ನಟಿ ಅಮೂಲ್ಯ ಮದುವೆಯಾದ ನಂತರದಲ್ಲಿ ನಟನೆಯಿಂದ ದೂರವೇ ಉಳಿದು ಬಿಟ್ಟಿದ್ದಾಳೆ. ಆದರೆ ಈಕೆ ಸಿನಿಮಾದಾಚೆಗೂ ಆಗಾಗ ಸುದ್ದಿಯಾಗುತ್ತಾ ಬಂದಿರೋದು ರಾಜಕೀಯ ಕಾರಣಗಳಿಂದಾಗಿ. ಹೇಳಿಕೇಳಿ ಮಾವನೇ ರಾಜಕಾರಣಿ. ಹಾಗಿದ್ದ ಮೇಲೆ ಅಮೂಲ್ಯಾ ಕೂಡಾ ರಾಜಕೀಯಕ್ಕಿಳಿಯುತ್ತಾಳೆಂಬ ರೂಮರ್ ಹುಟ್ಟಿಕೊಳ್ಳೋದು ಸಹಜವೇ. ಈ ಬಾರಿ ಮಾತ್ರ ಲೋಕಸಭಾ ಚುನಾವಣಾ ಅಖಾಡಕ್ಕೆ ಅಮೂಲ್ಯ ಅಡಿಯಿರಿಸೋದು ಗ್ಯಾರೆಂಟಿ ಎಂಬಂಥಾ ವಾತಾವರಣವಿದೆ!
ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿಗೆಲ್ಲ ಅಮೂಲ್ಯಾ ಮಾವ ರಾಮಚಂದ್ರ ಜೇಡಿಎಸ್ ಸೇರಿಕೊಂಡಿದ್ದರು. ಕಡೇಯ ಘಳಿಗೆವರೆಗೂ ತನಗೇ ಬಿಜೆಪಿ ಸೀಟು ಸಿಗುತ್ತದೆಂದು ಕಾದು ಕೂತಿದ್ದವರಿಗೆ ಸಿಕ್ಕಿದ್ದು ಶಾಕ್ ಮಾತ್ರ. ಇದರಿಂದ ರೊಚ್ಚಿಗೆದ್ದ ರಾಮಚಂದ್ರ ಸೊಸೆ ಅಮೂಲ್ಯಾ ಸಮೇತ ಇಡೀ ಸಂಸಾರದ ಮೆರವಣಿಗೆಯಲ್ಲಿ ತೆರಳಿ ದೇವೇಗೌಡರ ಅಡ್ಡೆ ಸೇರಿಕೊಂಡಿದ್ದರು.
ಹಾಗೆ ಆ ಚುನಾವಣೆಯಲ್ಲಿ ಜೆಡಿಎಸ್ ನಿಂದ ರಾಮಚಂದ್ರಗೆ ಟಿಕೆಟ್ ಕೂಡಾ ಸಿಕ್ಕಿತ್ತು. ಅಮೂಲ್ಯ ಕೂಡಾ ಬಲು ಹುರುಪಿನಿಂದಲೇ ಕ್ಷೇತ್ರದ ತುಂಬೆಲ್ಲ ಓಡಾಡಿ ಮಾವನ ಪರವಾಗಿ ಪ್ರಚಾರ ಮಾಡಿದ್ದರು. ಇದೀಗ ಈಕೆಯನ್ನೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸ ಬೇಕೆಂಬ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆಯಂತೆ.
ಅಮೂಲ್ಯಾ ಕೂಡಾ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ತುದಿಗಾಲಲ್ಲಿ ನಿಂತಿರೋ ಹಾಗಿದೆ. ಅಮೂಲ್ಯಾಳನ್ನೇ ಕಣಕ್ಕಿಳಿಸೋ ಸಾಧ್ಯತೆಯೇ ಹೆಚ್ಚಿದೆ. ಈ ಸ್ಥಾನ ತನ್ನದಾಗಬೇಕೆಂಬ ಆಸೆ ಮಾವ ರಾಮಚಂದ್ರರಿಗೆ ಇದ್ದರೂ ಅಚ್ಚರಿಯೇನಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋತಾ ಹೊಡೆದಿದ್ದವರನ್ನು ಲೋಕಸಭಾ ಚುನಾವಣೆಯ ಅಖಾಡಕ್ಕಿಳಿಸೋ ರಿಸ್ಕು ವರಿಷ್ಠರಿಗೂ ಬೇಕಿಲ್ಲ. ಈ ಎಲ್ಲ ವಿದ್ಯಮಾನಗಳು ನಟಿ ಅಮೂಲ್ಯಾಳನ್ನ ಲೋಕಸಭೆಯ ದಿಕ್ಕಿನತ್ತ ಮುಖ ಮಾಡಿಸಿರೋದಂತೂ ಸತ್ಯ
#