ಸಿತೇಶ್ ಸಿ ಗೋವಿಂದ್ ನಿರ್ದೇಶನದ ಇದು ಎಂಥಾ ಲೋಕವಯ್ಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 9ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಅದರ ಭಾಗವಾಗಿ ಎಂಥ ಲೋಕವಯ್ಯ ಸಿನಿಮಾದ ಆಗಮನ ನಿನ್ನ ಆಗಮನ ಹಾಗೂ ಸಂಜೆ ವೇಳೆಗೆ ಎಂಬ ಎರಡು ಹಾಡುಗಳನ್ನು ಅನಾವರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಿರಿಯ ನಟ ಅನಂತ್ ನಾಗ್ ಸಾಂಗ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಹಿರಿಯ ನಟ ಅನಂತ್ ನಾಗ್ ಮಾತನಾಡಿ, ಇದು ಎಂಥ ಲೋಕವಯ್ಯ ನನ್ನ ಸಿನಿಮಾದ ಜನಪ್ರಿಯ ಹಾಡು. ಆ ಹಾಡಿನ ಟೈಟಲ್ ಸಿನಿಮಾವಾಗಿದೆ. ಬಹಳ ಸಂತೋಷದಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಿಮ್ಮ ಬೆಂಬಲದಿಂದ ಈ ಸಿನಿಮಾ ಯಶಸ್ಸು ಗಳಿಸಲಿ, ಜನಪ್ರಿಯವಾಗಲಿ ಎಂದರು.
ನಿರ್ದೇಶಕ ಸಿತೇಶ್ ಸಿ ಗೋವಿಂದ್ ಮಾತನಾಡಿ, ಆಗಸ್ಟ್ 9ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇದು ನನ್ನ ಮೊದಲ ಪ್ರಯತ್ನ. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದೇನೆ. ಕಡಿಮೆ ಸಮಯದಲ್ಲಿ 28 ಕಲಾವಿದರು ನಟಿಸಿರುವ ಚಿತ್ರ ಇದು. ಫ್ಯಾಷನೇಟೆಡ್ ಆಗಿ ಸಿನಿಮಾ ಮಾಡಿದ್ದೇನೆ ಎಂದರು.
ಆಗಮನ ನಿನ್ನ ಆಗಮನ ಹಾಡಿಗೆ ರಾಹುಲ್ ಹಜಾರೆ ಹಾಗೂ ದೀಪಾ ಸಿತೇಸ್ ಸಾಹಿತ್ಯ ಬರೆದಿದ್ದು, ರಿತ್ವಿಕ್ ಎಸ್ ಚಂದ್ , ಭದ್ರ ರಾಜಿನ್ ಧ್ವನಿಯಾಗಿದ್ದಾರೆ. ಸಂಜೆ ವೇಳೆಗೆ ಹಾಡಿಗೆ ಸಜೀವ್ ಸ್ಟಾನ್ಲಿ ಕಂಠ ಕುಣಿಸಿದ್ದು, ಕೀರ್ತನ್ ಭಂಡಾರಿ ಹಾಗೂ ಪುಷ್ಪರಾಜ್ ಗುಂಡ್ಯ ಪದ ಪೊಣಿಸಿದ್ದಾರೆ. ಈ ಎರಡು ಗೀತೆಗೆ ರಿತ್ವಿಕ್ ಚಂದ್ ಸಂಗೀತ ಒದಗಿಸಿದ್ದಾರೆ. ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ್ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ಅರ್ಜುನ್ ಕಜೆ, ಪ್ರೀತಿ ಮುತ್ತಪ್ಪ, ದೀಪಕ್ ರೈ, ಸಂತೋಷ್ ಶೆಣೈ, ಸುಧೀರ್ ರಾಜ್, ಪ್ರಶಾಂತ್ ಜೋಗಿ, ಹರೀಶ್ ಬಂಗೇರ, ಪ್ರಕಾಶ್ ತುಮ್ಮಿನಾಡ್, ಸೇರಿ ಇನ್ನೂ ಹಲವು ಚಿತ್ರದ ತಾರಾಬಳಗದಲ್ಲಿದ್ದಾರೆ.
ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕತೆಯೇ ಇದು ಎಂಥಾ ಲೋಕವಯ್ಯ ಸಿನಿಮಾ. ಈ ಕನ್ನಡ ಚಿತ್ರವನ್ನು ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿ ಪ್ರಸೆಂಟ್ ಮಾಡುತ್ತಿದ್ದಾರೆ. ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
No Comment! Be the first one.