ತನ್ನ ಒರಟು ಮಾತು, ಗದರಿಕೆ ಮತ್ತು ತುಂಬು ಪ್ರೀತಿಯಿಂದಲೇ ಎಲ್ಲರ ಗೌರವ ಸಂಪಾದಿಸಿಕೊಂಡಿರುವವರು ರೆಬೆಲ್ ಸ್ಟಾರ್ ಅಂಬರೀಶ್. ಅವರ ಕಡೇ ಹುಟ್ಟುಹಬ್ಬದ ಸಂದರ್ಭವದು. ಬರ್ತಡೇ ಆಚರಿಸಿಕೊಂಡಿದ್ದ ಅಂಬಿಗೆ ಹಾರೈಕೆಗಳ ಸುರಿಮಳೆಯಾಗುತ್ತಿರುವಾಗಲೇ ಎಲ್ಲರಿಗಿಂತ ಮುಂಚಿತವಾಗಿ ಅಂಬರೀಶ್ ಅವರನ್ನು ಭೇಟಿಯಾಗಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷವಾದ ಗಿಫ್ಟೊಂದನ್ನು ನೀಡಿ ಸಂಭ್ರಮಿಸಿದ್ದರು.
ಪ್ರತೀ ವರ್ಷವೂ ದರ್ಶನ್ ಅವರು ಅದೇನೇ ಬ್ಯುಸಿಯಾಗಿದ್ದರೂ, ಎಲ್ಲಿಯೇ ಇದ್ದರೂ ಓಡೋಡಿ ಬಂದು ಹುಟ್ಟುಹಬ್ಬದಂದು ಅಂಬರೀಶ್ ಅವರಿಗೆ ವಿಶ್ ಮಾಡುತ್ತಾರೆ. ಈ ಬಾರಿ ಅಂಬಿ ಬರ್ತಡೇ ಮುನ್ನಾ ದಿನ ಮಂಗಳೂರಿನಲ್ಲಿದ್ದ ದರ್ಶನ್ ಅಲ್ಲಿ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ರಾತ್ರೋರಾತ್ರಿ ಅಂಬರೀಶ್ ಮನೆಯಲ್ಲಿ ಹಾಜರಾಗಿದ್ದರು. ತಾವೇ ತಂದ ಕೇಕನ್ನು ಕತ್ತರಿಸಿ, ವಿಶೇಷವಾದೊಂದು ಗಿಫ್ಟು ನೀಡಿ ಅಂಬಿ ಜೊತೆಗೇ ಒಂದಷ್ಟು ಕಾಲ ಖುಷಿಯಿಂದ ಕಳೆದಿದ್ದರು.
ಇದಲ್ಲದೇ ಟ್ವಿಟರ್ ಮೂಲಕವೂ ಕೂಡಾ ಶುಭ ಕೋರಿದ್ದರು. ಅಷ್ಟಕ್ಕೂ ದರ್ಶನ್ ಅವರು ಅಂಬಿ ಹುಟ್ಟು ಹಬ್ಬಕ್ಕೆ ಬೆಂಗಳೂರಿಗೆ ಬರುವ ವಾತಾವರಣವೇ ಇರಲಿಲ್ಲ. ಅವರು ಎರಡು ದಿನಗಳ ಹಿಂದಷ್ಟೇ ಮಂಗಳೂರಿಗೆ ತೆರಳಿದ್ದರು. ಆದರೆ ಅಲ್ಲಿ ಒಪ್ಪಿಕೊಂಡಿದ್ದ ಸಮಾರಂಭವನ್ನೆಲ್ಲ ಮುಗಿಸಿಕೊಂಡು ಬೇಗನೆ ವಾಪಾಸಾಗಿದ್ದ ದರ್ಶನ್ ಪ್ರತೀ ವರ್ಷದ ವಾಡಿಕೆಯನ್ನು ಮುಂದುವರೆಸಿದ್ದರು . ಇನ್ನು ಅಂಬರೀಶ್ ಕೂಡಾ ಕೇರಳದಿಂದ ಶೂಟಿಂಗ್ ಮುಗಿಸಿಕೊಂಡು ದಿನದ ಹಿಂದಷ್ಟೇ ವಾಪಾಸಾಗಿದ್ದರು. ಅವರು ತಮ್ಮ ಹುಟ್ಟು ಹಬ್ಬದ ಹೊಸ್ತಿಲಲ್ಲಿಯೇ ಅಂಬಿ ನಿಂಗೆ ವಯಸಾಯ್ತೋ ಚಿತ್ರೀಕರಣವನ್ನೂ ಮುಗಿಸಿಕೊಂಡ ಖುಷಿಯಲ್ಲಿದ್ದರು.
ದರ್ಶನ್ ಅತೀವವಾಗಿ ಗೌರವಿಸೋ ವ್ಯಕ್ತಿತ್ವಗಳಲ್ಲಿ ಅಂಬರೀಶ್ ಪ್ರಮುಖರು. ಅಂಬಿಯ ಖದರಿನ ಒದಂಶ ದರ್ಶನ್ ಅವರ ವ್ಯಕ್ತಿತ್ವದಲ್ಲಿಯೂ ಇದೆ ಎಂಬ ಬಗ್ಗೆಯೂ ಸಾಕಷ್ಟು ಬಾರಿ ಚರ್ಚೆಯಾಗಿದೆ. ಅಂಬಿಯಂತೆಯೇ ಎಲ್ಲರನ್ನೂ ಪ್ರೀತಿಯಿಂದಲೇ ಕಾಣೋ ದರ್ಶನ್ ತಮ್ಮ ಪ್ರೀತಿಪಾತ್ರ ವ್ಯಕ್ತಿತ್ವದ ಹುಟ್ಟುಹಬ್ಬವನ್ನು ಆಚರಿಸಿದ ಖುಷಿಯಲ್ಲಿದ್ದರು. ಆದರೆ ಇದು ಅಂಬಿಯ ಕಟ್ಟಕಡೆಯ ಹುಟ್ಟುಹಬ್ಬ ಅನ್ನೋದು ಮಾತ್ರ ಯಾರಿಗೂ ತಿಳಿದಿರಲಿಲ್ಲ….
#