ತನಗೆ ಸಂಬಂಧವೇ ಇರದ ಜೀವದ ಉಳಿವಿಗಾಗಿ ತನ್ನದಲ್ಲದ ತಪ್ಪನ್ನು ಮೈಮೇಲೆಳೆದುಕೊಳ್ಳುವ ಹುಡುಗ. ಪ್ರಪಾತಕ್ಕೆ ಬಿದ್ದವನನ್ನು ಜೀವದ ಹಂಗು ತೊರೆದು ಕಾಪಾಡುವ, ಪರಿಸರ ರಕ್ಷಣೆಗೆ ಪಣ ತೊಟ್ಟು ನಿಲ್ಲುವ ಹೃದಯ ವೈಶಾಲ್ಯತೆಯ ಗುಣ ಹೊಂದಿರುವ ಕಲಿಯುಗದ ಮರಿ ಕರ್ಣನಂಥಾ ಅದೇ ಹುಡುಗ ದುಡ್ಡಿಗಾಗಿ ಏನು ಬೇಕಾದರೂ ಮಾಡಲು ಹೇಸದ ವ್ಯಕ್ತಿತ್ವದವನು. ಅಪ್ಪನ ಅಪಾರ ಶ್ರೀಮಂತಿಕೆಯ ನಡುವೆಯೂ ಮೆಚ್ಚಿದ ಹುಡುಗನಿಗಾಗಿ ಹಂಬಲಿಸುವ, ಪ್ರೀತಿಯನ್ನೇ ಜಗವೆಂದುಕೊಂಡ ಹುಡುಗಿ. ಹಣದ ವ್ಯಾಮೋಹಕ್ಕೆಬಿದ್ದು ನಂಬಿದವಳಿಗೆ ಕೈ ಕೊಡುವ ಹೀರೋ… ನಾಯಕನಟನ ವ್ಯತಿರಿಕ್ತ ಮನಸ್ಥಿತಿಯನ್ನು ತೆರೆದಿಡುವ ಎಳೆ ಮೊದಲ ಭಾಗದಲ್ಲಿ ಆರಂಭವಾಗುತ್ತದೆ. `ಹೀಗ್ಯಾಕೆ ಮಾಡಿಬಿಟ್ಟ’ ಅನ್ನೋ ಪ್ರಶ್ನೆಯ ಜೊತೆಗೇ ನಿರೀಕ್ಷಿತ ಉತ್ತರ ದ್ವಿತೀಯ ಭಾಗದಲ್ಲಿ ತೆರೆದುಕೊಳ್ಳುತ್ತದೆ. ಇದು ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ `ಅಮರ್’ ಪ್ರಧಾನ ಅಂಶ.

ಅಜಾನುಬಾಹು ಹೀರೋ, ಮುದ್ದಾದ ಹುಡುಗಿ, ಅದ್ಭುತ ಲೊಕೇಷನ್ನುಗಳು, ಮೈಮನಸ್ಸನ್ನು ಒದ್ದೆಯಾಗಿಸುವ ಮಳೆ, ಚೆಂದದ ಹಾಡುಗಳು ಎಲ್ಲವೂ ಇರುವ ಸಿನಿಮಾದಲ್ಲಿ ಬೇಕಾದ ಅಂಶಗಳೇ ಇಲ್ಲದಂತಾಗಿದೆ. ಯಾರನ್ನೋ ಮನಸ್ಸಿನಲ್ಲಿಟ್ಟುಕೊಂಡು ಬರೆದ ಕತೆಗೆ ಇನ್ಯಾರನ್ನೋ ತಂದು ನಿಲ್ಲಿಸಿ ದೃಶ್ಯ ಕಟ್ಟಿದರೆ ಏನೆಲ್ಲಾ ಯಡವಟ್ಟಾಗುತ್ತವೆ ಅನ್ನೋದಕ್ಕೆ ಅಮರ್ ಎನ್ನುವ ಸಿನಿಮಾ ನಿದರ್ಶನವಾಗಿ ನಿಂತಿದೆ. ಇಷ್ಟು ಎತ್ತರದ ಹುಡುಗ ಅಭಿಷೇಕ್ ಹೀರೋ ಆಗಿ ಲಾಂಚ್ ಆಗುತ್ತಾನೆಂದಾಗ ಪ್ರೇಕ್ಷಕರಲ್ಲಿ ಸಹಜವಾಗಿಯೇ ಒಂದಿಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ಆದರೆ ನಿರ್ದೇಶಕ ನಾಗಶೇಖರ್ ಅವೆಲ್ಲವನ್ನೂ ಸುಳ್ಳಾಗಿಸಿದ್ದಾರೆ. ತಮ್ಮ ಮಾಸಲು ಕಥಾಹಂದರವನ್ನು ತಂದು ಅಭಿಷೇಕ್ ಮೇಲೆ ಪ್ರಯೋಗಿಸಿ ವ್ಯರ್ಥ ಪ್ರಯತ್ನ ಮಾಡಿದ್ದಾರೆ. `ಬಿರಿಯಾನಿಗೆ ಬೇಕಾದ ಎಲ್ಲ ಸರಕನ್ನೂ ಕೊಟ್ಟರೆ ಪುಳ್ಚಾರು ಭಟ್ಟ ಬೆಂಡೆಕಾಯಿ ಗೊಜ್ಜು ಮಾಡಿದ’ ಎನ್ನುವಂತೆ ತೀರಾ ಸಣ್ಣ ಪ್ರೇಮಕತೆಯ ಎಳೆಯನ್ನು ಅನವಶ್ಯ ಎಳೆದಾಡಿ `ಅಮರ ಪ್ರೇಮ ಕಾವ್ಯ’ವನ್ನು ಸೃಷ್ಟಿಸಲು ಹೋದ ನಿರ್ದೇಶಕರ ಪ್ರಯತ್ನವಿಲ್ಲಿ ವಿಫಲವಾಗಿದೆ. ಆ ಮೂಲಕ ಬದುಕಿನ ಎಲ್ಲ ಸುಖಗಳನ್ನೂ ತೊರೆದು ಜಗದ ಸೇವೆಗೆ ನಿಲ್ಲುವ ಕ್ರೈಸ್ತ ಸನ್ಯಾಸಿನಿಯರ ತ್ಯಾಗಮಯಿ ಮನಸ್ಥಿತಿಯನ್ನು ಇಲ್ಲಿ `ಹೀನ ಸ್ಥಿತಿ’ ಎನ್ನುವಂತೆ ಬಿಂಬಿಸುವ ಕೆಲಸ ಕೂಡಾ ನಡೆದುಹೋಗಿದೆ.

