ಬಹುಶಃ ಅಂಬರೀಶ್ ಸಹಾಯಹಸ್ತ ಚಾಚದಿದ್ದರೆ, ಜಗ್ಗೇಶ್ ಎಂಬ ನವರಸ ನಾಯಕ ಚಿತ್ರರಂಗದಲ್ಲಿ ಜನ್ಮ ಪಡೆಯುತ್ತಿದ್ದರೋ ಇಲ್ಲವೋ? ಯಾಕೆಂದರೆ, ಆರಂಭದಲ್ಲಿ ಜಗ್ಗೇಶ್ ಕೈಹಿಡಿದದ್ದು ಕೂಡಾ ಇದೇ ಅಂಬರೀಶ್. ಆಗಿನ್ನೂ ಜಗ್ಗೇಶ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ನೂರಿನ್ನೂರು ರುಪಾಯಿ ಸಂಭಾವನೆಯ ಸಣ್ಣ ಪುಟ್ಟ ಪಾತ್ರಗಳು ದೊರೆಯುವುದೂ ಜಗ್ಗೇಶ್ ಪಾಲಿಗೆ ದುರ್ಲಭವಾಗಿತ್ತು. ಆದರೆ ಅಂಬರೀಶ್ ಜಗ್ಗೇಶ್ಗೆ ಫೋನ್ ಮಾಡಿ `ಇವತ್ತು ಪ್ರೊಡಕ್ಷನ್ ಕಡೆಯಿಂದ ಫೋನ್ ಬರುತ್ತೆ. ಇಷ್ಟೇ ಸಾವಿರ ಸಂಭಾವನೆ ಕೇಳು ಎಂದುಬಿಡುತ್ತಿದ್ದರಂತೆ. `ಇದೇನಿದು ಇನ್ನೂರೋ ಮುನ್ನೂರೋ ಸಿಕ್ಕರೇ ಹೆಚ್ಚು. ಆದರೆ ಅಂಬರೀಶಣ್ಣ ಸಾವಿರಾರು ರುಪಾಯಿ ಕೇಳು ಎನ್ನುತ್ತಿದ್ದಾರಲ್ಲ ಎಂದು ಜಗ್ಗೇಶ್ಗೆ ಆಶ್ಚರ್ಯವಾಗುತ್ತಿತ್ತಂತೆ. ಅತ್ತ ಅಂಬರೀಶ್ `ಈ ಪಾತ್ರಕ್ಕೆ ಜಗ್ಗೇಶ್ ಅನ್ನೋ ನಟನೇ ಬೇಕು ಎಂದು ನಿರ್ಮಾಪಕರ ಬಳಿ ಆಜ್ಞೆ ಮಾಡಿಬಿಡುತ್ತಿದ್ದರು. ಅಂಬಿಯ ಇಂಥ ಟ್ರಿಕ್ಸುಗಳಿಂದಾಗಿ ಜಗ್ಗೇಶ್ ಎಷ್ಟೇ ಹಣ ಡಿಮ್ಯಾಂಡ್ ಮಾಡಿದರೂ ಅವರಿಗೆ ಅವಕಾಶ ಗ್ಯಾರೆಂಟಿ… ಹೀಗೆ `ತನ್ನೊಟ್ಟಿಗಿರುವವರೂ ಕೈತುಂಬಾ ಸಂಪಾದಿಸಬೇಕು ಎಂಬ ಅಪರೂಪದ ಕಾಳಜಿ ಅಂಬರೀಶ್ ಅವರದ್ದು…
ಒಟ್ಟಾರೆಯಾಗಿ ಜಗ್ಗೇಶ್ ವೃತ್ತಿಜೀವನದಲ್ಲಿ ನೆಲೆನಿಲ್ಲಲು ಪ್ರಮುಖವಾಗಿ ಕಾಳಜಿ ವಹಿಸಿದವರಲ್ಲಿ ಅಂಬರೀಶ್ ಪ್ರಮುಖರು. ಅದಕ್ಕೇ ಹೇಳಿದ್ದು `ಅಂಬಿ- ಜಗ್ಗೇಶ್ ಪಾಲಿನ ಜಗತ್ಗುರು ಎಂದು!