ಕನ್ನಡದ ಮೇರುನಟ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಅಭಿಮಾನಿಗಳ ಸೃತಿಪಟಲದಲ್ಲಿ ‘ಅಂಬಿ ನಿಂಗೆ ವಯಸಾಯ್ತೋ’ ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ. ಅನಾರೋಗ್ಯ ಕಾಡುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಚಿತ್ರವನ್ನು ವಿದೇಶಗಳಲ್ಲಿ ಮತ್ತೆ ಬಿಡುಗಡೆ ಮಾಡಬೇಕೆಂದು ಅಲ್ಲಿನ ಅಂಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅದಕ್ಕೆ ಮಣಿದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಗುರುದತ್ ನಿರ್ದೇಶನದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೂಲಕವೇ ವಿದೇಶದಲ್ಲಿರೋ ಕನ್ನಡಿಗರಿಗೆ ಕರ್ಣನನ್ನು ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಡಲು ಜಾಕ್ ಮಂಜು ಮುಂದಾಗಿದ್ದಾರೆ. ಈ ಮೂಲಕವೇ ಅಂಬರೀಶ್ ಅವರು ಬದುಕಿದ ರೀತಿಯನ್ನು ಗೌರವಿಸುವ, ಅವರ ಆದರ್ಶಗಳನ್ನು ಪರಿಪಾಲಿಸುವ ನಿರ್ಧಾರವೊಂದನ್ನೂ ಜಾಕ್ ಮಂಜು ಪ್ರಕಟಿಸಿದ್ದಾರೆ.
ಇದೇ ಶುಕ್ರವಾರ ಈ ಸಿನಿಮಾ ಕ್ಯಾಲಿಫೋರ್ನಿಯಾ, ಚಿಕಾಗೋ, ನ್ಯೂ ಜರ್ಸಿ, ದಲ್ಲಾಸ್, ಟೆಕ್ಸಾಸ್, ಅಟ್ಲಾಂಟಾ, ಗಾರ್ಜಿಯಾ, ವಾಶಿಂಗ್ಟನ್ ಡಿಸಿ ಮುಂತಾದೆಡೆಗಳಲ್ಲಿ ಮರು ಬಿಡುಗಡೆಯಾಗಲಿದೆ.
ವಿದೇಶಗಳಲ್ಲಿ ಅಂಬಿ ನಿಂಗೆ ವಯಸಾಯ್ತೋ ಬಿಡುಗಡೆಯಿಂದ ಬಂದ ಹಣವನ್ನು ಮಂಡ್ಯದಲ್ಲಿ ಬಸ್ ನಾಲೆಗೆ ಉರುಳಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಕೊಡಲು ನಿರ್ಧರಿಸಲಾಗಿದೆ. ಇದರಿಂದೆ ಏನೇ ಹಣ ಬಂದರೂ ಅದನ್ನು ಸುಮಲತಾ ಅಂಬರೀಶ್ ಅವರ ಮೂಲಕವೇ ಸಂಬಂಧಿಸಿದವರಿಗೆ ವಿತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕರ್ನಾಟಕದಲ್ಲಿಯೂ ಈ ಚಿತ್ರವನ್ನು ಮರು ಬಿಡುಗಡೆ ಮಾಡೋ ಯೋಜನೆ ಇದೆ. ಅದರಿಂದ ಬಂದ ಹಣವನ್ನೂ ಕೂಡಾ ಇಂಥಾ ಸಾಮಾಜಿಕ ಕೆಲಸ ಕಾರ್ಯಕ್ಕೆ ವಿನಿಯೋಗಿಸೋ ಆಲೋಚನೆಯೂ ಇದೆಯಂತೆ. ಜೀವನದುದ್ದಕ್ಕೂ ಕೊಡುಗೈ ದಾನಕ್ಕೆ ಹೆಸರಾಗಿದ್ದ ಅಂಬರೀಶ್ ಅವರ ಆದರ್ಶಗಳನ್ನು ಪಾಲಿಸುತ್ತಿರುವ ನಿರ್ಮಾಪಕರ ಕಾರ್ಯ ನಿಜಕ್ಕೂ ಶ್ಲಾಘನೀಯ.
#
No Comment! Be the first one.