ಮೊದಲ ಚಿತ್ರದಲ್ಲೇ ನಿರೀಕ್ಷೆಗೂ ಮೀರಿ ನಟಿಸಿರುವ ಅಭಿಷೇಕ್, ಕಣ್ಣುಗಳಲ್ಲೇ ಭಾವ ಹೊಮ್ಮಿಸುವ ತಾನ್ಯಾ ಹೋಪ್, ಸಾರ್ವಕಾಲಿಕ ಅಪ್ಪನಾಗಿ ನಿಲ್ಲುವ ದೇವರಾಜ್ ನಟನೆ ಮಧ್ಯೆ ಬಂದುಹೋಗುವ ದರ್ಶನ್… ಹೀಗೆ ಒಂದು ಶಕ್ತಿಯುತ ಸಿನಿಮಾ ರೂಪುಗೊಳ್ಳಬೇಕಿದ್ದ ಜಾಗದಲ್ಲಿ ಜಾಳು ಜಾಳು ನಿರೂಪಣೆಯ, ಧಮ್ಮಿಲ್ಲದ ಕತೆ `ಅಮರ್’ ಸಿನಿಮಾವನ್ನು ಅಧ್ವಾನಗೊಳಿಸಿದೆ. ಯಾವ ಕೋನದಲ್ಲೂ ನಗು ಹುಟ್ಟಿಸದ ಸಾಧು ಕೋಕಿಲಾ, ಚಿಕ್ಕಣ್ಣನ ಪಾತ್ರಗಳು ನೋಡುಗರನ್ನು ಹಿಂಸಿಸುತ್ತವೆ. ಇವೆಲ್ಲದರ ಪರಿಣಾಮವಾಗಿ ಮೊದಲ ಸಿನಿಮಾದಲ್ಲೇ ಮಾಸ್ ಹೀರೋ ಆಗಿ ನಿಲ್ಲಬೇಕಿದ್ದ ಅಭಿಷೇಕ್ ಲವರ್ ಬಾಯ್ ರೂಪದಲ್ಲಿ ನಿಂತು ನಿರಾಶೆಗೊಳಿಸಿದ್ದಾರೆ ಇನ್ನುಳಿದಂತೆ ಸತ್ಯ ಹೆಗಡೆ ಕ್ಯಾಮೆರಾ ಕೆಲಸ, ಅರ್ಜುನ್ ಜನ್ಯಾ ನೀಡಿರುವ ಸಂಗೀತಗಳ ಬಗ್ಗೆ ಮಾತಾಡುವಂತಿಲ್ಲ. ಸತ್ಯ ಹೆಗಡೆ ಇಟ್ಟಿರುವ ಒಂದೊಂದು ಫ್ರೇಮೂ ಅದ್ಭುತವಾಗಿದೆ. ಅರ್ಜುನ್ ಜನ್ಯಾರ ಸಂಗೀತ ಮತ್ತು ಹಿನ್ನೆಲೆ ಸಂಗೀತವಷ್ಟೇ ಸಿನಿಮಾದ ಶಕ್ತಿ. ಈ ಮಧ್ಯೆಯೂ ಅಮರ್ ಸಿನಿಮಾವನ್ನು ನೋಡಲು ಉಳಿದಿರುವ ಕಾರಣ `ಅಂಬರೀಶ್’ ಎನ್ನುವ ಹೆಸರು ಮಾತ್ರ…

 

CG ARUN

ಡಾರ್ಕ್ ಕೇವ್ ನಲ್ಲಿ ಕುಣಿದ ಶ್ರೀಯಾ!

Previous article

ಹೊಸಬರ ಯಾರ್ ಮಗ ಪೋಸ್ಟರ್ ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *