-ಅರುಣ್ ಕುಮಾರ್ ಜಿ
ಆತ ಮಹಾನ್ ಒರಟ, ಸೀದಾಸಾದಾ ಮನುಷ್ಯ, ಭಯಾನಕ ಕೋಪಿಷ್ಟ…
ಆದರೆ, ಎಂಥವರನ್ನೂ ತನ್ನತ್ತ ಸೆಳೆಯಬಲ್ಲ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ, ನಂಬಿದವರ ಕೈ ಹಿಡಿವ, ಸ್ನೇಹಕ್ಕೆ ಸಿಕ್ಕಿಕೊಂಡರೆ ಮೊಗೆಮೊಗೆದೂ ಪ್ರೀತಿಯನ್ನು ಸುರಿಯುವ ಸ್ನೇಹಮಯಿ…
ಅದು ರೆಬೆಲ್ ಸ್ಟಾರ್ ಅಂಬರೀಶ್…!
ಕನ್ನಡ ಜನತೆಯ ಪಾಲಿಗೆ `ಅಂಬರೀಶ್ ಎಂಬ ಹೆಸರು ಯಾವತ್ತಿಗೂ ಅಚ್ಛರಿಯೇ…
ಸಾಮಾನ್ಯ ಮನುಷ್ಯನ ಮಾಮೂಲಿ ಗುಣಗಳಿಗೆ ಹೊರತಾದ ಅಂಬರೀಶ್ ಒಬ್ಬೊಬ್ಬರ ಕಣ್ಣಿಗೂ ಒಂದೊಂದು ಬಗೆಯಲ್ಲಿ ಕಾಣುವ ಮಲ್ಟಿ ಡೈಮೆನ್ಷನ್ ವ್ಯಕ್ತಿ. ಒಬ್ಬರ ಕಣ್ಣಿಗೆ ಸ್ನೇಹಿತನಂತೆ ಕಂಡರೆ ಮತ್ತೊಬ್ಬರಿಗೆ ಪರೋಪಕಾರಿಯಂತೆ ಭಾಸವಾಗುತ್ತಾರೆ, ಮಗದೊಬ್ಬರಿಗೆ ಜನನಾಯಕನಾಗಿ ಗೋಚರಿಸುತ್ತಾರೆ. ಅದು ನೋಡುಗರ ಭಾವ-ಭಕುತಿಗೆ ಬಿಟ್ಟವಿಚಾರ…
ಇಂಥ ಅಬಂರೀಶ್ ಈಗ 55 ವಸಂತಗಳನ್ನು ಪೂರೈಸಿದ್ದಾರೆ. ಇಂಥ ಸಂದರ್ಭದಲ್ಲಿ ಅಂಬರೀಶ್ ಎಂಬ ರೆಬೆಲ್ ವ್ಯಕ್ತಿಯ ಖಾಸಗಿ ಮತ್ತು ವೃತ್ತಿಬದುಕಿನ ಸಣ್ಣ ಸಣ್ಣ ಘಟ್ಟ-ಘಟನೆಗಳನ್ನು ಅವಲೋಕಿಸಿದರೆ ಚೆಂದ…
ವಿಷ್ಣುಪ್ರಿಯ!
ಒಮ್ಮೆ ಅಂಬರೀಶ್ ವಿಷ್ಣು ಮನೆಗೆ ಬಂದಾಗ `ಸೂಪರ್ ಸ್ಟಾರ್ ಮನೆಯಂತೆ ಇದು.. ಗುಂಡು-ತುಂಡು ಏನೂ ಇಲ್ಲ.. ಎಂದುಬಿಟ್ಟಿದ್ದರಂತೆ. ಅಂಬಿ ಹೀಗಂದ ಮರುದಿನವೇ ತಮ್ಮ ಮನೆಯಲ್ಲೇ ಬಾರ್ ನಿರ್ಮಿಸಿಬಿಟ್ಟರಂತೆ ವಿಷ್ಣು… ಎಷ್ಟೋ ಸಲ ವಿಷ್ಣುಗೆ ರಾತ್ರೋ ರಾತ್ರಿ ಫೋನು ಮಾಡುತ್ತಿದ್ದ ಅಂಬಿ, ಮಲಗಿದ್ದ ವಿಷ್ಣುವನ್ನು ಎಬ್ಬಿಸಿ `ಲೇ ಕುಚುಕೂ, ಟೀವಿ ಆನ್ ಮಾಡೋ ನಿನ್ನ ಹಳೇ ಸಿನಿಮಾದ ಹಾಡು ಬರ್ತಾ ಇದೆ… ಎನ್ನುತ್ತಿದ್ದರಂತೆ…
ಪತ್ರಕರ್ತ ಸದಾಶಿವ ಶೆಣೈ, ಲಂಕೇಶ್ ಪತ್ರಿಕೆಗಾಗಿ ವಿಷ್ಣು ಆತ್ಮಕಥನವನ್ನು ನಿರೂಪಿಸುವ ಸಂದರ್ಭದಲ್ಲಿ, ಅನೇಕ ಕಡೆ ವಿಷ್ಣು ಅಂಬಿಯನ್ನು ಪ್ರಸ್ತಾಪಿಸುತ್ತಾರೆ. `ಆತ ನನ್ನ ಆಸ್ತಿ ಮತ್ತು ದೌರ್ಬಲ್ಯ ಎಂದು ತಮ್ಮದೇ ಶೈಲಿಯಲ್ಲಿ ವರ್ಣಿಸಿದ್ದಾರೆ.
