ಹುಟ್ಟಿದ ನೆಲದ ನಂಟು ಬಿಟ್ಟು ಬೆಂಗಳೂರು ಸೇರಿದವರು ಎಷ್ಟೋ ಜನ ಇದ್ದಾರೆ. ಯಾವ್ಯಾವುದೋ ದಿಕ್ಕಿನಿಂದ ಬದುಕನ್ನರಸಿ ಬಂದವರು ಇಲ್ಲಿ ಒಂದಾಗುತ್ತಾರೆ. ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಒಮ್ಮೆ ಈ ನೆಲಕ್ಕೆ ಕಾಲಿಟ್ಟವರು ಮತ್ತೆ ತಮ್ಮ ಸ್ವಸ್ಥಾನಗಳಿಗೆ ಮರಳೋದು ಕಡಿಮೆ. ಬೆಂಗಳೂರೇನೋ ಬಂದವರನ್ನೆಲ್ಲಾ ಬಾಚಿ ತಬ್ಬುತ್ತದೆ. ಆದರೆ ಇಲ್ಲಿ ಬದುಕುಳಿಯಲು ಒಬ್ಬೊಬ್ಬರೂ ಒಂದೊಂದು ಬಗೆಯಲ್ಲಿ ಕಸರತ್ತು ನಡೆಸುತ್ತಿರುತ್ತಾರೆ.
ಐಟಿ ಉದ್ಯೋಗಿಗಳಿಗೆ ಆರಂಭದಲ್ಲೇ ದೊಡ್ಡ ಸಂಬಳದ ಕೆಲಸ ಸಿಕ್ಕಿರುತ್ತದೆ. ಭಾಷೆ, ಗಡಿಗಳ ಅಂತರವನ್ನು ಮೀರಿ ಮದುವೆಯಾಗುತ್ತಾರೆ. ಕೈತುಂಬ ಪಗಾರ ಎಣಿಸುವ ಹೊತ್ತಿನಲ್ಲಿ ಜೊತೆಯಾದ ಜೋಡಿ ಜೀವಗಳು ಓಡಾಡಲಿಕ್ಕೊಂದು ಕಾರು, ಸ್ವಂತಕ್ಕೊಂದು ಫ್ಲಾಟು ಖರೀದಿಸೋದೇನು ಕಷ್ಟದ ವಿಚಾರವಲ್ಲ. ಸಂಬಳದ ಆಧಾರದ ಮೇಲೆ ಬ್ಯಾಂಕಿನವರು ಬೇಕುಬೇಕಾದಷ್ಟು ಸಾಲ ಕೂಡಾ ಮಂಜೂರು ಮಾಡುತ್ತಾರೆ. ಕ್ರೆಡಿಟ್ ಕಾರ್ಡು ಉಜ್ಜಿದರೆ ಮನೆ ತುಂಬಿಸುವಷ್ಟು ಸಾಮಾನೂ ಸಿಗುತ್ತದೆ. ಎಲ್ಲವೂ ಸರಿಯಿರುವ ತನಕ ಯಾವುದೇ ತಕರಾರುಗಳೂ ಸೃಷ್ಟಿಯಾಗೋದಿಲ್ಲ. ಒಂದು ಸಲ ಕೆಲಸ ಕಳೆದುಕೊಂಡು, ನಾಲ್ಕಾರು ತಿಂಗಳು ಮನೆಯಲ್ಲಿ ಕೂತರೆ ಸಾಲ ಕೊಟ್ಟವರೆಲ್ಲಾ ವಸೂಲಾತಿಗೆ ವಕ್ಕರಿಸಿಕೊಳ್ಳುತ್ತಾರೆ. ದಿನಕ್ಕೆ ನೂರು ರಿಕವರಿ ಕರೆಗಳು ಜೀವ ಹಿಂಡುತ್ತವೆ. ಕಾಲಿಂಗ್ ಬೆಲ್ ಕೂಗಿದರೂ ಬೆಚ್ಚಿಬೀಳುವ ಪರಿಸ್ಥಿತಿ, ತಲೆಮರೆಸಿಕೊಂಡು ತಿರುಗಾಡುವ ಸಂದಿಗ್ಧತೆಗಳನ್ನೆಲ್ಲಾ ಎದುರಿಸಬೇಕಾಗುತ್ತದೆ. ಸಂಪಾದನೆ ನಿಂತು, ಸಾಲಗಾರರು ಮನೆ ಬಾಗಿಲಲ್ಲಿ ಪರೇಡು ಮಾಡಿದರಂತೂ ಗಂಡ ಎನ್ನುವ ವ್ಯಕ್ತಿಯನ್ನು ಅಕ್ಷರಶಃ ಡಸ್ಟ್ ಬಿನ್ ಜಾಗದಲ್ಲಿ ಕೂರಿಸುವ ಹೆಂಡತಿ, ದುಡ್ಡೊಂದೇ ಮುಖ್ಯ, ಅದಿಲ್ಲದಿದ್ದರೆ ನಾಯಿಯೂ ಮೂಸೋದಿಲ್ಲ ಎನ್ನುವ ಫೀಲು ಹುಟ್ಟಿರುತ್ತದೆ.
