ಯಾರು ಯಾರಿಗೋ ಸಹಾಯ ಮಾಡಿದರು. ಮುಳುಗಿ ಹೋಗುತ್ತಿದ್ದ ಅದೆಷ್ಟೋ ಮಂದಿಯನ್ನು ಮೇಲೆತ್ತಿ ಉದ್ಧರಿಸಿದರು. ಎಂತೆಂಥವರ ಮೇಲಿದ್ದ ಸಾಲದ ನೊಗವನ್ನು ಎತ್ತಿ ಬಿಸಾಕಿದರು. ಕೆಳಗಿದ್ದ ಅದೆಷ್ಟೋ ಮಂದಿಗೆ ಮೇಲೇಣಿಯಾದರು. ಅಕ್ಷರಶಃ ಕರ್ಣನಂತೆಯೇ ಬದುಕಿದರು.
ರೆಬೆಲ್ ಸ್ಟಾರ್ ಅಂಬರೀಶ್ ತೆರೆಯ ಮೇಲೆ ಮಾತ್ರವಲ್ಲ, ಜೀವನದಲ್ಲಿಯೂ ಅಚ್ಚುಕಟ್ಟಾಗಿ ಪಾತ್ರ ಮುಗಿಸಿ ಎದ್ದು ಹೋಗಿದ್ದಾರೆ. ಬದುಕನ್ನು ಇಂಚಿಂಚಾಗಿ ಆಸ್ವಾದಿಸುತ್ತಾ, ನಟನಾಗಿ, ರಾಜಕಾರಣಿಯಾಗಿ, ಎಲ್ಲರ ಕಷ್ಟ ಸುಖಗಳಿಗೂ ಸ್ಪಂದಿಸುವ ಸ್ನೇಹಿತನಾಗಿ ಕಡೆಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆಯೂ ಬದುಕಿದ್ದವರು ಅಂಬರೀಶ್. ರೆಬೆಲ್ ಸ್ಟಾರ್ ಎಂಬ ಬಿರುದಿಗೆ ತಕ್ಕುದಾಗಿಯೇ ವ್ಯಕ್ತಿತ್ವ ಹೊಂದಿದ್ದರೂ ಅದರಾಳದಲ್ಲಿ ಪ್ರೀತಿಯ ಪಸೆಯನ್ನು ಸದಾ ಜಾಗೃತವಾಗಿಟ್ಟುಕೊಂಡಿದ್ದವರು ಅಂಬರೀಶ್. ಅಸಾಮಾನ್ಯ ತಾರೆಯಾಗಿದ್ದರೂ, ಸಾಮಾನ್ಯ ವ್ಯಕ್ತಿಯೊಬ್ಬ ಅಯ್ಯೋ ಅವ್ರನ್ನ ನಿಜವಾಗಿ ನಾನು ನೋಡ್ಲಿಕ್ಕೆ ಸಾಧ್ಯನಾ? ಎನ್ನುವಷ್ಟರ ಮಟ್ಟಿಗೆ ಡಾ. ಅಂಬರೀಶ್ ಗಗನತಾರೆಯಾಗಿ ಬದುಕಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆತಿದ್ದರು. ಧನಕನಕಾದಿಗಳು ಕಾಲಬುಡದಲ್ಲೇ ಬಂದು ಬಿದ್ದಿದ್ದರೂ ತಾವೊಬ್ಬರೇ ಗಂಟು ಮಾಡಿಕೊಳ್ಳುವ ಸ್ವಾರ್ಥವನ್ನು ರೂಢಿಸಿಕೊಂಡಿರಲಿಲ್ಲ. ಬದಲಿಗೆ ತಮ್ಮೆಲ್ಲಾ ಸಂಪತ್ತನ್ನೂ ಎಲ್ಲರಿಗೂ ಹಂಚಿ ಅದರಲ್ಲೇ ಮಹದಾನಂದ ಕಂಡರು. ಈ ಕಾರಣದಿಂದಲೇ ಕಲಿಯುಗದ ಕರ್ಣ ಎಂದೂ ಹೆಸರಾಗಿದ್ದರು.
