ಸಿನೆಮಾ ಜಗತ್ತಿನಲ್ಲೊಂದು ಅಲಿಖಿತ ನಿಯಮವಿದೆ. ನಾಯಕನಟ ತನ್ನ ವರ್ಚಸ್ಸು ಕಳೆದುಕೊಂಡರೆ, ಜನಪ್ರಿಯತೆ ಕುಗ್ಗಿದರೆ, ವಯಸ್ಸಾದರೆ- ಹೊಸಬರಿಗೆ ದಾರಿ ಮಾಡಿಕೊಟ್ಟು, ತಾನು ಹಿಂದಕ್ಕೆ ಸರಿಯುತ್ತಾನೆ. ಅಥವಾ ಆ ಕಾಲವೇ ಆತನನ್ನು ನೇಪಥ್ಯಕ್ಕೆ ನೂಕುತ್ತದೆ. ಅಂಬರೀಷ್, ತಾವು ಸಿನೆಮಾ ರಂಗಕ್ಕೆ ಬರುವಾಗ, ವಯಸ್ಸಾದವರನ್ನು ಹಿಂದಕ್ಕೆ ಸರಿಸಿ, ತಮಗೆ ವಯಸ್ಸಾದಾಗ ಹಿಂದಕ್ಕೆ ಸರಿದು-ಎರಡನ್ನೂ ಕಂಡವರು. ಆ ಹಂತವನ್ನು ದಾಟಿ ಬಂದವರು. ಅದನ್ನೇ ಅವರು ರಾಜಕಾರಣದಲ್ಲೂ ಮಾಡಿದ್ದಾರೆ. ಮಾಡುವಾಗ ಅಂಜದೆ, ಅಳುಕದೆ ಸಹಜವಾಗಿ ವರ್ತಿಸಿದ್ದಾರೆ. ಅವರ ಪ್ರಕಾರ ಅದೇನು ಮಹಾ ತ್ಯಾಗದ ಕೆಲಸವಲ್ಲ. ‘‘ನನಗೆ ವಯಸ್ಸಾಯ್ತು, ಓಡಾಡಕ್ಕಾಗಲ್ಲ, ಬೇಡ’’ ಎಂದು, ತಮ್ಮ ಎಂದಿನ ‘ಅಂಬಿ ಶೈಲಿ’ಯಲ್ಲಿಯೇ ಹೇಳಿದ್ದಾರೆ. ಅವರ ನಡೆಯಲ್ಲಿ ನುಡಿಯಲ್ಲಿ ಎಲ್ಲೂ ಕೃತ್ರಿಮತೆ ಕಂಡುಬರಲಿಲ್ಲ. ಅದು ಅವರ ಜಾಯಮಾನವೂ ಅಲ್ಲ.
ಈ ಅಂಬಿ ಶೈಲಿಯಲ್ಲಿ ರೆಬೆಲ್ ಗುಣ, ಮಂಡ್ಯದ ಗಂಡಿನ ಗತ್ತು ಎಲ್ಲಾ ಇರಬಹುದು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಗೋಚರಿಸಬಹುದು. ಹುಂಬ, ಒರಟ, ಉಡಾಫೆ, ಶಿಸ್ತು-ಶ್ರದ್ಧೆಗಳಿಲ್ಲದ ಉಡಾಳನಂತೆ ಕಾಣಲೂಬಹುದು. ಆದರೆ ಆ ಗುಣಗಳೇ ಇಲ್ಲಿಯವರೆಗೆ ಕರೆದುಕೊಂಡು ಬಂದಿರುವುದು; ಅವುಗಳೇ ಯಶಸ್ಸಿನ ಮೆಟ್ಟಿಲುಗಳು; ಶಕ್ತಿ ಸಾಮರ್ಥ್ಯಗಳು ಎಂದು ಅವರು ಬಲವಾಗಿ ನಂಬಿದ್ದಾರೆ. ಹಾಗಾಗಿ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ. ಅಂಬಿ ಅಂದ್ರೆ ಹಿಂಗೆ ಇರಬೇಕೆಂದು ಹಠಕ್ಕೆ ಬಿದ್ದವರಂತೆ ಕಂಡವರು. ಹಾಗೆಯೇ ವರ್ತಿಸಿದವರು.
ಹಾಗೆ ನೋಡಿದರೆ, ಇದೆಲ್ಲವೂ 1972ರಲ್ಲಿಯೇ, ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರದ ಜಲೀಲ್ ಪಾತ್ರದಲ್ಲಿಯೇ ಇತ್ತು. ಆ ರೆಬೆಲ್ತನವೇ ಅವರ ನಿಜವಾದ ಗುಣವಾಗಿತ್ತು. ಇಲ್ಲಿಯವರೆಗೆ ನೂರಾರು ಸಿನೆಮಾಗಳಲ್ಲಿ ನಟಿಸಿರುವ, ಈಗಲೂ ನಟಿಸುತ್ತಿರುವ ಅಂಬರೀಷ್, ಯಾವುದನ್ನೂ ಮನಸ್ಸಿಟ್ಟು ಮಾಡಿದವರಲ್ಲ. ‘ಚಲ್ತಾ ಹೈ’ ಎಂದು ಕಾಲದೊಂದಿಗೆ ಕೂಡಾವಳಿ ಮಾಡಿಕೊಂಡವರು. ಚಿತ್ರಬದುಕಿನ ಅವರ ಸಾಧನೆಯತ್ತ ಗಮನ ಹರಿಸಿದರೆ, ಅವರು ಮಾಡಿದ ಪಾತ್ರಗಳು ಮತ್ತು ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅದು ಗೊತ್ತಾಗುತ್ತದೆ. ಪುಟ್ಟಣ್ಣ ಕಣಗಾಲರಂತಹ ನಿರ್ದೇಶಕರ ಕೈಗೆ ಸಿಕ್ಕ ಅಂಬಿಯೇ ಬೇರೆ, ಇತರ ನಿರ್ದೇಶಕರ ಕೈಗೆ ಸಿಕ್ಕ ಅಂಬಿಯೇ ಬೇರೆ. ಅದೇ ರಾಜಕಾರಣದಲ್ಲಿಯೂ ರಿಪೀಟ್ ಆಗಿದೆ. ಚಿತ್ರನಟ ಅಂಬಿಗಿರುವ ಸಿನೆಮಾ ಅಭಿಮಾನಿಗಳಂತೆ, ರಾಜಕಾರಣದಲ್ಲೂ ಅವರದೇ ಆದ ಸೆಲೆಕ್ಟಿವ್ ಹಿಂಬಾಲಕರಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ- ಅಂಬರೀಷರಲ್ಲಿರಬಹುದಾದ ನಿಜವಾದ ಪ್ರತಿಭೆಯನ್ನು ಸಿನೆಮಾರಂಗವೂ ಹೊರಗೆಳೆಯಲಿಲ್ಲ, ರಾಜಕಾರಣವೂ ಬಳಸಿಕೊಳ್ಳಲಿಲ್ಲ. ಅಂಬರೀಷರೂ ಮನಸ್ಸು ಮಾಡಲಿಲ್ಲ. ಬೀಸುವ ಗಾಳಿಯಂತೆ, ಹರಿಯುವ ನೀರಿನಂತೆ ಬದುಕಿದರು.