ಬೆಂಗಳೂರಿನ ಸಹಜ ಬದುಕನ್ನೇ ಸರಕಾಗಿಸಿ ಚೆಂದನೆಯ ಸಿನಿಮಾವೊಂದನ್ನು ಕಟ್ಟಿ ನಿಲ್ಲಿಸಿ ʻಅಮೃತ್ ಅಪಾರ್ಟ್ ಮೆಂಟ್ʼ ಎಂದು ಹೆಸರಿಟ್ಟಿದ್ದಾರೆ. ಲೋನು ತೆಗೆದುಕೊಂಡು ಅಪಾರ್ಟ್ ಮೆಂಟಲ್ಲಿ ಫ್ಲಾಟು ಖರೀದಿಸಿದ ನವಜೋಡಿ. ಮದುವೆ ಓಕೆ ಮನೆಯವರು ಯಾಕೆ ಎನ್ನುವಂತಾ ಹುಡುಗಿ. ಕೆಲಸ ಕಳೆದುಕೊಂಡು ಕೂತ ಹುಡುಗ. ಪ್ರಾಣ ಹಿಂಡುವ ಸಾಲ ವಸೂಲಿಯವರು. ವಿಚ್ಛೇದನವೊಂದೇ ದಾರಿ ಅಂತಾ ತೀರ್ಮಾನಿಸಿದ ಹುಡುಗಿ. ಕಾಟ ಕೊಡುವ ಬ್ಯಾಂಕ್ ಏಜೆಂಟ್ ಜೊತೆ ತಪರಾಕಿ. ಮಾರನೇ ದಿನಕ್ಕೆ ಅದೇ ಏಜೆಂಟ್ ಇವನದ್ದೇ ಫ್ಲಾಟಿನಲ್ಲಿ ಫ್ಲಾಟಾಗಿ ಮಲಗಿ ಉಸಿರು ಚೆಲ್ಲಿರುತ್ತಾನೆ.
ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ ಅಂತಾ ಹುಡುಗ ಏಜೆಂಟನನ್ನು ಕೊಂದುಬಿಟ್ಟನಾ? ಇವನ ಹೆಂಡತಿ ಮತ್ತು ಸತ್ತವನು ಇಬ್ಬರೂ ಕೋಲ್ಕತ್ತಾ ಮೂಲದವರು. ಇವರಿಬ್ಬರಿಗೂ ಮೊದಲೇ ಲಿಂಕಿತ್ತಾ? ಈಕೆಯೇ ಆತನನ್ನು ಕೊಂದಿದ್ದಾ? ಅನುಮಾನಾಸ್ಪದವಾಗಿ ಕಾಣುವ ಆಟೋ ಡ್ರೈವರ್, ಪಕ್ಕದ ಮನೆ ದಢೂತಿ ಮನುಷ್ಯ, ಇಸ್ತ್ರಿ ಅಂಗಡಿಯವನು – ಇಷ್ಟು ಜನರಲ್ಲಿ ಯಾರಾದರೂ ಅವನನ್ನು ಕೊಂದು ಇಲ್ಲಿ ಮಲಗಿಸಿದರಾ? ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಯಾಕೆ ನಿಗೂಢವಾಗಿ ವರ್ತಿಸಿದ? ಕಡೆಗೆ ನೇಣು ಹಾಕಿಕೊಂಡು ಸತ್ತ? ಈ ಕೊಲೆಯ ಹಿಂದೆ ಪೊಲೀಸ್ ಸಬ್ ಇನ್ಸ್ ಪೆಕ್ಟರನದ್ದೇ ಏನಾದರೂ ಕೈವಾಡವಿರಬಹುದಾ? ಮನೆ ಕೆಲಸದ ಹೆಂಗಸಿಗೂ ಈ ಕೊಲೆಗೂ ಖಂಡಿತಾ ಸಂಬಂಧವಿದೆ…. ಹೀಗೆ ಕ್ಷಣಕ್ಷಣಕ್ಕೂ ನೋಡುಗನ ನಿರ್ಧಾರವನ್ನು ಬದಲಿಸುವಂತೆ ಮಾಡಿ, ಕಡೆಗೆ ಯಾರೂ ಊಹಿಸದ ತಿರುವನ್ನು ಅಮೃತಾ ಅಪಾರ್ಟ್ ಮೆಂಟಿನಲ್ಲಿ ಇಡಲಾಗಿದೆ. ನೋವಿನ ಕುಲುಮೆಯಲ್ಲಿ ಬೆಂದಮೇಲಷ್ಟೇ ಸಂಬಂಧ ಗಟ್ಟಿಗೊಳ್ಳುವುದು ಎನ್ನುವ ನಿಜ ವಿಚಾರವನ್ನಿಲ್ಲಿ ತೆರೆದಿಡಲಾಗಿದೆ.