ಇಂಥ ಕರ್ಣನ ಸಂಪತ್ತು ಹಂಚಿಹೋದ ಪರಿಯನ್ನು ಹೇಳ ಹೊರಟರೆ ಅದೇ ಒಂದು ಅಂಬರೀಶಾಯಣ ವಾದೀತು. ಯಾರು ಯಾರಿಗೋ ಸಹಾಯ ಮಾಡಿದರು. ಮುಳುಗಿ ಹೋಗುತ್ತಿದ್ದ ಅದೆಷ್ಟೋ ಮಂದಿಯನ್ನು ಮೇಲೆತ್ತಿ ಉದ್ಧರಿಸಿದರು. ಎಂತೆಂಥವರ ಮೇಲಿದ್ದ ಸಾಲದ ನೊಗವನ್ನು ಎತ್ತಿ ಬಿಸಾಕಿದರು. ಕೆಳಗಿದ್ದ ಅದೆಷ್ಟೋ ಮಂದಿಗೆ ಮೇಲೇಣಿಯಾದರು. ಅಕ್ಷರಶಃ ಕರ್ಣನಂತೆಯೇ ಬದುಕಿದರು. ಈವತ್ತಿಗೂ ಗಾಂಧಿನಗರದಿಂದ ಇವರಿಗೆ ಬರಬೇಕಾದ ಬಾಕಿ ಹಣ ಬಹಳ ಬಹಳ. ಅವರ ಸಿನಿಮಾ ದುನಿಯಾನೆ ಅಂಥಾದ್ದು. ಈಗಲೂ ಬಾಕಿ ವಸೂಲಿಗೆ ನಿಂತರೆ ಗಾಂಧಿನಗರದಿಂದ ಇವರಿಗೆ ಅದೆಷ್ಟು ಕೋಟಿ ರೂಪಾಯಿಗಳು ಬಂದು ಬಿಡುತ್ತದೋ ಏನೋ. ಬೌನ್ಸ್ ಆಗಿದ್ದ ಚೆಕ್ಕುಗಳನ್ನು ಕೊಟ್ಟವರಿಗೇ ವಾಪಸ್ ಕೊಟ್ಟು ಬದಿಕ್ಕಳಿ ಹೋಗಿ ಎಂದ ದಾನಶೂರರಿವರು.
ಸ್ನೇಹಕ್ಕೆ, ಪ್ರೀತಿಗೆ, ವಿಶ್ವಾಸಕ್ಕೆ, ತ್ಯಾಗಕ್ಕೆ, ಮನುಷ್ಯತ್ವಕ್ಕೆ ಹೆಸರಾದ ಡಾ. ಅಂಬರೀಶ್ ಅವರದು ಜಿನ, ಬುದ್ಧ, ಯೇಸು, ಬಸವ, ಪೈಗಂಬರ್, ಗಾಂಧಿ, ಅಂಬೇಡ್ಕರ್ರಂತಹವರ ಮಾನವೀಯ ಕಾಳಜಿಯ ಅಮೃತದಲ್ಲಿ ಅದ್ದಿತೆಗೆದಂತಹ ಮಹಾ ವ್ಯಕ್ತಿತ್ವ. ದಾನ-ಧರ್ಮದಲ್ಲಂತೂ ಅವರಿಗವರೇ ಸಾಟಿ. ಬಾಲಿವುಡ್ ಬಾದ್ಷಾ ಅಮಿತಾಬ್ ಬಚ್ಚನ್, ಇಂಡಿಯನ್ ಕ್ರಿಕೆಟ್ ತಾರೆ ಮಹೇಂದ್ರಸಿಂಗ್ ದೋನಿ ಅವರುಗಳಂಥವರೂ ಅಂಬರೀಶ್ರ ಋಣದಲ್ಲಿದ್ದಾರೆಂದರೆ ಯಾರಿಗೇ ಆದರೂ ಅರ್ಥವಾಗುತ್ತದೆ ಅಂಬಿಯ ಕೊಡುಗೈಗುಣದ ಮೇರು ವ್ಯಕ್ತಿತ್ವದ ಮಹಿಮೆ. ಅದನ್ನು ಹೇಳ ಹೊರಟರೆ ಅಂಬಿಯ ವಿಶಾಲ ಹೃದಯದಂತೆಯೇ ಅದೂ ಸಹ ವಿಶಾಲವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.