1994ರಲ್ಲಿ ಮೊದಲ ಬಾರಿಗೆ, ಅಂಬರೀಷ್ ಎಂಬ ಜನಪ್ರಿಯ ನಟನನ್ನು ಮತ್ತು ಆತನ ಬೆನ್ನಿಗಿರುವ ಜಾತಿಬಲವನ್ನು ರಾಜಕೀಯವಾಗಿ ಬಳಸಿಕೊಳ್ಳುವ, ಅದರಿಂದ ಅನುಕೂಲ ಪಡೆಯುವ ದಿಸೆಯಲ್ಲಿ ದೇವೇಗೌಡರು ಅವರನ್ನು ರಾಜಕೀಯಕ್ಕೆ ಕರೆತಂದರು. ಆಗ ಹಾಸನ ಬಿಟ್ಟು ರಾಮನಗರದತ್ತ ಹೆಜ್ಜೆ ಹಾಕಿದ್ದ ದೇವೇಗೌಡರ ಮುಂದೆ ಮುಖ್ಯಮಂತ್ರಿಯಾಗಲೇಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ನಾಡಿನ ಜನತೆ ಗೌಡರನ್ನು ಗದ್ದುಗೆ ಮೇಲೆ ಕೂರಿಸಿದ್ದೂ ಆಗಿತ್ತು. ಮುಂದುವರಿದು, ಗೌಡರಿಗೆ ಪ್ರಧಾನಮಂತ್ರಿ ಪಟ್ಟವೂ ಅರಸಿ ಬಂದು ದಿಲ್ಲಿಗೆ ತೆರಳಿದಾಗ, ತೆರವಾದ ರಾಮನಗರ ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ನಿಲ್ಲಿಸಬಹುದಿತ್ತು. ಆದರೆ ಗೌಡರು ಅಂಬರೀಷರನ್ನು ಅಭ್ಯರ್ಥಿಯನ್ನಾಗಿಸಿದರು. ಆ ಸಂದರ್ಭದ ಗೌಡರ ಏರುಗತಿ ರಾಜಕಾರಣವನ್ನು ಕಂಡ ಅಂಬರೀಷ್, ಹಿಂದೆ ಮುಂದೆ ನೋಡದೆ, ಕ್ಷೇತ್ರವನ್ನು ಅರಿಯದೆ, ಜನಪ್ರಿಯತೆ ಮತ್ತು ಜಾತಿಯನ್ನು ಪಣಕ್ಕಿಟ್ಟು ಸ್ಪರ್ಧೆಗಿಳಿದರು, ಸ್ಥಳೀಯ ನಾಯಕ ಸಿ.ಎಂ.ಲಿಂಗಪ್ಪರಿಂದ ಪರಾಭವಗೊಂಡರು.
ಎರಡು ವರ್ಷಗಳ ಕಾಲ ಆ ಕಡೆ ತಲೆಹಾಕದ ಅಂಬರೀಷ್, ನಂತರ ತಮ್ಮ ತವರು ನೆಲದಲ್ಲಿ ನೆಲೆ ಹುಡುಕಿಕೊಂಡರು. 1998ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಅಲ್ಲಿಗೆ ದೇವೇಗೌಡರ ಸಂಪರ್ಕಕ್ಕೆ ಬಂದು ನಾಲ್ಕು ವರ್ಷಗಳಾಗಿತ್ತು, ಅಧಿಕಾರವೂ ಇಲ್ಲವಾಗಿತ್ತು, ಗೌಡರ ಒಳರಾಜಕಾರಣದ ಪಟ್ಟುಗಳೂ ಗೊತ್ತಾಗಿತ್ತು. ಹೊಸ ಚಿತ್ರಕ್ಕೆ ಹೊಸ ನಿರ್ಮಾಪಕರನ್ನು ಹುಡುಕಿಕೊಂಡಂತೆ ಅಥವಾ ನಾಯಕನಟನನ್ನು ಅವರೇ ಹುಡುಕಿಕೊಂಡು ಬಂದಂತೆ, ಶಿವರಾಮೇಗೌಡರ ಕಡೆಯಿಂದ 1999ರಲ್ಲಿ ಅಂಬರೀಷ್ ಕಾಂಗ್ರೆಸ್ ಪಕ್ಷದ ಪಾಲಾದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು. ಅಂಬರೀಷ್ ಮಂಡ್ಯ ಲೋಕಸಭಾ ಸದಸ್ಯರಾದರು. ತಮಗಿಷ್ಟವಾದ ಬೆಂಗಳೂರು-ದಿಲ್ಲಿ ಓಡಾಟದಲ್ಲಿ ಮುಳುಗಿದರು. ಅವರ ವರ್ಚಸ್ಸು, ಜನಪ್ರಿಯತೆ ಕಂಡ ಸೋನಿಯಾ ಗಾಂಧಿ, ಅಂಬರೀಷರನ್ನು ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ಮಾಡಿ, ‘ಪಾರ್ಟಿ ಸ್ಟ್ರೆಂಥನ್ ಮಾಡಿ’ ಎಂದು ಸ್ಥಾನ ನೀಡಿ ಗೌರವಿಸಿದರು. ‘‘ಅಂಬ್ರೀಷ್ ಏಳೋದೆ ಮಧ್ಯಾಹ್ನ 12 ಗಂಟೆಗೆ, ಅದಾದ ಮೇಲೆ ಫ್ರೆಂಡ್ಸ್ ಜೊತೆ ಕಾರ್ಡ್ಸ್, ಕುದುರೆ ರೇಸು ಅಂತೆಲ್ಲ ಬ್ಯುಸಿ, ಅವರಿಗೆ ‘ಪಾರ್ಟಿ’ ಅಂದಾಕ್ಷಣ, ಯೋಚ್ನೆಗೆ ಬರೋದು ಸಂಜೆ ಪಾರ್ಟಿ’’ ಎಂದು ಕಾಂಗ್ರೆಸಿಗರೇ ಲೇವಡಿ ಮಾಡಿದರು. ಅಂಬರೀಷರೂ ಕಾಂಗ್ರೆಸಿಗರ ಮಾತಿಗೆ ಬೆಲೆ ಬರುವಂತೆಯೇ ನಡೆದುಕೊಂಡರು.
2004ರಲ್ಲಿ ಮತ್ತೊಮ್ಮೆ ಸಂಸದರಾದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಅಂಬರೀಷರಿಗೊಂದು ಅತ್ಯುತ್ತಮ ಅವಕಾಶ- ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಸ್ಥಾನ(ಅ. 2006ರಿಂದ ಫೆ. 2007ರವರೆಗೆ) ಲಭಿಸಿತು. ಅದನ್ನವರು ಸರಿಯಾಗಿ ನಿರ್ವಹಿಸಿದ್ದರೆ, ಅಂಬರೀಷ್ ಹಾಗೂ ಅವರ ರಾಜಕೀಯ ಬದುಕು ಬದಲಾಗುತ್ತಿತ್ತು. ಅದಕ್ಕೆ ಬೇಕಾದ ವಿಪುಲ ಅವಕಾಶವೂ ಇತ್ತು. ಆದರೆ ಸಚಿವ ಸ್ಥಾನ ಸಿಕ್ಕರೂ, ಆ ಸ್ಥಾನದ ಮಹತ್ವವನ್ನು ಅರಿಯದೆ, ಅದರ ವ್ಯಾಪ್ತಿ ವಿಸ್ತಾರವನ್ನು ತಿಳಿಯದೆ, ಕಚೇರಿಗೆ ಕಾಲಿಡದೆ, ಕಾವೇರಿ ನೆಪ ಹೇಳಿ ರಾಜೀನಾಮೆ ಕೊಟ್ಟು, ‘ಕೊಟ್ಟ ಕುದುರೆಯನೇರಲಾರದವನು..’ ಎಂಬ ಟೀಕೆಗೆ ಗುರಿಯಾದರು.