ಅಬ್ಬರದ ಸಂಗೀತ, ಯದ್ವಾತದ್ವಾ ಕುಣಿತ, ನೆಗೆತ, ಬಿಲ್ಡಪ್ಪು ಯಾವುದೂ ಇಲ್ಲಿಲ್ಲ. ನಿಜಕ್ಕೂ ಇದು ಬ್ರಿಲಿಯಂಟ್ ಸ್ಕ್ರೀನ್ ಪ್ಲೇ. ಆದರೆ ಮೇಕಿಂಗು ಸ್ವಲ್ಪ ವೀಕು. ಇನ್ನೊಂದಿಷ್ಟು ತಾಂತ್ರಿಕತೆ ಬಳಸಿಕೊಂಡು ಬೇರೆ ಫೀಲ್ ನೀಡಬಹುದಿತ್ತು. ಇರುವ ಎರಡು ಹಾಡುಗಳಿಗೆ ಎಸ್ ಡಿ ಅರವಿಂದರ ಮುದ್ದಾದ ಟ್ಯೂನುಗಳಿವೆ. ನಿಶ್ಯಬ್ದದಲ್ಲೂ ನಟಿಸುವ ತಾರಕ್ ಪೊನ್ನಪ್ಪ ಪ್ರಿಯವಾಗಲೇಬೇಕು. ಊರ್ವಶಿ ಗೋವರ್ಧನ್ ಕೂಡಾ ಉತ್ತಮ ಆಯ್ಕೆ. ಬಾಲಾಜಿ ಮನೋಹರ್ ಬೇಕಾದಷ್ಟು ಮಜಾ ಕೊಡುತ್ತಾರೆ. ಮಾನಸ ಜೋಷಿ ನಟನೆಗಿಂತಾ ಮೇಕಪ್ಪು ಜಾಸ್ತಿ. ಸಣ್ಣ ಪಾತ್ರವಾದರೂ ಸಿತಾರಾ ನಟನೆ ಸೂಪರ್. ಸಂಪತ್ ಕುಮಾರ್ ರಂಥಾ ಅದ್ಭುತ ನಟನಿಗೆ ಅಷ್ಟು ಚಿಕ್ಕ ಪಾತ್ರ ಕೊಟ್ಟಿದ್ದು ನಿರ್ದೇಶಕರ ದೊಡ್ಡ ಮಿಸ್ಟೇಕು. ಮೊದಲ ಭಾಗ ಸ್ಲೋ ಅನ್ನಿಸಿದರೂ, ಉಳಿದರ್ಧ ಸಾಗೋದು ಗೊತ್ತಾಗುವುದಿಲ್ಲ. ಸಿನೆಮಾಟೋಗ್ರಾಫರ್ ಅರ್ಜುನ್ ಅಜಿತ್, ಕೆಂಪರಾಜು ಕೆಲಸ ನೀಟು. ಬೆಂಗಳೂರನ್ನು ಬಲ್ಲ ಎಲ್ಲರಿಗೂ ಆಪ್ತವಾಗುವಂತಾ ಕತೆ ಇಲ್ಲಿದೆ. ಎಲ್ಲೂ ಅತಿರಂಜಕಗೊಳಿಸದೆ, ಅಷ್ಟೇ ತಣ್ಣಗೆ ನಿರೂಪಿಸಿರುವ ನಿರ್ದೇಶಕ ಗುರುರಾಜ ಕುಲಕರ್ಣಿ ಇಷ್ಟವಾಗುತ್ತಾರೆ.
Comments