ಟೈಗರ್ ಎಂದರೆ ಸಾಕಷ್ಟೆ. ಮುಂದಕ್ಕೆ ಆ ನಟನ ಹೆಸರು ಹೇಳಲೇಬೇಕಾಗಿರಲಿಲ್ಲ. ಆತ ಯಾರೆಂಬುದನ್ನು ಎಂತಹವರೂ ಸುಲಭವಾಗಿ ಊಹಿಸಿಬಿಡುತ್ತಿದ್ದರು. ಒಂದು ಕಾಲದಲ್ಲಿ ಬೆಳ್ಳಿತೆರೆ ಮೇಲೆ ಹುಲಿಯಂತೆ ಮೆರೆದ ಇಂಥ ನಟ ಅನಾರೋಗ್ಯಪೀಡಿತನಾಗಿ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸಂದರ್ಭವದು. ಅದುವರೆಗೂ ಆಗಿರುವ ಆಸ್ಪತ್ರೆಯ ಖರ್ಚಿನ ಬಿಲ್ ಪಾವತಿಸದ ಹೊರತು ಶವವನ್ನು ಹೊರತರಲಾರದ ದುಃಸ್ಥಿತಿ ಅಲ್ಲಿಯದು. ಹುಲಿಯಂತೆ ಘರ್ಜಿಸುತ್ತಿದ್ದ ಆ ನಟನ ದೇಹ ಅಂದು ಎಲ್ಲರೂ ಇದ್ದರೂ ಯಾರೂ ಇಲ್ಲದ ಅನಾಥ ಸ್ಥಿತಿಯಲ್ಲಿ ಸದ್ದಿಲ್ಲದೆ ಶವವಾಗಿ ಬಿದ್ದಿದೆ. ವಿಷಯ ಅಂಬರೀಶ್ ಕಿವಿ ಮುಟ್ಟುತ್ತದೆ. ಟೈಗರ್ ಖ್ಯಾತಿಯ ತನ್ನ ಸಮಕಾಲೀನ ನಟನೊಬ್ಬನ ದುರಂತ ಸಾವಿಗೆ ಅವರ ಕಣ್ಣಾಲಿಗಳು ಒದ್ದೆಯಾಗುತ್ತದೆ. ಅವರ ಒಂದು ಕೈ ಕಂಬನಿಯನ್ನು ಒರೆಸಿಕೊಳ್ಳುತ್ತಿದ್ದಂತೆಯೇ ಮತ್ತೊಂದು ಕೈ ಆಸ್ಪತ್ರೆಯಿಂದ ನಟನ ಶವವನ್ನು ಹೊರತರುವತ್ತ ಕೊಡುಗೈಯಾಗಿ ಸ್ಪಂದಿಸುತ್ತದೆ. ಅಲ್ಲಿಂದೀಚೆಗೆ ಎಲ್ಲವೂ ಸಲೀಸಾಗಿ ಆ ನಟನ ಅಂತಿಮ ಯಾತ್ರೆ ನಡೆಯುತ್ತದೆ.
