ಹದಿಮೂರನೇ ಶತಮಾನದ ಜನ್ನಕವಿ ಬರೆದಿರುವ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿ ಬರಗೂರು ರಾಮಚಂದ್ರಪ್ಪನವರ ನಿರ್ದೇಶನದಲ್ಲಿ ಮರುಸೃಷ್ಟಿ ಗೊಂಡಿರುವ ಕನ್ನಡ ಚಿತ್ರ ‘ಅಮೃತಮತಿ’. ಈ ಚಿತ್ರ ಅಮೆರಿಕಾ ಬೋಸ್ಟನ್ ಅಂತರ ರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಬರಗೂರು ರಾಮಚಂದ್ರಪ್ಪ – ಹಿರಿಯ ಸಾಹಿತಿ, ಸಾಂಸ್ಕೃತಿಕ ಚಿಂತಕ. ಸಾಮಾನ್ಯಕ್ಕೆ ಹಿರಿಯ ಅನ್ನಿಸಿಕೊಂಡವರಲ್ಲಿ ಅನೇಕರು ತಮ್ಮ ಚಟುವಟಿಕೆ, ಕ್ರಿಯಾಶೀಲತೆಗಳಿಗೆ ವಿರಾಮ ನೀಡಿ, ಯಾವತ್ತೋ ಮಾಡಿದ ಸಾಧನೆಯ ನೆರಳಲ್ಲೇ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಆದರೆ ಬರಗೂರರು ಇದಕ್ಕೆ ಅಪವಾದ. ಯಾಕೆಂದರೆ, ಬರಗೂರರ ಕ್ರಿಯೇಟಿವಿಟಿ ಈ ಕ್ಷಣದ ತನಕ ಬತ್ತಿಲ್ಲ. ಹೊಸತೆನ್ನುವುದನ್ನು ನಿರಂತರವಾಗಿ ಸೃಜಿಸುತ್ತಾ, ಸಾಹಿತ್ಯ, ಸಂವಾದ, ಚಳವಳಿ ಮತ್ತು ಸಿನಿಮಾಗಳಲ್ಲಿ ತೊಡಗಿಸಿಕೊಂಡುಬಂದಿರುವ ತೀರಾ ವಿರಳರಲ್ಲಿ ಬರಗೂರು ರಾಮಚಂದ್ರಪ್ಪ ಪ್ರಮುಖರು. ಹಿರಿಯ ಅನ್ನಿಸಿಕೊಂಡಿದ್ದರೂ ಯಾವ ಕಿರಿಯರಿಗೂ ಕಮ್ಮಿಯಿಲ್ಲದಂತೆ ಕೆಲಸ ಮಾಡೋ ಗುಣದಿಂದಲೇ ಬಹುಶಃ ಬರಗೂರು ಯಾವತ್ತಿಗೂ ಪ್ರಸ್ತುತವಾಗಿರುತ್ತಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ದುಡಿದು, ನಂತರ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರಾಗಿ, ಬಂಡಾಯ ಸಾಹಿತ್ಯ ಚಳವಳಿ ಕಟ್ಟಿ, ಹೋರಾಟಗಳಲ್ಲಿ ಪಾಲ್ಗೊಂಡು, ನೂರಾರು ಮೌಲಿಕ ಕೃತಿಗಳನ್ನು ರಚಿಸುತ್ತಾ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ಬಂದಿರುವ ಬರಗೂರರು ಎಲ್ಲದರ ಜೊತೆಗೆ ಸಿನಿಮಾದ ನಂಟನ್ನು ಉಳಿಸಿಕೊಂಡೇ ಬಂದಿದ್ದಾರೆ. ಜನುಮದ ಜೋಡಿಯಂಥಾ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಸಿನಿಮಾಗೆ ಸಂಭಾಷಣೆ ಬರೆದವರು, ಹಗಲು ವೇಷದಂಥಾ ಅಪರೂಪದ ಕಮರ್ಷಿಯಲ್ ಸಿನಿಮಾ ನೀಡಿದವರು, ಜೊತೆಜೊತೆಗೇ ಶಾಂತಿ, ಭಾಗೀರಥಿ, ಉಗ್ರಗಾಮಿ, ಅಂಗುಲಿಮಾಲ ಮೊದಲಾದ ಕಲಾತ್ಮಕ ಮತ್ತು ಚಿಂತನಶೀಲ ಸಿನಿಮಾ ನೀಡಿದವರು ಇವರು. ಸದ್ಯ ಬರಗೂರರ ನಿರ್ದೇಶನದಲ್ಲಿ ರೂಪುಗೊಂಡಿರುವ ಅಮೃತಮತಿ ಸಾಕಷ್ಟು ಕಾರಣಗಳಿಗಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಹದಿಮೂರನೇ ಶತಮಾನದ ಜನ್ನಕವಿ ಬರೆದಿರುವ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿ ಬರಗೂರು ರಾಮಚಂದ್ರಪ್ಪನವರ ನಿರ್ದೇಶನದಲ್ಲಿ ಮರುಸೃಷ್ಟಿ ಗೊಂಡಿರುವ ಕನ್ನಡ ಚಿತ್ರ ‘ಅಮೃತಮತಿ’. ಈ ಚಿತ್ರ ಅಮೆರಿಕಾ ಬೋಸ್ಟನ್ ಅಂತರ ರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಪ್ರಪಂಚದ ವಿವಿಧ ದೇಶಗಳ ಚಿತ್ರಗಳ ಜೊತೆಗೆ ಹೊಸ ಭಾರತೀಯ ಚಿತ್ರಗಳಿಗೆ ಹೆಚ್ಚು ಅವಕಾಶ ಕೊಡುವ ಕಾರಣದಿಂದ ಈ ಚಿತ್ರೋತ್ಸವವನ್ನು ‘ಇಂಡಿಯಾ ಅಂತರ ರಾಷ್ಟ್ರೀಯ ಚಿತ್ರೋತ್ಸವ’ ಎಂಬ ಹೆಸರಿನಿಂದ ನಡೆಸಲಾಗುತ್ತಿರುವುದು ಒಂದು ವಿಶೇಷ.
‘ಅಮೃತಮತಿ’ ಸಿನಿಮಾ ಈಗಾಗಲೇ ನೋಯ್ಡಾ, ಆಸ್ಟ್ರಿಯಾ ಮತ್ತು ಅಟ್ಲಾಂಟ ಅಂತರ ರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದ್ದು, ಬೋಸ್ಟನ್ ಚಿತ್ರೋತ್ಸವವು ನಾಲ್ಕನೆಯದಾಗಿದೆ. ನೋಯ್ಡಾ ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ ಪಾತ್ರ ನಿರ್ವಹಣೆಗಾಗಿ ಬಹುಭಾಷಾ ನಟಿ ಹರಿಪ್ರಿಯ ಉತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಚಿತ್ರದಲ್ಲಿ ಹರಿಪ್ರಿಯ ಅವರಲ್ಲದೆ ಬಹುಭಾಷಾ ನಟ ಕಿಶೋರ್, ಸುಂದರ ರಾಜ್, ಪ್ರಮಿಳಾ ಜೋಷಾಯ್, ತಿಲಕ್, ವತ್ಸಲಾ ಮೋಹನ್, ಸುಪ್ರಿಯಾ ರಾವ್, ಅಂಬರೀಶ್ ಸಾರಾಗಿ ಮುಂತಾದವರು ಅಭಿನಯಿಸಿದ್ದಾರೆ.
ನಿರ್ದೇಶನದ ಜೊತೆಗೆ ಬರಗೂರರು ಚಿತ್ರಕತೆ, ಸಂಭಾಷಣೆ ಮತ್ತು ಮೂರು ಹಾಡುಗಳನ್ನು ಬರೆದಿದ್ದು, ಎರಡು ಜನಪದ ಗೀತೆಗಳನ್ನು ಬಳಸಲಾಗಿದೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಮೂಲಕ ಶ್ರೀ ಪುಟ್ಟಣ್ಣನವರು ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಜ್ ಶಿವು ಮತ್ತು ಪ್ರವೀಣ್ ಸಹನಿರ್ದೇಶನವಿದೆ.