`ಅಂಬಿ ನನ್ನ ಆಸ್ತಿ ಮತ್ತು ದೌರ್ಬಲ್ಯ’
ಹಾಗೆ ನೋಡಿದರೆ, ಸಿನಿಮಾಕ್ಕೆ ಬರುವ ಮೊದಲು ಅಂಬರೀಶ್ ಮತ್ತು ವಿಷ್ಣು ಅಂಥಾ ಪರಿಚಿತರೂ ಆಗಿರಲಿಲ್ಲ. ಮೈಸೂರಿನಲ್ಲಿ `ನಾಗರಹಾವು ಚಿತ್ರದ ಸ್ಕ್ರೀನ್ ಟೆಸ್ಟ್ ನಡೆದ ಸಂದರ್ಭದಲ್ಲಿ ಇವರಿಬ್ಬರೂ ಪರಸ್ಪರ ಭೇಟಿಯಾಗಿದ್ದರು. ನಂತರ `ನಾಗರಹಾವು ಚಿತ್ರದಲ್ಲಿ ವಿಷ್ಣು ರಾಮಾಚಾರಿಯಾಗಿ, ಅಂಬಿ ಜಲೀಲ್ ಆಗಿ ತೆರೆಯ ಮೇಲೆ ಮಾರಾಮಾರಿ ಗುದ್ದಾಡಿಕೊಂಡರು. ಆದರೆ ರಿಯಲ್ ಲೈಫ್ನಲ್ಲಿ ಮಾತ್ರ ಅಂಬಿ-ವಿಷ್ಣು ಪ್ರಾಣಮಿತ್ರರಾಗೇ ಉಳಿದವರು. `ಕಡೇ ಪಕ್ಷ ದಿನಕ್ಕೆರಡು ಬಾರಿ ಅಂಬಿಯೊಂದಿಗೆ ಫೋನ್ನಲ್ಲಾದರೂ ಮಾತಾಡದೇ ಇದ್ದರೆ ಏನೋ ಕಳಕೊಂಡ ಹಾಗಾಗುತ್ತೆ. ನನ್ನ ಚೈತನ್ಯವೇ ಹುದುಗಿಹೋಗುತ್ತದೆ॒
“ನನ್ನ ಅಂಬರೀಶ್ ಸ್ನೇಹ, ಸಂಬಂಧದ ಬಗ್ಗೆ ದಿನಗಟ್ಟಲೆ, ವರ್ಷಗಟಗಲೆ ಬೇಕಾದಷ್ಟು ವಾಲ್ಯೂಮ್ ನಾನು ಮಾತಾಡಬಲ್ಲೆ, ಆತ ಬರೀ ನನ್ನ ಸ್ನೇಹಿತ ಅಲ್ಲ; ಆತ ನನ್ನ ಜೀವನದ ಒಂದು ಅವಿಭಾಜ್ಯ ಅಂಗ. ಅಂಬರೀಶ್ ಬಿಟ್ಟರೆ ಜೀವನದಲ್ಲಿ ನನಗೆ ಬೇರೆ ಯಾವ ಸ್ನೇಹಿತರೂ ಇಲ್ಲ. ಕಳೆದ ಮೂವತ್ತು ವರ್ಷದಿಂದ ನನ್ನ ಮತ್ತು ಆತನ ನಡುವೆ ಒಮ್ಮೆಯೂ ವೈಮನಸ್ಸು ಹುಟ್ಟೇ ಇಲ್ಲ. ಮುಂದೆಯೂ ಹುಟ್ಟೋಲ್ಲ. ಬಹುಶಃ ಪ್ರಪಂಚದ ಯಾವುದೇ ಭಾಗದಲ್ಲಿ ತಾರೆಯರಿಬ್ಬರು ಇಷ್ಟು ಅನ್ಯೋನ್ಯತೆಯಿಂದ, ಪ್ರೀತಿ ವಿಶ್ವಾಸದಿಂದ ಇರಲು ಸಾಧ್ಯವೇ ಇಲ್ಲ..