ಅದು ಯಾವುದೋ ಅಂಬರೀಶ್ ಅಭಿನಯದ ಸಿನಿಮಾ ದೃಶ್ಯವಲ್ಲ. ಅಂಬರೀಶ್ರ ನಿಜ ಬದುಕಿನ ನಿಜ ನಡೆಯಿದು. ಅವರ ನುಡಿಯೂ ಅದೇ. ಅಂದಹಾಗೆ ಅಂದು ನಿಧನಹೊಂದಿದ ನಟ ಟೈಗರ್ ಪ್ರಭಾಕರ್. ಹಾಗೆಯೇ ಕನ್ನಡ ಚಿತ್ರರಂಗದ ಸುಧೀರ ವ್ಯಕ್ತಿತ್ವದ ಖ್ಯಾತ ಖಳನಟನೊಬ್ಬರು ತಮ್ಮ ಬದುಕಿಗಾಗಿ ಮನೆಯೊಂದನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಆದರೆ ಅವನು ಅದುವರೆಗೆ ಚಿತ್ರರಂಗದಲ್ಲಿ ದುಡಿದು ಕೂಡಿಟ್ಟ ಹಣ ಮನೆ ಕಟ್ಟಲು ಸಾಲದಾಗುತ್ತದೆ. ಉಳಿಕೆ ಹಣಕ್ಕಾಗಿ ಆತ ಅಂಬರೀಶ್ ಮುಂದೆ ಸಾಲಕ್ಕಾಗಿ ಕೈ ಚಾಚುತ್ತಾರೆ. ಆಗ ಚಾಚಿದ ಆ ಖಳನಟನ ಎರಡೂ ಕೈ ತುಂಬಾ ಹಣವಿತ್ತು, ಅಂಬರೀಶ್ ಹೇಳುತ್ತಾರೆ. ಇದು ಸಾಲವಲ್ಲ, ನೀನು ಮನೆಕಟ್ಟಲು ನಿನ್ನ ಸ್ನೇಹಿತನಾಗಿ ನಿನಗೆ ನಾನು ನೀಡುತ್ತಿರುವ ಸಣ್ಣ ಗಿಫ್ಟ್ ಅಷ್ಟೆ ಎಂದು. ಹಣ ಪಡೆದ ಆ ಖಳನಟನ ಹೃದಯ ತುಂಬಿ ಬರುತ್ತದೆ. ಮುಂದೆ ತಾನು ಕಟ್ಟಿದ ತನ್ನ ಮನೆಗೆ ಅಂಬಿ ನಿಲಯವೆಂದೇ ಹೆಸರಿಡುತ್ತಾರೆ.
ಇದೂ ಅಷ್ಟೆ, ಅಂಬರೀಶ್ ನಟನೆಯ ಯಾವುದೋ ಚಲನಚಿತ್ರದ ಸೀನಲ್ಲ. ಅಂಬರೀಶ್ರ ನೈಜ ಜೀವನದ ನಡವಳಿಕೆಯ ರೀತಿಯಿದು. ಅವರ ನಿಜ ನೀತಿಯೂ ಇದೆ. ಅಂದಹಾಗೆ ಅಂದು ಅಂಬಿಯ ನೆರವಿನಿಂದ ಮನೆಕಟ್ಟಿ ಆ ಮನೆಗೆ ಅಂಬಿಯ ಹೆಸರನ್ನೇ ಇಟ್ಟು ಕೃತಜ್ಞತೆ ತೋರಿದ ಆ ನಟ ಬೇರಾರೂ ಅಲ್ಲ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಮೆರೆದ ಸಜ್ಜನ ಕಲಾವಿದ ಸುಧೀರ್. ಆತ ಬಾಲಿವುಡ್ನ ಮಹಾತಾರೆ, ಭಾರತೀಯರೆಲ್ಲರ ಮನಗೆದ್ದ ಅಮಿತಾದ್ಭುತನಟ. ಇಂಥ ಮಹಾನ್ ನಟ ಒಮ್ಮೆ ಸದುದ್ದೇಶವೊಂದಕ್ಕೆ ಹಣ ಸಂಗ್ರಹಿಸಲು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆಸಿ ತೊಂದರೆಗೆ ಸಿಲುಕಿ ತೊಳಲಾಡತೊಡಗುತ್ತಾನೆ. ಬೆರಳ ತುದಿಯಲ್ಲಿ ಬಾಲಿವುಡ್ ಆಳುತ್ತಿದ್ದ ಆ ಮಹಾನ್ ನಟನ ಅಂದಿನ ಕಷ್ಟಕ್ಕೆ ಯಾರೂ ಕ್ಯಾರೆ ಅನ್ನುವುದಿಲ್ಲ. ವಿಷಯ ತಿಳಿದ ಅಂಬರೀಶ್ ಕ್ಷಣಾರ್ಧದಲ್ಲಿ ಆಪದ್ಭಾಂದವನಾಗಿ ಧಾವಿಸಿ ಬಂದು ಬಾಲಿವುಡ್ನ ಆ ಮಹಾನ್ ನಟ ಪೊಲೀಸ್ ಇಲಾಖೆಗೆ ಕಟ್ಟಬೇಕಿದ್ದ ದೊಡ್ಡ ಮೊತ್ತದ ಹಣವನ್ನು ಹೊಂದಿಸಿಕೊಡುತ್ತಾರೆ. ಇದು ಅಂಬರೀಶ್ ಆಕ್ಟ್ ಮಾಡಿದ ಫಿಲ್ಮ್ವೊಂದರ ಘಟನೆಯಲ್ಲ. ಅಂಬರೀಶ್ರ ಸಹಜ ಬದುಕಿನ ಸಾರ್ಥಕ ಕಾರ್ಯವಿದು. ಅವರ ಬಾಳ್ವೆಯೇ ಹಾಗೆ. ಅಂದ ಹಾಗೆ ಅಂದು ಅಂಥ ಸಂಕಷ್ಟಕ್ಕೆ ಸಿಲುಕಿಕೊಂಡು ಅಂಬಿಯಿಂದ ನೆರವು ಪಡೆದ ನಟ ಬಾಲಿವುಡ್ನ ಮಹಾನ್ ನಟ ಅಮಿತಾಬ್ ಬಚ್ಚನ್ ಎಂದರೆ ಆಶ್ಚರ್ಯವಾಗುತ್ತದಲ್ಲವೆ?
