ಅಂಬಿ ನಿಂಗೆ ವಯಸಾಯ್ತೋ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದಶನ ಕಾಣುತ್ತಿದೆ. ಅಂಬರೀಶ್ ಅವರ ಸಹಜಾಭಿನಯ, ಇಡೀ ಚಿತ್ರವನ್ನು ರೀಮೇಕ್ ಎಂಬ ಭಾವವೇ ಕಾಡದಂತೆ ನಿರ್ದೇಶನ ಮಾಡಿರೋ ಗುರುದತ್ತ ಗಾಣಿಗರ ಕಸುಬುದಾರಿಕೆ… ಇವೆಲ್ಲವೂ ಸೇರಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ಕನ್ನಡ ಚಿತ್ರರಂಗದ ತಾರೆಯರೂ ಕೂಡಾ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಿ ಮುಕ್ತ ಕಂಠದಿಂದ ಮೆಚ್ಚಿಕೊಳ್ಳುತ್ತಿದ್ದಾರೆ.
ಇದೀಗ ತಮ್ಮ ಚಿತ್ರಗಳ ಚಿತ್ರೀಕರಣಕ್ಕೊಂದು ಬ್ರೇಕ್ ಕೊಟ್ಟು ಈ ಚಿತ್ರವನ್ನು ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ೧.೩೦ಕ್ಕೆ ಶಿವಣ್ಣ ಒರಾಯನ್ ಮಾಲ್ನಲ್ಲಿ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಲಿದ್ದಾರೆ. ಇವರ ಜೊತೆಗೆ ಕನ್ನಡದ ಯುವ ನಿರ್ದೇಶಕರಾದ ಸಂತೋಷ್ ಆನಂದ್ರಾಮ್, ತರುಣ್ ಸುಧೀರ್, ಪವನ್ ಒಡೆಯರ್ ಸೇರಿದಂತೆ ಕೆಸಿಸಿ ಸದಸ್ಯರೆಲ್ಲರೂ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ.
ಈಗಾಗಲೇ ಕನ್ನಡದ ಬಹುತೇಕ ನಟ ನಟಿಯರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅಂಬರೀಶ್ ಅವರ ಸಹಜಾಭಿನಯಕ್ಕೆ ಮನ ಸೋತಿದ್ದಾರೆ. ರೀಮೇಕ್ ಬಗ್ಗೆ ಇರೋ ಭಾವನೆಗಳನ್ನು ಬುಡ ಮೇಲು ಮಾಡುವಂತೆ ಕಥೆಯನ್ನು ನೇಟಿವಿಟಿಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟಿರುವ ಗುರುದತ್ ಬಗ್ಗೆಯೂ ಎಲ್ಲರಲ್ಲಿಯೂ ಮೆಚ್ಚುಗೆ ಇದೆ. ಈ ಮೂಲಕವೇ ಕನ್ನಡ ಚಿತ್ರರಂಗಕ್ಕೊಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾಗಿದೆ ಎಂಬ ಅಭಿಪ್ರಾಯಗಳೇ ಎಲ್ಲೆಡೆ ಕೇಳಿ ಬರುತ್ತಿವೆ.
ಒಟ್ಟಾರೆಯಾಗಿ ಅಂಬಿ ಈ ಚಿತ್ರದ ಮೂಲಕ ಮತ್ತೊಮ್ಮೆ ನಾಯಕನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಕಿಚ್ಚಾ ಸುದೀಪ್ ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಚಿತ್ರವನ್ನು ಬಲು ಆಸ್ಥೆಯಿಂದ ಪೊರೆದಿದ್ದರು. ನಿರ್ಮಾಣದ ಜೊತೆಗೆ ಜ್ಯೂನಿಯರ್ ಅಂಬಿಯಾಗಿಯೂ ನಟಿಸಿದ್ದರು. ಇಮೇಜುಗಳಾಚೆಗಿನ ಅವರ ನಟನೆಯೂ ಜನ ಮನ ಗೆದ್ದಿದೆ. ಈ ಮೂಲಕ ಗುರುದತ್ ಗಾಣಿಗ ಮೇಲೆ ಅವರಿಟ್ಟಿದ್ದ ನಂಬಿಕೆಯೂ ನಿಜವಾಗಿದೆ.
#
No Comment! Be the first one.