‘ಹೌದು.. ಹದಿನೈದು ವರ್ಷವೆ ಆಗಿರಬೇಕೇನೋ, ಸಿನಿಮಾದ ನಟನೆಯಿಂದ ದೂರವುಳಿದು. ದೀರ್ಘ ಬಿಡುವು ಅಂತಲೇ ಅಂದುಕೊಳ್ಳೋಣ. ಅವೆಲ್ಲ ನಿಶ್ಚಿತವಾದಂಥವು. ನಮ್ಮ ಕೈಲೇನಿಲ್ಲ..’ ಎನ್ನುತ್ತಾರೆ ರಾಘವೇಂದ್ರ ರಾಜ್‍ಕುಮಾರ್. ರಾಮಾಯಣದಲ್ಲಿ ಸೀತೆಯ ವನವಾಸದ ಅವಧಿಯೂ ಹತ್ತಿರತ್ತಿರ ಅಷ್ಟೇ ಇತ್ತು. ಮುಂದಾದದ್ದು ಶುಭಫಲವೇ.
ರಾಘಣ್ಣನ ಬದುಕಿನಲ್ಲೂ ಹಾಗೇ ಆಗುತ್ತದೆಯಾ?
ಯಾಕೆಂದರೆ ಅವರೀಗ ಮತ್ತೆ ಅಭಿನಯ ಶುರು ಮಾಡಿದ್ದಾರೆ. ಎರಡು ಸಿನಿಮಾಗಳ ಚಿತ್ರೀಕರಣ ಮುಗಿದಿದೆ. ಸಾಲದ್ದಕ್ಕೇ ಅವರ ನಿರ್ಮಾಣದಲ್ಲಿ ಹೊಸತೊಂದು ಧಾರಾವಾಹಿ ಆರಂಭವಾಗಿದೆ. ಕಾಕತಾಳೀಯವೆಂಬಂತೆ ಅದರ ಹೆಸರೂ ಮರಳಿ ಬಂದಳು ಸೀತೆ..!
ಹದಿನೈದು ವರ್ಷದ ಅವಧಿ ಹೇಗಿತ್ತು? ಹೇಗೆ ಕಳೆದಿರಿ ಎಂದರೆ ರಾಘಣ್ಣ ಒಂದೊಂದಾಗಿ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ. ‘ಹಿಂತಿರುಗಿ ಅಬ್ಬಬ್ಬ ಅಂತನ್ನಿಸುತ್ತದೆ. ಒಂದರ ಹಿಂದೊಂದು ಆಘಾತ, ನೋವು, ಸಂಕಟ ದುಃಖ, ಸಂತೋಷ, ನಗು.. ಎಲ್ಲವೂ ನಡೆದುಹೋಗಿದೆ. ನಾವೂ ಹ್ಯೂಮನ್ ಬೀಯಿಂಗ್ ತಾನೇ? ಎಲ್ಲರಂತೆ ನಮಗೂ. ಅಪ್ಪಾಜಿಯವರ ಅಪಹರಣವಾಯ್ತು. ತಮಾಶೆಗೂ ನಾವ್ಯಾರು ಹೀಗೆಲ್ಲ ಅಂದುಕೊಂಡಿರಲಿಲ್ಲ. ಆದರೆ ಆಯ್ತು, ಅದನ್ನೇ ವಿಧಿ ಅನ್ನೋದು. ಅಲ್ಲಿಂದ ಮರಳಿ ಬಂದ ಮೇಲೆ ಅವರಿಗೆ ಸರ್ಜರಿ ಆಯ್ತು. ಆ ಸಂಕಟ ಭರಿಸುವುದರೊಳಗಾಗಿ ಅವರು ನಮ್ಮನ್ನಗಲಿದರು. ಇದ್ದಕ್ಕಿದ್ದಂತೆ ಅಮ್ಮ ಅನಾರೋಗ್ಯಕ್ಕೀಡಾದರು. ಕೆಲವೇ ವರ್ಷ, ಅಮ್ಮನೂ ಅಪ್ಪನನ್ನ ಕೂಡಿಕೊಂಡರು. ಆ ತಬ್ಬಲಿತನವನ್ನ ಭರಿಸಲಾಗದೆ ದುಃಖತಪ್ತನಾಗಿರುವಾಗ ದಿಢೀನೆ ನನಗೂ ಆರೋಗ್ಯದಲ್ಲಿ ಏರುಪೇರಾಯ್ತು. ಆಸ್ಪತ್ರೆ, ಚಿಕಿತ್ಸೆ, ಓಡಾಟ ಎಂದು ಮತ್ತಷ್ಟು ವರ್ಷ ಉರುಳಿಹೋಯ್ತು. ನೋಡನೋಡುತ್ತಿದ್ದಂತೇ ಹದಿನೈದು ವರ್ಷಗಳೇ ಮುಗಿದು ಹೋಗಿತ್ತು. ಎಲ್ಲವನ್ನೂ ನಾವು ಪ್ಲಾನ್ ಮಾಡಿ, ಅದರಂತೇ ಬಾಳುತ್ತೇವೆ ಅನ್ನೋದು ಸುಳ್ಳು. ಕಾಲ ಹೇಗೆ ನಡೆಸಿಕೊಳ್ಳುತ್ತದೆಯೋ, ಅದಕ್ಕೆ ತಲೆಬಾಗಿ ಧೈರ್ಯ ಒಗ್ಗೂಡಿಸಿಕೊಂಡು ನಡೆಯಬೇಕು. ಅದನ್ನೇ ನಾನು ಮಾಡಿದೆ’ ಎನ್ನುತ್ತಾರೆ ರಾಘಣ್ಣ.
Leave a Reply
You must be logged in to post a comment.