ಇನ್ನುಳಿದಂತೆ ರಾಜಿಕೀಯ ಸಿನಿಮಾ ಸೇರಿದಂತೆ ಎಲ್ಲದರಲ್ಲಿಯೂ ಅಂಬರೀಶ್ ಅವರದ್ದು ಭಿನ್ನ ವ್ಯಕ್ತಿತ್ವ, ವಿಭಿನ್ನ ಹೆಜ್ಜೆ ಗುರುತು. ಸಿನೆಮಾ ಜಗತ್ತಿನಲ್ಲೊಂದು ಅಲಿಖಿತ ನಿಯಮವಿದೆ. ನಾಯಕನಟ ತನ್ನ ವರ್ಚಸ್ಸು ಕಳೆದುಕೊಂಡರೆ, ಜನಪ್ರಿಯತೆ ಕುಗ್ಗಿದರೆ, ವಯಸ್ಸಾದರೆ ಹೊಸಬರಿಗೆ ದಾರಿ ಮಾಡಿಕೊಟ್ಟು, ತಾನು ಹಿಂದಕ್ಕೆ ಸರಿಯುತ್ತಾನೆ. ಅಥವಾ ಆ ಕಾಲವೇ ಆತನನ್ನು ನೇಪಥ್ಯಕ್ಕೆ ನೂಕುತ್ತದೆ. ಅಂಬರೀಷ್, ತಾವು ಸಿನೆಮಾ ರಂಗಕ್ಕೆ ಬರುವಾಗ, ವಯಸ್ಸಾದವರನ್ನು ಹಿಂದಕ್ಕೆ ಸರಿಸಿ, ತಮಗೆ ವಯಸ್ಸಾದಾಗ ಹಿಂದಕ್ಕೆ ಸರಿದು ಎರಡನ್ನೂ ಕಂಡವರು. ಆ ಹಂತವನ್ನು ದಾಟಿ ಬಂದವರು. ಅದನ್ನೇ ಅವರು ರಾಜಕಾರಣದಲ್ಲೂ ಮಾಡಿದ್ದಾರೆ. ಮಾಡುವಾಗ ಅಂಜದೆ, ಅಳುಕದೆ ಸಹಜವಾಗಿ ವರ್ತಿಸಿದ್ದಾರೆ. ಅವರ ಪ್ರಕಾರ ಅದೇನು ಮಹಾ ತ್ಯಾಗದ ಕೆಲಸವಲ್ಲ. “ನನಗೆ ವಯಸ್ಸಾಯ್ತು, ಓಡಾಡಕ್ಕಾಗಲ್ಲ, ಬೇಡ” ಎಂದು, ತಮ್ಮ ಎಂದಿನ `ಅಂಬಿ ಶೈಲಿ’ಯಲ್ಲಿಯೇ ಹೇಳಿದ್ದಾರೆ. ಅವರ ನಡೆಯಲ್ಲಿ ನುಡಿಯಲ್ಲಿ ಎಲ್ಲೂ ಕೃತ್ರಿಮತೆ ಕಂಡುಬರಲಿಲ್ಲ. ಅದು ಅವರ ಜಾಯಮಾನವೂ ಅಲ್ಲ.