ನಾವಿಬ್ಬರೂ ಬೇರೆ ಬೇರೆ ಜಾತಿಯವರಿರಬಹುದು. ಆದರೂ ನಾವಿಬ್ಬರೂ ಒಂದೇ ತಾಯಿಯ ಮಕ್ಕಳಂತೆ ಬೆಳೆದಿದ್ದೇವೆ. ನನ್ನ ತಾಯಿಗಂತೂ ಅಂಬರೀಶ್ ಎಂದರೆ ಪಂಚಪ್ರಾಣ. ಆಕೆ ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅಂಬರೀಶ್ನನ್ನು ನೋಡಬೇಕೆಂದು ಹಠ ಹಿಡಿದಿದ್ದಳು. ವಿಷ್ಯ ತಿಳಿದ ಅಂಬರೀಶ್ ದೂರದೂರಿನಲ್ಲಿದ್ದರೂ, ಶೂಟಿಂಗ್ ಅರ್ಧಕ್ಕೆ ಬಿಟ್ಟು ಓಡಿಬಂದು ಅಮ್ಮನನ್ನು ನೋಡಿಕೊಂಡು ಹೋಗಿದ್ದ; ನನ್ನ ಅಮ್ಮ ತೀರಿ ಹೋದಾಗಲೂ ಅಷ್ಟೇ… ಅಂಬಿ ಬಗೆಗಿನ ಇಂಥ ಹತ್ತು ಹಲವು ವಿಷಯಗಳನ್ನು ಸ್ಮರಿಸಿಕೊಂಡಿದ್ದ ವಿಷ್ಣು ತಮ್ಮ ಆತ್ಮಕಥೆಯಲ್ಲಿ ಅವೆಲ್ಲವನ್ನೂ ಹೇಳಿಕೊಂಡಿದ್ದಾರೆ.
ವಿಷ್ಣು-ಅಂಬಿ ಸ್ನೇಹ-ಪ್ರೀತಿಯ ಉತ್ಕಟತೆ ಅದ್ಯಾವ ಮಟ್ಟದ್ದು ಎಂದರೆ “ನಾನು ಸತ್ತಾಗ ನನ್ನ ಹೆಣವನ್ನು ಹೊರಲು ಅಂಬರೀಶ್ ಖಂಡಿತಾ ಎಲ್ಲಿದ್ದರೂ ಬಂದೇ ಬರುತ್ತಾನೆ ಎಂಬ ವಿಶ್ವಾಸ ನನಗಿದೆ. ಅಂತಹ ದೊಡ್ಡ ವ್ಯಕ್ತಿತ್ವ ಅವನದು ಎಂದು ವಿಷ್ಣು ತಮ್ಮ ಆಪ್ತರಲ್ಲಿ ಅನೇಕ ಬಾರಿ ಹೇಳಿಕೊಂಡಿದ್ದರು. ವಿಷ್ಣು ಅವರ ದೂರದೃಷ್ಟಿ, ಲೆಕ್ಕಾಚಾರ ಒಂದಿಷ್ಟೂ ಏರುಪೇರಾಗಲಿಲ್ಲ. ಸಾಹಸಸಿಂಹ ಕಣ್ಮುಚ್ಚಿದಾಗ ಓಡೋಡಿ ಬಂದ ಅಂಬಿ ತನ್ನ ಎಳೇ ಮಗುವಿನಂತೆ ಕಣ್ಣೀರಿಟ್ಟು, ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ರೋಧಿಸಿದ್ದರು. ಆಗ “ತೀರಾ ಪ್ರಬುದ್ಧನಂತಿರುವ ಅಂಬಿ ಕೆಲವೊಮ್ಮೆ ಪುಟ್ಟ ಮಕ್ಕಳಂತೆ ವರ್ತಿಸುತ್ತಾನೆ… ಎಂದು ಸ್ವತಃ ವಿಷ್ಣು ಹೇಳಿದ್ದ ಮಾತುಗಳು ಅಗೋಚರವಾಗಿ ಮಾರ್ದನಿಸಿದಂತಿತ್ತು..
ನಿಜಕ್ಕೂ ಅಂಬರೀಶ್ ಇರದಿದ್ದರೆ, ಅವತ್ತು ವಿಷ್ಣು ದೇಹ ಬನಶಂಕರಿಯ ಚಿತಾಗಾರದಲ್ಲಿ ಕರಗಿಹೋಗುತ್ತಿತ್ತು. ತನ್ನ ಸ್ನೇಹಿತನ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯಬೇಕು ಎಂದು ತೀರ್ಮಾನಿಸಿದ ಅಂಬಿ ತಕ್ಷಣ `ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲು ತೀರ್ಮಾನಿಸಿ, ಸರ್ಕಾರದ ಪ್ರತಿನಿಧಿಗಳು, ಬಾಲಣ್ಣನ ಮಗ ಗಣೇಶ್- ಎಲ್ಲರೊಂದಿಗೂ ಮಾತನಾಡಿ ಜಾಗದ ವ್ಯವಸ್ಥೆ ಮಾಡಿಕೊಟ್ಟರು.
ಪ್ರಾಣ ಸ್ನೇಹಿತರು ಎಂದರೆ ಇವರೇ ಅಲ್ಲವೇ?
No Comment! Be the first one.