ ಅಭಿಷೇಕ್ ಜೊತೆ ಕುಣಿಯಲಿದ್ದಾರೆ. ಈ ಹಾಡಿನ ತುಂಬಾ ಅವರು ಇರಲಿದ್ದಾರೆಂಬುದನ್ನು ನಾಗಶೇಖರ್ ಖಚಿತಪಡಿಸಿದ್ದಾರೆ.
ಇಂದು ಮೈಸೂರಿನಲ್ಲಿ ದಿನಪೂರ್ತಿ ಶೂಟಿಂಗ್ ನಡೆಸಲು ನಿರ್ದೇಶಕ ನಾಗಶೇಖರ್ ಯೋಜನೆ ಹಾಕಿಕೊಂಡಿದ್ದಾರೆ. ಮೊದಲು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ. ಅದರ ಜೊತೆ ಜೊತೆಗೇ ರಚಿತಾ ಕುಣಿಯಲಿರೋ ವಿಶೇಷವಾದ ಹಾಡಿನ ಚಿತ್ರೀಕರಣವೂ ನಡೆಯಲಿದೆಯಂತೆ.
ರಚಿತಾ ರಾಮ್ ಇದೀಗ ಬಹು ಕಾಲದ ನಂತರ ಭರ್ಜರಿಯಾದೊಂದು ಗೆಲುವು ಸಿಕ್ಕ ಖುಷಿಯಲ್ಲಿದ್ದಾರೆ. ಅವರು ನೀನಾಸಂ ಸತೀಶ್ ಜೊತೆ ನಟಿಸಿರುವ ಅಯೋಗ್ಯ ಚಿತ್ರ ಹಿಟ್ ಆಗಿದೆ. ಆ ಚಿತ್ರ ಯಶಸ್ವಿಯಾಗಿ ನಾಲಕ್ಕನೇ ವಾರದತ್ತ ದಾಪುಗಾಲಿಡುತ್ತಿದೆ. ರಚಿತಾ ನಟಿಸಿರೋ ನಿಖಿಲ್ ಜೊತೆಗಿನ ಸೀತಾರಾಮ ಕಲ್ಯಾಣ ಚಿತ್ರವಂತೂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಆ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿರೋ ರಚಿತಾ ಅಮರ್ ಜೊತೆಗೆ ಅದೇ ಜೋಶ್ನಿಂದ ಹೆಜ್ಜೆ ಹಾಕಲಿದ್ದಾರೆ.
#
No Comment! Be the first one.