ಆ ವೇಳೆಗೆ ಅಂಬರೀಷ್ ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಕಾಲಿಟ್ಟು 10 ವರ್ಷಗಳಾಗಿತ್ತು. ಜಿಲ್ಲೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಹಿರಿತಲೆಗಳಾದ ಜಿ.ಮಾದೇಗೌಡ, ಚೌಡಯ್ಯ, ಎಸ್.ಎಂ.ಕೃಷ್ಣರು ಹಿಂದಕ್ಕೆ ಸರಿದು, ಅಂಬರೀಷ್, ಚೆಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣರಂತಹ ಹೊಸ ಪೀಳಿಗೆಯ ಕಾರುಬಾರು ಜೋರಾಗಿತ್ತು. ಕೃಷ್ಣರ ಗುಂಪಿನಲ್ಲಿ ಆತ್ಮಾನಂದರಂತಹವರು ಗುರುತಿಸಿಕೊಂಡು ಅಲ್ಲೇ ಕೊಳೆಯುತ್ತಿದ್ದರೆ, ಅಂಬರೀಷರ ಗುಂಪಿನಲ್ಲಿ ಅಮರಾವತಿ ಚಂದ್ರಶೇಖರ್ ಥರದವರು ಮೆರೆಯುತ್ತಿದ್ದರು. ಏತನ್ಮಧ್ಯೆ, 2008ರಲ್ಲಿ ರಾಜ್ಯ ರಾಜಕಾರಣಕ್ಕೆ ಬರಬೇಕೆಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಜೆಡಿಎಸ್ನ ರಮೇಶಬಾಬು ಬಂಡಿಸಿದ್ದೇಗೌಡರಿಂದ ಸೋತರು. ಆನಂತರ ಲೋಕಸಭೆಗೆ ನಿಂತು ಚೆಲುವರಾಯಸ್ವಾಮಿ ವಿರುದ್ಧ ಮತ್ತೊಮ್ಮೆ ಸೋಲು ಕಂಡರು. ಅಷ್ಟರಲ್ಲಾಗಲೇ ಜಿಲ್ಲೆಯ ಹಿರಿಯ ನಾಯಕ ಎಸ್.ಎಂ.ಕೃಷ್ಣರೊಂದಿಗೆ ಕೊಸರಿಕೊಂಡಿದ್ದರು. ಅವರು ಅಂಬರೀಷರಿಗೆ ಬ್ರೇಕ್ ಹಾಕಲು ನಟಿ ರಮ್ಯಾರನ್ನು ತಂದು ಕೂರಿಸಿದ್ದರು. ಅಷ್ಟಾದರೂ, ಮಂಡ್ಯದ ಮತದಾರರ ಕೃಪೆಯಿಂದ 2013ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಕಾಂಗ್ರೆಸ್ ಬಹುಮತ ಪಡೆದು ಸರಕಾರ ರಚಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಪ್ರಬಲ ಒಕ್ಕಲಿಗ ಜಾತಿ ಮತ್ತು ಮಂಡ್ಯ ಜಿಲ್ಲೆಯ ಪ್ರಾತಿನಿಧ್ಯದ ಕೋಟಾದಲ್ಲಿ ಅಂಬರೀಷರಿಗೆ, ವಸತಿ ಖಾತೆ ಕೊಟ್ಟು ಹೊಸ ಜವಾಬ್ದಾರಿ ಹೊರಿಸಲಾಯಿತು. ಮತ್ತೆ ಮತ್ತೊಂದು ಮಹತ್ವದ ಅವಕಾಶ.
