‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಹಾಡುಗಳನ್ನು ಲೋಕಸಭಾ ಸದಸ್ಯ ತೇಜಸ್ವಿಸೂರ್ಯ ಇತ್ತೀಚೆಗೆ ಲೋಕಾರ್ಪಣೆಗೊಳಿಸಿದರು. ಚಿತ್ರರಂಗಕ್ಕೆ ಇಂತಹ ನಿರ್ಮಾಪಕರುಗಳು ಬಂದರೆ ಒಳ್ಳೆ ಸಿನಿಮಾಗಳು ಬರುತ್ತವೆ. ಬೇಜಾರಾದಾಗ ಶರಣ್ ಅವರ ಚಿತ್ರಗಳ ತುಣುಕುಗಳನ್ನು ನೋಡೋದು ನನಗೆ ಹವ್ಯಾಸ. ಶರಣ್ ರಂಥಾ ಕಲಾವಿದರು ಇರುವುದರಿಂದಲೇ ಕನ್ನಡ ಸಿನಿಮಾಗಳು ಶ್ರೀಮಂತವಾಗಿವೆ. ಈ ಚಿತ್ರದಲ್ಲಿ ಅನುಭವೀ ಕಲಾವಿದರ ದಂಡೇ ಇರುವುದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ. ಯುಎಸ್ದಲ್ಲಿ ಕನ್ನಡ ಸಂಘಗಳು ಸಾಕಷ್ಟು ಇವೆ. ಆ ಸಾಲಿಗೆ ಈ ಅಧ್ಯಕ್ಷ ಸೇರ್ಪಡೆಯಾಗಲಿ ಎಂದು ಶುಭಹಾರೈಸಿದರು.
ಇದಕ್ಕೂ ಮುನ್ನ ಕಲಾವಿದರು, ತಂತ್ರಜ್ಞರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಂದು ಕಾಲದಲ್ಲಿ ಶರಣ್ ಅವರೊಂದಿಗೆ ಕಷ್ಟಪಟ್ಟು ಸೆಲ್ಫಿ ತೆಗೆದುಕೊಂಡಿದ್ದೆ. ಇಂದು ಅವರೊಂದಿಗೆ ಅಭಿನಯಿಸಿರುವುದು ನನ್ನ ಅದೃಷ್ಟ, ರಾಗಿಣಿ ಅವರೊಂದಿಗೆ ತೆರೆಹಂಚಿಕೊಂಡಿದ್ದು ಇದೇ ಮೊದಲು ಎಂದು ಶಿವರಾಜ್.ಕೆ.ಆರ್.ಪೇಟೆ ಸಂಭ್ರಮ ಪಟ್ಟರು. ಶರಣ್ ಚಿತ್ರಗಳು ಒಳ್ಳೆಯ ನೆನಪುಗಳನ್ನು ಕೊಡುತ್ತದೆ. ಆ ಸಾಲಿಗೆ ಇದು ಸೇರಿಕೊಳ್ಳುತ್ತದೆ ಅಂತ ರಂಗಾಯಣರಘು ಹೇಳಿದರು. ಸಾಮಾನ್ಯವಾಗಿ ಒಂದು ಸಿನಿಮಾಗೆ ಒಂದು ಸಲ ಕೂತು ರೀರೆಕಾರ್ಡಿಂಗ್ ಮಾಡುತ್ತೇವೆ. ಆದರೆ ಆದರೆ ಈ ಸಿನಿಮಾಗೆ ಹಲವಾರು ಸಲ ಕೂತು ಕೆಲಸ ಮಾಡಿ ಹಿನ್ನೆಲೆ ಸಂಗೀತ ನೀತಿದ್ದೇನೆ. ಯಾಕೆಂದರೆ ಒಂದೇ ಗುಕ್ಕಿನಲ್ಲಿ ಕೂತು ಕೆಲಸ ಮಾಡಲು ಈ ಚಿತ್ರದಲ್ಲಿರುವ ದೃಶ್ಯಗಳು ಬಿಡೋದೇ ಇಲ್ಲ. ನಕ್ಕು ನಕ್ಕು ಸುಸ್ತಾಗಿ ಕೆಲಸ ಮಾಡದಂತಾಗಿಬಿಡುತ್ತದೆ ಎಂದು ಹರಿಕೃಷ್ಣ ಹೇಳಿಕೊಂಡರು.