ಆದರೆ ಅಂಬಿ ಗೌರವಾನ್ವಿತ ಸಚಿವ ಸ್ಥಾನಕ್ಕೆ ನ್ಯಾಯ ಸಲ್ಲಿಸದೆ, ಘನತೆವೆತ್ತ ಸದನಕ್ಕೆ ಬರದೆ, ವಿರೋಧಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೆ, ಸರಕಾರವನ್ನು ಮುಜುಗರಕ್ಕೀಡುಮಾಡಿದರು. ಗೆಲ್ಲಿಸಿ, ಗದ್ದುಗೆ ನೀಡಿ ಗೌರವಿಸಿದ ಮಂಡ್ಯದ ಮತದಾರರನ್ನೂ ಮರೆತರು. ಖಾತೆಯಲ್ಲಿ ಕೆಲಸಗಳಾಗುತ್ತಿದ್ದವು, ನಿಜ. ಕೇಂದ್ರ ಸರಕಾರದಿಂದ ಪ್ರಶಸ್ತಿಗಳೂ ಬಂದಿದ್ದವು, ನಿಜ. ಆದರೆ ಅವುಗಳನ್ನು ಸರಕಾರದ ಕೆಲಸಗಳನ್ನಾಗಿ ಪರಿವರ್ತಿಸುವ, ಪಕ್ಷದ ಖಾತೆಗೆ ಜಮಾ ಮಾಡುವ ಛಾತಿ ಅಂಬರೀಷರಲ್ಲಿ ಕಾಣಲಿಲ್ಲ. ಆಸಕ್ತಿಯೂ ಇರಲಿಲ್ಲ, ಪ್ರಯತ್ನವನ್ನೂ ಪಡಲಿಲ್ಲ. ಆದರೆ ಪಕ್ಷ ಅವರಂತೆ ಯೋಚಿಸುವುದು, ವರ್ತಿಸುವುದು ಸಾಧ್ಯವಿರಲಿಲ್ಲ. ವ್ಯಕ್ತಿಯೇ ಬೇರೆ, ಪಕ್ಷವೇ ಬೇರೆ. ಇವೆರಡರ ನಡುವಿನ ವ್ಯತ್ಯಾಸವನ್ನೇ ಅಂಬರೀಷ್ ಅರಿಯಲಿಲ್ಲ. ಜೊತೆಗೆ ಆರೋಗ್ಯ ಕೈಕೊಟ್ಟು ಸಿಂಗಪೂರ್ಗೆ ಹಾರಿದರು. ವಾಪಸಾದ ನಂತರ, ತಾನೊಬ್ಬ ಸಚಿವ, ತಮಗೊಂದು ಜವಾಬ್ದಾರಿಯುತ ಖಾತೆಯಿದೆ, ಅದಕ್ಕೊಂದು ಇಲಾಖೆಯಿದೆ, ಕಾರ್ಯಭಾರಗಳಿವೆ, ರಾಜ್ಯದ ಜನರ ಆಶೋತ್ತರಗಳಿವೆ ಎಂಬುದನ್ನೇ ಮರೆತು ದಣಿದಿದ್ದ ದೇಹದ ಆರೈಕೆಯಲ್ಲಿ ಮುಳುಗಿದರು.
ವಿರೋಧ ಪಕ್ಷಗಳ ಟೀಕೆಗಳು, ಸರಕಾರದ ಮೇಲೆ ಬೀರುತ್ತಿದ್ದ ಪರಿಣಾಮ, ಪಕ್ಷದ ವರ್ಚಸ್ಸು- ಎಲ್ಲವನ್ನು ಅಳೆದು ತೂಗಿ, ಸಚಿವ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ವಸತಿ ಖಾತೆಯಿಂದ ಅಂಬರೀಷರನ್ನು ಬಿಡುಗಡೆಗೊಳಿಸಿದರು. ‘‘ಕನಕದಾಸನನ್ನು ಕನಕರಾಜನನ್ನಾಗಿ ಮಾಡಿ ಎಂದಿದ್ದು ನಾನು, ಆಗ ಮೂಲಕಾಂಗ್ರೆಸಿಗರೆಲ್ಲ ಸಿದ್ದರಾಮಯ್ಯನವರ ವಿರುದ್ಧವಿದ್ದರು. ಈಗ ಅವರೆಲ್ಲ ಒಂದಾಗಿದ್ದಾರೆ, ನಾನು ಹೊರಗಿದ್ದೇನೆ. ಪರವಾಗಿಲ್ಲ, ಅವರೆಲ್ಲ ಚೆನ್ನಾಗಿರಲಿ. ಆದರೆ ಸಚಿವ ಸ್ಥಾನದಿಂದ ತೆಗಿವಾಗ ಸಿದ್ದರಾಮಯ್ಯ ನಡೆದುಕೊಂಡ ರೀತಿ ನನಗೆ ಬೇಸರ ತರಿಸಿದೆ. ನನ್ನ ಕರೆದು ಸಚಿವ ಸ್ಥಾನ ಬಿಡು ಎಂದಿದ್ದರೆ, ಬಿಟ್ಟುಬರುತ್ತಿದ್ದೆ, ಆದರೆ ನನಗೆ ತಿಳಿಸದೆ, ತೆಗೆದುಹಾಕಿದ್ದು ಸರಿಯಲ್ಲ’’ ಎನ್ನುವುದು ಅಂಬರೀಷ್ ಕೊಸರಿಕೊಳ್ಳುವುದಕ್ಕೆ ಕೊಡುವ ಕಾರಣ.