ಇಂದು ಶರಣ್ ಇಲ್ಲಿ ನಿಂತಿದ್ದಾನೆ ಅಂದರೆ ಅದು ನನ್ನೊಬ್ಬನಿಂದ ಆಗಿಲ್ಲ. ಮುಂದಿರುವ ಸಾಕಷ್ಟು ಶಕ್ತಿಗಳು ಸ್ಪೈನಲ್ ಕಾರ್ಡ್ನಂತೆ ಪ್ರೋತ್ಸಾಹ ನೀಡಿವೆ. ಹೈದರಬಾದ್ ಮೂಲದ ಸಂಸ್ಥೆ ಪ್ರಥಮ ಬಾರಿಗೆ ನಿರ್ಮಾಣ ಮಾಡಿರುವ ಕನ್ನಡ ಚಿತ್ರ ಇದು. ಎಲ್ಲವೂ ಅಚ್ಚುಕಟ್ಟು. ಇಷ್ಟೇ ಖರ್ಚು ಆಗುತ್ತದೆಂದು ಮುಂಚಿತವಾಗಿ ಲೆಕ್ಕಹಾಕಿ ಮುಂದಕ್ಕೆ ಹೋಗುತ್ತಾರೆ. ಇಂಥವರು ಕನ್ನಡ ಚಿತ್ರರಂಗಕ್ಕೆ ಬಂದಿರುವುದು ಸಂತಸದ ವಿಷಯ. ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಹಾಸ್ಯ ದೃಶ್ಯಗಳನ್ನು ಸೃಷ್ಟಿಸುವುದು ಕಷ್ಟದ ಕೆಲಸ. ಅದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ೯೯ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ನೂರನೇ ಚಿತ್ರಕ್ಕೆ ನಾಯಕನಾಗಿ ಬಡ್ತಿ ಹೊಂದಿರುವುದು ಭಾರತದ ಇತಿಹಾಸದಲ್ಲಿ ಪ್ರಥಮವೆಂದು ನನ್ನ ಬಗ್ಗೆ ಸಿನಿಪಂಡಿತರು ಹೇಳಿದ್ದಾರೆ. ಇದಕ್ಕೆಲ್ಲಾ ಕಾರಣ ನೀವೆಲ್ಲಾ ಆಗಿರುತ್ತೀರಿ. ಇನ್ನು ಈ ಚಿತ್ರದಲ್ಲಿ ಗೆಲಾಕ್ಸಿ ಆಫ್ ಸ್ಟಾರ್ಸ್ ಇದ್ದಾರೆ. ರಾಗಿಣಿ ಅವರೊಂದಿಗೆ ನಟಿಸಿದ್ದು ಮತ್ತೊಂದು ಪ್ಲಸ್ ಪಾಯಿಂಟ್ ಅಂದರು ಅಧ್ಯಕ್ಷ ಶರಣ್!
ಹಾಸ್ಯ ಚಿತ್ರದಲ್ಲಿ ನಟಿಸಿದ್ದು ಹೊಸ ಅನುಭವ. ಪ್ರತಿ ಪಾತ್ರವು ಅದಕ್ಕೆ ಆಕಾರಗೊಂಡಿದೆ ಅನ್ನೋದು ರಾಗಿಣಿಯ ಅನುಭವದ ಮಾತು. ಇದು ಅಧ್ಯಕ್ಷ ಚಿತ್ರದ ಕತೆಯ ಮುಂದುವರೆದ ಭಾಗವಾಗಿಲ್ಲ. ಅದಕ್ಕೂ ಇದಕ್ಕೂ ಸಂಬಂದವಿಲ್ಲವೆಂದು ಸ್ಪಷ್ಟಪಡಿಸಿದ ನಿರ್ದೇಶಕ ಯೋಗನಂದ್ ಮುದ್ದಾನ್, ಓ ಚಿತ್ರದಲ್ಲಿ ಸಂಪೂರ್ಣ ಮನರಂಜನೆ ತುಂಬಿಕೊಂಡಿದೆ. ಡಿ ಬೀಟ್ಸ್ ಕಂಪನಿಯಿಂದ ಹೊರಬಂದಿರುವ ಹಾಡುಗಳು ಕರ್ನಾಟಕದ ಹೃದಯವನ್ನು ಬೀಟ್ ಮಾಡುತ್ತದೆ. ಪ್ರಾರಂಭದಿಂದ ಕೊನೆವರೆಗೂ ಬೇಜಾರು ತರಿಸದೆ ನಿಮ್ಮನ್ನು ನಗಿಸುತ್ತದೆಂದು ಬಣ್ಣಿಸಿಕೊಂಡರು.
ರಂಗಾಯಣರಘು, ಪದ್ಮಜಾ ರಾವ್, ಸ್ಪಂದನಾ, ಶೈಲಜಾನಾಗ್, ವಿ.ಹರಿಕೃಷ್ಣ, ನಿರ್ಮಾಪಕ ವಿಶ್ವಪ್ರಸಾದ್.ಟಿ.ಜಿ, ಸಹ ನಿರ್ಮಾಪಕ ವಿವೇಕ್ ಕುಚಿಬೋತ್ಲಾ ಮುಂತಾದವರು ಹಾಜರಿದ್ದರು. ಇದರ ಮಧ್ಯೆ ಸಿನಿಮಾದ ಎರಡು ಹಾಡುಗಳು ದೊಡ್ಡ ಪರದೆ ಮೇಲೆ ಪ್ರದರ್ಶನಗೊಂಡಿತು. ಕಾಮಿಡಿ ಕಿಲಾಡಿಗಳು ಕಲಾವಿದರು ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು. ಅಕ್ಟೋಬರ್ ನಾಲ್ಕರಂದು ಚಿತ್ರ ತೆರೆಕಾಣಿಲಿದೆ.