ಆದರೆ ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಒಂದು ರೀತಿಯ ಹೋರಾಟವಾದರೆ, ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳುವುದು ಇನ್ನೊಂದು ರೀತಿಯ ಹೋರಾಟ. ನಾಲ್ಕು ಸಲ ಗೆದ್ದು, ಮೂರು ಸಲ ಸೋತಿರುವ 66ರ ಹರೆಯದ ಅಂಬರೀಷರಿಗೆ ಅದೂ ಕೂಡ ಗೊತ್ತಿದೆ. ಗೊತ್ತಿದ್ದೂ ಕೂಡ ಟಿಕೆಟ್ ಪಡೆಯುವಲ್ಲಿ ಮೊಂಡಾಟಕ್ಕೆ ಬಿದ್ದರು. ಹಳೆಮೈಸೂರು ಭಾಗದಲ್ಲಿ ಕಾಂಗ್ರೆಸಿಗೆ ಕಷ್ಟ ಎಂಬ ತಲೆನೋವು ತಂದಿಟ್ಟರು. ಕೊನೆಗೆ ‘‘ನನಗ್ಯಾಕೆ ಟಿಕೆಟ್ಟು, ಯಾರಿಗೆ ಬೇಕಾದರೂ ಕೊಡಿ, ಪ್ರಚಾರಕ್ಕೆ ಬರಲ್ಲ’’ ಎಂದರು. ಸದ್ಯಕ್ಕೆ ಕಾಂಗ್ರೆಸ್ ನಿರಾಳವಾಗಿರಬಹುದು. ಆದರೆ ಇದು ಕೂಡ ಇವತ್ತಿಗೆ, ನಾಳೆ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಸೊಗಸನ್ನು ಅರಿಯದ ಅಂಬಿ, ಗೆಲ್ಲಿಸಿದ ಮತದಾರರನ್ನು ಅವಮಾನಿಸಿದರು, ರಾಜಕಾರಣಕ್ಕೆ ಕರೆತಂದ ದೇವೇಗೌಡರಿಂದ ದೂರವಾದರು, ಎಸ್.ಎಂ.ಕೃಷ್ಣರೊಂದಿಗೆ ಕಾದಾಟಕ್ಕಿಳಿದರು, ಸಿದ್ದರಾಮಯ್ಯರೊಂದಿಗೆ ಮುನಿಸಿಕೊಂಡರು, ಆಪ್ತ ಅಮರಾವತಿ ಚಂದ್ರಶೇಖರ್ರನ್ನು ದೂರವಿಟ್ಟರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ಬಿಟ್ಟರು. ಆಪ್ತರಿಗೆ ಟಿಕೆಟ್ ಬೇಕು ಎಂದರು, ಬೇಡ ಎಂದರು. ‘‘ಎಲ್ರ ಬಂಡವಾಳನೂ ಗೊತ್ತು, ಬಿಡಲೆ’ ಎಂದು ಎಲ್ಲರನ್ನು ಹಗುರವಾಗಿ ಕಂಡರು. ಎಲ್ಲೋ ಕೆಲವು ರಾಜಕಾರಣಿಗಳು ಹಾಗೂ ಚಿತ್ರರಂಗದವರು ಅವರನ್ನು ದುರು ಪಯೋಗಪಡಿಸಿಕೊಂಡಿರಬಹುದು, ಬಳಸಿಕೊಂಡು ಮೋಸ ಮಾಡಿರಲೂಬಹುದು. ಆದರೆ ಏನನ್ನೂ ಬಯಸದ ಕನ್ನಡಿಗರ ಪ್ರೀತಿ, ಅಭಿಮಾನದ ಮಹಾಗೋಡೆ ಎಲ್ಲಾ ಕಾಲಕ್ಕೂ ಅಂಬಿಯ ಬೆನ್ನಿಗೆ ನಿಂತಿದೆಯಲ್ಲವೇ?.
No Comment! Be the first one.